ವಾರಕ್ಕೆ 2 ಬಾರಿ ಮಿಸ್ ಇಲ್ಲದೆ ಈ ಹೋಟೆಲ್‌ಗೆ ಅಪ್ಪು ಭೇಟಿ: 2 ದೋಸೆ ಸಿಬ್ಬಂದಿಗಳ ಜೊತೆ ಸೆಲ್ಫಿ
ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಅಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರು ಕೇಳೋಕೆ ಸಿಗುತ್ತೆ. ಅದರಲ್ಲೂ ಊಟದ ವಿಷಯದಲ್ಲಿ ಅಪ್ಪು ಎತ್ತಿದ ಕೈ. ತಂದೆಯಂತೆಯೇ ಭೋಜನ ಪ್ರಿಯರು. ಆಹಾರದಲ್ಲಿ ಬೇಧ ಭಾವ ಇಲ್ಲದೆ ಮನಸಾರೆ ಇಷ್ಟ ಪಟ್ಟು ಸವಿಯುತ್ತಿದ್ದ ನಟ. ಬೆಂಗಳೂರಿನಲ್ಲಿ ಇವರಿಗೆ ಹಲವು ಫೇವರಿಟ್ ಹೋಟೆಲ್‌ಗಳು ಇದ್ದವು. ಅಲ್ಲಿಗೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆಯಾದರೂ ಮಿಸ್ ಮಾಡದೆ ವಿಸಿಟ್ ಹಾಕುತ್ತಿದ್ದರು.
ಕೆಲವೊಮ್ಮೆ ಪುನೀತ್ ರಾಜ್‌ಕುಮಾರ್ ನೇರವಾಗಿ ಹೋಟೆಲ್‌ಗೆ ಎಂಟ್ರಿ ಕೊಡುತ್ತಿದ್ದರು. ಇನ್ನು ಕೆಲವೊಮ್ಮೆ ಸೈಲೆಂಟ್ ಆಗಿ ತಮ್ಮ ಕಾರಲ್ಲೇ ಕೂತು ತಮಗಿಷ್ಟವಾದುದ್ದನ್ನು ತರಿಸಿಕೊಂಡು ಸವಿಯುತ್ತಿದ್ದರು. ಅದರಲ್ಲೂ ದೋಸೆ ತಿನ್ನಬೇಕು ಅಂತ ಅನಿಸಿದರೆ, ಬೆಂಗಳೂರಿನ ಈ ಜನಪ್ರಿಯ ಹೋಟೆಲ್‌ಗೆ ಭೇಟಿ ಕೊಡುತ್ತಿದ್ದರು. ಆ ಹೋಟೆಲ್‌ನ ಮಾಲೀಕರು ಕೆಲವು ಯೂಟ್ಯೂಬ್ ಸಂದರ್ಶನದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರೆಟಿಗಳು ಅಂದರೆ ಊಟದ ವಿಚಾರದಲ್ಲಿ ಕಟ್ಟು ನಿಟ್ಟಾಗಿ ಇರುತ್ತಾರೆ. ಡಯೆಟ್ ಫಾಲೋ ಮಾಡುತ್ತಾರೆ. ಆದರೆ, ಅಪ್ಪು ವಿಚಾರನೇ ಬೇರೆ. ಸಿನಿಮಾ ಇದ್ದಾಗ ಸ್ಟ್ರಿಕ್ಟ್ ಡಯೆಟ್, ವರ್ಕ್‌ಔಟ್ ಮಾಡುತ್ತಿದ್ದರು. ಅದು ಬಿಟ್ಟರೆ, ಊಟದ ವಿಚಾರದಲ್ಲಿ ಹಿಂದೆ ಮುಂದೆ ನೋಡಿದವರೇ ಅಲ್ಲ. ಇನ್ನು ದೋಸೆ ನೆನಪಾದರೆ, ಪುನೀತ್ ರಾಜ್‌ಕುಮಾರ್ ಒಂದು ಹೋಟೆಲ್‌ಗೆ ವಿಸಿಟ್ ಹಾಕುತ್ತಿದ್ದರು. ವಾರದಲ್ಲಿ ಎರಡು ದಿನವಾದರೂ ಆ ಹೋಟೆಲ್‌ನ ದೋಸೆ ಸವಿಯುತ್ತಿದ್ದರು. ಆ ಹೋಟೆಲ್ ಯಾವುದು? ಮಾಲೀಕರು ಅಪ್ಪು ಬಗ್ಗೆ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
ಪುನೀತ್ ರಾಜ್‌ಕುಮಾರ್ ದೋಸೆ ಅಂದರೆ ಬಲು ಇಷ್ಟ. ಹೀಗಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜನಪ್ರಿಯ ಸಿಟಿಆರ್ ಹೋಟೆಲ್‌ಗೆ ಆಗಾಗ ವಿಸಿಟ್ ಹಾಕುತ್ತಿದ್ದರು. ವಾರಕ್ಕೆ ಎರಡು ಬಾರಿಯಾದರೂ ಇಲ್ಲಿಗೆ ಬಂದು ದೋಸೆ ತಿನ್ನುತ್ತಿದ್ದರು. ಹೋಟೆಲ್‌ನಲ್ಲಿ ಕೆಲಸ ಮಾಡುವ ಹುಡುಗರಿಗೆ ಸೆಲ್ಫಿ ಕೊಡುತ್ತಿದ್ದರು. ಇಲ್ಲೇ ಸ್ವಲ್ಪ ಹೊತ್ತು ಇದ್ದು ಹೊರಡುತ್ತಿದ್ದರು. ಸಿಟಿಆರ್ ಹೋಟೆಲ್‌ನ ಮಾಲೀಕರಾದ ಸಂದೇಶ್ ಪೂಜಾರಿ ಸಂಭ್ರಮ ಸೌರಭ ಅನ್ನೋ ಯೂಟ್ಯೂಬ್ ಚಾನೆಲ್ ನೀಡಿದ ಸಂದರ್ಶನದಲ್ಲಿ ಇಂತಹ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
"ಪುನೀತ್ ರಾಜ್‌ಕುಮಾರ್ ಸರ್ ವಾರಕ್ಕೆ ಎರಡು ಸಾರಿಯಾದರೂ ಬಂದು ಕಾರಲ್ಲಿ ಕೂತು ದೋಸೆ ತಿಂದು ಹೋಗೋರು. ಅವರೊಂದಿಗೆ ಅಶ್ವಿನಿ ಮೇಡಂ ಅವರೂ ಬರುತ್ತಿದ್ದರು. ಪುನೀತ್ ಸರ್ ದೋಸೆಯನ್ನು ತುಂಬಾನೇ ಇಷ್ಟ ಪಡುತ್ತಿದ್ದರು. ಎರಡೆರಡು ದೋಸೆಯನ್ನು ಆರ್ಡರ್ ಮಾಡುತ್ತಿದ್ದರು." ಎಂದು ಪುನೀತ್ ರಾಜ್‌ಕುಮಾರ್ ತಮ್ಮ ಹೋಟೆಲ್ ಬಂದಿದ್ದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಸಿಟಿಆರ್‌ಗೆ ದೋಸೆ ತಿನ್ನುವುದಕ್ಕೆ ಬರುತ್ತಿದ್ದ ಅಪ್ಪು ಸುಮ್ಮನೆ ಹೋಗುತ್ತಿರಲಿಲ್ಲ. ಹೋಟೆಲ್‌ನ ಹುಡುಗರಿಗೆ ಕಾರಿನಲ್ಲಿಯೇ ಕೂರಿಸಿಕೊಂಡು ಸೆಲ್ಫಿ ನೀಡುತ್ತಿದ್ದರು. "ನಮ್ಮ ಹುಡುಗರಿಗೆ ಅವರ ಹತ್ತಿರ ಹೋಗಿ ನಿಂತುಕೊಳ್ಳೋದು, ಫೋಟೊ ತೆಗೆಸಿಕೊಳ್ಳೋದು ಇಂತಹ ಕ್ರೇಜ್ ಇರುತ್ತೆ. ಅವರ ಡ್ರೈವರ್ ಆಚೆ ಬಂದು ನಿಂತಿದ್ದಾಗ ಇವರು ಮಾತಾಡಿಸುತ್ತಿದ್ದರು. ಫೋಟೊ ತೆಗೆಸಿಕೊಳ್ಳುತ್ತಿದ್ದರು. ಆಗ ಅವರೇ ಕರೆದು ಸೆಲ್ಫಿ ತೆಗೆದುಕೊಟ್ಟಿದ್ದಾರೆ. ಅವರೇ ಕಾರೊಳಗೆ ಕರೆಸಿ ಫೋಟೋ ತೆಗೆಸಿ ಕಳಿಸುತ್ತಿದ್ದರು. ಅದೊಂದು ಮರೆಯೋಕೆ ಆಗಲ್ಲ." ಎನ್ನುತ್ತಾರೆ.
ಪುನೀತ್ ರಾಜ್‌ಕುಮಾರ್ ಅವರ ಮೇಲಿನ ಪ್ರೀತಿಗಾಗಿ 'ಗಂಧದ ಗುಡಿ' ಸಿನಿಮಾದ ಪೋಸ್ಟರ್ ಹಾಗೂ ಟ್ರೈಲರ್ ಅನ್ನು ಹೋಟೆಲ್‌ನಲ್ಲಿ ಡಿಸ್‌ಪ್ಲೇ ಮಾಡಿದ್ದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಈಗಲೂ ನಮ್ಮ ಹುಡುಗರ ಹತ್ತಿರ ಒಳಗಡೆಯಿಂದ ಸೆಲ್ಫಿ ತೆಗೆಯುತ್ತಿರುವ ಫೋಟೋ ಇದೆ. ನಮ್ಮ ನಾಲ್ಕು ಮಂದಿ ಹುಡುಗರಿಗೆ ಸೆಲ್ಫಿ ಕೊಟ್ಟು ಹೋಗುವುದನ್ನು ದೂರದಲ್ಲಿ ನಿಂತು ನೋಡುತ್ತಿದ್ದೆ. ಅವರು ಕೂಲ್ ಆಗಿ ಬರೋರು. ಎಲ್ಲರೊಂದಿಗೆ ಚೆನ್ನಾಗಿ ಮಾತಾಡಿಸುತ್ತಿದ್ದರು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಗಂಧದಗುಡಿ ರಿಲೀಸ್ ಆದಾಗ ನಮ್ಮ ಹೋಟೆಲ್‌ನಲ್ಲಿ ಬ್ಯಾನರ್‌ಗಳನ್ನು ಹಾಕಿದ್ವಿ. ಆ ವೇಳೆ ಅಶ್ವಿನಿ ಮೇಡಂ ಬಂದಿದ್ದರು. ಕಾರಿನಲ್ಲಿ ಕೂಡ ಅದನ್ನೆಲ್ಲ ನೋಡಿದ್ದರು." ಎನ್ನುತ್ತಾರೆ.


Click it and Unblock the Notifications











