ಗೋಕಾಕ್ ಚಳುವಳಿಗೆ ಬಂದಿದ್ದ ಅಣ್ಣಾವ್ರನ್ನು ಪೊಲೀಸರು ವ್ಯಾನ್ ಹತ್ತಿಸಿದ್ರು; ಮುಂದೆ ನಡೆದಿದ್ದೇನು?
ರಾಜ್ಯದಲ್ಲಿ ನಡೆದ ಚಳುವಳಿಗಳಲ್ಲಿ ಗೋಕಾಕ್ ಚಳುವಳಿಯ ವಿಶಿಷ್ಟವಾಗಿ ನಿಲ್ಲುತ್ತೆ. ಈ ಚಳುವಳಿಯಲ್ಲಿ ಸಾಮಾನ್ಯ ಜನರಷ್ಟೇ ಅಲ್ಲ. ಸಾಹಿತಿಗಳು, ಕಲಾವಿದರು ಸೇರಿದಂತೆ ಎಲ್ಲಾ ಕ್ಷೇತ್ರದ ಜನರು ಈ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಳ್ಳಿಯಿಂದ ವಿಧಾನ ಸೌಧದವರೆಗೂ ಗೋಕಾಕ್ ಚಳುವಳಿ ತೀವ್ರತೆಯನ್ನು ಪಡೆದುಕೊಂಡಿತ್ತು.
ಕನ್ನಡವನ್ನು ರಾಜ್ಯದಲ್ಲಿ ಖಡ್ಡಾಯ ಮಾಡಬೇಕು. ಪ್ರೌಢಶಾಲೆಗಳಲ್ಲಿ ಅಂದರೆ, 8,9,10ನೇ ತರಗತಿಯಲ್ಲಿ ಕನ್ನಡವನ್ನು ಏಕೈಕ ಮಾತೃ ಭಾಷೆಯನ್ನಾಗಿ ಮಾಡಬೇಕು ಅನ್ನೋದು ಸಾಹಿತಿಗಳ ವಾದವಾಗಿತ್ತು. ಈ ಸಂದರ್ಭದಲ್ಲಿ ಗೋಕಾಕ್ ಚಳುವಳಿ ತೀವ್ರತೆ ಪಡೆದುಕೊಳ್ಳದೇ ಇದ್ದಿದ್ದರಿಂದ ಪಾಟೀಲ್ ಪುಟ್ಟಪ್ಪನವರು ಅಣ್ಣಾವ್ರಿಗೆ ಒಂದು ಬಹಿರಂಗ ಪತ್ರವನ್ನು ಬರೆಯುತ್ತಾರೆ.

ಈ ಪತ್ರ ಪ್ರತಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಅಣ್ಣಾವ್ರು ಚಳುವಳಿಯಲ್ಲಿ ಭಾಗವಹಿಸಲು ಬಂದಿದ್ದರು. ಆ ದಿನವೇ ಪೊಲೀಸರು ಅಣ್ಣಾವ್ರು ವ್ಯಾನ್ ಹತ್ತಿಸಿದ್ದರು. ಆ ಬಳಿಕ ಅಣ್ಣಾವ್ರನ್ನು ಪೊಲೀಸ್ ವ್ಯಾನ್‌ನಲ್ಲಿ ನೋಡಿ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಆ ಘಟನೆ ಏನು? ಅಂದು ಏನಾಯ್ತು? ಅನ್ನೋದನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಲೇಖಕರು ಹಾಗೂ ಕನ್ನಡಪರ ಹೋರಾಟಗಾರರಾದ ಕೆ.ರಾಜಕುಮಾರ್ ಅವರು ವಿಶೇಷ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಪಾಟೀಲ್ ಪುಟ್ಟಪ್ಪನವರು ಅಣ್ಣಾವ್ರು ಚಳುವಳಿಗೆ ಬರಬೇಕು ಅಂತ ಬಹಿರಂಗ ಪತ್ರ ಬರೆದಿದ್ದರು. ಅದರಲ್ಲಿ ಏನು ಹೇಳಲಾಗಿತ್ತೆಂದರೆ, "ಈ ಚಳುವಳಿಗೆ ತೀವ್ರತೆಯನ್ನು ತಂದುಕೊಡಬೇಕೆಂದು ಪಾಟೀಲ್ ಪುಟ್ಟಪ್ಪನವರು ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮೀತಿ ಅಂತ ಧಾರವಾಡದಲ್ಲಿತ್ತು. ಅದರ ಅಧ್ಯಕ್ಷರು. ಅದು ಮುಖ್ಯವಾದ ಪಾತ್ರವಹಿಸಿತ್ತು. ಪಾಟೀಲ್ ಪುಟ್ಟಪ್ಪನವರು ಬಹಿರಂಗ ಪತ್ರ ಬರೆದರು. ಅದು ರಾಜ್‌ಕುಮಾರ್ ಅವರಿಗೆ ಬರೆದಿದ್ದು, ಕನ್ನಡಕ್ಕೆ ಸಂಕಷ್ಟ ಬಂದಿದೆ. ಇಂತಹ ಕಾಲದಲ್ಲಿ ನೀವು ಕೂಡ ಬೀದಿಗೆ ಬರಬೇಕು. ನೀವು ಕೂಡ ನಮ್ಮ ಜೊತೆ ಸೇರಿಕೊಳ್ಳಬೇಕು ಅಂದ್ರು." ಎಂದು ಕೆ.ರಾಜಕುಮಾರ್ ಹೇಳಿದ್ದಾರೆ.
ಬಹಿರಂಗ ಪತ್ರದ ಬಗ್ಗೆ ಗೊತ್ತಾಗುತ್ತಿದ್ದಂತೆ ಅಣ್ಣಾವ್ರು ಚಳುವಳಿಗೆ ಧುಮುಕಿದ್ದರು. ವರನಟ ಎಂಟ್ರಿ ಆಗುತ್ತಿದ್ದಂತೆ ಗೋಕಾಕ್ ಚಳುವಳಿ ತೀವ್ರತೆಯನ್ನು ಪಡೆದುಕೊಂಡಿತ್ತು. ಆಗ ಚಳುವಳಿಗಾರರಿಗೆ ಅಣ್ಣಾವ್ರು ಹೀಗಂದಿದ್ದರು. "ಈ ಬಹಿರಂಗ ಪತ್ರ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 16, 1982ರಲ್ಲಿ ಪ್ರಕಟ ಆಯ್ತು. ಅವತ್ತೇ ರಾಜ್‌ಕುಮಾರ್ ಹೇಳಿದರು. ನನಗೆ ಈ ವರದಿ ಬಗ್ಗೆ ಏನೂ ಗೊತ್ತಿಲ್ಲ. ಕನ್ನಡಕ್ಕೆ ಕಷ್ಟ ಬಂದಿದೆ ಅಂತ ನೀವು ಹೇಳುತ್ತಿದ್ರಿ. ನೀವು ಎಲ್ಲಿಗೆ ಕರೆದರೆ, ಯಾವಾಗ ಕರೆದರೂ ನಾನು ಬರುತ್ತೇನೆ. ನಿಮ್ಮ ಜೊತೆ ಇರುತ್ತೇನೆ. ಒಬ್ಬ ಕಾರ್ಯಕರ್ತನಾಗಿ ಬರುತ್ತೇನೆ. ನಾಯಕರಾಗಿ ನೀವೇ ಇರಿ ಅಂತ ದೊಡ್ಡತನ ತೋರಿದರು." ಎಂದಿದ್ದಾರೆ.

ಸಾಹಿತಿಗಳು ವಿಧಾನಸೌಧ ಹತ್ತಿರ ಕಬ್ಬನ್ ಪಾರ್ಕ್‌ನ ಮೂಲೆಯಲ್ಲಿ ಧರಣಿಗೆ ಕೂತಿದ್ದರು. ರಾಜ್‌ಕುಮಾರ್ ಅಲ್ಲಿಗೆ ಬಂದರು. ಏಪ್ರಿಲ್ 16, 1982ರಲ್ಲಿ ಪ್ರಕಟ ಆಗಿತ್ತು. ಏಪ್ರಿಲ್ 17ಕ್ಕೆ ಅಣ್ಣಾವ್ರು ಚಳುವಳಿಗಾರರನ್ನು ಸೇರಿಕೊಂಡಿದ್ದರು. ಅವರು ಬರುತ್ತಿದ್ದಂತೆ ಜನರು ಕೂಡ ಸಾಗರೋಪಾದಿಯಲ್ಲಿ ಬಂದು ಸೇರಿದ್ದರು. ಇದನ್ನು ನೋಡಿ ರಾಜ್ಯ ಸರ್ಕಾರ ಭಯ ಪಟ್ಟುಕೊಂಡಿತ್ತು.
"ಗೋಪಾಲಗೌಡ ಸರ್ಕಲ್ ತುದಿಯಾಲ್ಲಿ ಕೂತಿದ್ದೆವು. ರಾಜ್‌ಕುಮಾರ್ ಬಂದ್ರು. ಜನರು ಎಲ್ಲಿಲ್ಲದ ಹಾಗೆ ಪ್ರವಾಹದ ಹಾಗೆ ನುಗ್ಗಿದರು. ರಾಜ್‌ಕುಮಾರ್‌ಗೆ ಏನಾಗುತ್ತೋ ಅಂತ ಹೇಳಿ, ಪೊಲೀಸರು ಅವರನ್ನು ವ್ಯಾನ್ ಹತ್ತಿಸಿದ್ದರು. ಜನರು ರಾಜ್‌ಕುಮಾರ್ ಅವರನ್ನು ಬಂಧಿಸಿಬಿಟ್ಟರು ಏನು ಅಂದ್ಕೊಂಡ್ರು. ಆಗ ಆದ ಗಲಾಟೆಯಿಂದ ಸರ್ಕಾರ ತತ್ತರಿಸಿ ಹೋಗ್ಬಿಡ್ತು. ಇದನ್ನು ನೋಡುತ್ತಿದ್ದಂತೆ ಸರ್ಕಾರ ತತ್ತರಿಸಿ ಹೋಯ್ತು. ಸೋಮವಾರವೇ ಸಚಿವ ಸಂಪುಟ ಸಭೆ ಸೇರಿ ಗೋಕಾಕ್ ವರದಿಯನ್ನು ಒಪ್ಪಿಕೊಂಡರು." ಎಂದು ಕೆ.ರಾಜ್‌ಕುಮಾರ್ ಹೇಳಿದ್ದಾರೆ.
ಮೊದಲ ಹಂತದ ಚಳುವಳಿಯಲ್ಲಿ ಸರ್ಕಾರ ಕನ್ನಡಕ್ಕೆ 100 ಅಂಕ ಎಂದು ಹೇಳಿತ್ತು. ಆದರೆ, ಬೇರೆ ಭಾಷೆಗಳಿಗೂ, ಕನ್ನಡಕ್ಕೂ ಸಮಾನ ಅಂಕಗಳು ದೊರೆತಂತೆ ಆಗಿದೆ. ಹೀಗಾಗಿ ಮತ್ತೆ ಹೋರಾಟವನ್ನು ಮುಂದುವರೆಸಿದ್ದರು. ಮತ್ತೆ ರಾಜ್‌ಕುಮಾರ್‌ಗೆ ಆಹ್ವಾನ ನೀಡಲಾಗಿತ್ತು. ಈ ಬಾರಿ ವ್ಯವಸ್ಥಿತವಾಗಿ ಉತ್ತರ ಕರ್ನಾಟಕದಿಂದ ಮೈಸೂರಿನವರೆಗೂ ಚಳುವಳಿ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಅಣ್ಣಾವ್ರು ಚಳುವಳಿ ಮಾಡುತ್ತಾ ಮೈಸೂರಿಗೆ ಬಂದಾಗ ಕಣ್ಣೀರು ಹಾಕಿದ್ದರು. "ಮೈಸೂರಿನಲ್ಲಿ ರಾಜ್‌ಕುಮಾರ್ ನನ್ನ ತಾಯಿಗೆ ಅನ್ಯಾಯ ಆಗುತ್ತಿದೆ ಅಂತ ಅತ್ತುಬಿಟ್ಟರು. ಆಗ ಸರ್ಕಾರ 100 ಅಂಕಗಳು ಇದ್ದಿದ್ದನ್ನು 125 ಅಂಕಗಳಿಗೆ ಹೆಚ್ಚಿಸಿತು." ಎಂದು ಆ ಕ್ಷಣವನ್ನು ಕೆ. ರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











