ಉತ್ತರ ಧ್ರುವ-ದಕ್ಷಿಣ ಧ್ರುವ ಒಂದಾಗಿದ್ದೇಗೆ? ರಮ್ಯಾ-ರಕ್ಷಿತಾ ಒಟ್ಟಿಗೆ ನಟಿಸಿದ ಸಿನಿಮಾದಲ್ಲಿ ಯಾರಿಗೆಷ್ಟು ಸಂಭಾವನೆ?
ಮೋಹಕತಾರೆ ರಮ್ಯಾ ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ ಇಬ್ಬರೂ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಗನೇ ಸ್ಟಾರ್ ಪಟ್ಟಕ್ಕೇರಿದ ನಟಿಯರು. ರಮ್ಯಾ ಮತ್ತು ರಕ್ಷಿತಾ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಚಿತ್ರರಂಗ ಪ್ರವೇಶ ಮಾಡಿದ್ದರೂ, ಇಬ್ಬರಿಗೂ ಕೇವಲ ಒಂದು ಸಿನಿಮಾದ ಅಂತರವಿದೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಮೊದಲ ಸಿನಿಮಾ 'ಅಪ್ಪು'. ಈ ಸಿನಿಮಾ ಮೂಲಕ ರಕ್ಷಿತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅದೇ 'ಅಪ್ಪು' ಬಳಿಕ ಪುನೀತ್ ನಟಿಸಿದ 'ಅಭಿ' ಮೂಲಕ ಮೋಹಕತಾರೆ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಇಬ್ಬರೂ ನಟಿಯರನ್ನು ಸಮಕಾಲೀನರು ಎಂದು ಹೇಳುತ್ತಾರೆ.

ಕನ್ನಡ ಸಿನಿಮಾಗಳಲ್ಲಿ ನಟಿಸಿದ ಬಳಿಕ ರಕ್ಷಿತಾ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಅಭಿ ಬಳಿಕ ರಮ್ಯಾ ಕನ್ನಡದ ಜೊತೆಗೆ ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಇಬ್ಬರಲ್ಲೂ ಆ ಮಟ್ಟಿಗೆ ಕಾಂಪಿಟೇಷನ್ ಇತ್ತು. ಅಲ್ಲದೆ, ರಮ್ಯಾ ಹಾಗೂ ರಕ್ಷಿತಾ ಇಬ್ಬರೂ ಬದ್ಧ ವೈರಿಗಳು, ಇಬ್ಬರ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ ಅನ್ನೋ ಸುದ್ದಿ ಹರಿದಾಡಿತ್ತು. ಹೀಗಿದ್ದರೂ 'ತನನಂ ತನನಂ' ಅನ್ನೋ ಸಿನಿಮಾದಲ್ಲಿ ರಕ್ಷಿತಾ ಹಾಗೂ ರಮ್ಯಾ ಒಟ್ಟಿಗೆ ನಟಿಸಿದ್ದರು. ಅದು ಹೇಗೆ ಸಾಧ್ಯವಾಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ
ಮೋಹಕತಾರೆ ರಮ್ಯಾ ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ ಇಬ್ಬರಿಗೂ ಆರಂಭದಿಂದಲೇ ಸಕ್ಸಸ್ ಸಿಕ್ಕಿತ್ತು. ಇಬ್ಬರು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಶೈಲಿ ಬೇರೆನೇ ಇದ್ದರೂ, ವೃತ್ತಿಪರ ಅಸೂಯೆ (Professional Jealousy) ಇತ್ತು ಎಂದು ಹೇಳಲಾಗಿತ್ತು. ಇನ್ನೊಂದು ಕಡೆ 'ಅಪ್ಪು' ಸಿನಿಮಾಗೆ ರಮ್ಯಾ ಹೀರೊಯಿನ್ ಆಗಬೇಕಿತ್ತು. ಆದರೆ, ಆ ಅವಕಾಶ ರಕ್ಷಿತಾ ಪಾಲಾಗಿತ್ತು. ಈ ಕಾರಣಕ್ಕೆ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು ಎಂದೂ ಅಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹೀಗಿರುವಾಗಲೇ ಇವರಿಬ್ಬರೂ 'ತನನಂ ತನನಂ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಅದು ಹೇಗೆ ಸಾಧ್ಯವಾಯ್ತು? ಅನ್ನೋದನ್ನು ಈ ಸಿನಿಮಾದ ನಿರ್ಮಾಪಕ ಎನ್‌ಎಂ ಸುರೇಶ್ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
ರಮ್ಯಾ-ರಕ್ಷಿತಾ ಇಬ್ಬರೂ ಒಪ್ಪಿದ್ದೇಗೆ?
'ತನನಂ ತನನಂ' ಸಿನಿಮಾವನ್ನು ಎನ್‌ಎಂ ಸುರೇಶ್ ನಿರ್ಮಾಣ ಮಾಡಿದ್ದರೆ, ಅತ್ತ ಕವಿತಾ ಲಂಕೇಶ್ ಆಕ್ಷನ್ ಕಟ್ ಹೇಳಿದ್ದರು. ಇವರಿಬ್ಬರ ಪ್ರಯತ್ನದಿಂದಲೇ ರಮ್ಯಾ ಹಾಗೂ ರಕ್ಷಿತಾ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುವುದಕ್ಕೆ ಸಮ್ಮತಿ ಸೂಚಿಸಿದ್ದರು. "ರಮ್ಯಾ ನಟಿಸಿದ 'ಎಕ್ಸ್‌ಕ್ಯೂಸ್ ಮಿ' ಸಿನಿಮಾವನ್ನು ನಾನೇ ನಿರ್ಮಾಣ ಮಾಡಿದ್ದೆ. ಹೀಗಾಗಿ ರಮ್ಯಾಗೆ ನನ್ನ ಮೇಲೆ ಒಳ್ಳೆಯ ಅಭಿಪ್ರಾಯವಿತ್ತು. ಇದೇ ಸಿನಿಮಾ ಪ್ರೇಮ್ ನಿರ್ದೇಶನ ಮಾಡಿದ್ದರು. ಹೀಗಾಗಿ ಪ್ರೇಮ್ ಮೂಲಕ ರಕ್ಷಿತಾ ಅವರನ್ನು ಒಪ್ಪಿಸಲಾಗಿತ್ತು. ಇದರೊಂದಿಗೆ ಇವರಿಬ್ಬರನ್ನು ಒಟ್ಟಿಗೆ ಕರೆತರುವಲ್ಲಿ ಕವಿತಾ ಲಂಕೇಶ್ ಪಾತ್ರ ತುಂಬಾನೇ ದೊಡ್ಡದು" ಎಂದು ಎನ್‌ಎಂ ಸುರೇಶ್ ತಿಳಿಸಿದ್ದಾರೆ.

ಕವಿತಾ ಲಂಕೇಶ್ ಪಾತ್ರ ದೊಡ್ಡದು
'ತನನಂ ತನನಂ' ಸಿನಿಮಾವನ್ನು ಕವಿತಾ ಲಂಕೇಶ್ ನಿರ್ದೇಶನ ಮಾಡಿದ್ದರು. ರಮ್ಯಾ ಹಾಗೂ ರಕ್ಷಿತಾರನ್ನು ಒಟ್ಟಿಗೆ ಕರ್ಕೊಂಡು ಬರುವಲ್ಲಿ ಕವಿತಾ ಲಂಕೇಶ್ ಪ್ರಮುಖ ಪಾತ್ರ ವಹಿಸಿದ್ದರು. ರಮ್ಯಾ ಹಾಗೂ ರಕ್ಷಿತಾ ಇಬ್ಬರೂ ಕವಿತಾ ಲಂಕೇಶ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಅವರ ಮಾತಿಗೆ ಬೆಲೆ ಕೊಟ್ಟು ಬಂದು ನಟಿಸಿದ್ದರು ಎನ್ನಲಾಗಿತ್ತು. ಇವರೊಂದಿಗೆ ಗಿರೀಶ್ ಕಾರ್ನಾಡ್ ಹಾಗೂ ಭಾರತಿ ವಿಷ್ಣುವರ್ಧನ್ ಅವರನ್ನು ಒಟ್ಟಿಗೆ ಸೇರಿಸಿದ್ದೂ ಕೂಡ ಕವಿತಾ ಲಂಕೇಶ್ ಅವರೇ.
ಒಂದೇ ಒಂದು ಸೀನ್‌ನಲ್ಲೂ ಒಟ್ಟಿಗೆ ನಟಿಸಿಲ್ಲ
'ತನನಂ ತನನಂ' ಒಂದೇ ಸಿನಿಮಾದಲ್ಲಿ ರಮ್ಯಾ ಹಾಗೂ ರಕ್ಷಿತಾ ಇಬ್ಬರು ನಟಿಸಿದ್ದರಷ್ಟೇ. ಆದರೆ, ಈ ಇಬ್ಬರೂ ಸಿನಿಮಾದ ಒಂದೇ ಒಂದು ದೃಶ್ಯದಲ್ಲಿ ಮುಖಾ ಮುಖಿಯಾಗಿರಲಿಲ್ಲ. ಅಲ್ಲದೆ ಇಬ್ಬರ ಪಾತ್ರಗಳಿಗೂ ಸಮನಾದ ತೂಕವನ್ನೇ ನೀಡಿದ್ದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಂತಹ ಜಾದು ಮಾಡಿಲ್ಲ.


Click it and Unblock the Notifications











