"ಜನರು ಏನಂತಾರೆ..? ಮೀನಾ ಜೊತೆ ನಾನು ನಟಿಸೋದಿಲ್ಲ": ಅಂದು ರಜನಿಕಾಂತ್ ಹೀಗೆ ಹಠ ಹಿಡಿದಿದ್ದೇಕೆ?
90ರ ದಶಕದಲ್ಲಿ ಬಹುಭಾಷಾ ನಟಿ ಮೀನಾ ದಕ್ಷಿಣ ಭಾರತದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದರು. ಮೀನಾ ಅದೆಷ್ಟೋ ಸ್ಟಾರ್‌ಗಳಿಗೆ ಅದೃಷ್ಟದ ನಾಯಕಿಯಾಗಿದ್ದರು. ಹೀಗಾಗಿ ನಟಿ ಮೀನಾ ಕೈ ತುಂಬಾ ಸಿನಿಮಾಗಳಿದ್ದವು. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆ ಸಿನಿಮಾಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚಿತ್ತು.
ಮೀನಾ ಚಿತ್ರರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟು ನಾಯಕಿಯಾಗಿ ಮಿಂಚಿದವರು. ಇತ್ತೀಚೆಗಷ್ಟೇ ಈ ನಟಿ 40 ವರ್ಷಗಳ ಸಿನಿಮಾ ಜರ್ನಿಯನ್ನು ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಆಗಮಿಸಿ ಶುಭ ಹಾರೈಸಿದ್ದರು. ಮೀನಾ ವೃತ್ತಿ ಬದುಕಿನಲ್ಲಿ ಸೋಲಿಗಿಂತ ಯಶಸ್ಸು ಹೆಚ್ಚು ಸಿಕ್ಕಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಇವರಿಗೆ ವಿಶೇಷವಾದ ಸ್ಥಾನವಿದೆ.

ಅದರಲ್ಲೂ ಮೀನಾ ಹಾಗೂ ರಜನಿಕಾಂತ್ ಇಬ್ಬರನ್ನೂ ಒಟ್ಟಿಗೆ ನೋಡುವುಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಈ ಜೋಡಿ ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಷ್ಟಿದ್ದರೂ ರಜನಿಕಾಂತ್ ನಟಿ ಮೀನಾ ಜೊತೆ ನಟಿಸುವುದಕ್ಕೆ ಹಿಂದೇಟು ಹಾಕಿದ್ದರು. ಅದ್ಯಾಕೆ ಅನ್ನೋದನ್ನು ತಮಿಳಿನ ಹಿರಿಯ ಪತ್ರಕರ್ತರೊಬ್ಬರು ರಿವೀಲ್ ಮಾಡಿದ್ದಾರೆ.
ರಜನಿಕಾಂತ್-ಮೀನಾ ಹಿಟ್ ಜೋಡಿ
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಮೀನಾ ಇಬ್ಬರದ್ದೂ ಹಿಟ್ ಜೋಡಿ. 90ರ ದಶಕದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಈ ಹಿಟ್ ಜೋಡಿ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ 'ಯಜಮಾನ್'. ಎರಡನೇ ಸಿನಿಮಾ 'ವೀರ' ಹಾಗೂ ಮೂರನೇ ಸಿನಿಮಾ 'ಮುತ್ತು'. ಈ ಮೂರೂ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದವು. ಈ ಜೋಡಿಯ ಮೊದಲ ಸಿನಿಮಾ 'ಯಜಮಾನ್' ಚಿತ್ರೀಕರಣದ ವೇಳೆ ರಜನಿಕಾಂತ್ ಬಹುಭಾಷಾ ನಟಿ ಮೀನಾ ಜೊತೆ ನಟಿಸಲು ಹಿಂದೇಟು ಹಾಕಿದ್ದನ್ನು ತಮಿಳಿನ ಹಿರಿಯ ಪತ್ರಕರ್ತ ಚೆಯ್ಯರು ಬಾಲು ರಿವೀಲ್ ಮಾಡಿದ್ದಾರೆ.
ಮೀನಾ ಜೊತೆ ನಟಿಸಲು ಹಿಂದೇಟು ಹಾಕಿದ್ದೇಕೆ?
1984ರಲ್ಲಿ 'ಅನ್ಬುಲ್ಲ ರಜನಿಕಾಂತ್' ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ರಜನಿ ಸ್ವತ: ರಜನಿಕಾಂತ್ ಆಗಿಯೇ ನಟಿಸಿದ್ದರು. ಇದೇ ಚಿತ್ರದಲ್ಲಿ ಮೀನಾ ಬಾಲ ನಟಿಯಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾಗಿ ಸರಿಯಾಗಿ 9 ವರ್ಷಗಳ ಬಳಿಕ ಮೀನಾ, ಸೂಪರ್‌ಸ್ಟಾರ್ ರಜನಿಕಾಂತ್‌ಗೆ ನಾಯಕಿಯಾಗಿದ್ದರು. ಆ ಸಿನಿಮಾವೇ 'ಯಜಮಾನ್'. ಈ ಸಿನಿಮಾದಲ್ಲಿ ಮೀನಾ ನಾಯಕಿ ಅಂತ ಗೊತ್ತಾದಾಗ ರಜನಿಕಾಂತ್ ನಟಿಸಲು ಒಪ್ಪಿರಲಿಲ್ಲ. ಅಲ್ಲದೆ ಅವರನ್ನು ಶೂಟಿಂಗ್ ಸೆಟ್ಟಿನಲ್ಲಿ ಎದುರಿಸಲು ಹಿಂದೇಟು ಹಾಕಿದ್ದರು ಎಂದು ಹಿರಿಯ ಪತ್ರಕರ್ತ ಚೆಯ್ಯರು ಬಾಲು ಹೇಳಿದ್ದಾರೆ.

