ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ?
ಕನ್ನಡ ಚಿತ್ರರಂಗದ ಕಣ್ಮಣಿ ಡಾ.ರಾಜ್‌ಕುಮಾರ್. ಇವರ ಸಿನಿಮಾಗಳು ರಿಲೀಸ್ ಆಗುತ್ತಿದೆ ಅಂದರೇನೆ ಸಂಭ್ರಮ. ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದರು. ಚಿತ್ರಮಂದಿರಗಳು ಇನ್ನಿಲ್ಲದಂತೆ ಸಿಂಗಾರಗೊಳ್ಳುತ್ತಿದ್ದವು. ಥಿಯೇಟರ್ ಮುಂದೆ ಬೃಹತ್ ಆಕಾರದ ಕಟೌಟ್‌ಗಳು ಎದ್ದು ನಿಲ್ಲುತ್ತಿದ್ದವು. ಹೂವು, ಹಾಲಿನ ಅಭಿಷೇಕ ಇವೆಲ್ಲವೂ ಇದ್ದೇ ಇರುತ್ತಿತ್ತು.
1986 ಅಣ್ಣಾವ್ರು ನಟಿಸಿದ 'ಅನುರಾಗ ಅರಳಿತು' ಸಿನಿಮಾ ರಿಲೀಸ್‌ಗೆ ರೆಡಿಯಾಗಿತ್ತು. ಪ್ರತಿ ಸಿನಿಮಾದಂತೆ ಈ ಸಿನಿಮಾಗೂ ಬೆಂಗಳೂರಿನ ಪ್ರಮುಖ ಚಿತ್ರಮಂದಿರದ ಮುಂದೆ ಬೃಹತ್ ಕಟೌಟ್ ಅನ್ನು ನಿಲ್ಲಿಸಲಾಗಿತ್ತು. ಸುಮಾರು 140 ಅಡಿ ಎತ್ತರದ ಕಟೌಟ್. ಒಂದು ದಿನ ಮುನ್ನ ಕಟ್ಟಿದ್ದ ಈ ಕಟೌಟ್ ರಾತ್ರೋ ರಾತ್ರಿ ಮಗುಚಿ ಬಿದ್ದಿತ್ತು. ಈ ಪರಿಸ್ಥಿತಿಯನ್ನು ಕೆಲ ಕಿಡಿಗೇಡಿಗಳು ಬಳಸಿಕೊಂಡು ಗದ್ದಲ ಎಬ್ಬಿಸಿದ್ದರು.

ಇನ್ನೊಂದು ಕಡೆ ಬೇರೆ ಯಾರೋ ಕಿಡಿಗೇಡಿಗಳು ತಪ್ಪು ಸಂದೇಶ ರವಾನೆ ಮಾಡಿದ್ದರು. ಬೇರೆಯವರ ಮತ್ತೆ ಎತ್ತಿ ಕಟ್ಟಿದ್ದರು. ಹೀಗಾಗಿ ಬೆಂಗಳೂರಿನ ಮಾರ್ಕೆಟ್ ಮತ್ತಿತರ ಕಡೆಗಳಲ್ಲಿ ಗಲಾಟೆ ಶುರುವಾಗಿತ್ತು. ಅಸಲಿಗೆ ಆ ದಿನ ರಾತ್ರಿ ಏನು ನಡೀತು? ಕಟೌಟ್ ಬಿದ್ದಿದ್ದಕ್ಕೆ ಗಲಾಟೆ ಶುರುವಾಗಿದ್ದೇಕೆ? ಅಂದು ನಡೆದ ಘಟನೆಯನ್ನು ವಿತರಕ ಹಾಗೂ ಅಣ್ಣಾವ್ರ ಅಭಿಮಾನಿ ಮುನಿರಾಜು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಅನುರಾಗ ಅರಳಿತು ಸಿನಿಮಾ ರಿಲೀಸ್ ಹಿಂದಿನ ದಿನ ರಾತ್ರಿ ಜೋರಾಗಿ ಮಳೆ ಬಂದಿತ್ತು. ಹೀಗಾಗಿ ಗಾಳಿ ಮಳೆಗೆ ಕಟೌಟ್ ಮಗುಚಿ ಬಿದ್ದಿತ್ತು. ಆದರೆ ಇದು ಮಾರನೇ ದಿನ ಬೇರೆಯದ್ದೇ ಸ್ವರೂಪ ಪಡೆದುಕೊಂಡಿತ್ತು.
"ಅವತ್ತು ಸಿಕ್ಕಾಪಟ್ಟೆ ಮಳೆಗಾಳಿ. ಮರಗಳೆಲ್ಲಾ ಬಿದ್ದು ಹೋಗಿದ್ದವು. ಅಂತ ಮಳೆ ಬಿರುಗಾಳಿ ಬಂದಿತ್ತು. ಕಟೌಟ್‌ನ ತಲೆ 60 ಅಡಿ, ಭುಜ 80 ಅಡಿ ಇತ್ತು. ಕೈಯಲ್ಲಿ ರೋಜಾ ಹೂವು ಹಿಡಿದುಕೊಂಡಿದ್ದ ಕಟೌಟ್ ಅದು. ಹುಣಸೆ ಮರದ ಪ್ಲೇವುಡ್ ಅದು. ಅದನ್ನು ಎಳೆದು ಸರಿಯಾಗಿ ಬಿಲ್ಡಿಂಗ್‌ಗೆ ಕಟ್ಟಬೇಕಿತ್ತು. ಆದರೆ ಅಂದು ಕಟ್ಟಿರಲಿಲ್ಲ. ಅದೇನಾಯ್ತು ಅಂದ್ರೆ ಮಳೆಗಾಳಿಗೆ ರಾತ್ರಿ ಮಕಾಡೆ ಬಿದ್ದು ಹೋಯ್ತು. ಪ್ರಕೃತಿಯಿಂದ ಆಗಿರೋದು. ಯಾರಿಂದಲೂ ಆಗಿದ್ದಲ್ಲ" ಎಂದು ಅಣ್ಣಾವ್ರ ಅಭಿಮಾನಿ ಮುನಿರಾಜು ಹೇಳಿಕೊಂಡಿದ್ದಾರೆ.

ಕಟೌಟ್ ಬೀಳುತ್ತಿದ್ದಂತೆ ಚಿತ್ರಮಂದಿರದ ಸುತ್ತಮುತ್ತ ಹಾಗೂ ಕೆಲವೆಡೆ ಗಲಾಟೆ ಶುರುವಾಗಿತ್ತು. ಇದು ತಮಿಳರು ಮಾಡಿರುವ ಕೆಲಸ ಅಂತ ಹಬ್ಬಿಸಲಾಗಿತ್ತು. "ಕಿಡಿಗೇಡಿಗಳು ಬಂದು ಇದು ತಮಿಳರು ಮಾಡಿರುವಂತಹ ಕೆಲಸ. ಬೇಕು ಅಂತಲೇ ಬಂದು ಮಾಡಿದ್ದಾರೆ ಅಂತ ಸುದ್ದಿ ಹಬ್ಬಿಸಿಬಿಟ್ಟರು. ಮಾರ್ಕೆಟ್ ಎಲ್ಲಾ ಕಡೆ ಗಲಾಟೆ ಶುರುವಾಗಿಬಿಡ್ತು. ನಾನು ಅಣ್ಣವರ ಅಭಿಮಾನಿ. ನಾನು ರೋಲ್ ಕಾಲ್ ಮಾಡಿಕೊಂಡ ಓಡಾಡುವ ಅಭಿಮಾನಿ ಅಲ್ಲ. ಈ ವಿಷ್ಯ ಎಲ್ಲರಿಗೂ ಗೊತ್ತು. ಇದನ್ನು ಯಾರು ಮಾಡಿಸುತ್ತಿದ್ದಾರೆ ಅಂತ ಅಣ್ಣಾವ್ರ ಕುಟುಂಬದ ಎಲ್ಲರಿಗೂ ಗೊತ್ತು. ಮಾಡಿದವರ ಹೆಸರು ಬೇಡ." ಎಂದು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಬರೀ ತಮಿಳರ ಹೆಸರಷ್ಟೇ ಅಲ್ಲ. ವಿಷ್ಣುವರ್ಧನ್ ಅಭಿಮಾನಿಗಳ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಇವರು ಯಾರು ಮಾಡಿದ್ದಲ್ಲ ಅಂತ ಅಣ್ಣಾವ್ರ ಸಿನಿಮಾಗಳನ್ನು ರಿ ರಿಲೀಸ್ ಮಾಡುವ ವಿತರಕ ಹಾಗೂ ಅಭಿಮಾನಿ ಮುನಿರಾಜು ಸಂದರ್ಶನದಲ್ಲಿ ಹೇಳಿದ್ದಾರೆ. "ವಿಷ್ಣುವರ್ಧನ್ ಅಭಿಮಾನಿಗಳು, ತಮಿಳರು ಅಂತೆಲ್ಲ ಸುದ್ದಿ ಹಬ್ಬಿಸಿದರು. ದೊಡ್ಡ ಗಲಾಟೆ ಆಯ್ತು. ಏನೇ ಗಲಾಟೆ ಆದರೂ, ಅಣ್ಣಾವ್ರ ಹೆಸರು ತರೋರು. ಈಗಲೂ ಇದ್ದಾರೆ." ಎಂದು ಅಂದಿನ ಗಲಾಟೆ ಬಗ್ಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











