ವಿಷ್ಣುದಾದಗೆ ಮೆಗಾ ಹಿಟ್ ಕೊಟ್ಟ 'ಸೂರ್ಯವಂಶ'ದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಅಣ್ಣಾವ್ರ ಏನಂದಿದ್ರು?
'ಸೂರ್ಯವಂಶ' ಸಾಹಸ ಸಿಂಹ ವಿಷ್ಣುವರ್ಧನ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಯಶಸ್ಸು ಕಂಡ ಸಿನಿಮಾಗಳಲ್ಲಿ ಒಂದು. ಸಿಲ್ವರ್ ಜುಬಿಲಿ ಕಂಡು ಬಾಕ್ಸಾಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡ ಸಿನಿಮಾ. ಕೌಟುಂಬಿಕ ಹಿನ್ನೆಲೆಯುಳ್ಳ ಈ ಸಿನಿಮಾದಲ್ಲಿ ಮನರಂಜನೆಗೂ ಹೆಚ್ಚು ಒತ್ತು ನೀಡಲಾಗಿತ್ತು. ವಿಷ್ಣುವರ್ಧನ್ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಇದ್ದ ಈ ಸಿನಿಮಾ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸಿನಿಮಾ ಆಯ್ತು.
ವಿಷ್ಣುವರ್ಧನ್ ನಟಿಸಿದ 'ಸೂರ್ಯವಂಶ' ಸಿನಿಮಾದ ಹಿಂದೆ ಅದ್ವುತ ಕಥೆಗಳಿವೆ. ಈ ಸಿನಿಮಾ ಶುರುವಾಗಿದ್ದೇ ಒಂದು ಇಂಟ್ರೆಸ್ಟಿಂಗ್ ಕಹಾನಿ. ಹಾಗೇ ಸಿನಿಮಾ ರಿಲೀಸ್ ಆಗಿದ್ದೂ ಕೂಡ ಇನ್ನೊಂದು ಕಥೆ. ಆರಂಭದಲ್ಲಿ ವಿಷ್ಣುದಾದನ ಗೆಟಪ್ ನೋಡಿ ಸಿನಿಮಾ ಮಂದಿ ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದರಂತೆ. ಸಾಹಸ ಸಿಂಹನನ್ನು ಪಂಚೆ ಹಾಗೂ ಜುಬ್ಬದಲ್ಲಿ ನೋಡಿ ಈ ಸಿನಿಮಾ ಚೆನ್ನಾಗಿ ಎಂದು ಟೀಕೆಗಳನ್ನು ಮಾಡಿದ್ದರು ಎಂದು ಎಸ್.ನಾರಾಯಣ್ ಅವರೇ ಹೇಳಿಕೊಂಡಿದ್ದಾರೆ.

'ಸೂರ್ಯವಂಶ' ರಿಮೇಕ್ ಆಗಿದ್ದರೂ, ಕನ್ನಡದಲ್ಲಿ ಅತೀ ದೊಡ್ಡ ಯಶಸ್ಸು ಕಂಡ ಸಿನಿಮಾ. ಸುಮಾರು 35 ವಾರ ಒಂದೇ ಚಿತ್ರಮಂದಿರದಲ್ಲಿ ಯಶಸ್ಸು ಕಂಡ ಸಿನಿಮಾವಿದು. ಹಾಗಿದ್ದರೆ, ಇಷ್ಟು ದೊಡ್ಡ ಸಕ್ಸಸ್ ಕಂಡಿದ್ದ 'ಸೂರ್ಯವಂಶ' ಆಗ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಎಷ್ಟು ಕೋಟಿ? ಮೊದಲ ಮೂರು ವಾರ ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳು ನಾಲ್ಕನೇ ವಾರದಿಂದ ಹೌಸ್‌ಫುಲ್ ಆಗಿದ್ದು ಹೇಗೆ? ತಿಳಿಯುವುದಕ್ಕೆ ಮುಂದೆ ಓದಿ.
