"ದುರಂತಕ್ಕೂ ಮುನ್ನ ಕುಂಕುಮ ಕೊಡು ಅಂದಿದ್ದಳು; ಕೊನೆಯ ಕ್ಷಣದ ಬಗ್ಗೆ ಸೌಂದರ್ಯಾ ಅತ್ತಿಗೆ ಹೇಳಿದ್ದೇನು?
ಬಹುಭಾಷಾ ನಟಿ ದಿವಂಗತ ಸೌಂದರ್ಯಾ ಅಪಾರ ಅಭಿಮಾನಿಗಳನ್ನು ಅಗಲಿ ವರ್ಷಗಳೇ ಕಳೆದಿವೆ. ಇಂದಿಗೂ ಅವರ ನೆನಪು ಹಾಗೇ ಅವರ ಜನ ಮಾನಸದಲ್ಲಿ ಹಾಗೇ ಉಳಿದುಕೊಂಡಿದೆ. ಸೌಂದರ್ಯಾ ನಟಿಸಿದ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದಾಗ, ಅದೆಷ್ಟೋ ಮಂದಿಯ ಕಣ್ಣುಗಳು ಒದ್ದೆಯಾಗುತ್ತವೆ. ಕನ್ನಡದ ನಟಿಯಾಗಿದ್ದರೂ, ತೆಲುಗು, ತಮಿಳಿನಲ್ಲಿ ನಟಿಸಿ ಅಲ್ಲಿನ ಜನರ ಮನಸ್ಸನ್ನು ಗೆದ್ದಿದ್ದರು.
ಕನ್ನಡ, ತಮಿಳು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಸೌಂದರ್ಯಾ ಸಿನಿಪ್ರಿಯರಿಗೆ ಚಿರಪರಿಚಿತ. ಆದರೆ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸೌಂದರ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಗಿಸಿ, ಸಂಸಾರ ಕಟ್ಟಿಕೊಳ್ಳುವ ಆಲೋಚನೆಯಲ್ಲಿದ್ದರು ಎಂದು ಹತ್ತಿರದಿಂದ ಬಲ್ಲವರು ಹಳೆಯ ಸಂದರ್ಶನದಲ್ಲಿ ಹೇಳಿದ್ದಾರೆ.

ಸೌಂದರ್ಯಾ ಸಿನಿಮಾ ಅಷ್ಟೇ ಅಲ್ಲದೆ, ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. 2004ರಲ್ಲಿ ಸೌಂದರ್ಯಾ ಹಾಗೂ ಅವರ ಅಣ್ಣ ಅಮರನಾಥ್ ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಕರೀಂನಗರಕ್ಕೆ ಲಘು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೇನು ವಿಮಾನ ಹಾರುತ್ತಿದ್ದಂತೆ ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ಸೌಂದರ್ಯಾ ಹಾಗೂ ಅಮರನಾಥ್ ಇಬ್ಬರೂ ಸಾವನ್ನಪ್ಪಿದ್ದರು. ಆದರೆ, ಈ ಘಟನೆ ನಡೆಯುವುದಕ್ಕೂ ಮುನ್ನ ಏನಾಯ್ತು ಅಂತ ಅಮರನಾಥ್ ಅವರ ಪತ್ನಿ ನಿರ್ಮಲಾ ರಾಜೇಶ್ ಗೌಡ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಿರ್ಮಲಾ ಅಮರನಾಥ್ ಸಂದರ್ಶನದ ಪ್ರೋಮೊ ಹೊರಬಿದ್ದಿದ್ದು, ಇದರಲ್ಲಿ ಸೌಂದರ್ಯಾ ಬಗ್ಗೆ ನಿರ್ಮಲಾ ಅಮರನಾಥ್ ರಿವೀಲ್ ಮಾಡಿದ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲಾಗಿದೆ. ಪೂರ್ಣ ಸಂದರ್ಶನವನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಇನ್ನೇನು ಬಿಡುಗಡೆಯಾಗಬೇಕಿದೆ.
"ಅಮರ್ ತುಂಬಾನೇ ಕ್ಲಿಯರ್ ಇದ್ದರು. ಅವರು ನನಗೆ ಹೇಳಿದ್ದರು. ನನಗೆ ಸೌಮ್ಯಾ (ಸೌಂದರ್ಯಾ) ಮಗಳು. ನೀನು ಅವಳನ್ನು ಮಗಳು ತರಾನೇ ಒಪ್ಪಿಕೊಳ್ಳಬೇಕು. ನಮ್ಮಿಬ್ಬರ ಕರ್ತವ್ಯ ಅವಳನ್ನು ಸೇಫ್ ಆಗಿ ನೋಡಿಕೊಳ್ಳುವುದು ಅಂತ ಕ್ಲಿಯರ್ ಆಗಿ ಹೇಳಿದ್ದರಿಂದ ನಾನು ಅದಕ್ಕೆ ಸಿದ್ಧವಾಗಿದ್ದೆ." ಎಂದು ಪತಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.

