ಬಾಲಿವುಡ್‌ನ ಶಾಪ ಬಂಗಲೆ ಬಗ್ಗೆ ನಿಮಗೆ ಗೊತ್ತೇ? ರಾಜೇಶ್ ಖನ್ನಾ ಜೀವಿಸಿದ್ದ ಬಂಗಲೆಯ ಕರಾಳ ಇತಿಹಾಸವೇನು?
ಯಾವುದೇ ಚಿತ್ರರಂಗಕ್ಕೆ ಹೋದರೂ ಅಲ್ಲಿ ಕೆಲವು ನಂಬಿಕೆಗಳು ಇರುತ್ತವೆ. ಒಂದು ಸೀನ್ ತೆಗೆಯಬೇಕು ಅಂದರೂ ಕೆಲವು ಪದ್ಧತಿಗಳನ್ನು ಅನುಸರಿಸಿ ಶುರು ಮಾಡುತ್ತಾರೆ. ಹಿಂದಿಂದ ಬಂದಿರುವ ಸಂಪ್ರದಾಯವನ್ನು ಬಿಟ್ಟು ನಡೆದುಕೊಂಡರೆ, ಅಪಶಕುನಗಳಾಗುತ್ತವೆ ಅನ್ನೋದು ನಂಬಿಕೆ. ಅದರಲ್ಲೂ ಸೂಪರ್‌ಸ್ಟಾರ್‌ಗಳಲ್ಲಿ ಇಂತಹ ನಂಬಿಕೆಗಳು ಹೆಚ್ಚು. ಒಂದು ಕಾರು, ಬಂಗಲೆ ತೆಗೆದುಕೊಳ್ಳುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ.
ಇಂತಹದ್ದೇ ಒಂದು ಕಥೆ ಬಾಲಿವುಡ್‌ನಲ್ಲಿದೆ. ಮುಂಬೈನ ಪ್ರಮುಖ ಏರಿಯಾದಲ್ಲಿರುವ ಒಂದು ಭವ್ಯ ಬಂಗಲೆ ಮೂವರು ಸೂಪರ್‌ಸ್ಟಾರ್‌ಗಳ ವೃತ್ತಿ ಬದುಕನ್ನೇ ಬಲಿ ಪಡೆಯಿತು ಅನ್ನೋ ನಂಬಿಕೆಯಿದೆ. ಇಂದಿಗೂ ಸಿನಿಮಾ ಮಂದಿ ಆ ಬಂಗಲೆಯ ಹತ್ತಿರಕ್ಕೂ ಹೋಗುವುದಿಲ್ಲ. ಸೂಪರ್‌ಸ್ಟಾರ್‌ಗಳು ಮುಂಬೈನಲ್ಲಿರುವ ಭವ್ಯ ಬಂಗಲೆಯ ಮೇಲೆ ಕಣ್ಣಿಟ್ಟಿರುತ್ತಾರೆ. ಅದು ಅವರ ಕನಸೂ ಹೌದು, ಪ್ರತಿಷ್ಠೆಯೂ ಹೌದು.

ಆದರೆ, ಮುಂಬೈನಲ್ಲಿ ಹಾರ್ಟ್ ಆಫ್ ದಿ ಸಿಟಿಯಲ್ಲಿರುವ ಭವ್ಯ ಬಂಗಲೆಯೊಂದು ಮೂವರು ಸೂಪರ್‌ಸ್ಟಾರ್‌ಗಳನ್ನು ಕರಿಯರ್ ಅನ್ನೇ ಬಲಿ ಪಡೆಯಿತು ಎಂಬ ನಂಬಿಕೆ ಇನ್ನೂ ಇದೆ. ಅವರು ಅಂದುಕೊಂಡಂತೆ ಆ ಘಟನೆಗಳು ನಡೆದಿದೆ ಕೂಡ. ಹಾಗಿದ್ದರೆ, ಹೀರೋಗಳನ್ನು ಜೀರೋ ಮಾಡಿದ ಆ ಭವ್ಯ ಬಂಗಲೆ ಯಾವುದು? ಆ ಮೂವರು ಸೂಪರ್‌ಸ್ಟಾರ್‌ಗಳು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಮುಂಬೈನ ಕಾರ್ಟರ್ ರೋಡ್ ಸೆಲೆಬ್ರೆಟ್ರಿಗಳ ಫೇವರಿಟ್ ಏರಿಯಾ. ಇಲ್ಲಿ ಬಾಲಿವುಡ್‌ನ ಹಲವು ಸ್ಟಾರ್ ನಟರ ಮನೆಗಳ ಭವ್ಯ ಬಂಗಲೆಗಳು ಇವೆ. ಇದೇ ಏರಿಯಾದಲ್ಲಿ ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರ ಭವ್ಯ ಬಂಗಲೆ 'ಆಶೀರ್ವಾದ್' ಇದೆ. ಇಂದಿಗೂ ಈ ಬಂಗಲೆಯನ್ನು ಖರೀದಿ ಮಾಡುವ ಯೋಚನೆಯನ್ನೂ ಬಾಲಿವುಡ್ ಮಂದಿ ಮಾಡುವುದಿಲ್ಲ. ಅದಕ್ಕೆ ಕಾರಣ ಆ ಮನೆಗೆ ಖರೀದಿ ಮಾಡಿದವರು ವೃತ್ತಿ ಬದುಕಿನಲ್ಲಿ ಸೋತು ಸುಣ್ಣವಾಗಿದ್ದಾರೆ. ರಾಜೇಶ್ ಖನ್ನಾ ಸೇರಿ ಇನ್ನೂ ಇಬ್ಬರು ಸ್ಟಾರ್ ನಟರ ಪರಿಸ್ಥಿತಿ ಕೂಡ ಹಾಗೇ ಆಗಿತ್ತು.
ರಾಜೇಶ್ ಖನ್ನಾ ಖರೀದಿ ಮಾಡಿ ಅದಕ್ಕೆ ಆಶೀರ್ವಾದ್ ಅಂತ ಹೆಸರು ಇಡುವುದಕ್ಕೂ ಮುನ್ನ ಈ ಬಂಗಲೆ ಆಂಗ್ಲೋ ಇಂಡಿಯನ್ ಹೆಸರಲ್ಲಿತ್ತು. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, 50 ದಶಕದ ಜನಪ್ರಿಯ ನಟ ಭರತ್ ಭೂಷಣ್ ಈ ಬಂಗಲೆಯನ್ನು ಖರೀದಿ ಮಾಡಿದ್ದರು. 50ರ ದಶಕದಲ್ಲಿ ಇವರು ಯಶಸ್ಸಿನ ಉತ್ತುಂಗದಲ್ಲಿದ್ದರು. ಬೈಜು ಬವ್ರಾ', 'ಮಿರ್ಜಾ ಗಾಲಿಬ್', ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಆ ಕಾಲಕ್ಕೆ ಇವರನ್ನು ದಿಲೀಪ್ ಕುಮಾರ್ ಹಾಗೂ ರಾಜ್ ಕಪೂರ್ ಸಮನಾಗಿದ್ದರು. ಆದರೆ, ಈ ಬಂಗಲೆಗೆ ಕಾಲಿಡುತ್ತಿದ್ದಂತೆ ಇವರ ಸಿನಿಮಾಗಳು ಫ್ಲಾಪ್ ಆದವು. ಬೆಟ್ಟದಷ್ಟು ಸಾಲ ಬೆಳೆಯಿತು. ಆ ಬಂಗಲೆಯನ್ನು ಮಾರಬೇಕಾದ ಅನುವಾರ್ಯತೆ ಎದುರಾಯ್ತು.

1960ರಲ್ಲಿ ಈ ಬಂಗಲೆಯನ್ನು ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ರಾಜೇಂದ್ರ ಕುಮಾರ್ ಖರೀದಿ ಮಾಡಿದ್ದರು. ಆಗಿನ ಕಾಲಕ್ಕೆ 60 ಸಾವಿರ ರೂಪಾಯಿ ಕೊಟ್ಟು ಈ ಬಂಗಲೆಯನ್ನು ಖರೀದಿಸಿದ್ದರು. ಅಲ್ಲಿವರೆಗೂ ಸಿಲ್ವರ್ ಜುಬಿಲಿ ಸಿನಿಮಾಗಳನ್ನು ಕೊಟ್ಟು ಜುಬಿಲಿ ಕುಮಾರ್ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದ ರಾಜೇಂದ್ರ ಕುಮಾರ್ ಆ ಬಂಗಲೆಗೆ ಕಾಲಿಡುತ್ತಿದ್ದಂತೆ ಸೋಲು ಅವರನ್ನು ಆವರಿಸಿಕೊಂಡಿತ್ತು. ಅವರು ಈ ಬಂಗಲೆಯನ್ನು ಮಾರಬೇಕಾಗಿ ಬಂತು.
ಇನ್ನು 70ರ ದಶಕದಲ್ಲಿ ರಾಜೇಶ್ ಖನ್ನಾ ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗ ರಾಜೇಶ್ ಖನ್ನ ಈ ಬಂಗಲೆಯನ್ನು ಖರೀದಿ ಮಾಡಿದ್ದರು. 3.5 ಲಕ್ಷಕ್ಕೆ ಖರೀದಿಸಿ, ಆ ಬಂಗಲೆಯಲ್ಲಿ ವಾಸ ಮಾಡುವುದಕ್ಕೂ ಶುರು ಮಾಡಿದ್ದರು. ಅದಕ್ಕೆ ಆಶೀರ್ವಾದ್ ಅಂತ ಹೆಸರೂ ಇಟ್ಟಿದ್ದರು. ಆಶೀರ್ವಾದ್ ಕೇವಲ ಬಂಗಲೆಯಾಗಿರಲಿಲ್ಲ. ಅದೊಂದು ಸ್ಟಾರ್‌ಡಮ್ ಆಗಿತ್ತು. ನಿರಂತರವಾಗಿ 17 ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಪೀಕ್‌ನಲ್ಲಿದ್ದ ರಾಜೇಶ್ ಖನ್ನಾ ಈ ಬಂಗಲೆಗೆ ಕಾಲಿಡುತ್ತಿದಂತೆ ಸಿನಿಮಾಗಳು ಸೋಲುವುದಕ್ಕೆ ಶುರುವಾಗಿದ್ದವು. ವೈಯಕ್ತಿಕ ಜೀವನ ಕೂಡ ಹಾಳಾಯ್ತು. ಆದರೂ, ಕೊನೆಯವರೆಗೂ ಅದೇ ಬಂಗಲೆಯಲ್ಲಿ ರಾಜೇಶ್ ಖನ್ನ ವಾಸವಿದ್ದರು. ಈಗ ಆ ಮನೆಯನ್ನು ಕಡವಿ ಹೊಸ ಕಟ್ಟಡವನ್ನು ಎಬ್ಬಿಸಲಾಗಿದೆ.


Click it and Unblock the Notifications











