'ಮಾಂಗಲ್ಯಂ ತಂತುನಾನೇನ'ಗೆ ₹1.5 ಲಕ್ಷ ಕಮ್ಮಿ ಮ್ಯೂಸಿಕ್ ಮಾಡಲ್ಲ ಎಂದಿದ್ದ ವಿ.ಮನೋಹರ್; ಯಾಕೀ ಡಿಮ್ಯಾಂಡ್?
ಕ್ರೇಜಿಸ್ಟಾರ್ ಸಿನಿಮಾ ಶುರುಮಾಡಿದ್ಮೇಲೆ ಅಲ್ಲಿ ಹಂಸಲೇಖ ಇರಲೇಬೇಕಿತ್ತು. ನಾದ ಬ್ರಹ್ಮ ಟ್ಯೂನ್ ಹಾಕಲಿಲ್ಲ ಅಂದರೆ ಆ ಸಿನಿಮಾವನ್ನು ಅಭಿಮಾನಿಗಳೇ ನೋಡುತ್ತಿರಲಿಲ್ಲ. ಅಭಿಮಾನಿಗಳು ಥಿಯೇಟರ್ ಕಡೆ ಮುಖ ಮಾಡುವುದಕ್ಕೂ ಆಸಕ್ತಿ ತೋರುತ್ತಿರಲಿಲ್ಲ. ಹೀಗಾಗಿ ಮತ್ತೊಬ್ಬ ಸಂಗೀತ ನಿರ್ದೇಶಕ ಈ ಪ್ರಯತ್ನಕ್ಕೆ ಮುಂದಾಗುತ್ತಿರಲಿಲ್ಲ. ಹೀಗಿರುವಾಗ ರವಿಚಂದ್ರನ್ 'ಮಂಗಲ್ಯಂ ತಂತುನಾನೇನ' ಸಿನಿಮಾಗೆ ಟ್ಯೂನ್ ಹಾಕುವುದಕ್ಕೆ ವಿ.ಮನೋಹರ್ 1.5 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರು.
'ಮಂಗಲ್ಯಂ ತಂತುನಾನೇನ' ಮೇಕಿಂಗ್ ವೇಳೆ ಇದೊಂದು ಬಾರಿ ಸುದ್ದಿಯಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗೆ ವಿ.ಮನೋಹರ್ ಸಂಗೀತ ನೀಡಬೇಕು ಅಂತ ನಿರ್ಮಾಪಕರು ನಿರ್ಧಾರ ಮಾಡಿದ್ದರು. ಆದರೆ, ಈ ಸಿನಿಮಾ ಮಾಡುವುದಕ್ಕೆ ಒಂದೂವರೆ ಲಕ್ಷ ಡಿಮ್ಯಾಂಡ್ ಮಾಡುತ್ತಿದ್ದಾರೆಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ಅದ್ಯಾಕೆ ಅಷ್ಟೊಂದು ಡಿಮ್ಯಾಂಡ್ ಮಾಡಿದ್ದರು? ಹಂಸಲೇಖಗೆ ಒಂದು ವರ್ಷ ಯಾಕೆ ಮುಖ ತೋರಿಸಿರಲಿಲ್ಲ ಅನ್ನೋದನ್ನು ರ್‍ಯಾಪಿಡ್ ರಶ್ಮಿ ನಡೆಸಿಕೊಡುವ ಜಸ್ಟ್ ಕ್ಯೂರಿಯಸ್ ಕನ್ನಡ ಕ್ಲಿಪ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.

ರವಿಚಂದ್ರನ್ ಅವರ 'ಮಂಗಲ್ಯಂ ತಂತುನಾನೇನ' ಸಿನಿಮಾಗೆ ಮ್ಯೂಸಿಕ್ ಮಾಡುವುಕ್ಕೆ ಒಂದೂವರೆ ಲಕ್ಷ ಸಂಭಾವನೆ ಕೇಳಿದ್ದನ್ನು ವಿ.ಮನೋಹರ್ ಒಪ್ಪಿಕೊಂಡಿದ್ದಾರೆ. "ನಾನು ಪಿಕ್ಚರ್ ಅನ್ನ ಬಿಟ್ಟು ಹೋಗಲಿ. ನನಗೆ ಬೇಡ ಅಂತ ಡಿಮ್ಯಾಂಡ್ ಮಾಡಿದ್ದೆ. ಅದು ನೋಡಿದರೆ ಒಂದೂವರೆ ಲಕ್ಷ ಅವರಿಗೆ ಏನೇನೂ ಅಲ್ಲ. ಅವರು ತೆಲುಗಿನವರು. ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡುವವರು. ಚಿರಂಜೀವಿಯ ಭಾಮೈದ ಅಲ್ಲು ಅರವಿಂದ್ ಅವರು ನಿರ್ಮಾಪಕರು. ಅವರಿಗೆ ಒಂದೂವರೆ ಲಕ್ಷ ಯಾವ ಲೆಕ್ಕ." ಎಂದು ಸಂಭಾವನೆ ಕೇಳಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ವಿ.ಮನೋಹರ್ ವಿಡಿಯೋಕಾನ್ ಅವಾರ್ಡ್‌ಗೆ ಹೈದರಾಬಾದ್‌ಗೆ ಹೋಗಿದ್ದರು. ಮಾರನೇ ದಿನ ಮನೆಗೆ ಬಂದರೆ, ನಮ್ಮ ಮನೆಯಲ್ಲಿ ಜಾನ್, ರಾಜಶೇಖರ್, ರವಿವರ್ಮಾ ಅವರೆಲ್ಲ ಇದ್ದರು. ಅವರು ಬಂದು ಅಣ್ಣ ಚಂಪಕಧಾಮ ಅಂತ ಹಾಗೂ ಅಲ್ಲು ಅರವಿಂದ್ ಅವರ ಮ್ಯಾನೇಜರ್ ಬಂದಿದ್ದರು. ನೀವು ಒಂದು ಸಿನಿಮಾಗೆ ಮ್ಯೂಸಿಕ್ ಮಾಡಬೇಕಂತೆ. ಆಗೆಲ್ಲ ಮೊಬೈಲ್ ಇರಲಿಲ್ಲ. ಮಾರನೇ ದಿನ ರಾಮ್‌ರಾಜ್ ಹಾಗೂ ಮ್ಯಾನೇಜರ್ ಚಂಪಕಧಾಮ ಬಂದು, ಇದು ರವಿಚಂದ್ರನ್ ಸಿನಿಮಾ ಅಂತ ಹೇಳಿದ್ದರು. ಅಲ್ಲಿಗೆ ವಿ.ಮನೋಹರ್‌ಗೆ ತಾನು ಪೇಚಿಗೆ ಸಿಕ್ಕಿಕೊಂಡಿದ್ದರು ಅವರಿಗೆ ಬಂತು.
