'ರಣಧೀರ' ಸಿನಿಮಾ 'ಪ್ರೇಮಲೋಕ' ತರ ಇಲ್ಲ ಎಂದಿದ್ದ ತಂದೆ; ಸಣ್ಣ ಸಲಹೆ ರವಿಚಂದ್ರನ್ ಗೆಲ್ಲಿಸಿದ್ದೇಗೆ?
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದ ಶೋ ಮ್ಯಾನ್ ಅನ್ನೋದರಲ್ಲಿ ಡೌಟೇ ಇಲ್ಲ. ಸಿನಿಮಾ ಮೇಕಿಂಗ್ ಅನ್ನು ಎಷ್ಟು ಶ್ರೀಮಂತವಾಗಿ ಮಾಡಬಹುದೆಂದು ತೋರಿಸಿಕೊಟ್ಟವರು. ಸಿನಿಮಾದಲ್ಲಿ ಹಾಡುಗಳು ಹೀಗೇ ಇರಬೇಕೆಂದು ಸೃಷ್ಟಿಸಿ ಸಂಗೀತ ಪ್ರಿಯರ ಮನಗೆದ್ದವರು. ಸಿನಿಮಾ ಮಾಡಿ ಅದ್ಭುತ ಯಶಸ್ಸು ಕಂಡವರು. ಅದ್ಭುತ ಸಿನಿಮಾ ಸೋತವರು. ಸೋತು ಗೆದ್ದವರು. ಗೆದ್ದೂ ಸೋತವರು. ಕನ್ನಡ ಚಿತ್ರರಂಗಕ್ಕೆ ಹಲವು ಸಂದರ್ಭಗಳಲ್ಲಿ ಉದಾಹರಣೆಯಾದವರು.
'ಪ್ರೇಮಲೋಕ' ರವಿಚಂದ್ರನ್ ವೃತ್ತಿ ಬದುಕಿಗೆ ತಿರುವು ಕೊಟ್ಟ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಅನ್ನೇ ಸೃಷ್ಟಿಸಿದ ಸಿನಿಮಾವಿದು. ಹಾಗೇ ಇವರಿಗೆ ಕ್ರೇಜಿ ಸಕ್ಸಸ್ ಕೊಟ್ಟ ಮತ್ತೊಂದು ಸಿನಿಮಾ 'ರಣಧೀರ'. ಆದರೆ ಈ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಂದೆ ವೀರಾಸ್ವಾಮಿಯವರಿಗೆ ಇಷ್ಟ ಆಗಿರಲಿಲ್ಲ. ಈ ಸಿನಿಮಾ ಸೋಲುತ್ತೆ ಎಂದು ಮಗನಿಗೆ ಕರೆದು ನಯವಾಗಿ ಹೇಳಿದ್ದನ್ನು ರವಿಚಂದ್ರನ್ ನೆನಪಿಸಿಕೊಂಡಿದ್ದಾರೆ.

'ರಣಧೀರ' ಸಿನಿಮಾ ಮೇಕಿಂಗ್‌ಗೆ ಪ್ರೇಮಲೋಕಕ್ಕಿಂತ ದುಪ್ಪಟ್ಟು ಹಣ ಖರ್ಚು ಮಾಡಿದ್ದರು. ಆದರೆ, ಅದು ರೀಮೆಕ್ ಸಿನಿಮಾ ಆಗಿದ್ದರಿಂದ ಹಾಕಿದ ಹಣ ಬರುತ್ತೆ ಎನ್ನುವ ನಂಬಿಕೆ ಅವರ ತಂದೆಗೆ ಇರಲಿಲ್ಲ. ಕೊನೆಯಲ್ಲಿ ಅವರೇ ಕೊಟ್ಟ ಒಂದು ಸಲಹೆ ಮತ್ತೊಂದು ಮೆಗಾ ಹಿಟ್ ಸಿಗುವಂತೆ ಮಾಡಿತ್ತು. ಹಾಗಿದ್ದರೆ, ಅಂದು ತಂದೆ ಕೊಟ್ಟಿದ್ದ ಆ ಸಲಹೆ ಏನು? ರಣ್‌ಧೀರ ಸಿನಿಮಾ ಎಷ್ಟು ಖರ್ಚು ಮಾಡಿದ್ದರು? ಎಂದು ತಿಳಿಯುವುದಾದರೇ..
ಮುಂದೆ ಓದಿ.
ನನಗೆ ತೊಂದರೆಗಳ ಜೊತೆ ಮಲಗುವ ಅಭ್ಯಾಸವೇ ಇಲ್ಲ
'ರಣಧೀರ' ಸಿನಿಮಾಗೆ ರವಿಚಂದ್ರನ್ ಮಾಡಿದ ಖರ್ಚು
ಈ ಸಿನಿಮಾ ನಮಗೆ ದುಡ್ಡ ಬರುವುದಿಲ್ಲ ಎಂದ ವೀರಾಸ್ವಾಮಿ
ವೀರಾಸ್ವಾಮಿಯ ಒಂದು ಸಲಹೆ ಮೆಗಾ ಹಿಟ್ ಮಾಡಿದ್ದು ಹೇಗೆ?
ರವಿಚಂದ್ರನ್ ಸೋಲು ಗೆಲುವುಗಳನ್ನು ಸಮಾನವಾಗಿ ನೋಡಿದವರು. ಇವೆರಡರ ಬಗ್ಗೆ ಕೇಳಿದಾಗಲೆಲ್ಲ ಅವರ ಅನುಭವದ ಮಾತುಗಳು ಹೀಗೆ ಹೊರ ಬರುತ್ತವೆ. "ಜೇಬು ಖಾಲಿಯಾದಾಗ ಪ್ರಪಂಚ ಹೇಗೆ ಎಂದು ನೋಡಿಕೊಂಡು ಬಂದವನು ನಾನು. ಆದರೆ, ಯಾವತ್ತೂ ಕುಗ್ಗಲಿಲ್ಲ. ನನಗೆ ಏನೇ ತೊಂದರೆ ಬಂದರೂ ಕೂಡ ಕುಗ್ಗಲಿಲ್ಲ. ನನಗೆ ತೊಂದರೆ ಜೊತೆ ಮಲಗುವ ಅಭ್ಯಾಸವೇ ಇಲ್ಲ. ತಗಲಾಕಿಕೊಂಡಿದ್ದೇನೆ ಇದಕ್ಕೆ ಏನು ಮಾಡಬೇಕು? ಇದರಿಂದ ಹೇಗೆ ಹೊರಬರಬೇಕು? ನನ್ನ ಬ್ರೈನ್ ತಕ್ಷಣಕ್ಕೆ ಕೆಲಸ ಮಾಡುವುದೇ ಹಾಗೆ. ಅದೆಲ್ಲದಕ್ಕೂ ಕಾರಣ ಎನ್.ವೀರಾಸ್ವಾಮಿ ಒಬ್ಬರೇ. ಬೇರೆ ಯಾರೂ ಅಲ್ಲ. ನನ್ನ ಸಕ್ಸಸ್ ಅವರ ವೀಕ್ನೆಸ್ ಆಗಿತ್ತು." ಎಂದು ಕ್ರೇಜಿಸ್ಟಾರ್ ಭರ್ಜರಿ ಬ್ಯಾಚುಲರ್ ವೇದಿಕೆ ಮೇಲೆ ಹೇಳಿದ್ದಾರೆ.