ಮೇನಕಾ ಚಿತ್ರಮಂದಿರದಲ್ಲಿ 35 ವಾರ ಪ್ರದರ್ಶನ
'ಸೂರ್ಯವಂಶ' ಸಿನಿಮಾವನ್ನು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಬಿಡುಗಡೆ ಮಾಡುವಾಗ ಬೆಂಗಳೂರಿನಲ್ಲಿ ಚಿತ್ರಮಂದಿರವೇ ಸಿಕ್ಕಿರಲಿಲ್ಲ. ವಿಷ್ಣುವರ್ಧನ್ ಅಂತ ಮೇರು ನಟನ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಪರದಾಡಬೇಕಾದ ಸ್ಥಿತಿ ನಿರ್ಮಾಣ ಆಗಿತ್ತು. ಆಗ ಎಚ್.ಡಿ ಕುಮಾರಸ್ವಾಮಿ ಮೇನಕಾ ಚಿತ್ರಮಂದಿರವನ್ನು ರಿಪೇರಿ ಮಾಡಿಸಿ, ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಅಲ್ಲಿಗೆ ಜನರೇ ಬರುವುದಿಲ್ಲ ಎಂದುಕೊಂಡಿದ್ದವರಿಗೆ ಅಚ್ಚರಿ ಕಾದಿತ್ತು. ಈ ಸಿನಿಮಾ ಅದೇ ಚಿತ್ರಮಂದಿರದಲ್ಲಿ ಸುಮಾರು 35 ವಾರ ಪ್ರದರ್ಶನ ಕಂಡಿತ್ತು.

ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಎಸ್.ನಾರಾಯಣ್ ನಿರ್ದೇಶಿಸಿದ್ದ 'ಸೂರ್ಯವಂಶ'ದಲ್ಲಿ ದೊಡ್ಡ ತಾರಾಗಣವೇ ಇತ್ತು. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದರು. ಮುಖ್ಯಮಂತ್ರಿ ಚಂದ್ರು, ರಮೇಶ್ ಭಟ್, ದೊಡ್ಡಣ್ಣ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ಇತ್ತು. ಇದೊಂದು ಫ್ಯಾಮಿಲಿ ಸಿನಿಮಾ ಆಗಿದ್ದರಿಂದ ಕುಟುಂಬ ಸಮೇತ ಬಂದು ಸಿನಿಮಾ ನೋಡಿದ್ದರು. ಬೆಂಗಳೂರು, ಮೈಸೂರು ಭಾಗಗಳಲ್ಲಿ ಈ ಸಿನಿಮಾ ಸುಮಾರು 40 ವಾರಗಳ ಕಾಲ ಪ್ರದರ್ಶನ ಕಂಡಿದ್ದು ಇತಿಹಾಸ. ಅಂದಿನ ಕಾಲಕ್ಕೆ ಈ ಸಿನಿಮಾ ಸುಮಾರು 18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿದೆ.
'ಸೂರ್ಯವಂಶ' ದಾಖಲೆ ಆಯ್ತು
'ಸೂರ್ಯವಂಶ' ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ಎಸ್.ನಾರಾಯಣ್ ಇಂದಿಗೂ ಹೆಮ್ಮೆ ಪಡುತ್ತಾರೆ. ಯಾಕಂದ್ರೆ ಇದು ಅವರ ವೃತ್ತಿ ಬದುಕಿನಲ್ಲೂ ಅತೀ ದೊಡ್ಡ ಯಶಸ್ಸು ಕಂಡ ಸಿನಿಮಾ. "ಸೂರ್ಯವಂಶ ನಾವು ಶುರು ಮಾಡಿದಾಗ ಈ ಮಟ್ಟಿಗೆ ಯಶಸ್ವಿ ಆಗುತ್ತೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಅದು ಚಿತ್ರ ಆಗುತ್ತೆ ಅಂದುಕೊಂಡ್ವಿ. ಅದು ದಾಖಲೆ ಆಗಿ ಹೋಯ್ತು. ಮನೆ ಮನೆಯ ಕತೆ ಆಗಿ ಹೋಯ್ತು. ಪ್ರತಿ ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಒಂದು ಜಾಗ ತೆಗೆದುಕೊಳ್ತು." ಎಂದು ಈ ಸಂಜೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಯಾಕಷ್ಟು ಸಕ್ಸಸ್ ಆಯ್ತು?
