ರಜನಿಕಾಂತ್‌ರನ್ನು ಸೂಪರ್‌ಸ್ಟಾರ್ ಮಾಡಿದ್ದೇ ಈ 5 ಸಿನಿಮಾಗಳು
ಭಾರತದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಇಂದು ವಿಶೇಷ ದಿನ. ಅವರ ಅಭಿಮಾನಿಗಳೂ ಕೂಡ ವಿಶ್ವದ ಮೂಲೆ ಮೂಲೆಯಲ್ಲೂ ಹಬ್ಬ ಮಾಡುತ್ತಿದ್ದಾರೆ. ರಜನಿಕಾಂತ್ ಇಂದು 71ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವುದೇ ಇದಕ್ಕೆ ಕಾರಣ. ಆದರೆ, ಬಸ್ ಕಂಡಕ್ಟರ್ ಆಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಭಾರತದ ಸೂಪರ್‌ಸ್ಟಾರ್ ಆಗಿ ಬೆಳೆದಿದ್ದೇ ಒಂದು ಸಾಧನೆ. ನಾಲ್ಕೂ ವರೆ ದಶಕದಲ್ಲಿ ರಜನಿಕಾಂತ್ ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾರೆ.
'ಅಪೂರ್ವ ರಾಗಂಗಳ್' ಸಿನಿಮಾದಿಂದ ಶುರುವಾಗಿದ್ದ ರಜನಿ ವೃತ್ತಿ ಜೀವನ ಮೊನ್ನೆ ಮೊನ್ನೆ ತೆರೆಕಂಡ ಅಣ್ಣಾತ್ತೆ ಸಿನಿಮಾದವರೆಗೂ ಮುಂದುವರೆದಿದೆ. ವಯಸ್ಸು 71 ದಾಟಿದರೂ ರಜನಿಕಾಂತ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿದೆ. ಒಬ್ಬ ಬಸ್ ಕಂಡಕ್ಟರ್ ಅನ್ನು ಅಭಿಮಾನಿಗಳು ತಲೈವಾ ಅನ್ನುವ ಮಟ್ಟಿಗೆ ಹೊಗಳಿ ಕೊಂಡಾಡುವಂತೆ ಮಾಡಿದ ಆ 5 ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಮಣಿರತ್ನಂ 'ತಳಪತಿ'
1991, ದೀಪಾವಳಿ ಹಬ್ಬಕ್ಕೆ ತೆರೆಕಂಡಿದ್ದ ಸಿನಿಮಾ ತಳಪತಿ. ಮಣಿರತ್ನಂ ನಿರ್ದೇಶಿಸಿದ ಈ ಸಿನಿಮಾದಲ್ಲಿ ರಜನಿಕಾಂತ್, ಮಮ್ಮುಟ್ಟಿ ಹಾಗೂ ಅರವಿಂದ್ ಸ್ವಾಮಿ ನಟಿಸಿದ್ದರು. ಆಗಿನ ಕಾಲಕ್ಕೆ ಸುಮಾರು 3 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಮಣಿರತ್ನಂ ಮಹಾಭಾರತದ ಕರ್ಣ ಹಾಗೂ ದುರ್ಯೋಧನ ಈ ಎರಡು ಪಾತ್ರಗಳನ್ನಿಟ್ಟುಕೊಂಡು ಕತೆ ಹೆಣದಿದ್ದರು. ಮಮ್ಮುಟ್ಟಿ ಹಾಗೂ ಕರ್ಣ ಇಬ್ಬರು ಸ್ನೇಹಿತರ ಪಾತ್ರದಲ್ಲಿ ನಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿ ಹೊರಹೊಮ್ಮಿತ್ತು.

ಆಟೋರಿಕ್ಷಾ ಡ್ರೈವರ್ 'ಭಾಷಾ'
1995ರಲ್ಲಿ ತೆರೆಕಂಡಿದ್ದ ಸಿನಿಮಾ 'ಭಾಷಾ' ರಜನಿಕಾಂತ್ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಸಿನಿಮಾ. ರಜನಿಕಾಂತ್ ಈ ಸಿನಿಮಾ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾಂತ ಸ್ವಭಾವದ ಆಟೋರಿಕ್ಷಾ ಡ್ರೈವರ್ ಮಾಣಿಕಮ್ ಪಾತ್ರದಲ್ಲಿ ರಜನಿ ನಟಿಸಿದ್ರೆ, ಸಿನಿಮಾ ಸಾಗುತ್ತಾ ಮತ್ತೊಂದು ಅವತಾರ ತೆರೆದುಕೊಳ್ಳುತ್ತೆ. ರಜನಿಕಾಂತ್ ಸಹೋದರಿಯ ಮೇಲೆ ದಾಳಿ ನಡೆದಾಗ, ರಜನಿ ತನ್ನ ಅಸಲಿ ರೂಪ ತೋರಿಸುವ ಕಥೆ. ಭೂಗತ ಜಗತ್ತಿನೊಂದಿಗೆ ಲಿಂಕ್ ಇರುವ ಮಾಣಿಕಮ್ ಅಸಲಿ ಅವತಾರ ರಜನಿಯ ಮತ್ತೊಂದು ಶೇಡ್. ಈ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ನಟಿ ನಗ್ಮ ಹಾಗೂ ರಾಘುವರನ್ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲೂ ಡಬ್ ಆಗಿ ರಿಲೀಸ್ ಆಗಿತ್ತು.

