ನೇಪಾಳಿ ಕೂಲಿಗಳಿಂದ ಬದಲಾಯ್ತು ಅಣ್ಣಾವ್ರ ಸಿನಿಮಾ ಟೈಟಲ್; 'ಶಂಕರ್ ಗುರು'ಗೂ ಇದ್ದ ಶೀರ್ಷಿಕೆ ಏನು ಗೊತ್ತೇ?
ಡಾ.ರಾಜ್‌ಕುಮಾರ್ ಸಿನಿಮಾಗಳ ಹಿಂದೆ ನೂರಾರು ಕಥೆಗಳು ಇರುತ್ತೆ. ಒಂದೊಂದು ಕಥೆಯೂ ಅಷ್ಟೇ ಇಂಟ್ರೆಸ್ಟಿಂಗ್. ಸಿನಿಮಾದ ಕತೆ ಬರೆಯುವುದಕ್ಕೆ ಅಂತ ಶುರು ಮಾಡಿದ ದಿನದಿಂದ ಹಿಡಿದು, ಆ ಸಿನಿಮಾ ಮುಗಿದು ರಿಲೀಸ್ ಆಗಿ, ಯಶಸ್ಸು ಕಂಡ ಮೇಲೂ ಏನಾದರೂ ಒಂದು ಘಟನೆ ನಡೆದಿರುತ್ತೆ. ಇದರಲ್ಲಿ ಸಾಕಷ್ಟು ಘಟನೆಗಳನ್ನು ರಾಜ್‌ಕುಮಾರ್ ಅವರೇ ಹೇಳಿಕೊಂಡಿದ್ದಾರೆ.
ಅಣ್ಣಾವ್ರ ಸಿನಿಮಾಗಳನ್ನು ಇಂದಿಗೂ ಇಷ್ಟ ಪಟ್ಟು ನೋಡುವ ಮಂದಿಗೇನು ಕಮ್ಮಿಯಿಲ್ಲ. ಇವರು ನಟಿಸಿದ ಒಂದೊಂದು ಸಿನಿಮಾವೂ ಅದ್ಭುತ ಯಶಸ್ಸು ಕಂಡಿದೆ. ಅಂತಹ ಸಿನಿಮಾಗಳ ಪಟ್ಟಿಯಲ್ಲಿ 'ಶಂಕರ್ ಗುರು' ಕೂಡ ಒಂದು. ಈ ಸಿನಿಮಾದಲ್ಲಿ ರಾಜ್‌ಕುಮಾರ್ ತ್ರಿಪಾತ್ರದಲ್ಲಿ ನಟಿಸಿದ್ದರು. ಆಗಿನ ಕಾಲಕ್ಕೆ ಒಬ್ಬನೇ ನಟ ಮೂರು ಪಾತ್ರಗಳಲ್ಲಿ ನಟಿಸುತ್ತಿದ್ದಿದ್ದು ರಾಜ್‌ಕುಮಾರ್ ಮಾತ್ರ.

'ಶಂಕರ್ ಗುರು' ಹೆಚ್ಚು ಕಡಿಮೆ ಒಂದು ವರ್ಷ ಯಶಸ್ವಿಯಾಗಿ ಪ್ರದರ್ಶನ ಕಂಡ ಸಿನಿಮಾ. ಅಣ್ಣಾವ್ರ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಹಿಟ್ ಕೊಟ್ಟ ಸಿನಿಮಾವಿದು. ಆದರೆ 'ಶಂಕರ್ ಗುರು'ಗೂ ಮುನ್ನ ಟೈಟಲ್ ಬೇರೆ ಇಡಲಾಗಿತ್ತು. ಆದರೆ ನೇಪಾಳದ ಕೂಲಿಗಳಿಂದಾಗಿ ಸಿನಿಮಾ ಟೈಟಲ್ 'ಶಂಕರ್ ಗುರು' ಅಂತಾಯ್ತು. ಟೈಟಲ್ ಹೇಗೆ ಬದಲಾಯ್ತು? ಈ ಸಿನಿಮಾ ಇಂಟ್ರೆಸ್ಟಿಂಗ್ ಸ್ಟೋರಿ ಏನು? ಅನ್ನೋದನ್ನು ಹಿರಿಯರ ಪತ್ರಕರ್ತ, ಲೇಖಕ ಶ್ರೀಧರ ಮೂರ್ತಿ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ ರಿವೀಲ್ ಮಾಡಿದ್ದರು.
'ಶಂಕರ್ ಗುರು' ಸಿನಿಮಾ ಅಣ್ಣಾವ್ರ ಸ್ನೇಹಿತರ ಕುಟುಂಬದಲ್ಲಿಯೇ ನಡೆದ ಕಥೆ ಅನ್ನೋದು ನಿಮಗೆ ಗೊತ್ತಿತ್ತೇ? "ಹೆಂಡತಿಯನ್ನು ಕಾಪಾಡಬೇಕು ಅಂತ ಕೊಲೆ ಮಾಡುತ್ತಾನೆ. ಆಮೇಲೆ ಕಾಶ್ಮೀರಕ್ಕೆ ಓಡಿ ಹೋಗುತ್ತಾನೆ. ಇದು ರಾಜ್‌ಕುಮಾರ್ ಸ್ನೇಹಿತರ ಕುಟುಂಬದಲ್ಲಿ ನಡೆದ ಘಟನೆ. ಈ ಕಥೆಯನ್ನು ಸಂತ ತುಕಾರಾಮ್ ಪ್ರಡ್ಯೂಸರ್ ರಾಧಾಕೃಷ್ಣಅವರಿಗೆ ಹೇಳಿದರು. ಅವರು ಅಣ್ಣ ನೀವು ಇದೊಂದೇ ಪಾತ್ರವನ್ನು ಜನ ಮಾಡಿದರೆ ಒಪ್ಪುವುದಿಲ್ಲ. ಮಕ್ಕಳ ಪಾತ್ರವನ್ನು ನೀವು ಮಾಡಬೇಕು ಅಂದರು. ಆಗ ಶಂಕರ್ ಗುರು ಸಿನಿಮಾದ ಕಥೆ ಸಿದ್ಧವಾಯ್ತು. ಅಷ್ಟರಲ್ಲೇ ರಾಧಾಕೃಷ್ಣ ಹೋಗಿಬಿಟ್ಟರು." ಎಂದು ಸಿನಿಮಾ ಮೇಕಿಂಗ್ ವೇಳೆ ನಡೆದ ಘಟನೆಯನ್ನು ಶ್ರೀಧರ ಮೂರ್ತಿ ವಿವರಿಸಿದ್ದಾರೆ.

ನಿರ್ಮಾಪಕರ ನಿಧನದಿಂದ ಅಣ್ಣಾವ್ರ 'ಶಂಕರ್ ಗುರು' ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು. ಅಷ್ಟರಲ್ಲೇ ಬಹಳಷ್ಟು ಪ್ರಚಾರ ಆಗಿತ್ತು. ರಾಜ್‌ಕುಮಾರ್ ತ್ರಿಪಾತ್ರದಲ್ಲಿ ಮಾಡುತ್ತಾರೆ ಅಂತ ಸುದ್ದಿ ಹಬ್ಬಿತ್ತು. ಆಗ ಪಾರ್ವತಮ್ಮ ರಾಜ್‌ಕುಮಾರ್ ನಾವೇ ಈ ಸಿನಿಮಾ ಮಾಡೋಣ ಅಂತ ಶುರು ಮಾಡಿದ್ದರು. ಆ ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಿದ್ದರು. ಆದರೆ, ಮೊದಲು ಈ ಸಿನಿಮಾಗೆ ಟೈಟಲ್ 'ಶಂಕರ್ ಗುರು' ಅಂತ ಇಟ್ಟಿರಲಿಲ್ಲ. ಬೇರೆನೇ ಇತ್ತು.
ನೇಪಾಳದಲ್ಲಿ ಶೂಟಿಂಗ್ ನಡೀತಿತ್ತು. ಇಲ್ಲಿನವರನ್ನು ಕರೆದುಕೊಂಡು ಹೋಗುವುದು ಬಹಳ ಕಷ್ಟ ಆಗುತ್ತೆ. ಅಲ್ಲಿಯವರೇ ಅಡುಗೆಯವರು. ಅಲ್ಲಿಯವರೇ ಸಹಾಯಕರು. ಕ್ಯಾಮರಾಮ್ಯಾನ್ ಒಬ್ಬರೇ ಇಲ್ಲಿಯವರು. ಆದರೆ, ಅವರಿಗೆ ಸಹಾಯಕರು ಅಲ್ಲಿಯವರು. ಹೀಗೆ ಸಿನಿಮಾ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದರು. ಆದರೆ, ಮೊದಲು ಸಿನಿಮಾ ಟೈಟಲ್ ಬೇರೆ ಇಟ್ಟಿದ್ದ ತಂಡ. ನೇಪಾಳಕ್ಕೆ ಹೋದ್ಮೇಲೆ 'ಶಂಕರ್ ಗುರು'ವಾಗಿ ಬದಲಾಗಿತ್ತು.
"ಈ ಸಿನಿಮಾಗೆ ಹೆಸರು 'ಮುಗಿಯದ ಮಾತು' ಅಂತ ಇಡಲಾಗಿತ್ತು. ಅಲ್ಲಿ ಹಿಮಾಲಯ ನೋಡುವುದಕ್ಕೆ ಬರುವವರೆಲ್ಲ, ಅಲ್ಲಿನ ನೇಪಾಳಿ ಕೂಲಿಗಳು ಇದ್ಯಾವ ಸಿನಿಮಾ ಅಂತ ಕೇಳೋರು. ಅವರಿಗೆ ಮುಗಿಯದ ಮಾತು ಅಂತ ಹೇಳಿದರೆ ಏನು ಅರ್ಥ ಆಗುತ್ತೆ. ಅದಕ್ಕೆ ಈ ಸಿನಿಮಾದಲ್ಲಿ ಶಂಕರ್ ಮತ್ತು ಗುರು ಅಂತ ಇಬ್ಬರು ಇದ್ದಾರೆ. ಅದಕ್ಕೆ ಶಂಕರ್ ಗುರು ಅಂತ ಹೇಳೋರು. ಅಣ್ಣಾವ್ರಿಗೆ ಇದನ್ನು ಹೇಳಿ ಹೇಳಿ ಸಾಕಾಗಿ ಇದನ್ನೇ ಯಾಕೆ ಟೈಟಲ್ ಇರಬಾರದು ಅಂತ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸಿದರು." ಎನ್ನುತ್ತಾರೆ. ಈ ಸಿನಿಮಾ ಕನ್ನಡದ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ಬರೆದುಬಿಡ್ತು.


Click it and Unblock the Notifications











