ಮೊದಲ ಬಾರಿಗೆ 'ಮಿಸ್ ಯುನಿವರ್ಸ್'ನಲ್ಲಿ ಸೌದಿ ಅರೇಬಿಯಾದ ಯುವತಿ; ಸೌದಿ ಬ್ಯೂಟಿ ರೂಮಿ ಅಲ್ಕಹ್ತಾನಿ ಯಾರು?
ಸೌದಿ ಅರೇಬಿಯಾ ಸಂಪ್ರಾದಾಯಿಕ ಇಸ್ಲಾಮಿಕ್ ದೇಶ. ಇಲ್ಲಿ ಮಹಿಳೆಯರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಹಿಸಿದ ಉದಾಹರಣೆಗಳು ಇಲ್ಲ. ಈ ದೇಶದಲ್ಲಿ ಮಹಿಳೆಯ ಮೇಲೆ ನಿರ್ಬಂಧಗಳು ಹೆಚ್ಚಿದ್ದು, ಮಿಸ್ ಯೂನಿವರ್ಸ್ ಅಂತ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಅಧಿಕೃತವಾಗಿ ಭಾಗವಹಿಸಲಿದೆ.
ಸೌದಿ ಅರೇಬಿಯಾ ನಿಧಾನವಾಗಿ ತನ್ನ ದೇಶದ ರೀತಿ ನೀತಿಯನ್ನು ಸಡಲೀಕರಿಸುತ್ತಿದೆ. ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಸೌದಿ ಅರೇಬಿಯಾದ ಅಧಿಕಾರ ವಹಿಸಿಕೊಂಡ ದಿನದಿಂದ ಈ ದೇಶ ಚಿಕ್ಕ ಪುಟ್ಟ ಬದಲಾವಣೆಗಳನ್ನು ಕಾಣುತ್ತಲೇ ಇದೆ. ಈ ದೃಷ್ಟಿಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ತನ್ನ ದೇಶದ ಯುವತಿಯನ್ನು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ಕೊಟ್ಟಿದೆ.

ಅಂದ ಹಾಗೆ, ಈ ಬಾರಿಯ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸುತ್ತಿರುವ ಮೊದಲ ಯುವತಿ ರೂಮಿ ಅಲ್ಕಹ್ತಾನಿ. 27 ವರ್ಷದ ರೂಮಿ ಅಲ್ಕಹ್ತಾನಿ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.
"ಸೌದಿ ಅರೇಬಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ" ಎಂದು ರೂಮಿ ಅಲ್ಕಹ್ತಾನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಹೌದು, ಸೌದಿ ಅರೇಬಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮೂಲದ ರೂಮಿ ಅಲ್ಕಹ್ತಾನಿ ಇತ್ತೀಚೆಗೆ ಮತ್ತೊಂದು ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆಲವು ವಾರಗಳ ಹಿಂದಷ್ಟೇ ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸ್ಟರ್ ಗ್ಲೋಬಲ್ ಏಷಿಯನ್ ರೂಮಿ ಅಲ್ಕಹ್ತಾನಿ ಭಾಗವಹಿಸಿದ್ದರು.
ಸೌದಿ ಅರೇಬಿಯಾದ 38 ವರ್ಷದ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ವಿಶ್ವದಾದ್ಯಂತ ಗಮನ ಸೆಳೆದಿದ್ದಾರೆ. ಇವರು ಅಧಿಕಾರ ವಹಿಸಿಕೊಂಡ ದಿನದಿಂದ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಮಹಿಳೆಯ ಮೇಲಿನ ನಿರ್ಬಂಧವನ್ನು ಸಡಿಲೀಕರಿಸುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯರು ವಾಹನ ಚಲಾಯಿಸಲು ಅನುಮತಿ ನೀಡಲಾಗಿದೆ. ಗಂಡು ಹಾಗೂ ಹೆಣ್ಣು ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಲು, ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದ್ದು ಚರ್ಚೆಯಾಗುತ್ತಿದೆ.
ಇದರ ಜೊತೆನೇ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿತ್ತು. ಸೌದಿ ಅರೇಬಿಯಾ ತನ್ನ ದೇಶದಲ್ಲಿ ಮದ್ಯಪಾನವನ್ನು ನಿಷೇಧ ಮಾಡಿತ್ತು. ಆದ್ರೀಗ ಮುಸ್ಲಿಮೇತರ ರಾಜತಾಂತ್ರಿಕ ವರ್ಗದವರಿಗೆ ಮದ್ಯವನ್ನು ಖರೀದಿ ಮಾಡುವುದಕ್ಕೆ ಅನುಮತಿಯನ್ನು ನೀಡಲಾಗಿದೆ. ಸದ್ಯಕ್ಕೀಗ ಸೌದಿ ಅರೇಬಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ವಿಶ್ವದ ಗಮನ ಸೆಳೆದಿದೆ.


Click it and Unblock the Notifications











