'ಆಕಸ್ಮಿಕ' ಸಿನಿಮಾಗೆ ಕಥೆ ಹೇಳುವಾಗ ಉದಯಶಂಕರ್ ಎದ್ದು ಹೋಗಿದ್ದೇಕೆ? ಅಣ್ಣಾವ್ರ ಮನೆ ಕಡೆಗೂ ಸುಳಿಯಲಿಲ್ಲ ಏಕೆ?
ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ರಾಜ್‌ಕುಮಾರ್ ಹಾಗೂ ಉದಯಶಂಕರ್ ಜೋಡಿ ಕೂಡ ಒಂದು. ಅಣ್ಣಾವ್ರು ನಟಿಸಿದ ಸಿನಿಮಾದಲ್ಲಿ ಒಂದು ಹಾಡನ್ನಾದರೂ ಉದಯಶಂಕರ್ ಬರೆಯುತ್ತಿದ್ದರು. ಆಮಟ್ಟಿಗೆ ಈ ಜೋಡಿ ಕೆಲಸ ಮಾಡುತ್ತಿತ್ತು. ಆದರೆ, ಒಂದು ಸಿನಿಮಾದಲ್ಲಿ ಉದಯಶಂಕರ್ ಕೆಲಸ ಮಾಡಲಿಲ್ಲ. ಅದುವೇ 'ಆಕಸ್ಮಿಕ'. ನಾಗಾಭರಣ ನಿರ್ದೇಶಿಸಿದ ಈ ಸಿನಿಮಾದಲ್ಲಿ ಉದಯಶಂಕರ್ ಒಂದು ಹಾಡನ್ನೂ ಬರೆಯಲಿಲ್ಲ ಯಾಕೆ?
'ಆಕಸ್ಮಿಕ' ಸಿನಿಮಾವನ್ನು ಶಿವರಾಜ್‌ಕುಮಾರ್‌ಗೆ ಮಾಡಬೇಕು ಎಂದುಕೊಂಡು ಅಣ್ಣಾವ್ರಿಗೆ ಕಥೆ ಹೇಳಿದ್ದರು. ಆದರೆ, ಆ ಕಥೆ ಅಣ್ಣಾವ್ರಿಗೆ ಇಷ್ಟವಾಗಿತ್ತು. ಹೀಗಾಗಿ ಒಂದಿಷ್ಟು ಬದಲಾವಣೆಗಳಾಗುತ್ತಿದ್ದವು. ನಾಗಾಭರಣ ಹಾಗೂ ಉದಯಶಂಕರ್ ಇಬ್ಬರೂ ಸೇರಿ ಚಿತ್ರಕಥೆ ಹಾಗೂ ಡೈಲಾಗ್ ತಿದ್ದುವುದಕ್ಕೆ ಶುರು ಮಾಡಿದ್ದರು. ಆದರೆ, ಉದಯಶಂಕರ್ ಬರೆದ ಡೈಲಾಗ್‌ಗಳಲ್ಲಿ ಏನೋ ಮಿಸ್ಸಿಂಗ್ ಇದೆ ಅಂತ ಅಣ್ಣಾವ್ರಿಗೆ ಅನಿಸಿತ್ತು.

