ಸಿನಿಮಾ ಸೋತರೂ ಪ್ರಭಾಸ್ ನಂಬರ್ 1 ಹೀರೋ; ವಿಜಯ್, ಶಾರುಖ್, ಅಲ್ಲು ಅರ್ಜುನ್ ಯಾವ ಸ್ಥಾನದಲ್ಲಿದ್ದಾರೆ?
ಓರ್ಮಾಕ್ಸ್ ಮೀಡಿಯಾ ಮಧ್ಯಮ ಸಂಶೋಧನಾ ಸಂಸ್ಥೆ ಪ್ರತಿ ತಿಂಗಳು ಮನರಂಜನಾ ಲೋಕದ ಜನಪ್ರಿಯರ ತಾರೆಯರ ಪಟ್ಟಿಯನ್ನು ರಿಲೀಸ್ ಮಾಡುತ್ತೆ. ಆಯಾ ತಿಂಗಳು ಜನಪ್ರಿಯತೆ ಪಡೆದ ಟಾಪ್ ನಟ-ನಟಿಯರು ಯಾರು ಅನ್ನೋದನ್ನು ರಿವೀಲ್ ಮಾಡುತ್ತೆ. ಅದರಂತೆ ಜನವರಿ 2026ರಲ್ಲಿ ಅತೀ ಹೆಚ್ಚು ಜನಪ್ರಿಯ ಹೀರೋಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
'ಆರ್ಮಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ - ಜನವರಿ 2026' ಹೆಸರಿನ ಅತ್ಯಂತ ಜನಪ್ರಿಯ ಹೀರೋ ಪಟ್ಟಿ ಹೊರಬಿದ್ದಿದೆ. ಇದು ಪ್ರೇಕ್ಷಕರ ಅಭಿರುಚಿ, ಸೋಶಿಯಲ್ ಮೀಡಿಯಾಗಳಲ್ಲಿ ಅವರಿಗಿರುವ ಜನಪ್ರಿಯತೆ, ಟ್ರೆಂಡ್‌ಗಳನ್ನು ಆಧರಿಸಿ ಪ್ರತಿ ತಿಂಗಳು ಅಂಕಗಳನ್ನು ಸಿದ್ಧಪಡಿಸುತ್ತೆ. ಈ ಪಟ್ಟಿ ಹೊರ ಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಓರ್ಮಾಕ್ಸ್ ಜನಪ್ರಿಯರ ಹೀರೋಗಳ ಈ ಪಟ್ಟಿಯಲ್ಲಿ ತೆಲುಗು ಚಿತ್ರರಂಗದ ಹೀರೋಗಳೇ ಹೆಚ್ಚಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಮತ್ತೊಮ್ಮೆ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಜನವರಿ ತಿಂಗಳಲ್ಲಿ ಪ್ರಭಾಸ್ ನಟಿಸಿದ 'ರಾಜಾ ಸಾಬ್' ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ಪ್ರಭಾಸ್ ಆ ತಿಂಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿ ಇದ್ದರು. 'ಸಲಾರ್' ಹಾಗೂ 'ಕಲ್ಕಿ' ಬಿಗ್ ಸಕ್ಸಸ್ ಬಳಿಕ ಮತ್ತೆ ಅವರ ಸ್ಟಾರ್‌ಡಮ್ ಹೆಚ್ಚಿದೆ.
ಪ್ರಭಾಸ್ ನಂ 1 ಸ್ಥಾನದಲ್ಲಿ ಇದ್ದರೂ 'ದಿ ರಾಜಾಸಾಬ್' ಬಾಕ್ಸಾಫೀಸ್‌ನಲ್ಲೇನು ಗೆದ್ದಿಲ್ಲ. ಹೀಗಿದ್ದರೂ ಅವರ ಜನಪ್ರಿಯತೆ ಏನೂ ಕಮ್ಮಿಯಾಗಿಲ್ಲ. ಇನ್ನು ಪ್ರಭಾಸ್ ಕೈಯಲ್ಲಿ 'ಸ್ಪಿರಿಟ್', 'ಫೌಜಿ'ಯಂತಹ ಪ್ಯಾನ್ ಇಂಡಿಯಾ ಸಿನಿಮಾಗಳಿವೆ. ಡಾರ್ಲಿಂಗ್ ದೊಡ್ಡ ಅಭಿಮಾನಿ ಬಳಗ ಹಾಗೂ ಪ್ಯಾನ್ ಇಂಡಿಯಾ ಇಮೇಜ್ ಇದಕ್ಕೆ ಕಾರಣ. ಇನ್ನು ಎರಡನೇ ಸ್ಥಾನ ದಳಪತಿ ವಿಜಯ್‌ಗೆ, ಮೂರನೇ ಸ್ಥಾನ ಅಲ್ಲು ಅರ್ಜುನ್ ಪಾಲಾಗಿದೆ.
ಹಾಗೇ ನಾಲ್ಕನೇ ಸ್ಥಾನದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪಡೆದುಕೊಂಡಿದ್ದಾರೆ. ಟಾಪ್ 5 ಪಟ್ಟಿಯಲ್ಲಿ ಇರುವ ಏಕೈಕ ಬಾಲಿವುಡ್ ನಟಿ ಶಾರುಖ್ ಖಾನ್ ಎನಿಸಿಕೊಂಡಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಇದ್ದಾರೆ. ಅಚ್ಚರಿ ಎಂಬಂತೆ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ 6ನೇ ಸ್ಥಾನದಲ್ಲಿ ಇದ್ದಾರೆ.
Ormax Stars India Loves: Most popular male film stars in India (Jan 2026) #OrmaxSIL pic.twitter.com/2E13v2cdyV
— Ormax Media (@OrmaxMedia) February 20, 2026
ಮತ್ತೆ 7ನೇ ಸ್ಥಾನವನ್ನು ತೆಲುಗು ನಟರೇ ಪಡೆದುಕೊಂಡಿದ್ದಾರೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ಏಳನೇ ಸ್ಥಾನದಲ್ಲಿ ಇದ್ದರೆ, ತೆಲುಗಿನ ಮತ್ತೊಬ್ಬ ನಟ ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ಎಂಟನೇ ಸ್ಥಾನದಲ್ಲಿದ್ದಾರೆ. ಟಾಪ್ 10ರಲ್ಲಿ ಬರೊಬ್ಬರಿ 5 ಮಂದಿ ತೆಲುಗು ಹೀರೋಗಳೆ ಇದ್ದಾರೆ. ಇದು ತೆಲುಗು ಮಂದಿಯ ಖುಷಿಯನ್ನು ದುಪ್ಪಟ್ಟು ಮಾಡಿದೆ.
8ನೇ ಸ್ಥಾನದ ಬಳಿಕ ಒಂಬತ್ತನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದಾರೆ. ಹಾಗೇ ಹತ್ತನೇ ಸ್ಥಾನ ಅಕ್ಷಯ್ ಕುಮಾರ್ ಇದ್ದಾರೆ. ಹೀಗಿದ್ದರೂ ತೆಲುಗು ಹೀರೋಗಳಲ್ಲಿ ಪಟ್ಟಿಯಲ್ಲಿ ಪವನ್ ಕಲ್ಯಾಣ್ ಮಿಸ್ ಆಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪವನ್ ಕಲ್ಯಾಣ್ 10ನೇ ಸ್ಥಾನದಲ್ಲಿ ಇದ್ದರು. ಅವರೊಬ್ಬರು ಮಿಸ್ ಆಗಿದ್ದಾರೆ. ಅದು ಬಿಟ್ಟರೆ ತಮಿಳಿನಿಂದ ಇಬ್ಬರು, ಬಾಲಿವುಡ್‌ನಿಂದ ಮೂವರು ಮಂದಿ ಪಟ್ಟಿಯಲ್ಲಿದ್ದಾರೆ. ಆದರೆ, ಯಶ್ ಈ ಪಟ್ಟಿಯಲ್ಲಿ ಮಿಸ್ ಆಗಿದ್ದು ಫ್ಯಾನ್ಸ್‌ಗೆ ಬೇಸರ ತರಿಸಿದೆ.


Click it and Unblock the Notifications











