ಅಣ್ಣಾವ್ರ ಮುಂದೆ ನಾಲ್ಕು ಅಡಿ ಎದ್ದು ನಿಂತಿದ್ದ ಕಾಳಿಂಗ ಸರ್ಪ; ಈ ಘಟನೆ ನಡೆದಿದ್ದು ಯಾವಾಗ?
ಕನ್ನಡ ಚಿತ್ರರಂಗದ ವರನಟನ ಬಗ್ಗೆ ಸಿನಿಮಾ ಮಂದಿಗೆ ಒಂದಲ್ಲ ಒಂದು ಅನುಭವಗಳು ಆಗಿರುತ್ತೆ. ರಾಜ್‌ಕುಮಾರ್ ಬಗ್ಗೆ ಒಬ್ಬೊಬ್ಬರಿಗೂ ಒಂದೊಂದು ಅನುಭವ. ಅಣ್ಣಾವ್ರು ಅಗಲಿ 19 ವರ್ಷಗಳಾಗಿದ್ದರೂ, ಅವರೊಂದಿಗೆ ಕಳೆದು ದಿನಗಳನ್ನು ಇನ್ನೂ ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅಂತಹವರಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡ ಒಬ್ಬರು.
ಶಂಕರ್ ನಾಗ್ ನಿರ್ದೇಶಿಸಿದ 'ಒಂದು ಮುತ್ತಿನ ಕಥೆ' ಸಿನಿಮಾದ ಶೂಟಿಂಗ್‌ಗಾಗಿ ಯಾಣಗೆ ಪ್ರಯಾಣ ಬೆಳೆಸಿದ್ದರು. ಆ ವೇಳೆ ಅಲ್ಲಿಗೆ ಹೋಗುವುದಕ್ಕೆ ಸಾಕಷ್ಟು ದೂರ ನಡೆಯಬೇಕಿತ್ತು. ಅಣ್ಣಾವ್ರು, ಮುಖ್ಯಮಂತ್ರಿ ಚಂದ್ರು ಹಾಗೂ ಗನ್‌ಮ್ಯಾನ್ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಿಸಿಲು ಹೆಚ್ಚಿದ್ದಿದ್ದರಿಂದ ಅಣ್ಣಾವ್ರು ಅಲ್ಲೇ ಹರಿಯುತ್ತಿದ್ದ ಝರಿಯಲ್ಲಿ ಕೂತು, ನೀರು ಕುಡಿದು ಮುಂದಕ್ಕೆ ಹೋಗೋಣ ಎಂದಿದ್ದರು. ಆ ವೇಳೆ ಆದ ಎರಡು ಅನುಭವಗಳನ್ನು ಮುಖ್ಯಮಂತ್ರಿ ಚಂದ್ರು ಡೈಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ.

"ಯಾಣಗೆ ಕಾಡಿನಲ್ಲಿ 8 ರಿಂದ 10 ಕಿ.ಮೀ ನಡೆದುಕೊಂಡು ಹೋಗಬೇಕಿತ್ತು. ಒಂದು ಮುತ್ತಿನ ಕಥೆ ಶೂಟಿಂಗ್‌ಗೆ ಶಂಕರ್‌ನಾಗ್ ಮುಂಚೆ ಹೋಗಿದ್ದ. ನಾನು ರಾಜ್‌ಕುಮಾರ್, ಕೃಷ್ಣೇ ಗೌಡರು, ರಮೇಶ್ ಭಟ್, ಸುಂದರ್ ರಾಜ್ ಎಲ್ಲರೂ ನಡೆದುಕೊಂಡು ಹೋಗುತ್ತಿದ್ವಿ. ರಾಜ್‌ಕುಮಾರ್ ಅವರಿಗೆ ಬಿಸಿಲು ತಡೆದುಕೊಳ್ಳಲು ಆಗಲಿಲ್ಲ. ಆಗ ಚಂದ್ರು ಅವರೇ ಇಲ್ಲಿ ಝರಿ ಹರಿಯುತ್ತಿದೆ. ನೀರು ನೋಡುವುದಕ್ಕೆ ಮುದ್ದಾಗಿತ್ತು. ಎರಡು ನಿಮಿಷ ಇಲ್ಲಿ ಕೂತಿದ್ದು, ಶೂಟಿಂಗ್ ತಡವಾದರೆ ಏನಂತೆ, ನಮ್ಮದೇ ಪಿಚ್ಚರ್, ಇಲ್ಲಿ ಕೂತಿದ್ದು ಮುಖಕ್ಕೆ ನೀರು ಹಾಕೊಂಡು ತಣ್ಣಗೆ ಮಾಡಿಕೊಂಡು ಹೋಗೋಣವೇ ಅಂತ ಹೇಳಿದ್ದರು." ಎಂದು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಮಂಡಿಯುದ್ಧ ನೀರು ಇರುವ ಜಾಗ. ಅವರು ಕೂತುಕೊಂಡು ಅಣ್ಣಾವ್ರು ಬಟ್ಟೆ ಬಿಚ್ಚಿ ಕೂತುಬಿಟ್ಟರು. ಬಿಸಿಲಿನ ಬೇಗೆಗೆ ನೀರು ಚಿಮುಕಿಸಿಕೊಂಡರು. ಐಸ್ ಕೋಲ್ಡ್ ಇದ್ದಂಗೆ ನೀರು ಇತ್ತು. ಆ ನೀರು ಕುಡಿಯುವ ಹೊತ್ತಿಗೆ, ಒಂಬತ್ತು ವರ್ಷದ ಹುಡುಗ ಓಡಿ ಅಲ್ಲಿಗೆ ಬಂದಿದ್ದ. ಅವನಿಗೆ ರಾಜ್‌ಕುಮಾರ್ ಯಾರು ಅಂತ ಗೊತ್ತಿರಲಿಲ್ಲ. ಚಂದ್ರು ಯಾರು ಅಂತ ಗೊತ್ತಿರಲಿಲ್ಲ. ಸಿನಿಮಾ ಏನು ಅಂತ ಗೊತ್ತಿರಲಿಲ್ಲ. ಕಾಡಿನ ಹುಡುಗ ಅವನು. ನೋಡಿ ಗುರುತಿಸುವ ಸ್ಥಿತಿಯಲ್ಲಿ ಇರಲಿಲ್ಲ.

"ಎದ್ದೇಳಿ ಬೇಗ ಹೊರಟು ಬಿಡಿ ಇಲ್ಲಿಂದ ಅಂತ ಅಂದ. ರಾಜ್‌ಕುಮಾರ್ ಯಾಕೆ ಅಂತ ಕೇಳಿದರು. ಇನ್ನು ಸ್ವಲ್ಪ ಹೊತ್ತಿಗೆ ಹುಲಿ ಬಂದು ನೀರು ಕುಡಿದುಕೊಂಡು ಹೋಗುತ್ತೆ. ಇಲ್ಲಿಂದ ಹೋಗಿ ಅಂದ. ಹೇಗೆ ಎದ್ದಿದ್ದೀವಿ ಓಡಿದ್ದೇವೆ ಅನ್ನೋದೆ ಗೊತ್ತಿಲ್ಲ. ಆ ಟೈಮ್‌ನಲ್ಲೂ ಎಷ್ಟು ತಮಾಷೆ ಮಾಡಿದರು ಅಂದರೆ, ನಾನು ಹೀರೋ, ನೀವು ವಿಲನ್. ಗನ್ ಮ್ಯಾನ್ ಪಕ್ಕದಲ್ಲಿ ಇದ್ದಾನೆ. ಇನ್ನಿಬ್ಬರು ವಿಲನ್‌ಗಳು ನಾವ್ಯಾರು ಅಲ್ಲ ಈಗ. ಆ ಒಂಬತ್ತು ವರ್ಷದ ಹುಡುಗನೇ ಇಲ್ಲಿ ಹೀರೋ. ಹುಲಿಗೆ ಹೆದರದೆ ಇಲ್ಲಿ ನಿಂತು ಹೇಳುತ್ತಿದ್ದಾನೆ ನೋಡಿ." ಎಂದು ಅಣ್ಣಾವ್ರು ತಮಾಷೆ ಮಾಡಿದ್ದರು.
ಆನಂತರ ಆ ಹುಡುಗ ಹುಲಿ ಎಲ್ಲೋ ಬೇಟೆ ಆಡಿರುತ್ತೆ. ಬೇಟೆ ಆಡಿದ ಮೇಲೆ ನೀರು ಕುಡಿಯಬೇಕಿರುತ್ತೆ. ಅದಕ್ಕೆ ಇಲ್ಲಿಗೆ ಬರುತ್ತೆ. ಅದು ಬರುವುದಕ್ಕೂ ಮುನ್ನ ದೊಡ್ಡದಾಗಿ ಘರ್ಜನೆ ಮಾಡುತ್ತೆ. ಒಮ್ಮೆ ಬಂದು ನೀರು ಕುಡಿದ ಮೇಲೆ ಶಾಂತವಾಗುತ್ತೆ. ನಾವು ಏನೂ ಮಾಡದೆ ಸುಮ್ಮನೆ ನಿಂತಿದ್ದರೆ, ಅದು ಏನು ಮಾಡುವುದಿಲ್ಲ. ಅದರ ಪಾಡಿಗೆ ಅದು ಹೋಗುತ್ತೆ ಎಂದು ಆ ಹುಡುಗ ಹೇಳಿದ್ದನಂತೆ. ಆಮೇಲೆ ಎಲ್ಲರೂ ಓಡುವುದಕ್ಕೆ ಶುರು ಮಾಡಿದ್ದರಂತೆ. ಆಗ ಆ ಹುಡುಗನೇ ತಾನೂ ಜೊತೆಗೆ ಬರುವುದಾಗಿ ಹೇಳಿದ್ದ ಎಂದು ಮುಖ್ಯಮಂತ್ರಿ ಚಂದ್ರು ನೆನಪಿಸಿಕೊಳ್ಳುತ್ತಾರೆ.

