₹40 ಕೋಟಿ ದುಡಿದ 'ಯಜಮಾನ' ಸಿನಿಮಾಗೆ ವಿಷ್ಣುದಾದ ಪಡೆದ ಸಂಭಾವನೆ ಕೆಲವೇ ಲಕ್ಷಗಳು; ನಂಬ್ತೀರಾ?
ಸಾಹಸ ಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದ ಸಿನಿಮಾ 'ಯಜಮಾನ' ಈ ವರ್ಷ 25 ವರ್ಷಗಳನ್ನು ಪೂರೈಸಿಲಿದೆ. ಡಿಸೆಂಬರ್ 1 2000ದಂದು ರಿಲೀಸ್ ಆಗಿದ್ದ ಈ ಸಿನಿಮಾ ಅಲ್ಲಿವರೆಗೂ ಇದ್ದ ಬಾಕ್ಸಾಫೀಸ್ ದಾಖಲೆಗಳನ್ನು ಉಡೀಸ್ ಮಾಡಿತ್ತು. ವಿಷ್ಣದಾದ ವೃತ್ತಿ ಬದುಕಿನಲ್ಲಿ ಈ ಸಿನಿಮಾ ಹೊಸ ಇತಿಹಾಸ ಬರೆದಿತ್ತು. ಇಂದಿಗೂ 'ಯಜಮಾನ' ಸಿನಿಮಾ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದು ಬಿಟ್ಟಿದೆ.
ಡಾ.ವಿಷ್ಣುವರ್ಧನ್ ನಟಿಸಿದ 'ಯಜಮಾನ' ತಮಿಳು ಸಿನಿಮಾದ ರಿಮೇಕ್. ಕನ್ನಡದಲ್ಲಿ ವಿಷ್ಣುವರ್ಧನ್ ನಟಿಸಿದ ಪಾತ್ರವನ್ನು ತಮಿಳಿನಲ್ಲಿ ವಿಜಯಕಾಂತ್ ನಿರ್ವಹಿಸಿದ್ದರು. ಅದುವೇ 'ವಾನಥೈಪ್ಪೊಲಾ'. ತಮಿಳಿನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾ ನೋಡಿದ ದಿನವೇ ನಿರ್ಮಾಪಕ ರೆಹಮಾನ್ ಕನ್ನಡಕ್ಕೆ ರಿಮೇಕ್ ಹಕ್ಕುಗಳನ್ನು ಖರೀದಿ ಮಾಡಿದ್ದರು. 'ವಾನಥೈಪ್ಪೊಲಾ' ಸಿನಿಮಾ ಬಿಡುಗಡೆಯಾದ ವರ್ಷವೇ 'ಯಜಮಾನ' ಚಿತ್ರವನ್ನೂ ರಿಲೀಸ್ ಮಾಡಲಾಗಿತ್ತು.

ಈ ಹಿಂದೆ ಕೆಲವು ಸಂದರ್ಶನಗಳಲ್ಲಿ 'ವಾನಥೈಪ್ಪೊಲಾ' ಸಿನಿಮಾ ರಿಮೇಕ್ ಹಕ್ಕುಗಳನ್ನು ಹೇಗೆ ಖರೀದಿ ಮಾಡಿದ್ದರು ಅನ್ನೋದನ್ನು ನಿರ್ಮಾಪಕ ರೆಹಮಾನ್ ಹೇಳಿಕೊಂಡಿದ್ದಾರೆ. ಆದ್ರೀಗ ಮತ್ತೊಂದು ಸಂದರ್ಶನದಲ್ಲಿ ವಿಷ್ಣುದಾದ ಕನ್ನಡ ಚಿತ್ರರಂಗದ ಮೆಗಾ ಹಿಟ್ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿದ್ದರು? ಎಂಬುವುದನ್ನು ರಿವೀಲ್ ಮಾಡಿದ್ದಾರೆ. ವಿಷ್ಣುವರ್ಧನ್ ಹಲವು ವರ್ಷಗಳಿಂದ ಪಡೆಯುತ್ತಿದ್ದ ಒಂದೇ ರೀತಿಯ ಸಂಭಾವನೆ ಬಗ್ಗೆನೂ ರಿವೀಲ್ ಮಾಡಿದ್ದಾರೆ.
'ಯಜಮಾನ' ತಮಿಳಿನ 'ವಾನಥೈಪ್ಪೊಲಾ' ಸಿನಿಮಾದ ರಿಮೇಕ್ ಆಗಿದ್ದರೂ, ಕನ್ನಡದಲ್ಲಿ ಬಾರಿ ಯಶಸ್ಸು ಕಂಡಿತ್ತು. ಈ ಸಿನಿಮಾ ತೆಲುಗಿನಲ್ಲಿಯೂ ರಿಮೇಕ್ ಆಗಿತ್ತು. ಆದರೆ, ಕನ್ನಡ ಸಿನಿಮಾ ಸದ್ದು ಮಾಡಿದ್ದು ದಕ್ಷಿಣ ಭಾರತವೇ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿತ್ತು. ನಿರ್ಮಾಪಕ ರೆಹಮಾನ್ ಅವರೇ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಂತೆ 25 ವರ್ಷಗಳ ಹಿಂದೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು ₹40 ಕೋಟಿ ರೂಪಾಯಿ ಹಣವನ್ನು ಬಾಚಿಕೊಂಡಿತ್ತು. ಆದರೆ, ಇಷ್ಟು ದೊಡ್ಡ ಯಶಸ್ಸು ಕಂಡ ಸಿನಿಮಾಗೆ ವಿಷ್ಣುವರ್ಧನ್ ಪಡೆದ ಸಂಭಾವನೆ ಲಕ್ಷಗಳಲ್ಲಿ ಅಂದರೆ ನಂಬುತ್ತೀರಾ?
'ಯಜಮಾನ' ಸಿನಿಮಾದ ನಿರ್ಮಾಪಕ ರೆಹಮಾನ್ ಅವರೇ ಈ ವಿಷಯವನ್ನು ಬಿಯಾಂಡ್ ಲಿಮಿಟ್ಸ್ ಎನ್ನುವ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ವಿಷ್ಣುವರ್ಧನ್ ಅವರು ಹಲವು ವರ್ಷಗಳಿಂದ ಒಂದೇ ರೀತಿಯ ಸಂಭಾವನೆಯನ್ನು ಪಡೆಯುತ್ತಿದ್ದರು. ಸಿನಿಮಾ ಗೆದ್ದಾಗ ಸಂಭಾವನೆಯನ್ನು ಏರಿಸಿಕೊಳ್ಳುತ್ತಿದ್ದರು. ಸಿನಿಮಾ ಗೆದ್ದರೂ, ಸೋತರೂ ಒಂದೇ ರೀತಿಯ ಸಂಭಾವನೆ ಪಡೆಯುತ್ತಿದ್ದರು ಎಂದು ರೆಹಮಾನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

