'ಓಂ' ಸಿನಿಮಾ ರಿಲೀಸ್ ಪೊಲೀಸರು ತಡೆಯೊಡ್ಡಿದ್ರು; ಅಣ್ಣಾವ್ರ ಎಂಟ್ರಿ ಎಲ್ಲಾವೂ ತಿಳಿಯಾಗಿದ್ದೇಗೆ?
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ 'ಓಂ'. ಈ ಸಿನಿಮಾ ಜನಪ್ರಿಯತೆ ಎಷ್ಟಿದೆ ಅನ್ನೋದನ್ನು ವಿಶೇಷವಾಗಿ ಏನು ಹೇಳಬೇಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ರೀ ರಿಲೀಸ್ ಆದಷ್ಟು ಬಹುಶ: ಬೇರೆ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ ಎಂದೇ ಹೇಳಬಹುದು. ಇಂದಿನ ಪೀಳಿಗೆಗಳೂ ಇಷ್ಟ ಪಡುವ ಸಿನಿಮಾವಿದು.
ಶಿವರಾಜ್‌ಕುಮಾರ್ ಅದೇ ಮೊದಲ ಬಾರಿಗೆ ಲಾಂಗ್ ಹಿಡಿದು ನಟಿಸಿದ ಸಿನಿಮಾವಿದು. ಅಣ್ಣಾವ್ರ ಕುಟುಂಬದಲ್ಲೇ ಇಂತಹ ಸಿನಿಮಾದಲ್ಲಿ ನಟಿಸಿರಲಿಲ್ಲ. ಅವರ ಬ್ಯಾನರ್‌ನಲ್ಲೂ ಇಂತಹ ಸಿನಿಮಾ ನಿರ್ಮಾಣ ಮಾಡಿರಲಿಲ್ಲ. ಭಯದಿಂದಲೇ ಆರಂಭಿಸಿದ ಸಿನಿಮಾ ಇಂದು ಕನ್ನಡ ಚಿತ್ರರಂಗ ಎವರ್‌ಗ್ರೀನ್ ಸಿನಿಮಾಗಳ ಸಾಲಿನಲ್ಲಿ ನಿಂತಿದೆ. ಈ ಸಿನಿಮಾದಲ್ಲಿ ಅಂದಿನ ಕಾಲದ ರಿಯಲ್ ರೌಡಿಗಳನ್ನು ಕರೆದುಕೊಂಡು ಬಂದು ಸಿನಿಮಾ ಆಕ್ಟ್ ಮಾಡಿಸಿದ್ದರು.

ರಿಯಲ್ ಲೈಫ್ ರೌಡಿಗಳು ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಪೊಲೀಸ್ ಇಲಾಖೆಗೆ ಮುಟ್ಟಿತ್ತು. ಈ ಸಿನಿಮಾ ರಿಲೀಸ್ ಆದರೆ, ಅನಾಹುತ ಆಗುತ್ತೆ ಅಂತ ಪೊಲೀಸರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸಿನಿಮಾ ಬಿಡುಗಡೆ ಮಾಡದೆ ಇರುವಂತೆ ತಡೆಯೊಡ್ಡಿದ್ದರು. ಆಗಲೇ ಡಾ.ರಾಜ್‌ಕುಮಾರ್ ಸಮಸ್ಯೆಯನ್ನು ಪರಿಹರಿಸಲು ಅಖಾಡಕ್ಕೆ ಇಳಿದಿದ್ದರು.
