ಅಶೋಕ ಹೋಟೆಲ್‌ನಲ್ಲಿ ವೇಟರ್ ಆಗಿದ್ದ ಈ ನಟನ ಕೋಟ್ ಕೇಳಿದ್ದ ರಜನಿಕಾಂತ್; ಅಂದು ನಡೆದಿದ್ದ ಘಟನೆ ಏನು?
ಸೂಪರ್‌ಸ್ಟಾರ್ ರಜನಿಕಾಂತ ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದರೂ ಕನ್ನಡದ ನಟರೊಂದಿಗೂ ನಂಟು ಇದೆ. ರಜನಿಕಾಂತ್ ಆರಂಭದಲ್ಲಿ ಕನ್ನಡ ಸಿನಿಮಾದಲ್ಲಿಯೂ ನಟಿಸುತ್ತಿದ್ದರು. ಕನ್ನಡದ ಖ್ಯಾತ ನಿರ್ದೇಶಕರೊಂದಿಗೆ ಸೂಪರ್‌ಸ್ಟಾರ್ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲೂ ಸಿನಿಮಾಗಳನ್ನು ಶೂಟ್ ಮಾಡಿದ್ದಾರೆ. ಹೀಗಾಗಿ ರಜನಿಕಾಂತ್ ಜೊತೆ ಕನ್ನಡ ನಟರ ಒಡನಾಟ ಚೆನ್ನಾಗಿತ್ತು.
ರಜನಿಕಾಂತ್ ಕನ್ನಡ ಸಿನಿಮಾಗಳಲ್ಲಿಯೂ ನಟಿಸುತ್ತಿರುವಾಗ ಬೆಂಗಳೂರಿನ ಜನಪ್ರಿಯ ಅಶೋಕ ಹೋಟೆಲ್‌ನಲ್ಲಿ ಉಳಿದು ಕೊಳ್ಳುತ್ತಿದ್ದರು. ಆ ಹೋಟೆಲ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದವರು ಕನ್ನಡದ ನಟ ಪ್ರಣಯ ಮೂರ್ತಿ. ರಜನಿ ಜೊತೆ ಸಿನಿಮಾದಲ್ಲಿ ನಟಿಸದೇ ಹೋದರೂ, ತೆರೆಯ ಹಿಂದೆ ಅವರೊಂದಿಗೆ ಹೆಚ್ಚು ಸಮಯ ಕಳೆದಿದ್ದಾರೆ.

ರಜನಿಕಾಂತ್ ಅಶೋಕ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದಾಗ ಅವರೊಂದಿಗೆ ಕಳೆದ ದಿನಗಳನ್ನು ನಟ ಪ್ರಣಯ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ರಜನಿಕಾಂತ್ ಜೊತೆಗಿನ ಒಡನಾಟ, ಇವರು ಧರಿಸಿದ್ದ ವೇಟರ್ ಕೋಟ್ ಕೇಳಿದ್ದ ಘಟನೆ, ದ್ವಾರಕೀಶ್ ರಜನಿಗಾಗಿ ಬಂದು ಕಾದಿದ್ದ ಸನ್ನಿವೇಶವನ್ನು ವಿವರಿಸಿದ್ದಾರೆ.
"ರಜನಿಕಾಂತ್ ಅವರೊಂದಿಗೆ ಕೆಲಸ ಮಾಡುವುದಕ್ಕೆ ಸ್ಕ್ರೀನ್ ಮೇಲೆ ಸಿಗಲಿಲ್ಲ. ತೆರೆಯ ಹಿಂದೆ ತುಂಬಾನೇ ಇತ್ತು. ತಪ್ಪಿದ ತಾಳ ಸಿನಿಮಾದಲ್ಲಿ ಕಾಂಬಿನೇಷನ್ ಇರಲಿಲ್ಲ. ಆದರೆ, ಅವರ ಸಿನಿಮಾದಲ್ಲಿ ನಟಿಸಿದ್ದೆ. ಅವರ ಸಿನಿಮಾದಲ್ಲಿ ಮೊದಲ ಓಪನಿಂಗ್ ಶಾಟ್ ನನ್ನದೇ ಇರೋದು. ಓಪನಿಂಗ್ ಡೈಲಾಗ್ ನನ್ನದು. ಸಾಂಗ್ ಕೂಡ ನನ್ನ ಮೇಲೇನೆ ಇರೋದು. ಒಂದು ಹಾಡನ್ನು ನಾಲ್ಕು ಪೀಸ್ ಮಾಡಿದ್ದರು. ನನಗೆ, ಸರಿತಾಗೆ, ಸುಂದರ್ ರಾಜ್‌ಗೆ ಹಾಗೂ ರಜನಿಕಾಂತ್‌ಗೆ." ಎಂದು ಪ್ರಣಯ ಮೂರ್ತಿ ನೆನಪಿಸಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ 'ಕಥಾ ಸಂಗಮ' ಸಿನಿಮಾದ ಪ್ರೀಮಿಯರ್ ಶೋನ ಇಂಟರ್‌ವಲ್‌ನಲ್ಲಿ ರಜನಿಕಾಂತ್ ಒಬ್ಬರೇ ನಿಂತಿದ್ದರು. ಯಾರೊಬ್ಬರೂ ಅವರ ಹತ್ತಿರ ಸುಳಿಯುತ್ತಿರಲಿಲ್ಲ. ಆ ಘಟನೆಯನ್ನು ಪ್ರಯಣ ಮೂರ್ತಿ ನೆನಪಿಸಿಕೊಂಡಿದ್ದಾರೆ. ಅವರೂ ಕೂಡ ರಜನಿಯನ್ನು ನೋಡಿ ಏನು ಇಷ್ಟು ಕಪ್ಪಗೆ ಇದ್ದಾರೆ ಅಂತ ಅಂದುಕೊಂಡಿದ್ದರಂತೆ.
"ನಾನು ರಜನಿಯನ್ನು ನೋಡಿದೆ ಏನು ಕಪ್ಪುಗಿದ್ದಾನೆ. ಪೊರ್ಕಿ, ರೌಡಿಯ ಹಾಗೆ ಇದ್ದಾನೆ. ಇವನು ಆಕ್ಟರ್? ಅಂತ ನಾನು ಯಾರು ಕೆಂಪು ಕೆಂಪಗೆ ಚೆನ್ನಾಗಿರುವರ ಹಿಂದೆನೇ ಇದ್ದೆ. ಆಮೇಲೆ ಬಾಲಚಂದರ್ ಅವರ ಸಿನಿಮಾದಲ್ಲಿ ನಟಿಸುವುದಕ್ಕೆ ಶುರು ಮಾಡಿದ ಬಳಿಕ ಅವರ ಗ್ರಾಫ್ ಸಡನ್ ಆಗಿ ಮೇಲಕ್ಕೆ ಹೋಯ್ತು. ಅದು ರಾಘವೇಂದ್ರ ಸ್ವಾಮಿಗಳ ಕೃಪೆ ಹಾಗೂ ಪವಾಡ ಅಂದುಕೊಳ್ಳುತ್ತೇನೆ. ಆಗಾಗ ಸಿಕ್ಕಾಗ ಮಾತಾಡಿಸುತ್ತಿದ್ದರು." ಎಂದು ರಜನಿಯನ್ನು ನೆನಪಿಸಿಕೊಂಡಿದ್ದಾರೆ.
ಸಿನಿಮಾ ಗೆಲ್ಲುವುದಕ್ಕೆ ಶುರು ಮಾಡಿದಾಗ ರಜನಿ ಅಶೋಕ ಹೋಟೆಲ್‌ನಲ್ಲಿ ಇಳಿದುಕೊಳ್ಳುವುದಕ್ಕೆ ಶುರುಮಾಡಿದ್ದರು. ಆಗ ಅಲ್ಲಿ ಇದೇ ಪ್ರಣಯ ಮೂರ್ತಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ನೀನು ಯಾವಾಗ ಬೇಕಾದರೂ ರೂಮ್‌ಗೆ ಬರಬಹುದು ಎಂದು ರಜನಿ ಹೇಳಿದ್ದರಂತೆ. ಅವರ ಕಲಾವಿದ ಕೂಡ ಆಗಿದ್ದರಿಂದ ಎಲ್ಲರಿಗೂ ಟಿಪ್ಸ್ ಕೊಡುತ್ತೇನೆ. ನಿನಗೆ ಮಾತ್ರ ಕೊಡಲ್ಲ ಎಂದು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ಅಶೋಕಾ ಹೋಟೆಲ್‌ನಲ್ಲಿ 'ಘರ್ಜನೆ' ಶೂಟಿಂಗ್ ನಡೆಯುವ ವೇಳೆ ನಡೆದ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.
