ಅಭಿನಯ ಶಾರದೆ ಜಯಂತಿ ಬಲು ಭಾರ ಎಂದು ಬರೆದಿದ್ದ ಲಂಕೇಶ್: ಹಿರಿಯ ನಟಿಯ ಪ್ರತಿಕ್ರಿಯೆ ಏನಿತ್ತು?
ಕನ್ನಡ ಚಿತ್ರರಂಗ ಎಂದೆಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಹಲವು ನಟಿಯರು ಇದ್ದಾರೆ. ಅವರಲ್ಲಿ ಅಭಿನಯ ಶಾರದೆ ಜಯಂತಿ ವಿಶೇಷವಾಗಿ ನಿಲ್ಲುತ್ತಾರೆ. ಸ್ಯಾಂಡಲ್‌ವುಡ್‌ನಲ್ಲಿ ಜಯಂತಿ ತಮ್ಮದೇ ಟ್ರೇಡ್ ಮಾರ್ಕ್ ಅನ್ನು ಬಿಟ್ಟು ಹೋಗಿದ್ದಾರೆ. ಇವರು ಆಯ್ಕೆ ಮಾಡಿಕೊಂಡು ನಟಿಸಿದ ಒಂದೊಂದು ಪಾತ್ರ ಇಂದಿನ ಪೀಳಿಗೆಯೂ ನೆನಪಿನಲ್ಲಿ ಇಟ್ಟಿಕೊಳ್ಳಬೇಕು.
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಜಯಂತಿ ಸಪೂರವಾಗಿ ಇದ್ದರು. ಇವರ ಅಂದಕ್ಕೆ ಅದೆಷ್ಟೋ ಮಂದಿ ಕ್ಲೀನ್ ಬೋಲ್ಡ್ ಆಗಿದ್ದರು. ಹಾಗಂತ ಜಯಂತಿ ಕೇವಲ ಸೌಂದರ್ಯವತಿಯಷ್ಟೇ ಅಲ್ಲ. ಆಗಿನ ಕಾಲಕ್ಕೆ ಬೋಲ್ಡ್ ಪಾತ್ರಗಳಲ್ಲಿ ಮಿಂಚಿದವರು. ಸಿನಿಮಾಗಳಲ್ಲಿ ಬಿಕಿನಿ ತೊಟ್ಟು ಮಿಂಚಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಬೋಲ್ಡ್ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡು ನಟಿಸಿ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡವರು.

ಆರಂಭದ ದಿನಗಳಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾಗ ಜಯಂತಿ ತೆಳ್ಳಗೆ ಬಳುಕುವ ಬಳ್ಳಿಯಂತೆ ಇದ್ದರು. ಬರ ಬರುತ್ತಾ ಅವರ ಸ್ವಲ್ಪ ದಪ್ಪಗಾಗುತ್ತಾ ಹೋದರು. ಇದನ್ನೇ ಇಟ್ಟುಕೊಂಡು ಒಮ್ಮೆ ಖ್ಯಾತ ಪತ್ರಕರ್ತ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ "ಜಯಂತಿ ಬಲು ಭಾರ" ಅಂತ ಲೇಖನವೊಂದಕ್ಕೆ ತಲೆ ಬರಹವನ್ನು ಕೊಟ್ಟಿದ್ದರಂತೆ. ಅದನ್ನು ನೋಡಿ ಜಯಂತಿ ಪ್ರತಿಕ್ರಿಯೆ ಹೇಗಿತ್ತು? ಅನ್ನುವ ಸ್ವಾರಸ್ವಕರ ಸಂಗತಿಯನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
ಕನ್ನಡ ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ಜಯಂತಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಮರಾಠಿ ಅಷ್ಟೇ ಯಾಕೆ ಹಿಂದಿಯಲ್ಲಿಯೂ ನಟಿಸಿದ್ದರು. ಹೀಗಾಗಿ ಅಭಿಮಾನಿಗಳು ಪ್ರೀತಿಯಿಂದ ಅಭಿನಯ ಶಾರದೆ ಅಂತ ಬಿರುದು ಕೊಟ್ಟಿದ್ದರು. ಹಾಗೇ ಟೀಕೆಗಳನ್ನು ಜಾಲಿಯಾಗಿ ತೆಗೆದುಕೊಳ್ಳುವ ಸ್ವಭಾವ ಜಯಂತಿಯವರ ಸ್ಟ್ರೆಂಥ್ ಆಗಿತ್ತು.

"ಒಂದು ಸಾರಿ ಲಂಕೇಶ್ ಪತ್ರಿಕೆಯಲ್ಲಿ ಜಯಂತಿ ಬಲು ಬಾರ ಅಂತ ತಲೆ ಬರಹ ಕೊಟ್ಟು ಒಂದು ಲೇಖನವನ್ನು ಲಂಕೇಶ್ ಅವರು ಪ್ರಕಟಿಸಿದ್ದರು. ಜಯಂತಿಯವರು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಬಳುಕುವ ಬಳ್ಳಿಯ ಹಾಗೆಯೇ ಇದ್ದರು. ಮುಂದೆ ಸ್ವಲ್ಪ ಸ್ಥೂಲಕಾಯರಾಗಿದ್ದು ನಿಜ. ಆದರೆ, ಅದನ್ನು ಮೆಟ್ಟಿ ನಿಲ್ಲುವ ಪ್ರತಿಭೆಯಿಂದ ಅದನ್ನು ಮರೆಸಿದ್ದರು." ಎನ್ನುತ್ತಾರೆ ಹರಿಹರಪುರ ಮಂಜುನಾಥ್.
ಲಂಕೇಶ್ ಅವರ ಲೇಖನವನ್ನು ನಟಿ ಜಯಂತಿ ತುಂಬಾನೇ ಲೈಟ್ ಆಗಿ ತೆಗೆದುಕೊಂಡಿದ್ದರು. ಲಂಕೇಶ್ ಅವರು ಜಯಂತಿ ದಪ್ಪವಾಗಿದ್ದಾರೆ ಎಂದು ನೇರವಾಗಿ ಬರೆಯಬಹುದಿತ್ತು ಎಂದು ಹೇಳಿದ್ದರಂತೆ. ಜಯಂತಿ ಬಲು ಬಾರ ಅಂದರೆ, ಅವರೇನು ನನ್ನನ್ನು ಎತ್ತಿ ನೋಡಿದ್ದಾರಾ? ಎಂದು ನಕ್ಕು ಸುಮ್ಮನಾಗಿದ್ದರಂತೆ. ಈ ಸ್ವಾರಸ್ಯಕರ ಸಂಗತಿಯನ್ನು ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಅಂದ್ಹಾಗೆ ಸಮಯದಲ್ಲಿ ದಕ್ಷಿಣ ಭಾರತದ ಹಲವು ನಟಿಯರು ಜಯಂತಿ ಅವರಂತೆ ದಪ್ಪಗಿದ್ದರು. ಆದರೆ, ಅವರು ತಮ್ಮ ಪ್ರತಿಭೆಯಿಂದಲೇ ಗಮನ ಸೆಳೆದಿದ್ದರು. ತಮ್ಮ ದೇಹದ ಮೇಲೆ ಕಾಮೆಂಟ್ ಮಾಡದೇ ಇರಲಾರದಷ್ಟು ಪ್ರತಿಭೆಯನ್ನು ಸಿನಿಮಾದಲ್ಲಿ ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ ಆ ನಟಿಯರು ತಾನು ದಪ್ಪಗಿರುವುದು ಒಂದು ನ್ಯೂನ್ಯತೆ ಅಂತ ಅಂದುಕೊಳ್ಳಲೇ ಇಲ್ಲ. ಜಯಂತಿ ಕೂಡ ಹಾಗೆಯೇ ಇದ್ದರು. ಟೀಕೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.


Click it and Unblock the Notifications