'ಓಂ' ಸಿನಿಮಾದಲ್ಲಿ ಎಚ್ ಎಂ ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ) ಕೂಡ ನಟಿಸಿದ್ದಾರೆ. 'ಓಂ' ಸಿನಿಮಾ ಚಿತ್ರೀಕರಣದ ಕೆಲವು ಘಟನೆಗಳನ್ನು ಹಾಗೂ ಸಿನಿಮಾ ಬ್ಯಾನ್ ಮಾಡಲು ಮುಂದಾಗಿದ್ದ ಪೊಲೀಸ್ ಇಲಾಖೆಯ ನಡೆಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಉಪೇಂದ್ರ ನಿರ್ದೇಶನದ 'ಓಂ' ಸಿನಿಮಾ ಮುಗೀತು ಅನ್ನುವ ವೇಳೆ ಪೊಲೀಸ್ ಇಲಾಖೆ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. "ಓಂ ಸಿನಿಮಾದ ಶೂಟಿಂಗ್ ಯಶಸ್ವಿಯಾಗಿ ಮುಗೀತು. ಇನ್ನೇನು ಬಿಡುಗಡೆ ಮಾಡಬೇಕು ಅನ್ನುವ ಹೊತ್ತಲ್ಲಿ ಪೊಲೀಸ್ ಇಲಾಖೆ ಸಿನಿಮಾವನ್ನು ಬಿಡುಗಡೆ ಮಾಡಬಾರದು ಅನ್ನೋ ಸನ್ನಿವೇಶವನ್ನು ಸೃಷ್ಟಿ ಮಾಡ್ತು. ಕಾರಣ ಏನಂದ್ರೆ, 94-95ರ ದಶಕದಲ್ಲಿ ರೌಡಿಸಂ ತುಂಬಾನೇ ಸ್ಪೀಡ್ ಇತ್ತು. ಐನೂರು, ಸಾವಿರ ಜನ ಒಂದೊಂದು ಫೀಲ್ಡ್‌ನಲ್ಲಿದ್ದ ಸನ್ನಿವೇಶ ಅದು.
ಹಿಂಗೆಲ್ಲ ಹೆಸರು ಮಾಡಿದ ಜನ ಹೋಗಿ ಒಂದು ಸಿನಿಮಾ ಮಾಡಿ, ಇವರೇ ಹೀರೊಗಳಾಗಿ ಕಡಿಯೋದು ಕತ್ತರಿಸೋದು ತೋರಿಸಿದರೆ, ಸಮಾಜಕ್ಕೆ ಸಂದೇಶ ಏನು ಹೋಗುತ್ತೆ? ಇದನ್ನು ನೋಡಿಕೊಂಡು ಯಾರಾದರೂ ರೌಡಿಸಂ ಶುರು ಮಾಡಿದ್ರೆ, ಯಾವ ದಿಕ್ಕಿನಲ್ಲಿ ಸಾಗುತ್ತೆ. ಅದಕ್ಕೋಸ್ಕರ ಈ ಸಿನಿಮಾ ಬಿಡುಗಡೆ ಮಾಡಬಾರದು ಅಂತ ಅದಕ್ಕೊಂದು ತಡೆ ಗೋಡೆಯನ್ನು ತಂದರು." ಎಂದು ಎಚ್ ಎಂ ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ) ಹೇಳಿಕೊಂಡಿದ್ದಾರೆ.

ಸಿನಿಮಾ ಬಿಡುಗಡೆ ಮಾಡಬಾರದು ಅಂತ ಪೊಲೀಸ್ ಇಲಾಖೆ ಹೇಳುತ್ತಿದ್ದಂತೆ ಅಣ್ಣಾವ್ರು ಮುಂದೆ ಬಂದಿದ್ದರು. ಡಾ.ರಾಜ್‌ಕುಮಾರ್ ಅವರಿಗೆ ಇದ್ದಿದ್ದ ವರ್ಚಸ್ಸಿನ ಬಗ್ಗೆನೂ ಎಚ್ ಎಂ ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ) ನೆನಪಿಸಿಕೊಂಡಿದ್ದಾರೆ. "ಮಗನ ಸಿನಿಮಾ ಬ್ಯಾನ್ ಆಗಿತ್ತಿದೆ ಅಂದ್ರೆ ಹೇಗೆ? ಯಾಕಂದ್ರೆ, ಅತಿ ದೊಡ್ಡ ಹೆಸರು ಗಳಿಸಿದ ನಟ ರಾಜ್‌ಕುಮಾರ್ ಅವರು. ಇಡೀ ಕರ್ನಾಟಕದಲ್ಲಿ ಅವರಷ್ಟು ಹೆಸರನ್ನು ಯಾರೂ ಮಾಡೋಕೆ ಆಗಿಲ್ಲ. ಅವರ ಮಾತಿಗೆ ಯಾರೂ ಧ್ವನಿ ಎತ್ತಿಲ್ಲ. ಬೇರೆಯವರ ವಿಷಯದಲ್ಲಿ ಅವರು ತಲೆ ಹಾಕಿದವರಲ್ಲ. ಚಿತ್ರರಂಗ, ಕಲೆ ಬಿಟ್ಟರೆ, ಅವರ ವೈಯಕ್ತಿಕವಾದ ಮುನ್ನಡೆ ಬಿಟ್ಟರೆ, ಬೇರೆ ವಿಷಯಕ್ಕೆ ಬಂದವರಲ್ಲ." ಎಂದು ಅಣ್ಣಾವ್ರ ಗುಣಗಾನ ಮಾಡಿದ್ದಾರೆ.
'ಓಂ' ಬಿಡುಗಡೆ ಕೋರಿ ಡಾ.ರಾಜ್‌ಕುಮಾರ್ ಫಿಲ್ಮ್ ಚೇಂಬರ್ ಹಾಗೂ ಪೊಲೀಸ್ ಕಮಿಷನರ್‌ಗೆ ಪತ್ರವನ್ನು ಬರೆದಿದ್ದರು. ಆನಂತರ ನಡೆದ ಘಟನೆಯನ್ನು ವಿವರಿಸಿದ್ದಾರೆ. "ಇಲ್ಲ ಇದೇನಾದ್ರೂ ಮಾಡಬೇಕು ಅಂತ ಫಿಲ್ಮ್ ಚೇಂಬರ್ ಹಾಗೂ ಕಮಿಷನರ್‌ಗೆ ಒಂದು ಲೆಟರ್ ಅನ್ನು ಬರೆದರು. ನೋಡಿ ಈ ಪಿಕ್ಚರ್ ಬಿಡುಗಡೆ ಆಗಬೇಕು. ಈಗ ಅವರಾಗಿಯೇ ಬಂದು ಪಾತ್ರ ಬೇಕು ಅಂದಿದ್ರೂ ತಿರಸ್ಕಾರ ಮಾಡಬಹುದಿತ್ತು. ಹಣ ಕೇಳಿ ಮಾಡಿದ್ರೂ ತಿರಸ್ಕಾರ ಮಾಡಬಹುದಿತ್ತು.
ಆದರೆ, ಇಲ್ಲಿ ಹಾಗಾಗಿಲ್ಲ. ನಾವೇ ಮನಸ್ಸಿನ ಪರಿವರ್ತನೆ ಮಾಡಿ ಸಿನಿಮಾ ಕರ್ಕೊಂಡು ಬಂದಿದ್ದೇವೆ. ಚಿತ್ರದಲ್ಲಿ ಏನೂ ಇಲ್ಲದ ಹಾಗೆ ಕಟ್ ಮಾಡಿದ್ರೆ, ನಮಗೂ ಹಾಗೂ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತೆ ಅವತ್ತು ಡಾ.ರಾಜ್‌ಕುಮಾರ್ ಅವರು ಯಾರಿಗೆ ಹೇಳಿದ್ರೋ ಗೊತ್ತಿಲ್ಲ. ಅವರು ಬಂದು ನಟಿಸಿದ್ದಕ್ಕೆ ಒಂದು ಸೀನ್ ಇರಲಿ ಅಂತ ಕೊನೆಯಲ್ಲಿ ಮಚ್ಚು ರಿವಾಲ್ವರ್ ಬಿಸಾಕುವ ದೃಶ್ಯ ಇಟ್ಟಿದ್ರು." ಎಂದು ಹೇಳಿದ್ದಾರೆ.


Click it and Unblock the Notifications











