ಅಣ್ಣಾವ್ರ ಮೇಲೆ ಆಸಿಡ್ ದಾಳಿಗೆ ಮುಂದಾಗಿದ್ರಾ 15 ಜನರ ತಂಡ? ವಜ್ರಮುನಿ ಕೇಸ್ ಹಾಕಿದ್ದೇಕೆ?
ಡಾ. ರಾಜ್‌ಕುಮಾರ್ ಸಿನಿಮಾ ಜರ್ನಿಯೇ ರೋಚಕ. ಪ್ರತಿಯೊಂದು ಸಿನಿಮಾದ ಹಿಂದೆನೂ ಒಂದೊಂದು ಕಥೆಯಿದೆ. ಅಣ್ಣಾವ್ರು 70 ದಶಕದಲ್ಲಿಯೇ ಸೂಪರ್‌ಸ್ಟಾರ್ ಆಗಿದ್ದರು. ರಾಜ್‌ಕುಮಾರ್ ಸಿನಿಮಾ ಅಂದರೆ ಪ್ರಾಣ ಬಿಡುವಂತಹ ಅಭಿಮಾನಿಗಳು ಇದ್ದರು. ಅಣ್ಣಾವ್ರ ಕ್ರೇಜ್ ಬೇರೆನೇ ಇತ್ತು.
ಒಂದು ಕಡೆ ಅಣ್ಣಾವ್ರು ಸೂಪರ್‌ಸ್ಟಾರ್ ಹೊರಹೊಮ್ಮಿದ್ದರು. ಅದೇ ಇನ್ನೊಂದು ಕಡೆ ಅಣ್ಣಾವ್ರ ನೋಡಿ ಉರಿದುಕೊಂಡಿದ್ದ ಕಿಡಿಗೇಡಿಗಳು ಇದ್ದರು. ಸಾಕಷ್ಟು ಬಾರಿ ಅವರ ಮೇಲೆ ಅಟ್ಯಾಕ್ ಮಾಡುವಂತಹ ಪ್ರಯತ್ನಕ್ಕೆ ಮುಂದಾಗಿದ್ದರು ಎಂದು ಬಲ್ಲವರು ಹೇಳುತ್ತಾರೆ. ಕೆಲವು ಪ್ರಕರಣಗಳು ಪೊಲೀಸ್ ಸ್ಟೇಷನ್ ಮೆಟ್ಟಿಲು ಕೂಡ ಏರಿದೆ.

ಇಂತಹ ಹಲವು ಪ್ರಕರಣಗಳ ಬಗ್ಗೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಣ್ಣಾವ್ರ ಅಪ್ಪಟ ಅಭಿಮಾನಿ ಎನ್‌ಆರ್ ರಮೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ವರನಟನ ಮೇಲೆ 'ಗಂಧದ ಗುಡಿ' ಸಿನಿಮಾದ ವೇಳೆ ಗುಂಡಿನ ದಾಳಿ ಆಗಿತ್ತು. ಅದೇ ಇನ್ನೊಂದು ಕಡೆ ಆಸಿಡ್ ಅಟ್ಯಾಕ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ ಕೂಡ ಸೇರಿದೆ. ಅಷ್ಟಕ್ಕೂ ಅಣ್ಣಾವ್ರ ಅಭಿಮಾನಿ ಹಾಗೂ ಬಿಜೆಪಿ ಸದಸ್ಯರೂ ಆಗಿರುವ ಎನ್‌ಆರ್ ರಮೇಶ್ ಏನು ಹೇಳಿದ್ದರು? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಡಾ.ರಾಜ್‌ಕುಮಾರ್ ಅದಾಗಲೇ ಸೂಪರ್‌ಸ್ಟಾರ್ ಆಗಿದ್ದರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರು. 'ಎರಡು ಕನಸು' ಸಿನಿಮಾ ವೇಳೆ ಯಾರೋ ಕಿಡಿಗೇಡಿಗಳು ಅಣ್ಣಾವ್ರ ಮೇಲೆ ಆಸಿಡ್ ಅಟ್ಯಾಕ್ ಮಾಡುವುದಕ್ಕೆ ಮುಂದಾಗಿದ್ದರಂತೆ. ಸುಮಾರು 15 ಜನರ ತಂಡ ಈ ಕೃತ್ಯಕ್ಕೆ ಎಸಗಿದ್ದರು ಎಂದು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಎನ್‌ಆರ್ ರಮೇಶ್ ಹೇಳಿದ್ದರು.
ಅಣ್ಣಾವ್ರ ಮೇಲೆ ಆಸಿಡ್ ದಾಳಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಖಳನಟ ವಜ್ರಮುನಿ ಪ್ರಕರಣ ದಾಖಲಿಸಲು ಮಾಡಿದ್ದರು. "1974ರಲ್ಲಿ ಎರಡು ಕನಸು ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈಗಿನ ಹನುಮಂತನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 15 ಜನರ ತಂಡ ರಾಜ್‌ಕುಮಾರ್ ಅವರ ಮೇಲೆ ಆಸಿಡ್ ದಾಳಿಗೆ ಪ್ರಯತ್ನ ನಡೆಸಿತ್ತಲ್ಲ, ಅದಕ್ಕೆ ಸಂಬಂಧ ಪಟ್ಟಂತೆ ವಜ್ರಮುನಿಯವರು ಪ್ರಕರಣವನ್ನು ದಾಖಲು ಮಾಡಿದ್ದರು." ಎಂದು ಎನ್‌ಆರ್ ರಮೇಶ್ ಹೇಳಿಕೊಂಡಿದ್ದಾರೆ.

