ಧ್ರುವ 'ಭರ್ಜರಿ' ಶತಕ ಬಾರಿಸಲು ದಾರಿ ಮಾಡಿಕೊಟ್ಟಿದ್ದ ಹೃದಯವಂತ ಪುನೀತ್: 99ನೇ ದಿನ ಏನಾಯ್ತು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ವರ್ಷಗಳಾಗುತ್ತಿವೆ. ಹೀಗಿದ್ದರೂ ಅವರು ಮಾಡಿದ ಸಹಾಯವನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಂತಹವರಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಒಬ್ಬರು. ಧ್ರುವ ಸರ್ಜಾ ಆರಂಭದ ದಿನಗಳಲ್ಲಿ ಅಪ್ಪು ಮಾಡಿದ ಸಹಾಯವನ್ನು ಇಂದು ನೆನಪಿಸಿಕೊಂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿದ 'ಭರ್ಜರಿ' ಸಿನಿಮಾ ಶತದಿನಗಳನ್ನು ಪೂರೈಸಿ ಯಶಸ್ವಿ ಸಿನಿಮಾಗಳ ಪಟ್ಟಿ ಸೇರಿದೆ. ಚೇತನ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಏನೋ ಸದ್ದು ಮಾಡಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ಮನಸ್ಸು ಮಾಡದೇ ಹೋಗಿದ್ದರೆ, ಪ್ರಮುಖ ಚಿತ್ರಮಂದಿರಲ್ಲಿ ಈ ಸಿನಿಮಾ 100 ದಿನಗಳನ್ನು ಪೂರೈಸುತ್ತಲೇ ಇರಲಿಲ್ಲ.

ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ನರ್ತಕಿ ಇಲ್ಲವೇ ಸಂತೋಷ್ ಚಿತ್ರಮಂದಿರದಲ್ಲೇ ಅಪ್ಪು ಸಿನಿಮಾ ರಿಲೀಸ್ ಆಗುತ್ತಿತ್ತು. 'ಭರ್ಜರಿ' 100 ಡೇಸ್‌ಗೆ ಇನ್ನೇನು ಕೆಲವು ದಿನಗಳ ಬೇಕು ಅನ್ನುವಾಗಲೇ ಅಪ್ಪು ಸಿನಿಮಾ ರಿಲೀಸ್‌ಗೆ ರೆಡಿಯಾಗಿತ್ತು. ಆಗ ಪುನೀತ್ ಮನಸ್ಸು ಮಾಡದೇ ಇದ್ದಿದ್ದರೆ, 'ಭರ್ಜರಿ' ಒಂದು ದಿನದಲ್ಲಿ '100 ಡೇಸ್' ಅನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಅಷ್ಟಕ್ಕೂ 'ಭರ್ಜರಿ' 100 ಡೇಸ್ ಆಗಿದ್ದೇಗೆ? 'ಅಂಜನಿಪುತ್ರ' ಮುಂದಕ್ಕೆ ಹೋಗಿದ್ದೇಕೆ? ತಿಳಿಯಲು ಮುಂದೆ ಓದಿ.
ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ವೇಳೆ 'ಭರ್ಜರಿ' ಸಿನಿಮಾ ನೂರು ದಿನ ಪೂರೈಸಲು ಪುನೀತ್ ರಾಜ್‌ಕುಮಾರ್ ಥಿಯೇಟರ್ ಬಿಟ್ಟುಕೊಟ್ಟ ಸಂಗತಿಯನ್ನು ಧ್ರುವ ಸರ್ಜಾ ರಿವೀಲ್ ಮಾಡಿದ್ದಾರೆ.

"ಹರ್ಷ ಮಾಸ್ಟರ್ ಡೈರೆಕ್ಟ್ ಮಾಡಿದ ಸಿನಿಮಾ ಅಂಜನಿ ಪುತ್ರ ರಿಲೀಸ್‌ಗೆ ರೆಡಿಯಾಗಿತ್ತು. ಆ ವೇಳೆ ಭರ್ಜರಿ 93-94 ದಿನಗಳು ಆಗಿತ್ತು. ಮುಂದಿನ ವಾರಕ್ಕೆ ನರ್ತಕಿ ಚಿತ್ರಮಂದಿರಕ್ಕೆ ಅಂಜನಿಪುತ್ರ ಹಾಕಿದ್ರು. ಆ ವಾರ ಅದೇ ಥಿಯೇಟರ್‌ಗೆ ಬಂದಿದ್ರೆ 99 ದಿನ ಆಗ್ತಿತ್ತು. ನನಗೆ ಒಂದು ದಿನಕ್ಕೆ ಮಿಸ್ ಆಗಿ ಹೋಗುತ್ತಲ್ಲ ಅಂದುಕೊಂಡಿದ್ದೆ. ಏನು ಮಾಡೋದು ಕೇಳುವುದು ತಪ್ಪಲ್ವಾ? ಅಂದುಕೊಂಡೇ ಫೋನ್ ಮಾಡಿ ಸರ್‌ಗೆ ಕೇಳಿದೆ." ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಫೋನ್ ಮಾಡಿ ಈ ವಿಷಯ ಹೇಳಿದ ಬಳಿಕ ಕೇವಲ ನಾಲ್ಕು ಗಂಟೆಗಳ ಒಳಗೆ ವಾಪಾಸ್ ಫೋನ್ ಮಾಡಿದ್ದರು. "ನಾನು ಫೋನ್ ಮಾಡಿ ಒಂದು ವಾರ ಆಗಿದ್ದರೆ 100 ದಿನ ಆಗಿರೋದು. ಏನಾದರೂ ಟ್ರೈ ಮಾಡಬಹುದಾ? ಅಂತ ಕೇಳಿದೆ. ಆಗ ಅಪ್ಪು ಬ್ರೋ ಕಮಿಟ್‌ಮೆಂಟ್ ಇದೆ. ಪ್ರಡ್ಯೂಸರ್‌ಗಳು ಲಾಕ್ ಆಗಿ ಹೋಗಿದ್ದಾರೆ. ನಾನು ಎಷ್ಟು ಆಗುತ್ತೋ ಅಷ್ಟು ಪ್ರಯತ್ನ ಪಡುತ್ತೇನೆ ಅಂತ ಹೇಳಿ ಫೋನ್ ಇಟ್ಟರು." ಎಂದು ಧ್ರುವ ಸರ್ಜಾ ಆ ದಿನ ನಡೆದಿದ್ದನ್ನು ಸುದ್ದಿ ಮನೆಗೆ ವಿವರಿಸಿದ್ದಾರೆ.
ಧ್ರುವ ಸರ್ಜಾ ಮನವಿ ಮಾಡಿಕೊಂಡಿದ್ದಕ್ಕೆ ಪುನೀತ್ 'ಅಂಜನಿಪುತ್ರ' ಸಿನಿಮಾವನ್ನು ಪೋಸ್ಟ್‌ಪೋನ್ ಮಾಡಿದ್ದರು. ಫಸ್ಟ್ ಟೈಮ್ ತಮ್ಮ ಸಿನಿಮಾವನ್ನು ನರ್ತಕಿ, ಸಂತೋಷ್ ಥಿಯೇಟರ್ ಬಿಟ್ಟು ಬೇರೆ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿದ್ದರು. "ನಮ್ಮ ಸಂಭಾಷಣೆ ನಡೆದು ಮೂರು ನಾಲ್ಕು ಗಂಟೆಗೆ ಮತ್ತೆ ಕಾಲ್ ಬಂತು. ಯು ಆರ್ ಮೈ ಫ್ಯಾಮಿಲಿ ಮ್ಯಾನ್. ನಾನು ಪಕ್ಕದ ಥಿಯೇಟರ್‌ಗೆ ಹೋಗ್ತೀನಿ ಹೇಗೋ ಒಪ್ಪಿಸಿದ್ದೀನಿ. ಅದಾಗಿ ಸ್ವಲ್ಪ ಗಂಟೆಗಳಾದ್ಮೇಲೆ ಗೊತ್ತಾಗುತ್ತೆ.
ಫಸ್ಟ್ ಟೈಮ್ ಪುನೀತ್ ರಾಜ್‌ಕುಮಾರ್ ಸಿನಿಮಾ ಸಂತೋಷ್, ಇಲ್ಲ ನರ್ತಕಿ ಬಿಟ್ಟು ಆ ಕಾಂಪೌಂಡ್‌ನಿಂದ ಬೇರೆ ಥಿಯೇಟರ್‌ಗೆ ಹೋಗಿದೆ ಅಂದರೆ, ಅದು ಅಂಜನಿ ಪುತ್ರ ಮಾತ್ರ. ಅದು ನಾನು ಮನವಿ ಮಾಡಿದ್ದಕ್ಕೆ ಹೋಗಿದೆ. ಧ್ರುವ ಸರ್ಜ ಅಲ್ಲದೆ, ಬೇರೆ ಯಾರೇ ಆಕ್ಟರ್ ಆಗಿದ್ದರೂ ಬೇರೆ ಥಿಯೇಟರ್‌ಗೆ ಹೋಗ್ತೀನಿ ಅಂತ ಸ್ಪಂದಿಸೋರು" ಅಂತ ಹೇಳಿದ್ದನ್ನು ಧ್ರುವ ಸರ್ಜಾ ಸಂದರ್ಶನದ ವೇಳೆ ನೆನಪಿಸಿಕೊಂಡಿದ್ದಾರೆ.


Click it and Unblock the Notifications











