"ನಟಿ ಸೌಂದರ್ಯ ಸತ್ತಾಗ ದೇವರ ಮನೆಗೆ ಬೀಗ ಹಾಕಿದ್ರು"; ಶಂಕರ್‌ನಾಗ್, ಸುನೀಲ್ ಸಾವು ನೆನೆದು ತಾರಾ ಭಾವುಕ
ಕನ್ನಡ ಚಿತ್ರರಂಗ ಇದೂವರೆಗೂ ಸಾಕಷ್ಟು ಅನಿರೀಕ್ಷಿತ ದುರಂತಗಳನ್ನು ಕಂಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಇಂದಿಗೂ ಇವರೆಲ್ಲರೂ ಇರಬೇಕಿತ್ತು ಅಂತ ಅನಿಸುವಷ್ಟು ಸಾಧನೆ ಮಾಡಿ ಹೋದವರು ಬಹಳಷ್ಟು ಮಂದಿ ಇದ್ದಾರೆ. ಅವರಲ್ಲಿ ನೆನಪಿಗೆ ಬರೋದು ಕರಾಟೆ ಕಿಂಗ್ ಶಂಕರ್ ನಾಗ್, ಮಂಜುಳಾ, ನಟಿ ಸೌಂದರ್ಯಾ, ಸುನೀಲ್ ಹಾಗೂ ಪುನೀತ್ ರಾಜ್‌ಕುಮಾರ್. ಹೀಗೆ ಇಂತಹ ಮೇರು ಕಲಾವಿದರ ಅನಿರೀಕ್ಷಿತ ಅಗಲಿಕೆಯನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.
ಒಂದು ವೇಳೆ ಇವರೆಲ್ಲರೂ ಇಂದಿಗೂ ಇದ್ದಿದ್ದರೆ, ಕನ್ನಡ ಚಿತ್ರರಂಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿತ್ತು. ಶಂಕರ್ ನಾಗ್ ಅವರ ಮುಂದಾಲೋಚನೆ, ಮಂಜುಳಾ ಅಂತಹ ಖಡಕ್ ನಟಿ, ಸೌಂದರ್ಯಾ ಅವರ ನಟನೆ, ಸುನೀಲ್ ಅಂತ ಹ್ಯಾಂಡ್‌ಸಮ್ ನಟ, ಪುನೀತ್ ರಾಜ್‌ಕುಮಾರ್ ಅಂತ ನಗುಮುಖದ ರಾಜಕುಮಾರ ಇವರೆಲ್ಲವೂ ಇರಬೇಕಿತ್ತು. ಇಂತಹ ನಟರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ.

ಇವರೆಲ್ಲ ಸಾವಿನ ಸುದ್ದಿ ಸಿನಿಮಾ ಮಂದಿಗೆ, ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು. ಇಂತಹದ್ದು ಸುದ್ದಿಯನ್ನು ನಾನು ಕೇಳಬಹುದು ಅನ್ನೋ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಹಿರಿಯ ನಟಿ ತಾರಾ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಶಂಕರ್‌ನಾಗ್, ಸೌಂದರ್ಯಾ, ಸುನೀಲ್ ಅವರ ಅಗಲಿದ ಕ್ಷಣಗಳ ಬಗ್ಗೆ ಮಾತಾಡಿದ್ದಾರೆ. ಅವರು ಸುದ್ದಿ ಸಿಕ್ಕಿದ್ದೇಗೆ? ಆಮೇಲೆ ಏನಾಯ್ತು? ಅನ್ನೋದನ್ನು ಹೇಳಿದ್ದಾರೆ.
ಸೌಂದರ್ಯಾ ಹಾಗೂ ತಾರಾ ಹೆಚ್ಚು ಕಡಿಮೆ ಸಮಕಾಲೀನರು. ಹಾಗೆ ನೋಡುವುದಕ್ಕೆ ಹೋದರೆ, ತಾರಾ ಅವರೇ ಸೀನಿಯರ್ ಎಂದು ಹೇಳಬಹುದು. ಹೀಗಾಗಿ ಇಬ್ಬರಲ್ಲೂ ಆತ್ಮೀಯತೆ ಇತ್ತು. ಸೌಂದರ್ಯಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆನ್ನು ಸುದ್ದಿ ಕೇಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು? ಅಂತ ನೋಡಿ. "ಸೌಂದರ್ಯಾ ಅವಳ ನಿಜವಾದ ಹೆಸರು ಸೌಮ್ಯಾ. ಅವತ್ತು ನಾನು ಮನೆಯಲ್ಲಿ ಇದ್ದೆ. ಸೌಂದರ್ಯಾ ಹೋಗ್ಬಿಟ್ಲು ಅಂದರು. ಎಲ್ಲೋ ಹೋಗಿರುತ್ತಾಳೆ ಅಂದ್ಕೊಂಡೆ. ಅವಳು ಹೋಗ್ಬಿಟ್ಲಂತೆ ಅಂದರು. ನನಗೆ ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಇಡೀ ಇಂಡಸ್ಟ್ರೀನೆ ಅವಳ ಮನೆಗೆ ಹೋಗಿದ್ದರು." ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಸೌಂದರ್ಯಾ ಅಗಲಿದ ಬಳಿಕ ಅವರ ಮನೆಗೆ ಹೋದಾಗ, ಅಲ್ಲಿನ ದೃಶ್ಯ ಕಂಡು ತಾರಾ ಸಂಕಟ ಅನುಭವಿಸಿದ್ದರು. "ಅವಳು ಅಗಲಿದ 15 ದಿನಗಳಾದ್ಮೇಲೆ ಅವಳ ಮನೆಗೆ ಹೋಗುತ್ತೇನೆ. ಹೋದರೆ, ಮನೆಯ ಹಾಲ್‌ನಲ್ಲಿ ಅವಳದ್ದು, ಅವರ ಅಣ್ಣ, ಅವರ ತಂದೆಯದ್ದು ದೊಡ್ಡ ಫೋಟೋ.. ಫುಲ್ ಹಾರ ಹಾಕಿದ್ದರು. ದೇವರ ಮನೆಗೆ ದೊಡ್ಡ ಬೀಗ. ಯಾಕಮ್ಮ ದೇವರ ಮನೆಗೆ ಬೀಗ ಹಾಕಿದ್ದೀರ ಅಂದೆ. ಏನಕ್ಕೆ ದೇವರ ಪೂಜೆ ಮಾಡಲಿ. ನೋಡು ಎಲ್ಲರನ್ನೂ ಕರೆದುಕೊಂಡು ಬಿಟ್ಟ. ನನಗೆ ಹೇಗಾಯ್ತು ಅಂದರೆ, ನನಗೆ ಏನೋ ಸಂಕಟ." ಎಂದು ತಾರಾ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನು ಸೌಂದರ್ಯಾ ಸಾವಿನ ಬಗ್ಗೆ ಅಷ್ಟೇ ಅಲ್ಲ, ಅಪಘಾತದಲ್ಲಿ ಅಗಲಿದ ಶಂಕರ್ ನಾಗ್ ಅವರ ಮುಖವನ್ನೂ ಸಹ ತಾರಾ ನೋಡಲಿಲ್ಲ. "ಪ್ರೊಸೆಷನ್ ಏನೋ ಮುಗಿಯುತ್ತೆ. ಮಾರನೇ ದಿನ ಅಲ್ಲೇ ಇರುತ್ತೇವೆ. ಅಲ್ಲಿ ನಮಗೆ ವಿಷಯ ಗೊತ್ತಾಗುತ್ತೆ ಶಂಕರ್ ನಾಗ್ ಇನ್ನಿಲ್ಲ. ಅವರು ಅಪಘಾತದಲ್ಲಿ ನಿಧನರಾಗಿದ್ದಾರೆ ಅಂತ. ದೇವು ಹಾಗೂ ಚಂದ್ರ ಇವರಿಬ್ಬರೂ ನನ್ನನ್ನು ಕರೆದುಕೊಂಡು ಹೋಗುವುದಕ್ಕೆ ನಮ್ಮ ಮನೆಗೆ ಬರುತ್ತಾರೆ. ನಾನು ಕಾರಿನಲ್ಲಿ ಹೋಗುತ್ತೇನೆ. ಆದರೆ, ನಾನು ಇಳಿಯುವುದಿಲ್ಲ. ಕಾರಿನಲ್ಲೇ ಕೂರುತ್ತೇನೆ. ಇವರೆಲ್ಲರೂ ನೋಡಿಕೊಂಡು ಬರುತ್ತಾರೆ. ನೋಡುವುದೂ ಇಲ್ಲ. ಆತರ ನೆನಪಿಸಿಕೊಳ್ಳುವುದಕ್ಕೂ ಇಷ್ಟವಿಲ್ಲ. ಇವತ್ತು ನೋಡಿಕೊಂಡು ಬರುತ್ತಾರೆ. ಅದೊಂತರ ಶಾಕಿಂಗ್ ನಮಗೆ." ಎಂದಿದ್ದಾರೆ.
ಹಾಗೇ ಅಪಘಾತದಲ್ಲಿ ಅಗಲಿದ ಸುನೀಲ್ ಅವರ ಬಗ್ಗೆನೂ ತಾರಾ ಮಾತಾಡಿದ್ದಾರೆ. "ನಾವು ಶೂಟಿಂಗ್ ಮಾಡುವಾಗ ನಮಗೊಂದು ಸುದ್ದಿ ಬರುತ್ತೆ. ಅಪಘಾತವಾಗಿ ಮಾಲಾಶ್ರೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುನೀಲ್ ಇನ್ನಿಲ್ಲ ಅಂತ. ನಾನು ಎಲ್ಲೂ ಹೋಗಿಲ್ಲ. ನನಗೆ ಒಂಥರಾ ಭಯ. ನಾನು ಅಲ್ಲೇ ಉಳಿದುಕೊಳ್ಳುತ್ತೇನೆ. ಸೆಟ್‌ನಲ್ಲಿ ಹೋಗಲ್ಲ. ಎಲ್ಲರೂ ತುಂಬಾ ಅತ್ತುಕೊಂಡು ಬರುತ್ತಾರೆ. ಮಾಲಾಶ್ರೀ ಆಗ ನಿಮಾನ್ಸ್‌ನಲ್ಲಿ ಇರುತ್ತಾಳೆ. ಅವಳನ್ನು ಆಸ್ಪತ್ರೆಗೆ ನೋಡುವುದಕ್ಕೆ ಹೋಗಿದ್ದೆ." ಆ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಸದ್ಯ ಸಂದರ್ಶನದಲ್ಲಿ ತುಣುಕುಗಳನ್ನಷ್ಟೇ ಹೊರಬಿಟ್ಟಿದ್ದು, ಸಂದರ್ಶನದ ಮುಂದಿನ ಭಾಗದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವ ಸಾಧ್ಯತೆಯಿದೆ.


Click it and Unblock the Notifications