" ಒಂದು ಸಿನಿಮಾಗೆ ₹20 ಲಕ್ಷ ತೆಗೆದುಕೊಳ್ಳುತ್ತಿದ್ದರು. ಅವರದ್ದೆಲ್ಲ ಸ್ಟ್ಯಾಂಡರ್ಡ್ ಸಂಭಾವನೆ. ಇಂದಿನವರ ಹಾಗೆ ಒಂದು ಸಿನಿಮಾ ಗೆಲ್ಲುತ್ತಿದ್ದಂತೆ ಕೋಟಿ, ಮೂರು ಕೋಟಿ ಅಂತ ಕೇಳುತ್ತಾರೆ. ಸೊನ್ನೆ ಇಲ್ಲದಂತೆ ಹೇಳುತ್ತಾರೆ. ಸೊನ್ನೆಗಳು ಎಷ್ಟು ಅಂತ ಅವರಿಗೆ ಗೊತ್ತಿರುವುದಿಲ್ಲ. ನಾನು ನೋಡಿದ ಹಾಗೆ ಅವರು 200 ಸಿನಿಮಾಗಳಿಂದ ₹20 ಲಕ್ಷ ತೆಗೆದುಕೊಂಡಿದ್ದಾರೆ ಅಂದರೆ ನಂಬುತ್ತಿರಾ? 87ರಲ್ಲಿ ನಾಗೇಂದ್ರಪ್ಪ ಅಂತ ಚಿತ್ರದುರ್ಗದಲ್ಲಿ 'ಶುಭ ಮಿಲನಾ' ಅಂತ ಸಿನಿಮಾ ಮಾಡಿದ್ದರು. ಆಗಲೂ ₹20 ಲಕ್ಷ ಪಡೆದಿದ್ದರು. ಧಣಿ ಸಿನಿಮಾಗೆ ₹20 ಲಕ್ಷ, ಮಂಗಳಸೂತ್ರ ಸಿನಿಮಾ ₹20 ಲಕ್ಷ. ಯಜಮಾನ ಸಿನಿಮಾಗೆ ₹20 ಲಕ್ಷ ತೆಗೆದುಕೊಂಡಿದ್ದರು" ಎಂದು ನಿರ್ಮಾಪಕ ರೆಹಮಾನ್ ಹೇಳಿಕೊಂಡಿದ್ದಾರೆ.
ಅಂದ್ಹಾಗೆ 'ಯಜಮಾನ' ಸಿನಿಮಾವನ್ನು 2.25 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದರು. ಆದರೆ, ಸಿನಿಮಾ ಬಿಡುಗಡೆ ವೇಳೆ ಈ ಮಟ್ಟಿಗೆ ಸದ್ದು ಮಾಡಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ 1.25 ಕೋಟಿ ರೂಪಾಯಿ ಲಾಭ ಇಟ್ಟುಕೊಂಡು ಮಾರಿದ್ದರು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಂಪರ್ ಬೆಳೆ ಬೆಳೆದಿತ್ತು. ಸುಮಾರು ₹40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು.


Click it and Unblock the Notifications