"ನಾನು ಅವರಿಗೆ ರವಿಚಂದ್ರನ್ ಅವರ ಸಿನಿಮಾವನ್ನು ನಾವು ಮಾಡುವಂತಿಲ್ಲ ಎಂದು ಹೇಳಿದೆ. ಯಾಕೆ ಅಂದರೆ, ನಮ್ಮ ಗುರುಗಳು ಹಂಸಲೇಖ ಸರ್ ಮಾಡುತ್ತಾರೆ. ನಾವು ಮಾಡಿದರೆ ತಪ್ಪಾಗುತ್ತೆ ಅಂದೆ. ಹೇ.. ಅದೆಲ್ಲ ಹೇಗಾಗುತ್ತೆ. ನಮ್ಮ ಪ್ರಡ್ಯೂಸರ್ ಡಿಸೈಡ್ ಮಾಡಿದ್ದು, ಬೇಕಿದ್ದರೆ ಕೇಳಿ ರಾಮ್‌ರಾಜ್ ಇಲ್ಲೇ ಇದ್ದಾರೆ ಅಂದರು. ಯಾಕ್ರಿ ಮಾಡಲ್ಲ ಅಂತ ಹತ್ತು ಸಾವಿರ ಟೆಬಲ್ ಮೇಲೆ ಇಟ್ಟರು. ತಗೊಂಡು ಹೋಗಿ ನಾನು ಮಾಡುವುದಿಲ್ಲ ಎಂದು ಹಠ ಮಾಡಿದೆ. ಇಲ್ಲಾ ರೀ ನೀವು ತಗೋಬೇಕು. ನೀವೇ ಮ್ಯೂಸಿಕ್ ಮಾಡಬೇಕು ಅಂತ ಹೇಳಿದ್ದಾರೆ. ಆ ದುಡ್ಡು ಹಾಗೇ ಟೆಬಲ್ ಮೇಲೆ ಇತ್ತು. ನಮ್ಮ ಹುಡುಗರಿಗೂ ಹೇಳಿದೆ. ಆ ದುಡ್ಡು ಹಾಗೇ ಇರಲಿ ಅವರು ನಾಳೆ ಬಂದಾಗ ಕೊಟ್ಟು ಬಿಡೋಣ ಅಂದೆ." ಎಂದು ವಿ. ಮನೋಹರ್ ಆ ಸನ್ನಿವೇಶವನ್ನು ಸಂದರ್ಶನದ ವೇಳೆ ವಿವರಿಸಿದ್ದಾರೆ.

ವಿ.ಮನೋಹರ್ ನಿರೀಕ್ಷೆ ಮಾಡಿದಂತೆ ಮಾರನೇ ದಿನ ಮತ್ತೆ ಬಂದರು. ಯಾವಾಗ ಕಂಪೋಸಿಂಗ್ ಅಂತ ಕೇಳಿದರು. ವಿ.ಮನೋಹರ್ ಅವರದ್ದು ಅದೇ ಉತ್ತರ ಆಗಿತ್ತು. ನಾನು ಕಂಪೋಸಿಂಗ್ ಮಾಡುವುದಿಲ್ಲ ಎಂದರು. ನೀವು ಮಾಡಬೇಕು ಅಂತ ಪ್ರಡ್ಯೂಸರ್ ಅವರೇ ಹೇಳಿದ್ದಾರೆ ಅಂದಿದ್ದರು. ಆಗ ವಿ.ಮನೋಹರ್ ನಾನು ಹಂಸಲೇಖ ಅವರ ಬಳಿ ಕೇಳಿದ ಮೇಲೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದರು. ಆಗ ಮ್ಯಾನೇಜರ್‌ನಿಂದ ಬಂದ ಉತ್ತರ ಪೇಚಿಗೆ ಸಿಲುಕಿಸಿತ್ತು.
"ರೀ ನಾವು ಹಂಸಲೇಖ ಅವರಿಗೆ ಆಗಲೇ ನೀವು ಅಡ್ವಾನ್ಸ್ ತೆಗೆದುಕೊಂಡಿದ್ದೇನೆ ಅಂತ ಹೇಳಿದ್ದೀವಿ ಅಂದರು. ನನಗೆ ಆಕಾಶವೇ ಕಳಚಿ ಬಿದ್ದ ಹಾಗೆ ಆಯ್ತು. ಈಗ ಹೇಳುವುದಕ್ಕೆ ಹೋದರೆ ಹಂಸಲೇಖ ಸರ್ ಏನಂತಾರೆ. ಅಡ್ವಾನ್ಸ್ ತೆಗೆದುಕೊಂಡು ನಾಟಕ ಮಾಡುತ್ತಾರೆ ಅಂತ ಅನಿಸುವುದಿಲ್ವಾ? ನೀವು ಯಾರನ್ನು ಕೇಳಿ ಹೇಳಿದ್ರಿ. ಸರ್ ಏನು ಅಂದುಕೊಳ್ತಾರೆ? ನಿಮ್ಮ ದುಡ್ಡು ಇಲ್ಲೇ ಇದೆ. ತೆಗೆದುಕೊಂಡು ಹೋಗಿ. ನಾನು ಮಾಡುವುದೇ ಇಲ್ಲ ಎಂದು ಹೇಳಿದೆ. ಆಗ ಚಂಪಕಧಾಮ ಹಾಗೂ ರಾಮ್‌ರಾಜ್ ಅವರಿಗೆ ಅಪ್‌ಸೆಟ್ ಆಯ್ತು. ಆಗ ನಮ್ಮ ಮನೆಯ ಫೋನ್‌ನಿಂದಾನೇ ರವಿಚಂದ್ರನ್ ಸರ್ ಮನೆಗೆ ಫೋನ್ ಮಾಡಿದ್ರು." ಎಂದು ಆ ಘಟನೆಯನ್ನು ವಿವರಿಸಿದ್ದಾರೆ.
ಆಗ ರವಿಚಂದ್ರನ್ ಅವರು ಫೋನ್ ತೆಗೆದುಕೊಂಡರು ವಿ.ಮನೋಹರ್ ಅವರಿಗೆ ಒಂದು ಕ್ಲಾರಿಟಿ ಕೊಟ್ಟರು. ಅವರು ಹೇಳಿದ ಮೇಲೆ ಮಾಂಗಲ್ಯಂ ತಂತುನಾನೇನ ಸಿನಿಮಾಗೆ ಟ್ಯೂನ್ ಹಾಕುವುದಕ್ಕೆ ವಿ.ಮನೋಹರ್ ಒಪ್ಪಿದ್ದು. "ಮನೋಹರ್ ಇದು ನಿಮ್ಮ ನಿರ್ಧಾರನೂ ಅಲ್ಲ. ನನ್ನ ನಿರ್ಧಾರನೂ ಅಲ್ಲ. ಹಂಸಲೇಖ ಅವರಿಗೆ ಪ್ರೀತ್ಸೋದ್ ತಪ್ಪಾ ಸಿನಿಮಾ ಕೊಟ್ಟಿದ್ದೀವಿ. ಇನ್ನೊಂದು ಸಿನಿಮಾ ನಿಮಗೆ ಅಂತ ಪ್ರಡ್ಯೂಸರ್ ಡಿಸೈಡ್ ಮಾಡಿದ್ದಾರೆ. ನೀವು ಸಂಕೋಚ ಎಲ್ಲ ಮಾಡಿಕೊಳ್ಳಬೇಡಿ. ನೀವು ಮಾಡಿ ಎಂದು ರವಿಚಂದ್ರನ್ ಅವರೇ ಹೇಳಿದ ಮೇಲೆ ನಾನು ಮುಲಾಜಿಗೆ ಸಿಕ್ಕಿಕೊಂಡು ಆಯ್ತು ಅಂತ ಒಪ್ಪಿಕೊಂಡೆ. ಅದಾದ್ಮೇಲೆ ನಾನು ಒಂದು ವರ್ಷ ಹಂಸಲೇಖ ಸರ್‌ಗೆ ಮುಖವನ್ನೇ ತೋರಿಸಲಿಲ್ಲ. ಒಂದು ವರ್ಷ ಆದ್ಮೇಲೆ ಆಕಾಶ್ ಸ್ಟುಡಿಯೋದಲ್ಲಿ ಮುಖಾ ಮುಖಿ ಆಯ್ತು. ಆಗ ತಬ್ಬಿಕೊಂಡು ಪರ್ವಾಗಿಲ್ಲ ಕಣೋ ಚೆನ್ನಾಗಿ ಮಾಡಿದ್ದೀಯ ಅಂತ ಹೇಳಿದರು. ಆಗ ನನಗೆ ಸಮಾಧಾನ ಆಯ್ತು." ಎಂದು ವಿ.ಮನೋಹರ್ ಹೇಳಿದ್ದಾರೆ.
ಇಷ್ಟೊತ್ತಿಗಾಗಲೇ ರವಿಚಂದ್ರನ್ ಹಾಗೂ ಹಂಸಲೇಖ ಅವರ ಸಂಬಂಧದಲ್ಲಿ ಬಿರುಕು ಬಿಡುವುದಕ್ಕೆ ಶುರುವಾಗಿತ್ತು. ಇಬ್ಬರ ನಡುವೆ ಮನಸ್ತಾಪ ಬೆಳೆದಿತ್ತು. ಹೀಗಾಗಿ ರವಿಚಂದ್ರನ್ ಬೇರೆ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡುವುದಕ್ಕೆ ಮುಂದೆ ಬಂದಿದ್ದರು.
'ಮಂಗಲ್ಯಂ ತಂತುನಾನೇನ' ಹೇಳಿ ಕೇಳಿ ತೆಲುಗು ನಿರ್ಮಾಪಕರು ನಿರ್ಮಾಣ ಮಾಡುತ್ತಿರುವ ಸಿನಿಮಾ ಆಗಿತ್ತು. ಹೀಗಾಗಿ ವಿ.ಮನೋಹರ್ ಅವರೇ ಹೇಳಿದಂತೆ ಸಂಗೀತ ನಿರ್ದೇಶಕರನ್ನು ಬದಲಾಯಿಸುವುದಕ್ಕೆ ನಿರ್ಧರಿಸಿದ್ದರು. ಅದರಂತೆ ವಿ.ಮನೋಹರ್‌ಗೆ ಕ್ರೇಜಿಸ್ಟಾರ್ ಸಿನಿಮಾಗೆ ಟ್ಯೂನ್ ಹಾಕುವುದಕ್ಕೆ ಅವಕಾಶ ಸಿಕ್ಕಿತ್ತು. ನಿರೀಕ್ಷೆಯಂತೆ ರವಿಚಂದ್ರನ್ ನಟಿಸಿದ ಈ ಸಿನಿಮಾ ಹಾಡುಗಳು ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಹಾಡುಗಳು ಸೂಪರ್ ಹಿಟ್ ಆಗಿದ್ದವು.
ಹಂಸಲೇಖ ಟ್ಯೂನ್ ಹಾಕದೇ ಇದ್ದಿದ್ದರೆ, ರವಿಚಂದ್ರನ್ ಹಾಡುಗಳು ಹೇಗೆ ಬರುತ್ತವೆ? ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆ ನಿರೀಕ್ಷೆಯಂತೆ ವಿ.ಮನೋಹರ್ ಹಾಡುಗಳನ್ನು ಕಂಪೋಸ್ ಮಾಡಿದ್ದರು. ಈ ಸಿನಿಮಾ ನೋಡಿದ ಬಳಿಕ ಯಾರಿಗೂ ಹೆಚ್ಚೇನು ವ್ಯತ್ಯಾಸ ಕಂಡು ಬಂದಿರಲಿಲ್ಲ. ಒಂದೊಂದು ಹಾಡುಗಳು ಕಣ್ಣಿಗೆ ಹಬ್ಬದಂತಿತ್ತು. ಇಲ್ಲಿ ನಾದ ಬ್ರಹ್ಮ ಹಂಸಲೇಖ ಅವರ ಸಂಗೀತ ಮಿಸ್ ಆಗಿತ್ತೇ ವಿನ: ಕ್ರೇಜಿ ಸ್ಟಾರ್ ಕಲ್ಪನೆಗಳು ಮಿಸ್ ಆಗಿರಲಿಲ್ಲ. ಕೊನೆಗೂ 'ಮಾಂಗಲ್ಯಂ ತಂತುನಾನೇನ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು.


Click it and Unblock the Notifications











