"ನಿನ್ನ ಕಟ್‌ಔಟ್ ನೋಡ್ಬೇಕು ಅಂದಳು.. ನಟನೆ ಕಲಿತು ಬರುವಷ್ಟರಲ್ಲಿ ಕಾಣೆಯಾಗಿದ್ದಳು" ಏನಾದಳು ರಜನಿ ಮೊದಲ ಲವರ್?
ಇಂದು ಸೂಪರ್‌ಸ್ಟಾರ್ ರಜನಿಕಾಂತ್ ಬಳಿ ಏನಿಲ್ಲ ಹೇಳಿ? ಹೆಸರು, ಅಸಂಖ್ಯಾತ ಅಭಿಮಾನಿಗಳು, ಹಣ, ಪತ್ನಿ-ಮಕ್ಕಳು, ಸುಂದರ ಕುಟುಂಬ ಎಲ್ಲವೂ ಇದೆ. ಬಡತನದಲ್ಲಿ ಬೆಳೆದು, ಬಸ್ ಕಂಡಕ್ಟರ್ ಆಗಿದ್ದುಕೊಂಡು ಕನಸೆಂಬ ಕುದುರೆಯನ್ನೇರಿ ಯಶಸ್ಸು ಗಳಿಸಿದ ರಜನಿಕಾಂತ್ ಜರ್ನಿಯ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಜೀರೋದಿಂದ ಸೂಪರ್‌ಸ್ಟಾರ್ ಆಗಿ ಬೆಳೆದು ಬಂದ ಹಾದಿ ಇಂದಿನ ಪೀಳಿಗೆಗೆ ಒಂದು ಸ್ಪೂರ್ತಿ.
ಶಿವಾಜಿ ರಾವ್ ಗಾಯಕ್ವಾಡ್ ಎಂಬ ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಸೂಪರ್‌ಸ್ಟಾರ್ ಆಗಿ ಬೆಳೆಯುವುದರ ಹಿಂದೆ ಒಬ್ಬ ಇದ್ದರು ಅನ್ನೋದು ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರಿಂದಲೇ ಶಿವಾಜಿ ರಾವ್ ಗಾಯಕ್ವಾಡ್ ಸಿನಿಮಾ ಕಡೆಗೆ ಮುಖ ಮಾಡಿದ್ದು, ಅವರಿಂದಲೇ ಶಿವಾಜಿ ಬದಲಾಗಿ ರಜನಿಕಾಂತ್ ಆಗಿ ಬದಲಾಗಿದ್ದು. ಅಷ್ಟಕ್ಕೂ ಆ ವ್ಯಕ್ತಿಯ ಹೆಸರು ನಿರ್ಮಲಾ. ಇವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮೊದಲ ಪ್ರೇಮಿ.

ಹೌದು, ರಜನಿಕಾಂತ್ ಆಗಿನ್ನೂ ಬಸ್ ಕಂಡಕ್ಟರ್ ಆಗಿದ್ದರು. ಆದರೆ, ಅವರಿಗೆ ನಟನೆಯ ಹುಚ್ಚಿತ್ತು. ಹೀಗಾಗಿ ಸಮಯ ಸಿಕ್ಕಾಗಲೆಲ್ಲ ನಾಟಕಗಳನ್ನು ಮಾಡುತ್ತಿದ್ದರು. ಆ ವೇಳೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ನಿರ್ಮಲಾ ಮೇಲೆ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ರಜನಿ ಆಕೆಯನ್ನು ಒಮ್ಮೆ ತನ್ನ ನಾಟಕವನ್ನು ನೋಡುವಂತೆ ಆಹ್ವಾನ ನೀಡಿದ್ದರು. ರಜನಿ ನಟನೆಯನ್ನು ನೋಡಿ ನಿರ್ಮಲಾ ಒಂದು ಆಸೆಯನ್ನು ವ್ಯಕ್ತಪಡಿಸಿದ್ದರು. ನಿನ್ನ ದೊಡ್ಡ ಕಟ್‌ಔಟ್ ಅನ್ನು ನೋಡಬೇಕು ಎಂಬುವುದು ನಿರ್ಮಲಾ ಆಸೆಯಾಗಿತ್ತು. ಆಕೆ ಆಸೆಯನ್ನು ಈಡೇರಿಸಲು ಚೆನ್ನೈಗೆ ಹೋಗಿ ಬರುವಷ್ಟರಲ್ಲಿ ನಿರ್ಮಲಾ ಇರಲಿಲ್ಲ. ಅಸಲಿಗೆ ರಜನಿಯ ಮೊದಲ ಲವ್ ಸ್ಟೋರಿ ಏನಾಯ್ತು? ಈ ಇಂಟ್ರೆಸ್ಟಿಂಗ್ ಕಥೆಯನ್ನು ಮಲಯಾಳಂ ನಟ ದೇವನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ರಜನಿಕಾಂತ್ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ವೇಳೆ ನಿರ್ಮಲಾ ಅದೇ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದರು. ಬಸ್‌ನ ಮುಂಭಾಗದಿಂದ ಹತ್ತಲು ಯತ್ನಿಸಿದಾಗ ಇಬ್ಬರ ನಡುವೆ ಜೋರಾಗಿ ಜಗಳ ನಡೆದಿತ್ತು. ಹೀಗಾಗಿ ಮೊದಲ ಭೇಟಿಯೇ ಕಿತ್ತಾಟದಲ್ಲಿ ಅಂತ್ಯವಾಗಿತ್ತು. ಆದರೆ, ಅದೇ ಬಸ್‌ನಲ್ಲಿ ಪ್ರತಿದಿನ ಪ್ರಯಾಣ ಮಾಡುತ್ತಿದ್ದರಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಅದು ಪ್ರೀತಿಗೆ ತಿರುಗಿತ್ತು.
ತನ್ನ ಮೊದಲ ಪ್ರೀತಿ ಬಗ್ಗೆ ರಜನಿಕಾಂತ್ 'ಬಾಷಾ' ಸಿನಿಮಾ ಮಾಡುವ ವೇಳೆ ತನ್ನ ಸಹ ನಟ ದೇವನ್ ಅವರ ಬಳಿ ಕೇಳಿಕೊಂಡಿದ್ದರು. ಈ ವಿಷಯವನ್ನು ಮಲಯಾಳಂ ನಟ ಮನೋರಮಾಗೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ರಜನಿಕಾಂತ್ ಮೊದಲ ಲವ್ ಸ್ಟೋರಿ ನಿಜಕ್ಕೂ ಒಂದು ಸಿನಿಮಾದಂತೆಯೇ ಇದೆ. ಒಮ್ಮೆ ಸೆಟ್ಟಿನಲ್ಲಿದ್ದವರು ತಮ್ಮ ಪ್ರೀತಿ ಬಗ್ಗೆ ಪ್ರಸ್ತಾಪ ಮಾಡುವಾಗ ರಜನಿ ಮಾತ್ರ ಅಸಮಧಾನಗೊಂಡಿದ್ದರು. ಅದ್ಯಾಕೆ ಎಂದು ಕೇಳಿದಾಗ ದೇವನ್ ಬಳಿ ಮೊದಲ ಪ್ರೀತಿಯನ್ನು ಹೇಳಿಕೊಂಡಿದ್ದರು.

