'ಆಕಸ್ಮಿಕ' ಚಿತ್ರಕ್ಕೆ ದತ್ತಣ್ಣ ಬೇಡ ವಜ್ರಮುನಿಯೇ ಇರಲಿ ಎಂದಿದ್ದೇಕೆ ಡಾ.ರಾಜ್‌ಕುಮಾರ್?
ಡಾ. ರಾಜ್‌ಕುಮಾರ್ ನಟಿಸಿದ ಸುಮಾರು 200 ಸಿನಿಮಾಗಳೂ ಒಂದಕ್ಕಿಂತ ಒಂದು ಅದ್ಭುತ. ಇಂದಿಗೂ ಅಣ್ಣಾವ್ರ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುವ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಸಾಲದ್ದಕ್ಕೆ ಇಂದಿನ ಪೀಳಿಗೆಯ ಫಿಲ್ಮ್ ಮೇಕರ್ಸ್ ಕೂಡ ಅಣ್ಣಾವ್ರ ಸಿನಿಮಾಗಳನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಸಿನಿಮಾ ಮಾಡುತ್ತಿರುವ ಸಾಕಷ್ಟು ಉದಾಹರಣೆಗಳು ಇವೆ. ಹೀಗಾಗಿ ಡಾ.ರಾಜ್‌ಕುಮಾರ್ ಸಿನಿಮಾಗಳು ಕನ್ನಡಿಗರ ಪಾಲಿಗೆ ಎವರ್‌ಗ್ರೀನ್.
ಆದರೆ, ಡಾ.ರಾಜ್‌ಕುಮಾರ್ ವೃತ್ತಿ ಬದುಕನ್ನು ಸೂಕ್ಷ್ಮವಾಗಿ ನೋಡಿದವರಿಗೆ ಕೆಲವು ಕುತೂಹಲಗಳಿವೆ. ಕೆಲವು ಕಾಂಬಿನೇಷನ್ ಯಾಕೆ ಬಂದಿಲ್ಲ ಅನ್ನೋ ಅನುಮಾನಗಳಿವೆ. ಅದಕ್ಕೆ ಕಾರಣಗಳನ್ನು ತಿಳಿದುಕೊಳ್ಳುವ ತವಕವಿದೆ. ಅದರಲ್ಲೊಂದು ಡಾ.ರಾಜ್‌ಕುಮಾರ್ ಹಾಗೂ ದತ್ತಣ್ಣ ಕಾಂಬಿನೇಷನ್. ಕನ್ನಡ ಚಿತ್ರರಂಗ ಕಂಡ ಮತ್ತೊಬ್ಬ ಅದ್ಭುತ ನಟ ದತ್ತಣ್ಣ. ಇವರು ರಾಜ್‌ಕುಮಾರ್ ನಟಿಸಿದ ಒಂದೇ ಒಂದು ಸಿನಿಮಾದಲ್ಲಿಯೂ ನಟಿಸಿಲ್ಲ. ಅದ್ಯಾಕೆ ಅನ್ನೋ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಅಣ್ಣಾವ್ರನ್ನು ಬಿಟ್ಟು ಕನ್ನಡದ ಜನಪ್ರಿಯ ನಟರ ಸಿನಿಮಾಗಳಲ್ಲಿ ದತ್ತಣ್ಣ ನಟಿಸಿದ್ದಾರೆ. ಆದರೆ, ರಾಜ್‌ಕುಮಾರ್ ಸಿನಿಮಾದಲ್ಲಿ ಸಾಧ್ಯವಾಗಲಿಲ್ಲ. ಒಂದು ಅವಕಾಶವಿತ್ತು. ನಾಗಾಭರಣ ನಿರ್ದೇಶಿಸುತ್ತಿರುವ 'ಆಕಸ್ಮಿಕ' ಸಿನಿಮಾದಲ್ಲಿ ಸಾಧ್ಯತೆಯಿತ್ತು. ಆದರೆ, ಅಣ್ಣಾವ್ರ ಬೇಡ ಅಂದಿದ್ದರು. ಅದ್ಯಾಕೆ ಹೀಗಂದ್ರು? ಆಮೇಲೆ ಏನಾಯ್ತು? ಅನ್ನೋದನ್ನು ಗೌರಿಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಿರಿಯ ನಟ ದತ್ತಣ್ಣ ರಿವೀಲ್ ಮಾಡಿದ್ದಾರೆ.
ಅಣ್ಣಾವ್ರ ಜೊತೆ ಸಿನಿಮಾ ಮಾಡಲಿಲ್ಲ
ದತ್ತಣ್ಣ 80ರ ದಶಕದಿಂದ ಸಿನಿಮಾರಂಗದಲ್ಲಿ ಇದ್ದಾರೆ. ಕನ್ನಡದ ದಿಗ್ಗಜರೊಂದಿಗೆ ನಟಿಸಿರುವ ದತ್ತಣ್ಣಗೆ ರಾಜ್‌ಕುಮಾರ್ ಸಿನಿಮಾವೊಂದು ಮಿಸ್ ಆಗಿತ್ತು. "ಎಲ್ಲರ ಜೊತೆನೂ ಸಿನಿಮಾ ಮಾಡಿದ್ದೀನಿ. ಅಂಬರೀಶ್ ಜೊತೆ ಮಾಡಿದ್ದೀನಿ. ರವಿಚಂದ್ರನ್ ಜೊತೆ ಮಾಡಿದ್ದೀನಿ. ವಿಷ್ಣುವರ್ಧನ್ ಜೊತೆ ಮಾಡಿದ್ದೀನಿ. ಉಪ್ಪಿ ಜೊತೆ, ರಮೇಶ ಅರವಿಂದ್ ಜೊತೆ ಸಿನಿಮಾ ಮಾಡಿದ್ದೀನಿ. ಶಿವರಾಜ್‌ಕುಮಾರ್ ಜೊತೆ 8 ಸಿನಿಮಾ ಮಾಡಿದ್ದೀನಿ. ಅಣ್ಣಾವ್ರ ಜೊತೆ ನನಗೆ ಸಿನಿಮಾ ಮಾಡುವುದಕ್ಕೆ ಆಗಲಿಲ್ಲ" ಎಂದು ದತ್ತಣ್ಣ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೊಂದು ಇಂಟ್ರೆಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ್ದಾರೆ.
'ಆಕಸ್ಮಿಕ'ದಲ್ಲಿ ಸಾಧ್ಯತೆ ಇತ್ತು
"ರಾಜ್‌ಕುಮಾರ್ ಜೊತೆ ಸಿನಿಮಾ ಮಾಡುವ ಸಾಧ್ಯತೆಗಳು ಇತ್ತು. ಆಕಸ್ಮಿಕ ಸಿನಿಮಾ ಆಗಬೇಕಾದರೆ, ಅದರ ರೀಡಿಂಗ್ ಎಲ್ಲಾ ನನ್ನ ಶ್ರೀನಗರದ ರೂಮ್‌ನಲ್ಲಿ ಆಗುತ್ತಿತ್ತು. ನಾಗಾಭರಣ, ಅಶ್ವತ್, ಶೇಷಾದ್ರಿನೂ ಅಲ್ಲಿ ಇರುತ್ತಿದ್ದ ಅಂತ ಕಾಣುತ್ತೆ. ಬೆಳಗ್ಗೆ ದೊಡ್ಡ ಮನೆಗೆ ಹೋಗಿ ರೀಡಿಂಗ್ ಕೊಡೋರು. ಅವರು ಏನೇನೋ ಹೇಳಿರುತ್ತಿದ್ದರು. ಅದೆಲ್ಲವೂ ಚರ್ಚೆ ನನ್ನ ರೂಮ್‌ನಲ್ಲಿ ಆಗುತ್ತಿತ್ತು. ಫೈನಲ್ ಪ್ರಾಡಕ್ಟ್ ಒಕೆ ಆದ್ಮೇಲೆ, ಆ ವಿಲನ್ ಪಾತ್ರ ಯಾರು ಮಾಡಬೇಕು ಅಂತ ಕೇಳಿದ್ದಾರೆ. ಆಗ ನಾಗಾಭರಣ ಅದೇ ದತ್ತಣ್ಣ ಅಂತ ಇದ್ದಾರಲ್ಲ. ಅವರ ಕೈನಲ್ಲಿ ಮಾಡಿಸಬೇಕು ಅಂತ ಹೇಳಿದ್ದರಂತೆ." ಎಂದು ಆ ಇಂಟ್ರೆಸ್ಟಿಂಗ್ ಸನ್ನಿವೇಶವನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಹಾಗೇ ಅಣ್ಣಾವ್ರ ರಿಯಾಕ್ಷನ್ ಏನು? ಅನ್ನೋದನ್ನು ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ.

"ಅವರು ಒಳ್ಳೆಯ ನಟರು ಆದರೆ, ಬೇಡ"
ನಾಗಾಭರಣ ವಿಲನ್ ಪಾತ್ರಕ್ಕೆ ದತ್ತಣ್ಣ ಹಾಕಿಕೊಳ್ಳೋ ಅಣ್ಣಾವ್ರ ಬೇಡ ಎಂದಿದ್ದರಂತೆ. ಆ ಸನ್ನಿವೇಶವನ್ನು ದತ್ತಣ್ಣ ಹೇಳಿಕೊಂಡಿದ್ದಾರೆ. "ಅವರು ಒಳ್ಳೆಯ ನಟರು. ಆದರೂ ವಜ್ರಮುನಿಯೇ ಇರಲಿ ಅಂದರಂತೆ. ಹಾಗಾಗಿ ಆ ಪಾತ್ರವನ್ನು ನಾನು ಮಾಡಲಿಲ್ಲ. ಆ ಪಾತ್ರವನ್ನು ಮಾಡಿದ್ದರೆ, ಅವರೊಂದಿಗೆ ಸಿನಿಮಾ ಮಾಡಬಹುದಿತ್ತು" ಎನ್ನುತ್ತಾರೆ ಹಿರಿಯ ನಟ ದತ್ತಣ್ಣ.
ಅಣ್ಣಾವ್ರ ಮನೆಗೆ ಹೋದಾಗ ಏನಾಯ್ತು?
ಡಾ.ರಾಜ್‌ಕುಮಾರ್ ಅಗಲುವ ಮುನ್ನ ದತ್ತಣ್ಣ ಅವರ ಮನೆಗೆ ಹೋಗಿದ್ದರು. ಆ ವೇಳೆ ಅಣ್ಣಾವ್ರ ಸೌಜನ್ಯವನ್ನು ಕಂಡು ಮೆಚ್ಚಿಕೊಂಡಿದ್ದರು. ಆಗ ರಾಜ್‌ಕುಮಾರ್ ಅವರ ಕೈಗಳು ನಡುಗುತ್ತಿದ್ದಿದ್ದನ್ನು ನೋಡಿ ಆತಂಕ ಪಟ್ಟಿದ್ದನ್ನು ನೆನಪಿಸಿಕೊಂಡಿದ್ದರೆ. "ಅಣ್ಣಾವ್ರ ಹೋಗುವುದಕ್ಕೆ 15 ದಿನ ಮುಂಚೆ ನಾನು, ನಾಗತಿಹಳ್ಳಿ ಹಾಗೂ ಕೆಎಂಎಫ್ ಚೇರ್‌ಮ್ಯಾನ್ ಒಬ್ಬರು ಸೇರಿ ಮೂರು ಜನರು ಅವರ ಮನೆಗೆ ಹೋಗಿದ್ವಿ. ಅಲ್ಲಿ ತಿಂಡಿ ತಿಂದು ಹೊರಡಲು ಮುಂದಾದ್ವಿ. ಆಗ ಅವರು ಹೋಗಿ ಎನ್ನಬಹುದಿತ್ತು. ಗೇಟ್‌ನವರೆಗೂ ಬಂದು ನಮ್ಮ ಬೀಳ್ಕೊಟ್ಟರು. ಆ ವೇಳೆ ಅವರು ನಮ್ಮೊಂದಿಗೆ ಬರುವಾಗ ಅವರ ಕೈ ಶೇಕ್ ಆಗುವುದನ್ನು ನೋಡಿದೆ. ಅದನ್ನು ಯಾರಿಗೂ ಹೇಳುವುದಕ್ಕೆ ಹೋಗಲಿಲ್ಲ. ನಾಗತಿಹಳ್ಳಿಗೆ ಹೇಳಿದೆ. ಅವರು ಏನೋ ತೊಂದರೆ ಇರಬೇಕು ಎಂದರು. ಅಲ್ಲಿಂದ ಸೀದಾ ನಾನು ಆಸ್ಟ್ರೇಲಿಯಾಗೆ ಹೊರಟು ಹೋದೆ. ಅದಾದ 15 ದಿನಗಳಲ್ಲೇ ಹೀಗಾಯ್ತು" ಎಂದು ದತ್ತಣ್ಣ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications











