ಶಿವಣ್ಣನನ್ನು ಒಮ್ಮೆ ಸುಧಾರಾಣಿ 'ಅಂಕಲ್' ಅಂತ ಕರೆದಿದ್ರು; ಆ ಸಂದರ್ಭ ಯಾವುದು ಗೊತ್ತೇ?
ಸ್ಯಾಂಡಲ್‌ವುಡ್‌ನ ಹಿಟ್ ಜೋಡಿಗಳಲ್ಲಿ ಶಿವಣ್ಣ ಹಾಗೂ ಸುಧಾರಾಣಿ ಫೇರ್ ಕೂಡ ಒಂದು. 'ಆನಂದ್' ಸಿನಿಮಾದಿಂದ ಈ ಜೋಡಿಯ ಪಯಣ ಶುರುವಾಗಿತ್ತು. ಅಲ್ಲಿಂದಲೂ ಈ ಜೋಡಿ ತೆರೆಮೇಲೂ ಅಷ್ಟೇ ಜೋವಿಯಲ್. ತೆರೆಯ ಹಿಂದೆ ಕೂಡ ಅಷ್ಟೇ ಫ್ರೆಂಡ್ಲಿಯಾಗಿ ಇರುತ್ತಾರೆ. ಇವರ ಸಿನಿಮಾಗಳಿಗೆ ಇಂದಿಗೂ ಬಹು ದೊಡ್ಡ ಫ್ಯಾನ್ಸ್ ಬೇಸ್ ಇದೆ.
ಸುಧಾರಾಣಿ ಚಿತ್ರರಂಗಕ್ಕೆ ಬಾಲ ನಟಿಯಾಗಿಯೇ ಎಂಟ್ರಿ ಕೊಟ್ಟಿದ್ದರು. 'ಕಿಲಾಡಿ ಕಿಟ್ಟು ಇವರು ಬಾಲ ನಟಿಯಾಗಿ ನಟಿಸಿದ ಮೊದಲ ಸಿನಿಮಾ. ಆ ಬಳಿಕ ನಾಲ್ಕೈದು ಸಿನಿಮಾಗಳಲ್ಲಿ ಸುಧಾರಾಣಿ ಬಾಲನಟಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಆಗ ಇವರ ಹೆಸರು ಜಯಶ್ರೀ. ಅಂದರೆ, ಇದು ಸುಧಾರಾಣಿಯ ಅಸಲಿ ಹೆಸರು.

'ಆನಂದ್' ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದ ಜಯಶ್ರೀಯನ್ನು ಪಾರ್ವತಮ್ಮ ರಾಜ್‌ಕುಮಾರ್ ಸುಧಾರಾಣಿ ಅಂತ ಬದಲಾಯಿಸಿದ್ದರು. ಅಲ್ಲಿಂದ ಸುಧಾರಾಣಿ ಮತ್ತೆ ತಿರುಗಿ ನೋಡಲೇ ಇಲ್ಲ. ಶಿವಣ್ಣ ಹಾಗೂ ಸುಧಾರಾಣಿ ಜೋಡಿ ಸೂಪರ್ ಹಿಟ್ ಆಗಿತ್ತು. ಆದರೆ, ಮೊದಲ ಬಾರಿ ಶಿವಣ್ಣನಿಗೆ ಸುಧಾರಾಣಿ ಅಂಕಲ್ ಅಂತ ಕರೆದಿದ್ದರಂತೆ. ಅದ್ಯಾಕೆ ಗೊತ್ತಾ?
ಸುಧಾರಾಣಿ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಅವರ ನಟನೆ ಹೈಲೈಟ್ ಆಗುತ್ತೆ. ಸಿನಿಮಾ ಸೋತರೂ, ಗೆದ್ದರೂ ಸುಧಾರಾಣಿ ನಟನೆ ಬಗ್ಗೆ ನೆಗೆಟಿವ್ ಆಗಿ ಮಾತಾಡಿದ ಉದಾಹರಣೆಗಳೇ ಇಲ್ಲ. ಓವರ್ ಆಕ್ಟಿಂಗ್ ಅಂತ ಕಾಮೆಂಟ್ ಮಾಡಿದ್ದು ಇಲ್ಲ. ಅದರಲ್ಲೂ ಶಿವಣ್ಣ ಹಾಗೂ ಸುಧಾರಾಣಿ ಕಾಂಬಿನೇಷನ್ ಸಿನಿಮಾಗಳಂತೂ ಇಂದಿಗೂ ನೋಡಬೇಕು ಅನಿಸುತ್ತೆ. ಹೀಗಾಗಿ ಇತ್ತೀಚೆಗೆ ನೀಡಿದ ಸಂದರ್ಶನಗಳಲ್ಲಿ ಶಿವಣ್ಣ ಜೊತೆ ಕೆಲಸ ಮಾಡುವಾಗ ಅನುಭವ ಹೇಗಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ.

"ಶಿವಣ್ಣ ಹಾಯ್ ಚುಮ್ಮಿ ಅನ್ನೋರು. ನಾನು ಹಾಯ್ ಶಿವಣ್ಣ ಅಂತಿದ್ದೆ. ಅವರು ತಿಂಡಿ ತಿಂದ್ಯಾ ಅನ್ನೋರು. ಈತರಾನೇ ಆರಾಮಾಗಿ ಮಾತಾಡಿಕೊಂಡಿದ್ವಿ. ಆನಂದ್‌ನಲ್ಲಿ ಕಾಮಿಕ್ಸ್ ಎಲ್ಲಾ ಓದಿತ್ತಿದ್ದೆ. ಹಾಗೆ ಕಾಮಿಕ್ಸ್ ಎಲ್ಲಾ ಹೋಯ್ತು. ಬುಕ್ಸ್ ರೆಗ್ಯೂಲರ್ ಆಗಿರುತ್ತಿತ್ತು. ನಾನು ಹಿಂಗೆ ಮಾಡುತ್ತೇನೆ. ನೀನು ಹೀಗೆ ರಿಯಾಕ್ಟ್ ಮಾಡು. ಈತರದ ಮಾತುಕತೆನೇ ಇಲ್ಲ" ಎಂದು ಸುಧಾರಾಣಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಸುಧಾರಾಣಿ ಹಾಗೂ ಶಿವಣ್ಣ ಕಾಂಬಿನೇಷನ್ ಸಿನಿಮಾದಲ್ಲಿ ಪಾತ್ರಗಳ ಬಗ್ಗೆ ಚರ್ಚೆ ಮಾಡಿದ್ದೇ ಇಲ್ವ ಎಂದೂ ಹೇಳಿದ್ದಾರೆ. "ಶಿವಣ್ಣನ ಜೊತೆ ನಟಿಸುವಾಗ ಒಂದು ದಿನಾನೂ ಡಿಸ್ಕಸ್ ಮಾಡಿದ್ದೇ ಇಲ್ಲ. ಅದೇನಂತಾರೋ ಗೊತ್ತಿಲ್ಲ. ಹಾಗೇ ಹೊಂದಾಣಿಕೆ ಆಗೋದು. ಹಾಗೇ ಇಬ್ಬರು ನಟಿಸುತ್ತಿದ್ವಿ" ಎಂದಿದ್ದಾರೆ.
ಇನ್ನು ತೆರೆಮೇಲೆ ಸುಧಾರಾಣಿ ಹಾಗೂ ಶಿವಣ್ಣ ಕೆಮಿಸ್ಟ್ರಿ ನ್ಯಾಚುರಲ್ ಆಗಿರುತ್ತಿತ್ತು. ರೊಮ್ಯಾಂಟಿಕ್, ಕಾಮಿಡಿ, ಎಮೋಷನಲ್ ಸೀನ್‌ಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದರು. 'ಆನಂದ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದಕ್ಕೂ ಮುನ್ನ ಅಣ್ಣಾವ್ರು ನಟಿಸಿದ 'ಭಾಗ್ಯವಂತ' ಚಿತ್ರದಲ್ಲಿ ಬಾಲ ನಟಿಯಾಗಿದ್ದರು. ಇದೇ ಸಿನಿಮಾ ನೂರು ದಿನಗಳ ಕಾರ್ಯಕ್ರಮದಲ್ಲಿ ಶಿವಣ್ಣನಿಗೆ ಮೊದಲ ಬಾರಿಗೆ ಅಂಕಲ್ ಅಂತ ಕರೆದಿದ್ದರು.
"ಅದು ತುಂಬಾ ಚಿಕ್ಕವಳಿದ್ದೆ. ಭಾಗ್ಯವಂತ ನೂರು ದಿನಗಳ ಕಾರ್ಯಕ್ರಮ ಆಗಿತ್ತು. ಆಗ ವುಡ್‌ಲ್ಯಾಂಡ್ಸ್‌ನಲ್ಲಿ ಫಂಕ್ಷನ್ ಆಗಿತ್ತು. ಆ ಸಂದರ್ಭದಲ್ಲಿ ಶಿವಣ್ಣನಿಗೆ ಅಂಕಲ್ ಅಂತ ಕರೆದಿದ್ನಂತೆ. ಯಾಕೆ ಅಂತ ಗೊತ್ತಿಲ್ಲ. ಅವರನ್ನು ಹೇಗೆ ಕರೆಯಬೇಕು ಅಂತ ಗೊತ್ತಿರಲಿಲ್ವೇನೋ. ನನಗೇ ಗೊತ್ತಿಲ್ಲ ನಾನು ಯಾಕೆ ಹಾಗೆ ಕರೆದೆ ಅಂತ. ಒಂದೇ ಸಲ ಕರೆದಿದ್ದು" ಎಂದು ಸುಧಾರಾಣಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications











