"ವಿದ್ಯಾ ಬಾಲನ್ ಪ್ರಭಾವವನ್ನು ಬಳಸಿಲ್ಲ.. ಬಳಸುವುದೂ ಇಲ್ಲ" ಪ್ರಿಯಾಮಣಿ ಹೀಗಂದಿದ್ಯಾಕೆ? ಇಬ್ಬರ ನಡುವಿನ ನಂಟೇನು?
ದಕ್ಷಿಣ ಭಾರತದ ಜನಪ್ರಿಯರ ನಟಿಯರಲ್ಲಿ ಪ್ರಿಯಾಮಣಿ ಕೂಡ ಒಬ್ಬರು. ದಕ್ಷಿಣ ಭಾರತದ ಬಹುತೇಕ ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾ ಪ್ರೇಮಿಗಳಿಗೆ ಪ್ರಿಯಾಮಣಿಯನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ. ಮೊನ್ನೆ ತಾನೇ ತೆರೆಕಂಡ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ 'ಜವಾನ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ನಟಿಸಿದ ಈ ಸಿನಿಮಾದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾಮಣಿ ಪಾತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು.

'ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಮೂಲಕ ಪ್ರಿಯಾಮಣಿ ಹಿಂದಿ ಆಡಿಯನ್ಸ್‌ಗೂ ಚಿರಪರಿಚಿತರಾಗಿದ್ದಾರೆ. ತನ್ನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರೋ ನಟಿ ಈ ಮಟ್ಟಕ್ಕೆ ಯಾವುದೇ ಗಾಢ್ ಪಾದರ್ ಇಲ್ಲದೆ ಬೆಳೆದು ನಿಂತಿದ್ದಾರೆ. ವಿವಾಹದ ಬಳಿಕವೂ ಪ್ರಿಯಾಮಣಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಅಂದ್ಹಾಗೆ, ಪ್ರಿಯಾಮಣಿ ಇತ್ತೀಚೆಗೆ ಮೈಲ್ ಸ್ಟೋನ್ ಮೇಕರ್ಸ್ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವೊಂದನ್ನು ನೀಡಿದ್ದರು. ಆ ವೇಳೆ ಮತ್ತೊಬ್ಬ ಬಾಲಿವುಡ್ ನಟಿ ವಿದ್ಯಾಬಾಲನ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. "ಸಿನಿಮಾಗಳಿಗಾಗಿ ತಾನೆಂದೂ ವಿದ್ಯಾಬಾಲನ್ ಪ್ರಭಾವವನ್ನು ಬಳಸಿಲ್ಲ. ಮುಂದೆನೂ ಬಳಸುವುದಿಲ್ಲ. ಇಲ್ಲಿವರೆಗೂ ನಾನು ನನ್ನ ಸ್ವಂತ ಸಾಮರ್ಥ್ಯಯಿಂದಲೇ ಬೆಳೆದು ನಿಂತಿದ್ದೇನೆ. ನಾನು ನನ್ನ ಸ್ವಂತ ಕಾಲಿನ ಮೇಲೆ ನಿಂತಿದ್ದೇನೆ." ಎಂದು ಹೇಳಿದ್ದಾರೆ.
ಅಷ್ಟಕ್ಕೂ ವಿದ್ಯಾಬಾಲನ್ ಬಗ್ಗೆ ಪ್ರಿಯಾಮಣಿ ಇಂತಹ ಮಾತುಗಳನ್ನು ಆಡುವುದಕ್ಕೆ ಏನು ಕಾರಣ? ಅನ್ನೋ ಪ್ರಶ್ನೆ ಮೂಡುವುದು ಸಹಜ. ವಿದ್ಯಾಬಾಲನ್ ಕೂಡ ಬಾಲಿವುಡ್‌ನ ಜನಪ್ರಿಯ ನಟಿ. ದಕ್ಷಿಣ ಭಾರತದ ನಟಿಯಾಗಿದ್ದರೂ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಅತ್ಯದ್ಭುತ ನಟಿಯರಲ್ಲಿ ವಿದ್ಯಾಬಾಲನ್ ಕೂಡ ಒಬ್ಬರು. ಇವರು ಪ್ರಿಯಾಮಣಿಯ ಸೋದರ ಸಂಬಂಧಿ ಅನ್ನೋದು ಬಹುತೇಕ ಮಂದಿಗೆ ಗೊತ್ತಿಲ್ಲ.