1999ರ ರಜಿನಿ 'ಪಡೆಯಪ್ಪ'
1999ರಲ್ಲಿ ತೆರೆಕಂಡಿದ್ದ 'ಪಡೆಯಪ್ಪ'ದಿಂದ ರಜನಿಕಾಂತ್ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲು ಆರಂಭಿಸಿತ್ತು. ತಮಿಳು ಚಿತ್ರರಂಗದ ದಿಗ್ಗಜ ಶಿವಾಜಿ ಗಣೇಶನ್, ರಮ್ಯಾ ಕೃಷ್ಣ ಹಾಗೂ ಸೌಂದರ್ಯ ನಟಿಸಿದ್ಧ ಈ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ಚಿಂದಿ ಉಡಾಯಿಸಿತ್ತು. ಪಡೆಯಪ್ಪನ ತಂದೆ ಸಾವಿನ ಬಳಿಕ ಅವರ ಕುಟುಂಬವೇ ನಾಶವಾಗುತ್ತೆ. ಆದರೆ, ರಜನಿಕಾಂತ್ ಅದೃಷ್ಟ ಕುಲಾಯಿಸಿ, ಹಣ, ಐಶ್ವರ್ಯವೆಲ್ಲಾ ಪಡೆಯಪ್ಪನ ಕೈ ಸೇರುತ್ತೆ. ಇದನ್ನು ಸಹಿಸದ ವಿರೋಧಿಗಳೂ ರಜನಿಕಾಂತ್ ಸಂತೋಷವನ್ನು ಕಿತ್ತುಕೊಳ್ಳಲು ಯತ್ನಿಸುತ್ತಾರೆ. ಅವರನ್ನೆಲ್ಲಾ ಎದುರಿಸುವ ಪಡೆಯಪ್ಪನ ಕಥೆ ಬಾಕ್ಸಾಫೀಸ್‌ನಲ್ಲಿ ಚಿಂದಿ ಚಿಂದಿ ಮಾಡಿತ್ತು. ಕೆ ಎಸ್ ರವಿಕುಮಾರ್ ನಿರ್ದೇಶಿಸಿದ ಈ ಸಿನಿಮಾಗೆ ರಜನಿ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರು.

ಶಂಕರ್ ಸಿನಿಮಾ 'ಶಿವಾಜಿ'
2007ರಲ್ಲಿ ತೆರೆಕಂಡಿದ್ದ ರಜನಿಕಾಂತ್ ಸಿನಿಮಾ 'ಶಿವಾಜಿ'. ಈ ಸಿನಿಮಾವನ್ನು ಎಸ್ ಶಂಕರ್ ನಿರ್ದೇಶನ ಮಾಡಿದ್ದರು. ಶಿವಾಜಿ ರಜನಿಕಾಂತ್ ನಟನೆಯ ದುಬಾರಿ ಸಿನಿಮಾ ಎನಿಸಿಕೊಂಡಿತ್ತು. 60 ಕೋಟಿ ವೆಚ್ಚದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 148 ಕೋಟಿ ಗಳಿಕೆ ಕಂಡಿತ್ತು. ಭ್ರಷ್ಟಾಚಾರದ ವಿರುದ್ಧ ತನ್ನದ ಸ್ಟೈಲಿನಲ್ಲಿ ಹೋರಾಡುವ ಶಿವಾಜಿ ಕಥೆಯನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದರು.

ಶಂಕರ್ 'ಎಂದಿರನ್'
ಶಂಕರ್ ನಿರ್ದೇಶನದ ಸಿನಿಮಾದ 'ಎಂದಿರನ್' ಭಾರತೀಯ ಚಿತ್ರರಂಗದ ವಿಭಿನ್ನ ಸಿನಿಮಾ ಎನಿಸಿಕೊಂಡಿತ್ತು. ರಜನಿಕಾಂತ್ ರೋಬೊ ಸೈಂಟಿಸ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರಜನಿಕಾಂತ್ ಕರಿಯರ್‌ಗೆ ಹೊಸ ತಿರುವುಕೊಟ್ಟ ಸಿನಿಮಾ. ಶಂಕರ್ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್ ಅನ್ನೇ ಚಿಂದಿ ಉಡಾಯಿಸಿತ್ತು. ಈ ಐದು ಸಿನಿಮಾಗಳು ರಜನಿಕಾಂತ್ ವೃತ್ತಿ ಬದುಕಿಗೆ ಸೂಪರ್ ಸಕ್ಸಸ್ ತಂದುಕೊಂಡ ಸಿನಿಮಾ. ಈ ಸಿನಿಮಾಗಳಿಂದ್ಲೇ ರಜನಿಕಾಂತ್ ಅಭಿಮಾನಿಗಳ ಪಾಲಿಗೆ ತಲೈವಾ ಅಂತೆನಿಸಿಕೊಂಡಿದ್ದಾರೆ.


Click it and Unblock the Notifications