ಸೌಂದರ್ಯಾಗೆ ಮಳೆ ಅಂದರೆ ಇಷ್ಟ ಇತ್ತಂತೆ. ಆ ಬಗ್ಗೆನೂ ರಿವೀಲ್ ಮಾಡಿದ್ದಾರೆ. "ನಮ್ಮಿಬ್ಬರಿಗೂ ಮಳೆ ಅಂದರೆ, ತುಂಬಾನೇ ಇಷ್ಟ. ನಾವೆಲ್ಲರೂ ಮನೆಯ ಟೆರಾಸ್‌ಗೆ ಹೋಗಿಬಿಟ್ಟು ಮಳೆಯಲ್ಲಿ ಹಾಡುತ್ತಿದ್ದೆವು. ಗಿರಗಿಟ್ಲೆ ಆಡೋದು, ಅಂತಹದ್ದೆಲ್ಲ ಮಾಡುತ್ತಿದ್ವಿ. ಚಿಕ್ಕದರಲ್ಲಿ ಸಂತೋಷ ಪಡುತ್ತಿದ್ದಿದ್ದೇ ಹೆಚ್ಚು. ಅಷ್ಟು ದೊಡ್ಡ ಸ್ಟಾರ್ ಆದ ಮೇಲೂ ಅವರು ಡೌನ್ ಟು ಅರ್ಥ್ ಆಗಿದ್ದರು." ಎಂದು ನಿರ್ಮಲಾ ಅಮರನಾಥ್ ಹೇಳಿದ್ದಾರೆ.
ನಟಿ ಸೌಂದರ್ಯಾ ಸಾಯುವುದಕ್ಕೂ ಮುನ್ನ ಅತ್ತಿಗೆ ಬಳಿಕ ಕುಂಕುಮ ಕೇಳಿದ್ದರು. ಯಾವತ್ತೂ ಹೀಗೆಲ್ಲ ಹೊರ ಹೋಗುವಾಗ ಸೌಂದರ್ಯಾ ಕೇಳಿರಲಿಲ್ಲ. "ಅವತ್ತು ಅವಳು ವಾಪಸ್ ಹೋದವಳು ತಿರುಗಿ ಬಂದ್ಬಿಟ್ಟು, ನನಗೆ ಸ್ವಲ್ಪ ಕುಂಕುಮ ಕೊಡು ಅಂತ ಕೇಳಿದಳು. ಅವಳಿಗೆ ಹೊರಗೆ ಹೋಗುವಾಗ ಕುಂಕುಮ ಇಟ್ಟುಕೊಂಡು ಹೋಗುವಂತಹ ಅಭ್ಯಾಸವೇನೂ ಇರಲಿಲ್ಲ. ಅದೇ ಮೊದಲ ಬಾರಿ ಅವಳು ಅವತ್ತು ಕೇಳಿದ್ದಳು. ವಾಪಸ್ ಬಂದು ನನ್ನನ್ನು ಅಪ್ಪಿಕೊಂಡಿದ್ದಳು. ಕಿಸ್ ಮಾಡಿ ಬರ್ತೀನಿ ಅಂತ ಹೇಳಿ ಹೋಗಿದ್ದಳು. ಅವತ್ತು ಎಲ್ಲರೂ ಇದ್ದರು." ಎಂದು ನಿರ್ಮಲಾ ಅಮರನಾಥ್ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ವಿಮಾನ ದುರಂತದ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. "ನನಗೆ 10.30ಕ್ಕೆ ಗೊತ್ತಾಯ್ತು. ಈತರ ವಿಮಾನ ದುರಂತ ಆಯ್ತಂತೆ. ಏನಾದರೂ ಗೊತ್ತಾಯ್ತಾ? ಅಂತ ಕೇಳಿದರು. ಅಲ್ಲಿಗೆ ಹೋದಾಗಲೇ ಆಂಬುಲೆನ್ಸ್ ಎಲ್ಲಾ ಹೋಗುತ್ತಿದೆ. ಸೈರನ್ ಎಲ್ಲಾ ಜೋರಾಗಿ ಕೇಳಿಸುತ್ತಿದೆ. ಆಗ ಸ್ವಲ್ಪ ಭಯ ಆಗುವುದಕ್ಕೆ ಶುರುವಾಯ್ತು. ಏನೋ ಆಗುತ್ತಿದೆ. ಏನೋ ಎಲ್ಲವೂ ಸರಿಯಿಲ್ಲ. ಎಲ್ಲರೂ ಓಡಿ ಬರುತ್ತಿದ್ದಾರೆ. ಹೊಗೆ ಎಲ್ಲಾ ಹೋಗುತ್ತಿದೆ. ಅಲ್ಲಿಗೆ ನಾನೇ ಮೊದಲು ಹೋಗಿದ್ದು ಎಲ್ಲರೂ ಅಳುತ್ತಿದ್ದರು. ಆ ಸನ್ನಿವೇಶ ತುಂಬಾನೇ ಕಷ್ಟಕರವಾಗಿತ್ತು." ಎಂದು ನಿರ್ಮಲಾ ಅಮರನಾಥ್ ಹೇಳಿದ್ದಾರೆ. ಸದ್ಯ ಪ್ರೋಮೊದಲ್ಲಿ ಪ್ರಮುಖ ಅಂಶಗಳನ್ನು ರಿವೀಲ್ ಮಾಡಿದ್ದು, ಎಪಿಸೋಡ್‌ನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.


Click it and Unblock the Notifications











