ವಿಷ್ಣುದಾದ ನಟಿಸಬೇಕಿದ್ದ 'ವೀರ ಮದಕರಿ' ಸಿನಿಮಾ ಸೆಟ್ಟೆರಲಿಲ್ಲ ಯಾಕೆ? ಅಂದು ಎದುರಾಗಿದ್ದ ಸಮಸ್ಯೆ ಏನು?
ಕನ್ನಡ ಚಿತ್ರರಂಗದಲ್ಲಿ 'ವೀರ ಮದಕರಿ' ಸಿನಿಮಾ ಮರೀಚಿಕೆಯಾಗಿ ಬಿಟ್ಟಿದೆ. ಕಳೆದ ಮೂರು ನಾಲ್ಕು ದಶಕಗಳಿಂದ ಈ ಸಿನಿಮಾ ಮಾಡುವುದಕ್ಕೆ ಕೆಲವು ನಿರ್ದೇಶಕರು ಹರಸಾಹಸ ಪಟ್ಟಿದ್ದಾರೆ. ಅದ್ಯಾಕೋ 'ವೀರ ಮದಕರಿ' ಸಿನಿಮಾ ಸೆಟ್ಟೇರಲೇ ಇಲ್ಲ. ದರ್ಶನ್‌ಗೆ ಆಕ್ಷನ್ ಕಟ್ ಹೇಳುವುದಕ್ಕೂ ಮುನ್ನ ರಾಜೇಂದ್ರ ಸಿಂಗ್ ಬಾಬು 'ವೀರ ಮದಕರಿ' ಸ್ಕ್ರಿಪ್ಟ್ ರೆಡಿ ಮಾಡಿದ್ದರು. ಅದನ್ನು ವಿಷ್ಣುವರ್ಧನ್ ಅವರಿಗೆ ಅಂತಾನೇ ಬರೆದಿದ್ದರು. ವಿಷ್ಣುದಾದ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ತರಾಸು ಬರೆದ 'ದುರ್ಗಾಸ್ತಮಾನ' ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡುವುದಕ್ಕೆ ರಾಜೇಂದ್ರ ಸಿಂಗ್ ಬಾಬು ನಿರ್ಧರಿಸಿದ್ದರು. ಈ ಸಿನಿಮಾವನ್ನು ವಿಷ್ಣುವರ್ಧನ್ ಜೊತೆ ಮಾಡಬೇಕು ಅನ್ನೋ ಆಸೆಯಿತ್ತು. ತರಾಸು ಅವರಿಂದ 'ದುರ್ಗಾಸ್ತಮಾನ'ದ ಹಕ್ಕುಗಳನ್ನು ಕೂಡ ಖರೀದಿ ಮಾಡಲಾಗಿತ್ತು. ಇನ್ನೇನು 'ವೀರ ಮದಕರಿ' ಸಿನಿಮಾ ಅನೌನ್ಸ್ ಮಾಡಬೇಕು ಅನ್ನುವಷ್ಟರಲ್ಲಿ ಟೇಕಾಪ್ ಆಗಲಿಲ್ಲ. ಅದ್ಯಾಕೆ? ಅನ್ನೋದನ್ನು ಸ್ವತ: ರಾಜೇಂದ್ರ ಸಿಂಗ್ ಬಾಬು ಸುದ್ದಿಮನೆ ಯೂಟ್ಯೂಬ್ ಚಾನೆಲ್‌ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

"ವೀರ ಮದಕರಿ ಸಿನಿಮಾ ವಿಚಾರವಾಗಿ ನನಗೆ ರಾಕ್‌ಲೈನ್ ವೆಂಕಟೇಶ್ ಅವರು ಕರೆದರು. ನಿರ್ದೇಶಕರಾಗಿ ನನ್ನನ್ನು ಕರೆದಿಲ್ಲ. ಯಾಕಂದ್ರೆ, ವೀರ ಮದಕರಿ ಮೇಲೆ ಬಹಳ ಕಣ್ಣಿತ್ತು. ದುರ್ಗಾಸ್ತಮಾನವನ್ನು ವಿಷ್ಣುವರ್ಧನ್ ಜೊತೆ ಮಾಡಬೇಕು. ಸಿವಿಎಲ್ ಶಾಸ್ತ್ರಿಯವರು ನಿರ್ಮಾಣ ಮಾಡಬೇಕು ಅಂತ ಅನೌನ್ಸ್ ಮಾಡುವುದಕ್ಕೆ ನಿರ್ಧಾರ ಆಗಿತ್ತು. ತರಾಸು ಅವರಿಂದ ರೈಟ್ಸ್ ಕೂಡ ತೆಗೆದುಕೊಂಡು ಬಂದ್ವಿ. ನಾವು ಉದಯ್ ಶಂಕರ್ ಅವರೊಂದಿಗೆ ಕೂತುಕೊಂಡು ಒಂದು ವರ್ಷನ್ ಅನ್ನು ಲೈಕ್ ಮಾಡಿದ್ವಿ." ಎಂದು ರಾಜೇಂದ್ರ ಸಿಂಗ್ ಬಾಬು ಮಾಹಿತಿ ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರಿಗೆ 'ವೀರ ಮದಕರಿ' ಸಿನಿಮಾ ಮಾಡುವುದಕ್ಕೆ ಹೊರಟಾಗ ಸಿಜಿ ಇರಲಿಲ್ಲ. ಹೀಗಾಗಿ ಎಲ್ಲವನ್ನೂ ಸೆಟ್ ಹಾಕಿಯೇ ಮಾಡಬೇಕಿತ್ತು. ಸಿನಿಮಾಗೆ ಬಳಸುವ ಪ್ರತಿಯೊಂದು ಪ್ರಾಪರ್ಟಿ ಕೂಡ ಲೈವ್ ಆಗಿಯೇ ಬಳಸಬೇಕಿತ್ತು. ಹೀಗಾಗಿ ಸಿನಿಮಾ ಬಜೆಟ್ ಗಗನಕ್ಕೆ ಹೋಗುತ್ತಿತ್ತು. ಅದು ವಿಷ್ಣುದಾದಗೆ ಗೊತ್ತಾಗುತ್ತಿದ್ದಂತೆ ಸಂಭಾವನೆ ಬೇಡ ಅಂತ ನಿರ್ಧರಿಸಿದ್ದರು. ಇತ್ತ ರಾಜೇಂದ್ರ ಸಿಂಗ್ ಬಾಬು ಕೂಡ ಸಂಭಾವನೆ ತೆಗೆದುಕೊಳ್ಳಲಿಲ್ಲ.

"ವಿಷ್ಣುವರ್ಧನ್ ನಟಿಸಿದ ಮಲಯ ಮಾರುತ ಸಿನಿಮಾ ರಿಲೀಸ್ ಆಯ್ತು. ಅವತ್ತಿನ ದಿನಾನೇ ಫುಲ್ ಟೈಮ್ ಜಾಹೀರಾತನ್ನು ಕೊಟ್ಟಿದ್ವಿ. ತತಕ್ಷಣವೇ ಶುರು ಮಾಡೋಣ ಅಂದುಕೊಂಡಿದ್ವಿ. ನಾವು ಸ್ಕ್ರಿಪ್ಟ್ ರೆಡಿ ಮಾಡಿ ಇಟ್ಟಿದ್ವಿ. ಆದರೆ, ಪಾತ್ರಗಳನ್ನು ಹಾಕಿದಾಗ ಅವತ್ತಿನ ಮಾರುಕಟ್ಟೆಗೆ ಅದು ವರ್ಕ್‌ಔಟ್ ಆಗುತ್ತಿರಲಿಲ್ಲ. ಹಾಗಾಗಿ ಆ ಸಿನಿಮಾವನ್ನು ಹೋಲ್ಡ್ ಮಾಡಲಾಗಿತ್ತು" ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.
ಇದೇ ಸ್ಕ್ರಿಪ್ಟ್ ರಾಜೇಂದ್ರ ಸಿಂಗ್ ಬಾಬು ಬಳಿ ಹಾಗೇ ಉಳಿದುಕೊಂಡಿತ್ತು. ಅದನ್ನು ಅರಿತಿದ್ದ ರಾಕ್‌ಲೈನ್ ವೆಂಕಟೇಶ್ ಒಮ್ಮೆ ರಾಜೇಂದ್ರ ಸಿಂಗ್ ಬಾಬು ಕರೆಸಿ 'ವೀರ ಮದಕರಿ' ಸಿನಿಮಾ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. "ವೀರ ಮದಕರಿ ಸ್ಕ್ರಿಪ್ಟ್ ನನ್ನ ಬಳಿ ಇತ್ತು. ಅದನ್ನು ನಾನು ರಾಕ್‌ಲೈನ್ ವೆಂಕಟೇಶ್ ಅವರಿಗೆ ಯಾವಾಗಲೋ ಹೇಳಿದ್ದೆ. ಇದೇ ಒಂದು ಬಾರಿ ಬನ್ನಿ ವೀರ ಮದಕರಿಗೆ ಕೆಲಸ ಮಾಡೋಣ ಅಂತ ಹೇಳಿದ್ದರು. ಅವರು ನನ್ನನ್ನು ಡೈರೆಕ್ಟರ್ ಅಂತ ಕರೆದಿಲ್ಲ. ನಾನು ಡೈರೆಕ್ಟರ್ ಆಗಿ ಹೋಗಿರಲಿಲ್ಲ. ಮತ್ತೆ ಮೂರು ವರ್ಷ ವೇಣು ಅವರನ್ನು ಕೂರಿಸಿಕೊಂಡು ಮತ್ತೆ ಕಥೆ ಬರೆದೆವು. ನನ್ನ ಕೆಲಸ ಸ್ಕ್ರಿಪ್ಟ್ ಮಾಡಿಕೊಡುವುದಷ್ಟೇ ಇತ್ತು. ಒಮ್ಮೆ ವೆಂಕಟೇಶ್ ಫೋನ್ ಮಾಡಿ, ನೀವೇ ಡೈರೆಕ್ಟರ್. ದರ್ಶನ್ ಕೂಡ ಒಪ್ಪಿಕೊಂಡಿದ್ದಾರೆ ಅಂತ ಅಂದ್ರು. ಅಲ್ಲಿಂದ ಸಾಂಗ್ ಕಂಪೋಸ್ ಎಲ್ಲವೂ ಶುರುವಾಯ್ತು." ಎಂದು ವೀರ ಮದಕರಿ ಶುರುವಾಗಿದ್ದ ಹಿನ್ನೆಲೆಯನ್ನು ಹೇಳಿದ್ದಾರೆ.
ವೀರ ಮದಕರಿ ಸಿನಿಮಾ ಮಾಡುವುದಕ್ಕೆ ಕೇರಳಕ್ಕೆ ಹೋದರು. ಅಲ್ಲಿ ಎರಡು ಮೂರು ಕೋಟಿ ಖರ್ಚು ಮಾಡಿ ಸೆಟ್ ಕೂಡ ಹಾಕಿದ್ದರು. ನೂರು ಜನ ಸಹ ಕಲಾವಿದರು, ದರ್ಶನ್ ಎಲ್ಲರೂ ಸೇರಿ ಮೂರು ದಿನ ಶೂಟಿಂಗ್ ಮಾಡಿದ್ದರು. ಅಷ್ಟರಲ್ಲಿ ಕೇರಳದಲ್ಲಿ ಕೊರೊನಾ ಬಂತು. ಅಲ್ಲಿಂದ ಹೊರಬೇಕಾಗಿತ್ತು. ಆ ಬಳಿಕ ಚಿತ್ರರಂಗವೇ ಅತಂತ್ರ ಪರಿಸ್ಥಿತಿಯಲ್ಲಿದ್ದಿದ್ದರಿಂದ ಇಷ್ಟೊಂದು ಹಣ ಸುರಿದು ಸಿನಿಮಾ ಮಾಡಿದರೆ, ಏನಾಗುತ್ತೋ ಅಂತ ಪ್ರಾಜೆಕ್ಟ್ ಅನ್ನೇ ನಿಲ್ಲಿಸಬೇಕಾಯ್ತು.


Click it and Unblock the Notifications