ರಜನಿಕಾಂತ್ ಹಾಗೂ ನಿರ್ಮಲಾ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ರಜನಿ ನಟನೆಗೆ ನಿರ್ಮಲಾ ಅಕ್ಷರಶ: ಅಭಿಮಾನಿಯಾಗಿದ್ದರು. ನಾಟಕದಲ್ಲಿ ರಜನಿಯನ್ನು ನೋಡಿದ ಮೇಲೆ ಆಕೆ ನಟನೆಯನ್ನೇ ವೃತ್ತಿಯಾಗಿ ಮುಂದುವರಿಸಲು ಪ್ರೋತ್ಸಾಹಿಸಿದರು. ರಜನಿಗೆ ಕೇಳದೆನೇ ನಿರ್ಮಲಾ ಅಡಯಾರ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಅರ್ಜಿ ಹಾಕಿದರು. ಆದರೆ, ರಜನಿಗೆ ಆಗ ಬಸ್ ಕಂಡಕ್ಟರ್ ಕೆಲಸ ಬಿಟ್ಟು ಸಿನಿಮಾ ರಂಗದ ಕಡೆ ಹೆಜ್ಜೆ ಇಡುವುದು ಅಪಾಯಕಾರಿ ಎಂದು ಎನಿಸಿತ್ತು. ಆದರೆ, ನಿರ್ಮಲಾಗೆ ರಜನಿಕಾಂತ್ ಪ್ರತಿಭೆ ಮೇಲೆ ಸಂಪೂರ್ಣ ನಂಬಿಕೆಯಿತ್ತು. ಅವರಿಗೆ ಹಣ ಕೊಟ್ಟು ಚೆನ್ನೈನ ಫಿಲ್ಮ್ ಸ್ಕೂಲ್‌ಗೆ ಹೋಗುವುದಕ್ಕೆ ಪ್ರೋತ್ಸಾಹ ನೀಡಿದರು. ದೇವನ್ ಬಳಿ ಹೇಳಿಕೊಂಡಂತೆ ನಿರ್ಮಲಾಗೆ ರಜನಿಯನ್ನು ಸಿನಿಮಾ ಪೋಸ್ಟರ್ ಹಾಗೂ ಕಟೌಟ್‌ನಲ್ಲಿ ನೋಡುವ ಆಸೆಯಿತ್ತು.
ಭಾರತದಲ್ಲಿ ರಜನಿಕಾಂತ್ ದೊಡ್ಡ ನಟನಾಗಬೇಕೆಂದು ನಿರ್ಮಲಾ ಬಯಸಿದ್ದರು. ನಿರ್ಮಲಾ ಬಯಸಿದಂತೆ ಅವರ ಎಲ್ಲಾ ಆಸೆಗಳನ್ನೂ ಈಡೇರಿಸಿದರು. ಆದರೆ, ರಜನಿ ಪಕ್ಕದಲ್ಲಿ ಆಕೆಯೇ ಇರಲಿಲ್ಲ. ರಜನಿ ಬೆಂಗಳೂರು ಬಿಟ್ಟು ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರಿದ ನಂತರ ನಿರ್ಮಲಾ ಜೊತೆಗಿನ ಸಂಪರ್ಕ ಸಾಧ್ಯವಾಗಿರಲಿಲ್ಲ. ಮತ್ತೆ ಬೆಂಗಳೂರಿಗೆ ಮರಳಿದಾಗ, ನಿರ್ಮಲಾ ಅವರ ಮನೆ ಬೀಗ ಹಾಕಿತ್ತು. ನಿರ್ಮಲಾ ಎಲ್ಲಿಯೂ ಕಾಣಿಸಲಿಲ್ಲ. ರಜನಿಕಾಂತ್ ಸ್ಟಾರ್ ಆಗಿ ಯಶಸ್ಸು ಗಳಿಸಿದ ಮೇಲೂ ಅವರ ಪ್ರೀತಿಯ ನಿಮ್ಮಿಗಾಗಿ ಹುಡುಕಾಡಿದರು. ಆದರೆ, ನಿರ್ಮಲಾ ಸಿಗಲಿಲ್ಲ.
'ಬಾಷಾ' ಶೂಟಿಂಗ್ ವೇಳೆ ದೇವನ್ ಬಳಿ ರಜನಿ ಭಾವುಕರಾಗಿ ಹೀಗೆ ಹೇಳಿದ್ದರಂತೆ, "ದೇವನ್, ಆಕೆ ನನ್ನನ್ನು ಯಾಕೆ ಹುಡುಕಿಕೊಂಡು ಬರಲಿಲ್ಲ? ನಾನು ಇಷ್ಟೆಲ್ಲ ಸಾಧನೆ ಮಾಡಿದ್ಮೇಲೂ ಆಕೆ ನನ್ನನ್ನು ನೋಡಲು ಯಾಕೆ ಬಯಸುತ್ತಿಲ್ಲ?" ಎಂದು ಹೇಳಿದ್ದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications











