ಎಂ.ಎಸ್ ರಾಮಯ್ಯ ಆಸ್ಪತ್ರೆ ಮುಂದೆ ಚಪ್ಪಲಿ ಹೊಲೀತಿದ್ದ ಯುವಕನ ನೋಡಿ ಹುಟ್ಟಿದ ಕಥೆ 'ಅಂಬಾರಿ'
ಅದು ಲೂಸ್ ಮಾದ ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿದ್ದ ಕಾಲವದು. ಎಪಿ ಅರ್ಜುನ್ ಮೊದಲ ಸಿನಿಮಾ ನಿರ್ದೇಶನ. ಮೊದಲ ಪ್ರಯತ್ನದಲ್ಲೇ ವಿಭಿನ್ನವಾದ ಕಥೆಯನ್ನು ಹೇಳಬೇಕು ಅಂತ ಹೊರಟಿದ್ದರು. ಒಂದು ಭಾವನಾತ್ಮಕ ಟ್ರಾವೆಲ್ ಲವ್ ಸ್ಟೋರಿಯನ್ನು ಹೇಳಿದರೆ ಹೇಗೆ ಅನ್ನೋ ಆಲೋಚನೆಯಲ್ಲಿಯೇ ಸ್ಕ್ರಿಪ್ಟ್ ರೆಡಿಯಾಗಿತ್ತು. ಅದುವೇ 'ಅಂಬಾರಿ'.
'ಅಂಬಾರಿ' 2009ರಲ್ಲಿ ರಿಲೀಸ್ ಆಗಿತ್ತು. ಆರಂಭದಲ್ಲಿ ಒಂದೇ ವಾರ ಎಂದು ಭವಿಷ್ಯ ನುಡಿದಿದ್ದವರೇ ಹೆಚ್ಚು. ಆದರೆ, ಸಿನಿಮಾ 150 ದಿನ ಪ್ರದರ್ಶನ ಕಂಡಿತ್ತು. ಇದು ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿಗೂ ಅಚ್ಚರಿಯನ್ನೇ ಹುಟ್ಟಾಕಿತ್ತು. ಲೂಸ್ ಮಾದ ಹಾಗೂ ಸುಪ್ರಿತಾ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು.

ಕನ್ನಡ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ 'ಅಂಬಾರಿ' ಕೂಡ ಇದೆ. ಈ ಸಿನಿಮಾದ ಕಥೆ ಹುಟ್ಟಿಕೊಂಡಿದ್ದೇ ಒಂದು ವಿಶೇಷ ಸಂದರ್ಭದಲ್ಲಿ. ಎಪಿ ಅರ್ಜುನ್ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆ ಮುಂದೆ ಬಸ್‌ನಲ್ಲಿ ಹೋಗುತ್ತಿದ್ದಾಗ ನೋಡಿದ ಒಂದು ದೃಶ್ಯವನ್ನು ಇಟ್ಟುಕೊಂಡು ಕಥೆಯನ್ನು ಹೆಣೆದಿದ್ದರು. ಅಷ್ಟಕ್ಕೂ ಆ ದೃಶ್ಯ ಏನು? ಆ ದೃಶ್ಯ ಅಲ್ಲಿಂದ ಕಥೆಯ ರೂಪ ಪಡೆದುಕೊಂಡಿದ್ದೇಗೆ? ಅನ್ನೋದನ್ನು ನಿರ್ದೇಶಕ ಎಪಿ ಅರ್ಜುನ್ ಸ್ಪೀಡ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
'ಅಂಬಾರಿ' ಪ್ರೀತಿಯ ಒಂದು ಪಯಣ. ತನ್ನ ಪ್ರೇಯಸಿಯನ್ನು ಬೆಂಗಳೂರಿನಿಂದ ತಾಜ್ ಮಹಲ್‌ವರೆಗೂ ಸೈಕಲ್‌ನಲ್ಲಿ ಕರೆದುಕೊಂಡು ಹೋಗುವ ಕಥೆ. ಈ ಸಿನಿಮಾ ಕಥೆ ಹುಟ್ಟಿಕೊಂಡಿದ್ದರಿಂದ ಹಿಡಿದು ಸಿನಿಮಾ ಮೇಕಿಂಗ್, ಬಜೆಟ್, ಕಲೆಕ್ಷನ್‌ವರೆಗೂ ನಿರ್ದೇಶಕ ಎಪಿ ಅರ್ಜುನ್ ರಿವೀಲ್ ಮಾಡಿದ್ದಾರೆ. " ಎಂ.ಎಸ್.ರಾಮಯ್ಯ ಆಸ್ಪತ್ರೆ ಹತ್ತಿರ ಹೋಗುತ್ತಿದ್ದಾಗ ಒಂದು ಚಪ್ಪಲ್ ಅಂಗಡಿಯಲ್ಲಿ ಅಂಬಾರಿ ಕಥೆ ಹುಟ್ಟಿದ್ದು. ನಾನು ಬಸ್‌ನಲ್ಲಿ ಹೋಗುತ್ತಿದ್ದಾಗ ಒಂದು ಹುಡುಗಿ ವೇಲು ಸುತ್ತಿಕೊಂಡು, ಕಿತ್ತು ಹೋಗಿದ್ದ ಅವಳ ಚಪ್ಪಲಿಯನ್ನು ಹೊಲಿಸುತ್ತಿದ್ದಳು. ಯಾವುದೋ ಒಬ್ಬ ಹುಡುಗ ತಲೆಗೆಲ್ಲ ಎಣ್ಣೆ ಹಾಕೊಂಡು ಆ ಚಪ್ಪಲಿ ಹೊಲಿಯುತ್ತಿದ್ದ. ಅದೊಂದೇ ಒಂದು ಫ್ರೇಮ್ ಇಟ್ಕೊಂಡು ಅಂಬಾರಿ ಕಥ ಮಾಡಿದ್ದು" ಎಂದು ಎಪಿ ಅರ್ಜುನ್ ಹೇಳಿದ್ದಾರೆ.
'ಅಂಬಾರಿ' ಕಥೆ ಬರೆದ ಬಳಿಕ ಸಿನಿಮಾ ಹೇಗೆ ಟೇಕಾಫ್ ಆಯ್ತು. ಲೂಸ್ ಮಾದ ಯೋಗಿ ಆಯ್ಕೆ ಆಗಿದ್ದೇಗೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಅಂಬಾರಿ ಕಥೆ ಬರೆದು ಆದ್ಮೇಲೆ ಪರಮೇಶ್ ಅಂತ ಪಲ್ಲಕ್ಕಿ ಸಿನಿಮಾ ಮಾಡಿದ್ದಾರೆ. ಅವರು ಈ ಸಿನಿಮಾವನ್ನು ಮಾಡಬೇಕಿತ್ತು. ಅವರಿಗೆ ಹೋಗಿ ಕಥೆ ಹೇಳಿದಾಗ, ತುಂಬಾ ಚೆನ್ನಾಗಿದೆ ಸಿನಿಮಾ ಮಾಡೋಣ ಅಂತ ಹೇಳಿದರು. ಕಾರಣಾಂತರಗಳಿಂದ ಸಿನಿಮಾ ಮಾಡುವುದಕ್ಕೆ ಆಗಲಿಲ್ಲ. ಅದಾದ್ಮೇಲೆ ಯೋಗಿಗೆ ಈ ಸಿನಿಮಾ ಮಾಡಬೇಕು ಅನ್ನೋದು ತಲೆಯಲ್ಲಿತ್ತು. ಯಾಕಂದ್ರೆ, ಆ ಪಾತ್ರಕ್ಕೆ ಅವನು ಸರಿಯಾಗಿ ಕಾಣಿಸುತ್ತಿದ್ದ. ನಾನು ಹಾಗೂ ಪೆಟ್ರೋಲ್ ಪ್ರಸನ್ನ ಇಬ್ಬರೂ ಹೋಗಿ ಕಥೆ ಹೇಳಿದ್ವಿ" ಎಂದು ಎಪಿ ಅರ್ಜುನ್ ಹೇಳಿದ್ದಾರೆ.

ಈ ಸಿನಿಮಾ ಒಂದು ಟ್ರಾವೆಲ್ ಸ್ಟೋರಿ. ಹೀಗಾಗಿ ಇಡೀ ತಂಡ ಕೂಡ ಟ್ರಾವೆಲ್ ಮಾಡಬೇಕಿತ್ತು. 19 ದಿನ ಹೇಗೆ ಶೂಟ್ ಮಾಡಿದ್ರು ಅನ್ನೋದನ್ನು ಎಪಿ ಅರ್ಜುನ್ ಸ್ವಾರಸ್ಯಕರವಾಗಿ ಬಿಚ್ಚಿಟ್ಟಿದ್ದಾರೆ. "ಅಂಬಾರಿ ಅವತ್ತಿನ ಕಾಲಕ್ಕೆ 2.42 ಕೋಟಿ ರೂಪಾಯಿ ಬಜೆಟ್ ಆಗಿತ್ತು. ಆಗಿನ ಕಾಲಕ್ಕೆ ದೊಡ್ಡ ಬಜೆಟ್. ಯಾಕಂದ್ರೆ, ಬೆಂಗಳೂರಿನಿಂದ ತಾಜ್ ಮಹಲ್‌ವರೆಗೂ ಅವತ್ತಿನ ಕಾಲಕ್ಕೆ ಆರೇಳು ಗಾಡಿಗಳು ಜೊತೆಗೆ ಸೈಕಲ್ ತೆಗೆದುಕೊಂಡು ಹೋಗಿದ್ವಿ. ನೆಲಮಂಗಲದಿಂದ ಶೂಟ್ ಮಾಡಿಕೊಂಡು ಆಗ್ರವರೆಗೂ ಟ್ರಾವೆಲ್ ಮಾಡಿದ್ವಿ. ಆ ರೋಡ್ ಟ್ರಾವೆಲಿಂಗ್‌ನಲ್ಲಿ 19 ದಿನ ಶೂಟ್ ಮಾಡಿದ್ದೀವಿ. ಎಲ್ಲಿ ಜಾಗ ಚೆನ್ನಾಗಿದೆ, ಅಲ್ಲಿ ನಿಲ್ಲಿಸೋದು ಶೂಟ್ ಮಾಡೋದು. ಒಂದು ಟಿಟಿ, ಒಂದು ಬಸ್ಸು, ಒಂದು ಸ್ಕಾರ್ಪಿಯೋ, ಒಂದು ಇನೋವಾ, ಒಂದು ಆಕ್ಟೀವಾ ಹಾಗೂ ಅಂಬಾರಿ (ಸೈಕಲ್). ಹೀಗೆ 19 ದಿನ ಶೂಟ್ ಮಾಡಿಕೊಂಡು ಹೋಗಿದ್ದೇವೆ" ಅಂತಾರೆ ಎಪಿ ಅರ್ಜುನ್.
'ಅಂಬಾರಿ'ಯನ್ನು 2.42 ಕೋಟಿ ರೂಪಾಯಿಯಲ್ಲಿ ಮುಗಿಸಿದ್ದರು. ಇದು ಬಾಕ್ಸಾಫೀಸ್‌ನಲ್ಲಿ ಸುಮಾರು 7.50 ಕೋಟಿಯಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು ಎನ್ನುತ್ತಾರೆ ಅರ್ಜುನ್. "ಕಲೆಕ್ಷನ್ ವಿಷಯಕ್ಕೆ ಬಂದಾಗ ಅಂಬಾರಿಗೆ ಏನು ಖರ್ಚು ಮಾಡಿದ್ವೋ ಅದಕ್ಕೆ ಮೂರು ಪಟ್ಟು ಕಲೆಕ್ಷನ್ ಆಯ್ತು. ಬಿಸಿ ಸೆಂಟರ್‌ಗಳಲ್ಲಿ 150 ದಿನಗಳು ಕಲೆಕ್ಷನ್ ಆಗಿತ್ತು. ಬೆಂಗಳೂರಿಗಿಂತ ಹೊರಗಡೆ ಈ ಸಿನಿಮಾ ತುಂಬಾ ಚೆನ್ನಾಗಿ ಹೋಯ್ತು" ಎಂದು ಎಪಿ ಅರ್ಜುನ್ ಹೇಳಿದ್ದಾರೆ.
ಇನ್ನೂ 'ಅಂಬಾರಿ' ಲೂಸ್ ಮಾದ ಯೋಗಿ ಹಾಗೂ ಎಪಿ ಅರ್ಜುನ್ ಇಬ್ಬರಿಗೂ ಯಶಸ್ಸು ಕೊಟ್ಟ ಸಿನಿಮಾ. ಯುವಕರಿಗೆ, ಪ್ರೇಮಿಗಳಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಹರಿಕೃಷ್ಣ ಸಂಗೀತ, ಸತ್ಯ ಹೆಗ್ಡೆ ಕ್ಯಾಮರಾ ವರ್ಕ್ ಸಿನಿಮಾದ ಹೈಲೈಟ್‌ಗಳಾಗಿದ್ದವು.


Click it and Unblock the Notifications