"ಅಶೋಕಾ ಹೋಟೆಲ್‌ನಲ್ಲಿ ಘರ್ಜನೆ ಅನ್ನುವ ಸಿನಿಮಾ ನಡೆಯುತ್ತಿತ್ತು. ನಮ್ಮ ಅಶೋಕ ಹೋಟೆಲ್‌ನಲ್ಲಿಯೇ ಶೂಟಿಂಗ್ ಮಾಡುತ್ತಿದ್ದರು. ಅದು ಮೂರು ಭಾಷೆಯ ಸಿನಿಮಾ. ಆಗ ರಜನಿಕಾಂತ್ ನನ್ನ ಹತ್ತಿರಕ್ಕೆ ಬಂದು ನಿನ್ನ ಕೋಟ್ ಅನ್ನು ಸ್ವಲ್ಪ ಬಿಚ್ಚಿ ಕೊಡುತ್ತೀಯ ಎಂದು ಕೇಳಿದ್ರು. ಒಂದು ಶಾಟ್ ಇದೆ. ಅದು ಮುಗಿದ ಕೂಡಲೇ ಮತ್ತೆ ಬಿಚ್ಚಿ ಕೊಡುತ್ತೇನೆ ಅಂದರು. ಆಗ ನಾನು ಬೇಡ. ನಾನು ಹಾಕಿದ್ದು ಯಾಕೆ ಹಾಕುತ್ತೀರ. ಇದೇ ತರಹದ್ದು ಹೊಸದು ಇದೆ. ಅದನ್ನು ತಂದು ಕೊಡುತ್ತೇನೆ. ನೀವು ಹಾಕಿದ ಮೇಲೆ ನಾನು ಹಾಕಿಕೊಂಡು ಖುಷಿ ಪಟ್ಟಿದ್ದೇನೆ." ಎಂದು ಪ್ರಣಯ ಮೂರ್ತಿಹೇಳಿದ್ದರಂತೆ.
ಇನ್ನೊಂದು ದಿನ ದ್ವಾರಕೀಶ್ ಬಂದು ಅಶೋಕ ಹೋಟೆಲ್ ಲಾಭಿನಲ್ಲಿ ಕೂತುಕೊಂಡಿದ್ದರು. ಅರ್ಧಗಂಟೆ ಕೂತಿದ್ದರೂ ಏನೂ ಆರ್ಡರ್ ಮಾಡಲಿಲ್ಲ. ಅಲ್ಲದೆ ಸುಸ್ತಾಗಿದ್ದರು. ಆಗ ದ್ವಾರಕೀಶ್ ಅವರನ್ನು ಪ್ರಣಯ ಮೂರ್ತಿ ಮಾತಾಡಿಸಿದ್ದರು. ಅ ವೇಳೆ "ನಾನು ಪ್ರಡ್ಯೂಸರ್.. ರಜನಿಕಾಂತ್ ರೂಮ್ ಮುಂದೆ ಡು ನಾಟ್ ಡಿಸ್ಟರ್ಬ್ ಅಂತ ಬೋರ್ಡ್ ಇದೆ. ಯಾವಾಗ ನನ್ನನ್ನು ಒಳಗೆ ಕರೆದುಕೊಳ್ಳುತ್ತಾರೋ ಗೊತ್ತಿಲ್ಲ ಅಂದರು. ಆಗ ಇವರೇ ದ್ವಾರಕೀಶ್ ಅವರನ್ನು ಕರೆದುಕೊಂಡು ಹೋಗಿ ಅವರ ರೂಮ್‌ಗೆ ಬಿಟ್ಟಿದ್ದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications











