'ಘೋಸ್ಟ್' ಬಂತು.. ಲಾಂಗ್ ಇರಲಿ.. ಗನ್ ಇರಲಿ.. ಗ್ಯಾಂಗ್‌ಸ್ಟರ್ ಲುಕ್‌ಗೆ ಶಿವಣ್ಣನ ಸರಿ: ಆ 5 ಸಿನಿಮಾಗಳು ಇವೇನೆ!
ಹ್ಯಾಟ್ರಿಕ್ ಬಾರಿಸಿದ್ದು ಆಯ್ತು.. ಸೆಂಚುರಿ ಹೊಡೆದಿದ್ದೂ ಆಯ್ತು.. ಡಬಲ್ ಸೆಂಚುರಿಯತ್ತ ದಾಪುಗಾಲು ಇಡುತ್ತಿರೋ ಶಿವಣ್ಣನ ಈ ಸುದೀರ್ಘ ಜರ್ನಿಯಲ್ಲಿ ಏಳು ಬೀಳುಗಳು ಇವೆ. ಅಣ್ಣಾವ್ರ ಸುಪುತ್ರನಾಗಿ ಸವಾಲುಗಳನ್ನು ಎದುರಿಸಿದ್ದೂ ಇದೆ. ಇದೂವರೆಗೂ ಲವರ್‌ಬಾಯ್ ಆಗಿ, ಪ್ರೇಮಿಯಾಗಿ, ಅಣ್ಣನಾಗಿ, ತಮ್ಮನಾಗಿ, ಕೊನೆಗೆ ಗ್ಯಾಂಗ್‌ಸ್ಟರ್ ಆಗಿ ನಟಿಸಿದ್ದೂ ಇದೆ.
ಇಂದು (ಜುಲೈ 12) ಶಿವರಾಜ್‌ಕುಮಾರ್ ಬರ್ತ್‌ಡೇ. ಇದೇ ಖುಷಿಯಲ್ಲಿ ಶಿವಣ್ಣನ ಮತ್ತೊಂದು ಗ್ಯಾಂಗ್‌ಸ್ಟರ್ ಸಿನಿಮಾ ಸದ್ದು ಮಾಡುತ್ತಿದೆ. ಅದುವೇ 'ಘೋಸ್ಟ್'. ಶ್ರೀನಿ ನಿರ್ದೇಶಿಸಿದ ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ಇದನ್ನು ನೋಡಿ ಸೆಂಚುರಿ ಸ್ಟಾರ್ ಫ್ಯಾನ್ಸ್ ಖುಷಿಗೆ ಕೊನೆಯೇ ಇಲ್ಲ. ಇದೇ ವೇಳೆ ಶಿವಣ್ಣ ಇದೂವರೆಗೆ ನಟಿಸಿದ ಗ್ಯಾಂಗ್‌ಸ್ಟರ್ ಸಿನಿಮಾವನ್ನೂ ಮೆಲುಕು ಹಾಕುತ್ತಿದ್ದಾರೆ.
ಲಾಂಗ್ ಇರಲಿ.. ಗನ್ ಇರಲಿ.. ಶಿವಣ್ಣನ ಹಾಗೇ ಸ್ಟೈಲಿಷ್ ಆಗಿ ಹಿಡಿಯೋಕೆ ಯಾರಿಗೂ ಬರೋದಿಲ್ಲ. ಇದೂವರೆಗೂ ಸೆಂಚುರಿ ಸ್ಟಾರ್ ನಟಿಸಿದ ಗ್ಯಾಂಗ್‌ಸ್ಟರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿವೆ. ಶಿವಣ್ಣ ನಟಿಸಿದ 5 ಪ್ರಮುಖ ಗ್ಯಾಂಗ್‌ಸ್ಟರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಉಪೇಂದ್ರ ನಿರ್ದೇಶನದ 'ಓಂ'
ಸ್ಯಾಂಡಲ್‌ವುಡ್‌ನ ಕಲ್ಟ್ ಸಿನಿಮಾಗಳಲ್ಲಿ ಉತ್ತುಂಗದಲ್ಲಿ ನಿಲ್ಲೋದು 'ಓಂ'. ಶಿವಣ್ಣನ ಕೈಗೆ ಲಾಂಗ್ ಕೊಟ್ಟು ಹೊಸ ಇತಿಹಾಸವನ್ನೇ ಬರೆದಿದ್ದರು ಉಪೇಂದ್ರ. ಈ ಸಿನಿಮಾದಲ್ಲಿ ಸತ್ಯನಾಗಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಸಿನಿಪ್ರಿಯರ ಮನಸ್ಸು ಗೆದ್ದಿದ್ದರು. ಕಾಲೇಜ್ ಓದುವ ಹುಡುಗನೊಬ್ಬ ಪರಿಸ್ಥಿತಿಗೆ ಸಿಲುಕಿ ಗ್ಯಾಂಗ್‌ಸ್ಟರ್ ಆಗುವ ಕಥೆಯೇ 'ಓಂ'. ಇದೂವರೆಗೂ ಕನ್ನಡದಲ್ಲಿ ತೆರೆಕಂಡ ಅತ್ಯತ್ಬುದ ಗ್ಯಾಂಗ್‌ಸ್ಟರ್ ಸಿನಿಮಾವಿದು. ಈ ಸಿನಿಮಾ ಅದೆಷ್ಟು ಬಾರಿ ತೆರೆಕಂಡಿದೆಯೋ.. ಸರಿಯಾದ ಲೆಕ್ಕ ಸಿಗೋದಿಲ್ಲ. ಆದರೆ, ಪ್ರತಿ ಬಾರಿಯೂ ಥಿಯೇಟರ್ ತುಂಬಿ ತುಳುಕಿದ್ದು ಇದೆ.

ಪ್ರೇಮ್ ನಿರ್ದೇಶನದ 'ಜೋಗಿ'
'ಓಂ' ತೆರೆಕಂಡ 10 ವರ್ಷಗಳ ಬಳಿಕ ಮತ್ತೊಂದು ಗ್ಯಾಂಗ್‌ಸ್ಟರ್ ಸಿನಿಮಾ ತೆರೆಕಂಡಿತ್ತು. ಅದುವೇ 'ಜೋಗಿ'. ಏನಕ್ಕೂ ಹೆದರದ ಆದರೆ, ಮುಗ್ಧ ಮನಸ್ಸಿನ ಗ್ಯಾಂಗ್‌ಸ್ಟರ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದರು. ಗ್ಯಾಂಗ್‌ಸ್ಟರ್ ಸ್ಟೋರಿ ಜೊತೆಗೆ ಅಮ್ಮ-ಮಗನ ಬಾಂಧವ್ಯವನ್ನು ಈ ಸಿನಿಮಾದಲ್ಲಿ ಹೇಳಲಾಗಿತ್ತು. ಇದು ಕನ್ನಡದ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು.

ದುನಿಯಾ ಸೂರಿಯ 'ಕಡ್ಡಿಪುಡಿ'
2013ರಲ್ಲಿ ತೆರೆಕಂಡ ಸಿನಿಮಾ 'ಕಡ್ಡಿಪುಡಿ'. ದುನಿಯಾ ಸೂರಿ ನಿರ್ದೇಶಿಸಿದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇಲ್ಲಿ ಶಿವಣ್ಣ 'ಕಡ್ಡಿಪುಡಿ' ಪಾತ್ರದಲ್ಲಿ ನಟಿಸಿದ್ದರು. ತನ್ನ ಹಿಂದಿನ ಕಸುಬನ್ನು ಬಿಟ್ಟು ಒಳ್ಳೆಯವನಾಗಿ ಬದುಕು ಸಾಗಿಸುತ್ತಿರುವ ಮಾಜಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಆಕ್ಷನ್ ಸೀನ್‌ಗಳು, ಡೈಲಾಗ್, ಶಿವಣ್ಣನ ಗ್ಯಾಂಗ್‌ಸ್ಟರ್ ಲುಕ್ ಮತ್ತೆ ಸಿನಿಪ್ರಿಯರಿಗೆ ಕಿಕ್ ಕೊಟ್ಟಿತ್ತು.

ನರ್ತನ್ ನಿರ್ದೇಶನದ 'ಮಫ್ತಿ'
ಶಿವಣ್ಣ ಇದೂವರೆಗೂ ನಟಿಸಿದ ಗ್ಯಾಂಗ್‌ಸ್ಟಾರ್ ಸಿನಿಮಾಗಳಿಗಿಂತ 'ಮಫ್ತಿ'(2017) ವಿಭಿನ್ನವಾಗಿತ್ತು. ಶಿವಣ್ಣ ಭೈರತಿ ರಣಗಲ್ ಅನ್ನೋ ದಯೆಯನ್ನೇ ತೋರದ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಂಡಿದ್ದರು. ಈ ಬಾರಿ ಶಿವಣ್ಣ ಗ್ಯಾಂಗ್‌ಸ್ಟರ್ ಲುಕ್ ಮತ್ತಷ್ಟು ಮೆಚ್ಯೂರಿಟಿ ಪಡೆದುಕೊಂಡಿತ್ತು. ನರ್ತನ್ ಕಲ್ಪನೆಯಲ್ಲಿ ಭೈರತಿ ರಣಗಲ್ ಲುಕ್‌ನಲ್ಲಿ ಸೈಲೆಂಟ್‌ಗಾಗಿ ಪ್ರೇಕ್ಷಕರ ಮನಗೆದ್ದಿದ್ದರು. ಈಗ ಇದೇ ಸಿನಿಮಾ ಪ್ರೀಕ್ವೆಲ್ ಸೆಟ್ಟೇರಿದ್ದು, ಚಿತ್ರೀಕರಣ ಆರಂಭ ಆಗಿದೆ.

ಗ್ಯಾಂಗ್‌ಸ್ಟರ್ ಅಲ್ಲದ ಗ್ಯಾಂಗ್‌ಸ್ಟರ್ ಸಿನಿಮಾ
ದುನಿಯಾ ಸೂರಿ ಜೊತೆ ನಟಿಸಿದ ಮತ್ತೊಂದು ಸಿನಿಮಾ 'ಟಗರು'. ಇದು ಪಕ್ಕಾ ಗ್ಯಾಂಗ್‌ಸ್ಟರ್ ಸಿನಿಮಾ. ಫಾರ್ ಚೇಂಜ್ ಇಲ್ಲಿ ಶಿವಣ್ಣ ಗ್ಯಾಂಗ್‌ಸ್ಟರ್ ಅಲ್ಲ. ಆದರೆ, ಗ್ಯಾಂಗ್‌ಸ್ಟರ್‌ಗಳ ಪಾಲಿಗೆ ದುಃಸ್ವಪ್ನ. ಡಿಸಿಪಿ ಶಿವನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಮತ್ತೊಮ್ಮೆ ದುನಿಯಾ ಸೂರಿ ಹಾಗೂ ಶಿವಣ್ಣನ ಕಾಂಬಿನೇಷನ್ ವರ್ಕ್‌ಔಟ್ ಆಗಿತ್ತು. ಈಗ ಮತ್ತೊಂದು ಗ್ಯಾಂಗ್‌ಸ್ಟರ್ ಸಿನಿಮಾ 'ಘೋಸ್ಟ್'ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶಿವಣ್ಣನ ಕಲ್ಟ್ ಸಿನಿಮಾಗಳ ಲಿಸ್ಟ್ ಸೇರುತ್ತಾ? ಅನ್ನೋದೇ ಕುತೂಹಲವಿದೆ.


Click it and Unblock the Notifications











