ಸಿಡ್ನಿಯಲ್ಲಿ ಅಪ್ಪು ಪಾಸ್‌ಪೋರ್ಟ್ ನೋಡಿ ಎದ್ದು ನಿಂತಿದ್ದ ಇಮಿಗ್ರೇಷನ್ ಆಫೀಸರ್; ಅಂದು ಏನಾಯ್ತು?
ದೊಡ್ಮನೆ ಕುಟುಂಬದ ಫ್ಯಾನ್ಸ್ ವಿಶ್ವದ ಮೂಲೆ ಮೂಲೆಯಲ್ಲೂ ಸಿಗುತ್ತಾರೆ. ದೊಡ್ಮನೆಯ ನಟರು ಎಲ್ಲಿಯೇ ಹೋದರೂ ಒಬ್ಬರಲ್ಲ ಒಬ್ಬರು ಅಭಿಮಾನಿಗಳು ಸಿಗುತ್ತಲೇ ಇರುತ್ತಾರೆ. ಆ ಅಭಿಮಾನಿಗಳೆಲ್ಲರೂ ಬೇರೆ ಬೇರೆ ಕಾರಣಕ್ಕೆ ಅಣ್ಣಾವ್ರನ್ನ, ಅಪ್ಪುನಾ, ಶಿವಣ್ಣನಾ, ರಾಘಣ್ಣನನ್ನ ಇಷ್ಟ ಪಡುತ್ತಾರೆ. ಅದರಲ್ಲೂ ಅಪ್ಪು ಅಗಲಿದ ಬಳಿಕ ಅಂತೂ ಅಭಿಮಾನಿಗಳ ಕಥೆಗಳು ಒಂದೊಂದಾಗಿಯೇ ಹೊರ ಬರುತ್ತಿದೆ.
ಹೀಗೊಮ್ಮೆ ಪುನೀತ್ ರಾಜ್‌ಕುಮಾರ್ ಸಂದರ್ಶನವೊಂದರಲ್ಲಿ ಅಣ್ಣಾವ್ರ ಅಭಿಮಾನಿಯ ಕಥೆ ಹೇಳಿದ್ದರು. ಆ ಆಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಸ್ಟ್ರೇಲಿಯಾದ ಸಿಡ್ನಿಯಿಂದ ಅಪ್ಪು ಬರುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಆಫೀಸರ್ ಒಬ್ಬರು ಪಾಸ್‌ಪೋರ್ಟ್ ಚೆಕ್ ಮಾಡಿದ್ದರು. ಅದರಲ್ಲಿ ಅಪ್ಪು ಹೆಸರಿನ ಜೊತೆ ಅಣ್ಣಾವ್ರ ಹೆಸರು ಇದ್ದನ್ನು ನೋಡಿ ಒಮ್ಮೆ ಶಾಕ್ ಆಗಿದ್ದರು.

ಅಪ್ಪು ಪಾಸ್‌ಪೋರ್ಟ್‌ನಲ್ಲಿ ಅಣ್ಣಾವ್ರ ಅಸಲಿ ಹೆಸರು ಇತ್ತು. ಅದು ಮುತ್ತುರಾಜ್. ಒಮ್ಮೆ ಆ ಹೆಸರನ್ನು ನೋಡಿ ಗೊಂದಲಕ್ಕೆ ಒಳಗಾಗಿದ್ದ. ಪುನೀತ್ ರಾಜ್‌ಕುಮಾರ್ ಅನ್ನು ಮೇಲಿಂದ ಕೆಳಗಿನವರೆಗೂ ನೋಡುವುದಕ್ಕೆ ಶುರು ಮಾಡಿದ್ದ. ಆತ ಪಾಸ್‌ಪೋರ್ಟ್ ನೋಡಿ ಶಾಕ್ ಆಗುತ್ತಿದ್ದಂತೆ ಇತ್ತ ಪುನೀತ್ ರಾಜ್‌ಕುಮಾರ್ ಕೂಡ ಗೊಂದಲಕ್ಕೆ ಬಿದ್ದಿದ್ದರು. ಅಣ್ಣಾವ್ರ ಅಭಿಮಾನಿಯ ಆ ಅದೇನು ಕಥೆ? ಅಪ್ಪು ಹೇಳಿದ ಆ ಸನ್ನಿವೇಶದ ಆಡಿಯೋ ಈಗ ವೈರಲ್ ಅಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪುನೀತ್ ಆಡಿಯೋದ ಸಾರಾಂಶ ಹೀಗಿದೆ. "ವಾಪಾಸ್ ಬರಬೇಕಾದರೆ, ಸಿಡ್ನಿ ಮೂಲಕ ಬರುತ್ತಿದ್ವಿ. ಅಲ್ಲಿ ಇಮಿಗ್ರೇಷನ್ ಆಫೀಸರ್ ಬಂದು ಪಾಸ್‌ಪೋರ್ಟ್ ತೆಗೆದುಕೊಂಡು ನೋಡಿದರು. ನನ್ನ ಪಾಸ್‌ಪೋರ್ಟ್‌ನಲ್ಲಿ ನನ್ನ ತಂದೆಯ ನಿಜವಾದ ಹೆಸರು ಮುತ್ತುರಾಜ್ ಅಂತ ಬರುತ್ತೆ. ಕೊನೆಯಲ್ಲಿ ಅದರಲ್ಲೊಂದು ಸರ್ ನೇಮ್ ಬರುತ್ತೆ. ಅವನು ಆ ಸರ್ ನೇಮ್ ನೋಡುತ್ತಾನೆ. ರಾಜ್‌ಕುಮಾರ್ ಅಂತ.. ಒಂದೆರಡು ಸಾರಿ ಕೆಳಗೆ ಮೇಲೆ ನೋಡುತ್ತಾನೆ. ನಾನು ಯೋಚನೆ ಮಾಡಿದೆ. ನನ್ನನ್ನು ಯಾಕಪ್ಪ ಇಷ್ಟು ಸಾರಿ ನೋಡುತ್ತಾನೆ ಅಂತ. ಸಡನ್ ಆಗಿ ಮೇಲೆ ಎದ್ದು ಬಿಟ್ಟ. ನೀವು ಡಾ.ರಾಜ್‌ಕುಮಾರ್ ಪುತ್ರನಾ ಅಂತ ಕೇಳಿದ. ಹೌದು, ನಾನು ಡಾ.ರಾಜ್‌ಕುಮಾರ್ ಅವರ ಕಿರಿಯ ಮಗ ಅಂದೆ." ಎಂದು ಪುನೀತ್ ರಾಜ್‌ಕುಮಾರ್ ಸಂದರ್ಶನವೊಂದರಲ್ಲಿ ಸಿಡ್ನಿಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದರು.
ಹಾಗಂತ ಆ ಆಫೀಸರ್ ಅಲ್ಲಿಗೆ ಸುಮ್ಮನಾಗಿರಲಿಲ್ಲ. ಅಪ್ಪು ಹೀಗೆ ಹೇಳುತ್ತಿದ್ದಂತೆ ಕೂಡಲೇ ಎದ್ದು ನಿಂತು ಬಿಟ್ಟ. ಪುನೀತ್‌ಗೆ ಆ ಆಫೀಸರ್ ವರ್ತನೆಯನ್ನು ಕಂಡು ಆಶ್ವರ್ಯ ಆಯ್ತು. ಕೊನೆಗೆ ಆ ವ್ಯಕ್ತಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ. "ಒಂದು ನಿಮಿಷ ಸಮಯ ಕೊಡಿ ಎಂದು ಕೇಳಿದ. ಕೈ ಕುಲುಕಿ, ನಾನು ಚೈನ್ನೈನವನು. ನಾನೊಬ್ಬ ತಮಿಳಿಗ. ನಾನು ಆಸ್ಟ್ರೇಲಿಯಾಗೆ ಬಂದು 40 ವರ್ಷ ಆಯ್ತು. ನಾನು ತುಂಬಾ ದೊಡ್ಡ ಅಣ್ಣಾವ್ರ ಫ್ಯಾನ್. ಯಾಕಂದ್ರೆ, ಅವರ ಹಾಡುಗಳಿಗೋಸ್ಕರ" ಎಂದು ಅವರು ಹೇಳಿದ್ದನ್ನು ನೆನಪಿಸಿಕೊಂಡಿದ್ದರು.

ಅಷ್ಟಕ್ಕೂ ಆ ತಮಿಳಿನ ಇಮಿಗ್ರೇಷನ್ ಆಫೀಸರ್ ಅಣ್ಣಾವ್ರ ಫ್ಯಾನ್ ಆಗಿದ್ದು, ಅವರ ಸಿನಿಮಾಗಳಿಂದ ಆಗಿರಲಿಲ್ಲ. ಅವರನ್ನು ಮೊದಲ ಸೆಳೆದಿದ್ದು, ಅವರು ಹಾಡಿದ ಹಾಡುಗಳಿಂದ. ಅದೂ ಗುರು ರಾಘವೇಂದ್ರ ಸ್ವಾಮಿಯ ಗೀತೆಯನ್ನು ಕೇಳಿದ ಮೇಲೆ ಅಭಿಮಾನಿಯಾಗಿಬಿಟ್ಟರು. ಅಲ್ಲಿಂದ ಅಣ್ಣಾವ್ರು ಹಾಡಿದ ಎಲ್ಲಾ ಭಕ್ತಿ ಗೀತೆಗಳ ಕಲೆಕ್ಷನ್ ಅನ್ನೂ ಇಟ್ಟುಕೊಂಡಿದ್ದಾರಂತೆ.
ಆತ ಯಾವಾಗ ಫ್ಯಾನ್ ಆದೆ ಅನ್ನೋದನ್ನೂ ಹೇಳಿಕೊಂಡಿದ್ದರು. "ಯಾವಾಗ ಫ್ಯಾನ್ ಆದೆ ಅಂದ್ರೆ, ರಾಘವೇಂದ್ರ ಸ್ವಾಮಿಗಳ ಮೊದಲನೇ ಅಲ್ಬಮ್ ಬಂದಿತ್ತು. ರಾಘವೇಂದ್ರ.. ರಾಘವೇಂದ್ರ ಎನ್ನಿರಿ. ಆ ಹಾಡಿನ ಫ್ಯಾನ್ ನಾನು ಎಂದನು. ಅವತ್ತಿಂದ ಇವತ್ತಿನ ವರೆಗೂ ಎಲ್ಲಾ ಭಕ್ತಿ ಗೀತೆಗಳ ಕಲೆಕ್ಷನ್ ಅನ್ನೂ ಇಟ್ಟುಕೊಂಡಿದ್ದಾನಂತೆ" ಎಂದು ಪುನೀತ್ ರಾಜ್‌ಕುಮಾರ್ ಆ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.


Click it and Unblock the Notifications