"ಜನರು ಏನಂತಾರೆ..? ಅಂತ ಭಯಪಟ್ಟಿದ್ದರು"
'ಯಜಮಾನ್' ಸಿನಿಮಾದಲ್ಲಿ ರಜನಿಕಾಂತ್ ನಟಿ ಮೀನಾ ಜೊತೆ ನಟಿಸಲು ಹಿಂದೇಟು ಹಾಕಿದ್ದರು. "ಸಿನಿಮಾದಲ್ಲಿ ಇಬ್ಬರನ್ನೂ ಒಟ್ಟಿಗೆ ನೋಡಿದರೆ ಜನರು ಏನಂದು ಕೊಳ್ಳುತ್ತಾರೆ?" ಎಂದು ರಜನಿ ರಾಗ ಎಳೆದಿದ್ದರು. ಅಲ್ಲದೆ ಸೆಟ್ಟಿಗೆ ಮೀನಾ ಎಂಟ್ರಿ ಕೊಡುತ್ತಿದ್ದಂತೆ ಅವರನ್ನು ಭೇಟಿ ಮಾಡಲು ಮುಜುಗರ ಪಟ್ಟುಕೊಳ್ಳುತ್ತಿದ್ದರು. ನಾಲ್ಕೈದು ದಿನಗಳ ಬಳಿಕ ಸರಿ ಹೋಗಿತ್ತು ಎಂದು ಆ ಸಿನಿಮಾದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
ರಜನಿ-ಮೀನಾ ಜೋಡಿಗೆ ಬಹುಪರಾಕ್
ರಜನಿಕಾಂತ್ ಭಯ ಪಟ್ಟಂತೆ ಏನೂ ಆಗಿರಲಿಲ್ಲ. 'ಯಜಮಾನ್' ಸಿನಿಮಾದಲ್ಲಿ ಈ ಜೋಡಿಯನ್ನು ಇಷ್ಟಪಟ್ಟಿದ್ದರು. ಮುಂದಿನ ವರ್ಷವೇ ಇವರ ಕಾಂಬಿನೇಷನ್‌ಲ್ಲಿಯೇ 'ವೀರ' ರಿಲೀಸ್ ಆಗಿತ್ತು. ಅದೂ ಹಿಟ್ ಲಿಸ್ಟ್ ಸೇರಿತ್ತು. ಆದ್ರೆ, ಈ ಎರಡು ಸಿನಿಮಾಗಳ ಬಳಿಕ ತೆರೆಕಂಡ 'ಮುತ್ತು' ತಮಿಳು ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಆಯ್ತು. ಇತ್ತೀಚೆಗೆ ಅಂದರೆ, 2021ರಲ್ಲಿ ತೆರೆಕಂಡಿದ್ದ 'ಅಣ್ಣಾತ್ತೆ' ಸಿನಿಮಾದಲ್ಲೂ ಮೀನಾ ನಟಿಸಿದ್ದರು.


Click it and Unblock the Notifications