ಸಿನಿಪ್ರಿಯರಿಗೆ 'ಸೂರ್ಯವಂಶ' ಇಂದಿಗೂ ಫೇವರಿಟ್ ಸಿನಿಮಾ. ಆ ಸಿನಿಮಾದ ಪ್ರತಿಯೊಂದು ಸೀನ್ ಅನ್ನು ನೋಡಿ ಎಂಜಾಯ್ ಮಾಡುತ್ತಾರೆ. "1999 ಸೂರ್ಯವಂಶ ಬಿಡುಗಡೆಯಾಗಿದ್ದು, ಇವತ್ತಿಗೂ ಫ್ರೆಶ್ ಆಗಿದೆ. ಯಾಕೆ ಅಂದರೆ, ಮೌಲ್ಯಗಳು ಇವೆ. ಅದನ್ನು ಇಂದಿನ ಪೀಳಿಗೆ ಹುಡುಕುತ್ತಿವೆ. ಈ ಸಿನಿಮಾ ಹಳೆಯದ್ದು ಅಂತ ಹೇಳುವುದಕ್ಕೆ ಬರುವುದೇ ಇಲ್ಲ. ಮೌಲ್ಯಗಳು ಇದ್ದರೆ, ಆ ಸಿನಿಮಾಗೆ ಯಾವಾಗಲೂ ಬೆಲೆ ಇರುತ್ತೆ." ಎಂದು ಸಿನಿಮಾ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಮೊದಲ 3 ವಾರ ಥಿಯೇಟರ್ ಖಾಲಿ ಖಾಲಿ
ಆರಂಭದ ದಿನಗಳಲ್ಲಿ ಈ ಸಿನಿಮಾ ಬಗ್ಗೆ ಅಪಪ್ರಚಾರ ಆಗಿರುತ್ತೆ. ಈ ಸಿನಿಮಾ ವಿಷ್ಣುದಾದಾಗೆ ಸೂಟ್ ಆಗುತ್ತಿಲ್ಲ ಎಂಬ ಮಾತು ಹರಡಿರುತ್ತೆ. ಪಂಚೆ ಸೂಟ್ ಆಗುತ್ತಿಲ್ಲ, ಈ ಸಿನಿಮಾ ಓಡಲ್ಲ ಅಂತ ಟೀಕೆಗಳು ಎದ್ದಿರುತ್ತೆ. ಆದರೆ, ಎಸ್.ನಾರಾಯಣ್ ಈ ಕಮೆಂಟ್‌ಗಳಿಗೆ ತಲೆ ಕೆಡಿಸಿಕೊಂಡಿರಲ್ಲ. ಮೂರು ವಾರ ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳು ನಾಲ್ಕನೇ ವಾರದಿಂದ ಹೌಸ್‌ಫುಲ್ ಆಗುತ್ತವೆ. "ಸಿನಿಮಾ ಬಿಡುಗಡೆಯಾಗಿ ಮೂರು ವಾರದವರೆಗೂ ನನಗೆ ಒಳ್ಳೆಯ ಪ್ರಶಂಸೆ ಬರಲಿಲ್ಲ. ಸಿನಿಮಾ ಡಬ್ಬ ಅಂತ ಹೇಳಿದರು. ಚೆನ್ನಾಗಿಲ್ಲ ಸಿನಿಮಾ. ವಿಷ್ಣುವರ್ಧನ್ ಪಂಚೆ ಉಟ್ಟಿದ್ದೆಲ್ಲ ಚೆನ್ನಾಗಿಲ್ಲ ಅಂತ ಬರೀ ಬ್ಯಾಡ್ ಕಮೆಂಟ್ಸ್ ಬಂದಿತ್ತು. ನಾವು ತಲೆಕೆಡಿಸಿಕೊಳ್ಳಲಿಲ್ಲ. ಆರಂಭದಲ್ಲಿ ದೊಡ್ಡ ಮಟ್ಟಕ್ಕೆ ಓಪನಿಂಗ್ ತೆಗೆದುಕೊಂಡಿಲ್ಲ. ನಾಲ್ಕನೇ ವಾರ ತೆಗೆದುಕೊಂಡ ಪಿಕಪ್ ಆಯ್ತಲ್ಲ ಅದು ಅದ್ಭುತ." ಎಂದು ಎಸ್.ನಾರಾಯಣ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಈಶ್ವರಿ ಬ್ಯಾನರ್‌ನಲ್ಲಿ ಸಿನಿಮಾ ಆಗ್ಬೇಕಿತ್ತು
"ಈ ಸಿನಿಮಾವನ್ನು ಈಶ್ವರಿ ಬ್ಯಾನರ್ಸ್‌ನಲ್ಲಿ ಮಾಡಬೇಕಿತ್ತು. ಆ ಸಿನಿಮಾಗೆ ನಾನೇ ಡೈರೆಕ್ಟರ್. ಸ್ಕ್ರಿಪ್ಟ್ ಎಲ್ಲಾ ಮಾಡಿಬಿಟ್ಟಿದ್ದೆ ನಾನು. ಇವರು ರೈಟ್ಸ್ ತೆಗೆದುಕೊಳ್ಳುವುದಕ್ಕೆ ಹೋಗುವುದು ಸ್ವಲ್ಪ ಲೇಟ್ ಆಯ್ತು. ಹಾಗಾಗಿ ಕುಮಾರಸ್ವಾಮಿಯವರು ಹಕ್ಕುಗಳನ್ನು ಖರೀದಿಸಿದ್ದರು. ಅವರು ತೆಗೆದುಕೊಂಡ್ರಲ್ಲ ಅಂತ ಬಿಟ್ಟು ಬೇರೆ ಸಿನಿಮಾ ಸ್ಕ್ರಿಪ್ಟ್‌ನಲ್ಲಿ ಕೂತುಬಿಟ್ಟೆ. ಕುಮಾರಸ್ವಾಮಿಯವರು ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ, ಅವರನ್ನು ನಾಯಕರು ಅಂತ ಗುರುತು ಮಾಡಿದ ಮೇಲೆ ನನ್ನ ಬಳಿ ಬಂದರು. ಹಾಗಾಗಿ ನನಗೆ ಅವಕಾಶ ಸಿಕ್ಕಿತು." ಎನ್ನುತ್ತಾರೆ ಎಸ್.ನಾರಾಯಣ್.
ಬ್ಯಾಕ್ ಟಿಕೆಟ್ ಮಾರಿ ಮನೆ ಕಟ್ಟಿದ
'ಸೂರ್ಯವಂಶ' ಸಿನಿಮಾ ಮಾಡಿ ಎಸ್. ನಾರಾಯಣ್ ಬೇರೊಂದು ಸಿನಿಮಾದ ಶೂಟಿಂಗ್‌ಗೆ ಹುಬ್ಬಳ್ಳಿಗೆ ಹೋಗಿದ್ದರು. ಆ ವೇಳೆ ಅಲ್ಲೊಬ್ಬ ಓಡಿ ಬಂದು ಐದು ನಿಮಿಷ ಇಲ್ಲೇ ಇರುವಂತೆ ಹೇಳಿ ಹೋದ. ಕೇವಲ ಐದು ನಿಮಿಷಗಳಲ್ಲಿ ವಾಪಾಸ್ ಬಂದು ಎಸ್ ನಾರಾಯಣ್‌ಗೆ ಹಾರ ಹಾಕಿದ್ದ. ಇದು ಎಸ್.ನಾರಾಯಣ್‌ಗೆ ಶಾಕಿಂಗ್ ಆಗಿತ್ತು. ಯಾಕಂದ್ರೆ, ಸೂರ್ಯವಂಶ ಸಿನಿಮಾದ ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಿ ಆತ ಮನೆ ಕಟ್ಟಿಸಿದ್ದನಂತೆ. ಈ ವಿಷಯವನ್ನು ಕೂಡ ಎಸ್.ನಾರಾಯಣ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವಿಷ್ಣು ಮೀಸೆಗೆ ಅಣ್ಣಾವ್ರ ಕಮೆಂಟ್
ಸೂರ್ಯವಂಶ ಬಳಿಕ ಎಸ್.ನಾರಾಯಣ್ ಶಬ್ಧವೇದಿ ಮಾಡುವುದಕ್ಕೆ ಮುಂದಾಗಿದ್ದರು. ಆಗ ಒಮ್ಮೆ ಡಾ.ರಾಜ್‌ಕುಮಾರ್ ನ್ಯೂಸ್ ಪೇಪರ್ ಓದುತ್ತಿರುತ್ತಾರೆ. ಆಗ ಸೂರ್ಯವಂಶ ಸಿನಿಮಾ ಜಾಹೀರಾತು ಬಂದಿರುತ್ತೆ. ಆಗ ವಿಷ್ಣುದಾದ ಅವರ ಫೋಟೋ ನೋಡಿ ಎಲ್ಲರಿಗೂ ಈ ಮೀಸೆ ಒಪ್ಪುವುದಿಲ್ಲ. ನೋಡಿದ ಕೂಡಲೇ ಆರ್ಟಿಫೀಷಿಯಲ್ ಅಂತ ಅನಿಸುತ್ತೆ. ವಿಷ್ಣುವರ್ಧನ್ ಅವರಿಗೆ ಇದು ಒಪ್ಪುತ್ತೆ ಎಂದು ಅಣ್ಣಾವ್ರು ನಿರ್ದೇಶಕ ಎಸ್.ನಾರಾಯಣ್ ಬಳಿಕ ಹೇಳಿದ್ದರಂತೆ. ಆಗ ಕೂಡಲೇ ಎಸ್.ನಾರಾಯಣ್ ಅವರು ವಿಷ್ಣುಸರ್‌ಗೆ ಹೇಳಿ ಖುಷಿ ಪಡುತ್ತಾರೆ ಎಂದಿದರಂತೆ. ಆಗ ಎಸ್.ನಾರಾಯಣ್ ಅವರೇ ಫೋನ್ ಮಾಡಿ ಕೊಡುತ್ತಾರೆ. ಆಗ ಅಣ್ಣಾವ್ರೇ ಫೋನ್ ಮಾಡಿ ವಿಷ್ಣುವರ್ಧನ್ ಅವರಿಗೆ ಈ ವಿಷಯವನ್ನು ಹೇಳಿದಾಗ ಖುಷಿ ಪಟ್ಟಿದ್ದರಂತೆ.


Click it and Unblock the Notifications