ಈ ವೇಳೆ ಅಣ್ಣಾವ್ರನ್ನು ರಕ್ಷಣೆ ಮಾಡಲು 30 ಹುಡುಗರ ತಂಡವನ್ನು ರಚನೆ ಮಾಡಲಾಗಿತ್ತು. "ಈ ಸಿನಿಮಾ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಪೂರ್ಣಗೊಳ್ಳುವವರೆಗೂ ಅವರಿಗೆ ಬೆಂಗಾವಲಾಗಿ ನಿಂತಿದ್ದವರು ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಂತಹ, ಹಿರಿಯರಾಗಿದ್ದಂತಹ ಕೆ ಎಂ ನಾಗರಾಜ್ ಮತ್ತು ಅವರ ಸ್ನೇಹಿತರ ತಂಡ. ಜಯನಗರ ಎರಡನೇ ಬ್ಲಾಕ್‌ನಲ್ಲಿ ಕನಕನಪಾಳ್ಯ ಅಂತ ಏನಿದೆ, ಅಲ್ಲಿನ ಸುಮಾರು 30 ಹುಡುಗರ ತಂಡವನ್ನು ರಾಜ್‌ಕುಮಾರ್ ಅವರ ಮೇಲೆ ಆಗಬಾರದು ಅಂತ ನೇಮಿಸಿದ್ದರು." ಎಂದಿದ್ದಾರೆ.
ಹಾಗಂತ ಇದೊಂದೇ ಅಲ್ಲ. ಗೋಕಾಕ್ ಚಳುವಳಿಯ ಬಳಿಕ ಅಣ್ಣಾವ್ರಿಗೆ ಸಿಕ್ಕಾಪಟ್ಟೆ ಹೆಸರು ಬಂದಿತ್ತು. ಇದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಊಟಿಯಲ್ಲಿ 'ಯಾರಿವನು' ಶೂಟಿಂಗ್ ನಡೆಯುವಾಗ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು. "ಗೋಕಾಕ್ ಚಳುವಳಿಯನ್ನು ತಡೆದುಕೊಳ್ಳಲು ಆಗದೇ ಇರುವಂತಹ ಕನ್ನಡ ವಿರೋಧಿ ಶಕ್ತಿಗಳು ಡಾ.ರಾಜ್‌ಕುಮಾರ್ ವಿರುದ್ಧ ದೊಡ್ಡ ಷಡ್ಯಂತರವನ್ನು ಮಾಡಿದ್ದರು. ಊಟಿಯಲ್ಲಿ 1984ರಲ್ಲಿ ಯಾರಿವನು ಸಿನಿಮಾದ ಶೂಟಿಂಗ್ ನಡೆಯುವ ಸಂದರ್ಭದಲ್ಲಿ 60 70 ಜನ ಮಾರಕಾಸ್ತ್ರಗಳಿಂದ ಅವರ ಮೇಲೆ ಹತ್ಯೆ ಯತ್ನ ಮಾಡಿದ್ದರು. ಸ್ವಲ್ಪ ಯಾಮಾರಿದರೂ ಡಾ.ರಾಜ್‌ಕುಮಾರ್ ಅವರ ಮೇಲೆ ಭೀಕರವಾದ ಹತ್ಯೆ ನಡೆಯುತ್ತಿತ್ತು." ಎಂದು ಹೇಳಿದ್ದಾರೆ.
ಆ ವೇಳೆ ಅಣ್ಣಾವ್ರು ಯಾರಿಗೂ ಈ ವಿಷಯ ಗೊತ್ತಾಗಬಾರದು ಎಂದಿದ್ದರಂತೆ. ಆದರೆ, ಎರಡು ದಿನಗಳ ಬಳಿಕ ಈ ವಿಷಯ ಕನ್ನಡಿಗರಿಗೆ ಗೊತ್ತಾಗುತ್ತಿದ್ದಂತೆ ರಾಜ್ಯದಲ್ಲಿ ದೊಡ್ಡ ಹಂಗಾಮವೇ ನಡೆದಿತ್ತು.


Click it and Unblock the Notifications