ಪ್ರಿಯಾಮಣಿ ಸುಮಾರು ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹೆಸರು ಬಂದಿದೆ. ಅದೇ ಮತ್ತೆ ಕೆಲವು ಸಿನಿಮಾಗಳು ಹೀನಾಯವಾಗಿಯೂ ಸೋತಿವೆ. ಆದರೂ, ದಕ್ಷಿಣ ಭಾರತದ ಜನಪ್ರಿಯ ನಟಿಯ ಸಾಲಿನಲ್ಲಿ ಪ್ರಿಯಾಮಣಿ ಸೇರುತ್ತಾರೆ. ಸಂದರ್ಶನದಲ್ಲಿ ವಿದ್ಯಾಬಾಲನ್ ಬಗ್ಗೆ ಪ್ರಶ್ನೆ ಮಾಡಿದಾಗ, ಪ್ರಿಯಾಮಣಿ ಹೀಗೆ ಹೇಳಿಕೆ ಕೊಟ್ಟಿದ್ದಾರೆ.
"ನಾನು ಯಾರ ಬಳಿಯೂ ಸಹಾಯ ಕೇಳಿಲ್ಲ. ನನ್ನ ಶ್ರಮ ಹಾಗೂ ಉತ್ಸಾಹದಿಂದ ಸಿನಿಮಾದಲ್ಲಿ ಬೆಳೆದು ನಿಂತಿದ್ದೇನೆ. ಇದೂವರೆಗೂ ನಾನು ಯಾರ ಬಳಿಯೂ ಸಹಾಯ ಕೇಳಿಲ್ಲ. ನನಗೆ ಚಿತ್ರರಂಗದಲ್ಲಿ ಯಾರೂ ಗಾಡ್ ಫಾದರ್ ಅಂತ ಇಲ್ಲ. ಯಾರ ಪ್ರಭಾವವನ್ನೂ ಬಳಸಿಲ್ಲ. ಮುಂದೆಯೂ ಬಳಸುತ್ತೇನೆ ಅನ್ನೋ ನಂಬಿಕೆ ನನ್ನಲ್ಲಿ ಇಲ್ಲ" ಎಂದು ಪ್ರಿಯಾಮಣಿ ಹೇಳಿದ್ದಾರೆ.
"ವಿದ್ಯಾಬಾಲನ್ ಹಾಗೂ ನಾನು ದೂರದ ಸಂಬಂಧಿಗಳು. ಆದರೆ, ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೇನೆ. ಒಮ್ಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೇಟಿಯಾಗಿದ್ದೇನೆ. ನಮ್ಮ ಕುಟುಂಬಗಳೊಂದಿಗೆ ಅಷ್ಟಾಗಿ ಲಿಂಕ್ ಇಲ್ಲ. ಅವರು ದೊಡ್ಡ ನಟಿ. ವೃತ್ತಿ ಜೀವನದಲ್ಲೂ ಗೆದ್ದಿದ್ದಾರೆ." ಎಂದು ವಿದ್ಯಾ ಬಾಲನ್ ಬಗ್ಗೆ ಪ್ರಿಯಾಮಣಿ ಒಮ್ಮೆ ಹೇಳಿದ್ದರು. ಈಗ ಸಂದರ್ಶನವೊಂದರಲ್ಲಿ ಮತ್ತೆ ವಿದ್ಯಾಬಾಲನ್ ಬಗ್ಗೆ ಮಾತಾಡಿದ್ದಾರೆ.


Click it and Unblock the Notifications