"ಗನ್ ಮ್ಯಾನ್ ಇದ್ದಾನೆ ಅವನು ನಡುಗುತ್ತಿದ್ದಾರೆ. ನೀವು ನಡುಗುತ್ತಿದ್ದೀರ. ನಾನು ನಡುಗುತ್ತಿದ್ದೇನೆ. ನೋಡಿ ಅವನು ಎಷ್ಡು ಧೈರ್ಯವಾಗಿ ಹುಲಿ ಬಂದು ಕುಡಿದುಕೊಂಡು ಹೋಯ್ತು ಅಂತ ಹೇಳುತ್ತಿದ್ದಾನೆ. ಸತ್ಯ ನೋಡಿ. ಪ್ರಪಂಚ ಹೇಗಿದೆ ಅಂತ ಮಾತಾಡಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಹುಲಿಯ ಘರ್ಜನೆ ಕೇಳಿತ್ತು. ಅದೇ ವೇಳೆ ಉಶ್ ಅಂತ ಒಂದು ಸದ್ದು ಕೇಳಿಸಿತು. ನೋಡಿದರೆ ಕಾಳಿಂಗ ಸರ್ಪ ಹೆಡೆ ಎತ್ತಿ ನಿಂತಿದೆ" ಎಂದು ಆ ಘಟನೆಯನ್ನು ಇನ್ನೂ ಸ್ವಾರಸ್ಯಕರವಾಗಿ ಡೈಲಿ ಮಾಧ್ಯಮಕ್ಕೆ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
"ಅದೊಂದು 12 ಅಡಿ ಕಾಳಿಂಗ ಸರ್ಪ. ನಾಲ್ಕು ಅಡಿ ಎದ್ದು ನಿಂತಿದೆ. ಕರಿ ಮೀಸೆ ಹೀಗೆ ನೋಡುತ್ತಿದೆ. ನನಗೆ ತೊಡೆಯೆಲ್ಲ ನಡುಗಿ ಹೋಗಿತ್ತು. ಆ ಹುಡುಗ ಏನು ಮಾಡಬೇಡಿ ಸುಮ್ಮನೆ ನಿಂತುಕೊಳ್ಳಿ. ಅಲ್ಲಾಡಬೇಡಿ, ಹಿಂದಕ್ಕೂ ಹೋಗಬೇಡಿ ಅಂದ. ಅವನೇನೋ ಹೇಳಿದ, ಆದರೆ, ನಮ್ಮ ಕಡೆಗೆ ಬಂದರೆ ಏನು ಮಾಡೋದು. ಯಾರಿಗೆ ಗುರಿ ಇಟ್ಟಿದೆಯೋ ಏನೋ? ರಾಜ್‌ಕುಮಾರ್‌ಗೆ ಎಷ್ಟು ಧೈರ್ಯ ಅಂದರೆ, ಅವನು ಏನು ಹೇಳುತ್ತಾನೋ ಕೇಳಿ ಅವನಿಗೆ ಗೊತ್ತಿದೆ. ನಾವು ಏನೋ ಮಾತಾಡುವುದು ಬೇಡ. ನಾವು ಅಲ್ಲಾಡದೆ ಇದ್ದಿದನ್ನು ನೋಡಿ ಅದು ಹೆಡೆ ಇಳಿಸಿತು. ನಮ್ಮ ಕಡೆಗೂ ಬರಲ್ಲ. ನಿಮ್ಮ ಕಡೆಗೂ ಬರಲ್ಲ ಸುಮ್ಮನೆ ಇದ್ದು ಬಿಡಿ ಅಂದರು. ಆ ಮೇಲೆ ಪೊದೆಗೆ ಹೋಯ್ತು." ಎಂದು ಆ ಘಟನೆಯನ್ನು ನೆನೆದು ಅಣ್ಣಾವ್ರ ಧೈರ್ಯದ ಬಗ್ಗೆ ಮಾತಾಡಿದ್ದಾರೆ.
ಹಾಗೇ ಜ್ವಾಲಾಮುಖಿ ಸಿನಿಮಾದ ವೇಳೆ ಅವರ ವೋಕಲ್ ಕಾರ್ಡ್‌ಗೆ ಸಮಸ್ಯೆ ಆದಾಗ ಅಣ್ಣಾವ್ರು ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ. ಶೂಟಿಂಗ್ ಮುಗಿದ ಬಳಿಕ ಮುಖ್ಯಮಂತ್ರಿ ಚಂದ್ರು ಅವರಿಗೆ ಡಬ್ಬಿಂಗ್ ಮಾಡುವುದಕ್ಕೆ ಕಷ್ಟ ಆಗಿತ್ತು. ಹೀಗಾಗಿ ಬೇರೆಯವರ ಬಳಿಕ ಮಾಡಿಸಿಕೊಳ್ಳಿ ಎಂದಿದ್ದರಂತೆ. ಅದಕ್ಕೆ ರಾಜ್‌ಕುಮಾರ್ ಇಬ್ಬರ ಡಬ್ಬಿಂಗ್‌ಗಾಗಿ ನಾಲ್ಕು ತಿಂಗಳು ಸಿನಿಮಾ ರಿಲೀಸ್ ಮಾಡಿರಲಿಲ್ಲ. "ಜ್ವಾಲಾಮುಖಿ ಸಿನಿಮಾದ ಸಮಯದಲ್ಲಿ ವೋಕಲ್ ಕಾರ್ಡ್ ಡ್ಯಾಮೇಜ್ ಆಗಿ ಹೋಯ್ತು. ವೋಕಲ್ ಕಾರ್ಡ್ ಸೀಳು ಬಿಟ್ಟು ಮಾತೇ ನಿಂತು ಹೋಯ್ತು. ಆಗ ನಾನು ಪಾರ್ವತಮ್ಮನವರಿಗೆ ಒಂದು ಚೀಟಿ ಬರೆದು ಕಳಿಸಿದೆ. ನಾನು ಈಗ ಪಿಚ್ಚರ್‌ಗೆ ಡಬ್ಬಿಂಗ್ ಮಾಡುವುದಕ್ಕೆ ಆಗುವುದಿಲ್ಲ. ನಿಮಗೆ ಸಿನಿಮಾ ರಿಲೀಸ್ ಮಾಡಬೇಕು ಅಂತಿದ್ದರೆ, ನೀವು ಯಾರ ಹತ್ತಿರವಾದರೂ ಡಬ್ ಮಾಡಿಸಿಕೊಳ್ಳಿ. ನನ್ನದೇನೂ ಅಭ್ಯಂತರವಿಲ್ಲ. ಅವರು ರಾಜ್‌ಕುಮಾರ್ ಅವರಿಗೆ ಹೇಳಿದರು. ಮೂರು ಅಲ್ಲ. ನಾಲ್ಕು ತಿಂಗಳು ಆಗಲಿ. ಅವರ ವಾಯ್ಸ್ ಬೇಕು. ಅಲ್ಲಿವರೆಗೂ ಪಿಚ್ಚರ್ ನಿಲ್ಲಿಸುತ್ತೇವೆ ಅಂತ ಹೇಳು ಅಂದಿದ್ದರು. ಎನ್‌ಓಸಿ ಕೊಟ್ಟರೂ, ನೀನೇ ಬರಬೇಕು. ಎಷ್ಟು ದಿನ ಆದರೂ ಪರ್ವಾಗಿಲ್ಲ. ನನಗೇನು ಅವಸರವಿಲ್ಲ. ನಮ್ಮದೇ ಪ್ರೊಡಕ್ಷನ್ ಚಿಂತೆ ಮಾಡಬೇಡ ಎಂದಿದ್ದರು. ಆಗಾಗ ಫೋನ್ ಮಾಡೋರು. ಆಮೇಲೆ ಬಾಂಬೆಗೆ ಹೋಗಿ ಆಪರೇಷನ್ ಮಾಡಿಸಿಕೊಂಡು ಬಂದ್ಮೇಲೆ ಫೋನ್ ಮಾಡಿದೆ. ಅವರೇ ಫೋನ್ ತೆಗೆದುಕೊಂಡು ಈಗ ಮಾಡೋಣ ಬನ್ನಿ ನಿಮಗೆ ಒಂದು ದಿನದಲ್ಲಿ ಮಾಡುವುದಕ್ಕೆ ಆಗಲಿಲ್ಲ ಅಂದರೆ, ಎರಡು ಮೂರು ದಿನ ತಗೊಳ್ಳಿ. ನಿಮ್ಮ ವಾಯ್ಸ್ ಬೇಕಾಗಿರೋದು. ನಿಮ್ಮ ವಾಯ್ಸ್ ಮುಖ್ಯ ಅಂತ ಹೇಳಿದರು. ಅಷ್ಟು ಸೌಜನ್ಯ ತೋರಿಸುವಂತಹ ವ್ಯಕ್ತಿ."


Click it and Unblock the Notifications