ಮಗನನ್ನು ನೋಡಿ ಅತ್ತು ಬಿಡುತ್ತಿದ್ದರು
"ಪ್ರೇಮಲೋಕ ಸಿನಿಮಾ ನೋಡಿದಲ್ಲಿಂದ ನನ್ನ ನೋಡಿದರೆ ಅತ್ತು ಬಿಡೋರು. ನನ್ನ ಮಗ ಡೈರೆಕ್ಟರ್ ಅಂತ. ನಾನು ಸ್ಕೂಲ್‌ನಲ್ಲಿ ಫೇಲ್ ಆದ ಸ್ಟೂಡೆಂಟ್. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿಲ್ಲ. ಯಾವತ್ತೂ ಕ್ಲಾಪ್ ಬೋರ್ಡ್ ಹಿಡಿದಿಲ್ಲ. ಯಾವತ್ತೂ ಶೂಟಿಂಗ್ ಸ್ಪಾಟ್‌ಗೆ ಹೋಗಿ ಸಿನಿಮಾ ಮಾಡಿಲ್ಲ. ಒಂದು ಮಾತು ಜೀವನದಲ್ಲಿ ಟ್ರಿಗರ್ ಮಾಡಿತು ಅಷ್ಟೇ. ನೀನಗೇನು ಗೊತ್ತಿಲ್ಲ ಸುಮ್ಮನಿರು ಅಂತ ಒಬ್ಬ ಫ್ರೆಂಡ್ ಹೇಳಿದ. ಆಕಸ್ಮಾತ್ ಆಗಿ ಹೇಳಿದನೋ? ಸುಮ್ಮನೆ ಹೇಳಿದನೋ.. ಆ ಮಾತು ಟ್ರಿಗರ್ ಮಾಡಿದ್ದಂತೂ ನಿಜ. ಅಲ್ಲಿಂದ ಅದೇ ಮುಗ್ಧ ನಿರ್ದೇಶಕ ಪ್ರೀತಿ ಹಾಗೂ ಹೊಸತನವನ್ನು ಹೊತ್ತು ಶೂಟಿಂಗ್ ಸ್ಪಾಟ್‌ಗೆ ಹೋಗುತ್ತಾನೆ. ಸಿನಿಮಾ ಅಂತ ಬಂದಾಗ ನಾನು ಸುಸ್ತಾಗಿದ್ದೇ ಗೊತ್ತಿಲ್ಲ" ಎನ್ನುತ್ತಾರೆ ರವಿಚಂದ್ರನ್.
ರಣಧೀರದಿಂದ ದುಡ್ಡು ಬರಲ್ಲ
ಅಪ್ಪನ ಹತ್ತಿರ ಹೋಗಿ ಚೆನ್ನೈಗೆ ಹೋಗುತ್ತಿದ್ದು, ಫೈನಲ್ ಕಾಪಿ ರೆಡಿ ಮಾಡುತ್ತಿದ್ದೇನೆ ಎಂದು ರವಿಚಂದ್ರನ್ ಹೇಳಿದ್ದರು. ಸಿನಿಮಾ ಮುಗಿದಾಗ ಮಗನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಒಂದು ಮಾತು ಹೇಳಿದ್ದರು. "ನೀನು ಈ ಪಿಕ್ಚರ್‌ಗೆ ಎಷ್ಟು ಖರ್ಚು ಮಾಡಿದ್ದೀಯಾ ಗೊತ್ತಾ? ಅಂತ ಕೇಳುತ್ತಾರೆ. ನಾನು ಗೊತ್ತಿಲ್ಲ ಅಂತ ಹೇಳಿದೆ. ಪ್ರೇಮಲೋಕ ಸಿನಿಮಾಗೆ ಒಂದು ಕೋಟಿ ಖರ್ಚು ಮಾಡಿದ್ದೆ. ಅದು ಎರಡು ಭಾಷೆಯ ಸಿನಿಮಾ. ಅದನ್ನು ಹೇಗೋ ಗೆದ್ದು ಬಿಟ್ವಿ. ಇದು ರಿಮೇಕ್ ಸಿನಿಮಾ. ಈಗಾಗಲೇ 25 ವಾರ ಸಂತೋಷ್ ಚಿತ್ರಮಂದಿರದಲ್ಲಿ ಓಡುತ್ತಿದೆ. ಈ ಸಿನಿಮಾಗೆ ನೀನು ಒಂದು ಮುಕ್ಕಾಲು ಕೋಟಿ ಖರ್ಚು ಮಾಡಿದ್ದೀಯ. ಈ ಸಿನಿಮಾದಿಂದ ನಮಗೆ ದುಡ್ಡು ಬರೋದಿಲ್ಲ ಅಂದರು. ನನಗೆ ಇದು ತಲೆಗೂ ಹೋಗಲ್ಲ. ಸಿನಿಮಾ ಬರುವ ನಂಬಿಕೆ ಇದೆಯಲ್ಲ ಅದು ಯಾವತ್ತೂ ನನ್ನನ್ನು ಬಿಟ್ಟುಕೊಟ್ಟಿಲ್ಲ." ಎಂದು ರವಿಚಂದ್ರನ್ ಹೇಳಿದ್ದಾರೆ.
ರಣಧೀರಗೆ ಕೊಟ್ಟ ಸಲಹೆ ಏನು?
"ನಮ್ಮ ತಂದೆಗೆ ಸಿನಿಮಾ ಹಿಡಿಸುವುದಿಲ್ಲ. ನಮ್ಮ ಅಪ್ಪನಿಗೆ ಏನು ಅಂದರೆ, ಇವನು ಪ್ರೀತಿಸಿ ಸಿನಿಮಾ ಮಾಡಿದ್ದಾನೆ. ಆರೇಳು ತಿಂಗಳು ಡೇ ಅಂಡ್ ನೈಟ್ ಒದ್ದಾಡಿದ್ದಾನೆ. ಇವನಿಗೆ ಚೆನ್ನಾಗಿಲ್ಲ ಅಂತ ಹೇಗೆ ಹೇಳೋದು? ಅನ್ನೋ ಪ್ರಶ್ನೆ ಕಾಡಿದೆ. ಕಾಂಪೌಂಡ್ ವಾಲ್ ಬಳಿ ಒಡಾಡುತ್ತಾ ಬಾಮ್ಮ ಇಲ್ಲಿ ಅಂತ ಕರೆದು ಹೆಗಲ ಮೇಲೆ ಕೈ ಹಾಕಿದರು. ಆಗ ಅವರರು ಹೇಳಿದ್ದು, ಇದು ಪ್ರೇಮಲೋಕದ ತರ ಇಲ್ಲ. ಈಗತಾನೇ ಒಂದು ದೊಡ್ಡ ಹಿಟ್ ಕೊಟ್ಟಿದ್ದೀಯ. ಅದೇ ಸಿನಿಮಾವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಥಿಯೇಟರ್ ಒಳಗೆ ಬರುತ್ತಾರೆ. ಆ ಸಿನಿಮಾ ನೋಡಿದಂತೆ ಅನಿಸುವುದಿಲ್ಲ ಅನ್ನೋ ರೀತಿ ಹೇಳಿದರು. ನಮ್ಮ ಫಾದರ್ ಸಿನಿಮಾದಲ್ಲಿ ಮ್ಯೂಸಿಕ್ ಮಿಸ್ ಆಯ್ತು ಅಂತ ಹೇಳಿದರು. ಅವರು ಅಂದು ಒಳ್ಳೆಯ ರೀತಿಯಲ್ಲಿ ಹೇಳಿದ್ದರಿಂದ ರಣಧೀರ ಸೂಪರ್ ಸಿನಿಮಾ ಆಯ್ತು" ಎಂದು ಭರ್ಜರಿ ಬ್ಯಾಚುಲರ್ ವೇದಿಕೆ ಮೇಲೆ ರವಿಚಂದ್ರನ್ ಹೇಳಿದ್ದಾರೆ.


Click it and Unblock the Notifications