ಇದೇ ಸಿನಿಮಾಗೆ ಹಂಸಲೇಖ ಕೂಡ ಸಂಗೀತ ಸಂಯೋಜನೆ ಮಾಡುತ್ತಿದ್ದರು. ಇತ್ತ ಉದಯಶಂಕರ್ ಬರೆದ ಡೈಲಾಗ್ ಬದಲಾಗಿತ್ತು. ಹೀಗಾಗಿ ಆಗ ರಾಜ್‌ಕುಮಾರ್ ಬ್ಯಾನರ್‌ನಿಂದ ಉದಯಶಂಕರ್ ದೂರ ಆಗುವುದಕ್ಕೆ ಹಂಸಲೇಖ ಅವರೇ ಕಾರಣ ಗುಲ್ಲೆದ್ದಿತ್ತು. ಅಂದು ನಡೆದ ಘಟನೆಯನ್ನು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿಯವರು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
ಆಕಸ್ಮಿಕ ಇದು ತರಾಸು ಅವರ ಮೂರು ಕಾದಂಬರಿಯನ್ನು ಆಧರಿಸಿದ ಸಿನಿಮಾ. ಶಿವರಾಜ್‌ಕುಮಾರ್ ಅವರಿಗೆ ಒಂದು ಕಾದಂಬರಿ ಆಧಾರಿತ ಸಿನಿಮಾ ಬೇಕು ಅಂತ ಹೇಳಿನೇ ಭರಣ ಅವರನ್ನು ಕೇಳಿದ್ದರು. ಈ ಸಿನಿಮಾ ಸ್ಕ್ರಿಪ್ಟ್ ಮಾಡಿಕೊಂಡು ನಾಗಭರಣ ಅಣ್ಣಾವ್ರಿಗೆ ಕಥೆ ಹೇಳುವುದಕ್ಕೆ ಹೊರಟರು. ರಾಜ್‌ಕುಮಾರ್ ಅವರಿಗೆ ಕಥೆ ಹೇಳಿದರೆ ಅರ್ಥ ಆಗುತ್ತಿರಲಿಲ್ಲ. ಹೀಗಾಗಿ ಸೀನ್ ಬೈ ಸೀನ್ ಹೇಳು ಅಂತ ಹೇಳಿದ್ದರು. ಹಾಗೇ ಕಥೆಯನ್ನು ಸೃಷ್ಟಿ ಮಾಡಿಕೊಂಡು ಹೋದರು.
"18 ಸೀನ್‌ಗೆ ಲಂಚ್ ಬ್ರೇಕ್ ಇತ್ತು. ಊಟ ಆದ್ಮೇಲೆ 19ನೇ ಸೀನ್‌ನಿಂದ ಶುರು. ಆಗ ಅಣ್ಣಾವ್ರು ಒಂದು ಸಣ್ಣ ಬದಲಾವಣೆ ಮಾಡೋಣ. ಮೊದಲನೇ ಸೀನ್‌ನಿಂದ ಓದಿ ಎಂದರು. ಮೊದಲನೇ ಸೀನ್‌ನಿಂದ 20ನೇ ಸೀನ್‌ಗೆ ಬರುವವರೆಗೂ ಸಂಜೆ ಆಗಿತ್ತು. ಅಣ್ಣಾವ್ರು ನಾಳೆ ನೋಡೋಣ ಅಂತ ಎದ್ದು ಹೋದರು. ಅಣ್ಣಾವ್ರು ಎದ್ದು ಹೋದಮೇಲೆ ಪಾರ್ವತಮ್ಮ ಅವರು ನಾಗಭರಣ ಅವರನ್ನು ಕರೆದು ಅವರಿಗೆ ಕಥೆ ಇಷ್ಟ ಆಗಿದೆ. ಅಣ್ಣಾವ್ರೇ ಮಾಡಬೇಕು ಅಂತ ಇಷ್ಟ ಪಡುತ್ತಿದ್ದಾರೆ ಎಂದು ಹೇಳಿದರು. ಇದು ಖಂಡಿತಾ ಆಗಲ್ಲ ಎಂದು ನಾಗಭರಣ ಅವರ ರಿಯಾಕ್ಷನ್ ಕೊಟ್ಟಿದ್ದರು. ತರಾಸು ಕಾದಂಬರಿಯಲ್ಲಿ ಇರುವವನು ಹೆದರುವ ನಾಯಕ. ಅವನ ಹೆದರಿಕೆಯಿಂದಲೇ ಬಹಳ ಮುಖ್ಯ ಸಮಸ್ಯೆ ಆಗಿರೋದು. ಇದನ್ನು ಶಿವರಾಜ್‌ಕುಮಾರ್ ಮಾಡಿದರೆ, ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತೇವೆ. ಇದನ್ನು ಅಣ್ಣಾವ್ರು ಮಾಡುವುದಕ್ಕೆ ಆಗುವುದಿಲ್ಲ ಎಂದರು. ಆಗ ಪಾರ್ವತಮ್ಮ ನೀವು ಉದಯಶಂಕರ್ ಕೂತು ಮಾಡಿ ಎಂದರು." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಆಕಸ್ಮಿಕ ಮಾಡುವಾಗ ಉದಯ್ ಶಂಕರ್ ಅವರಿಗೆ ಕಣ್ಣಿನ ಸಮಸ್ಯೆ ಆಗಿತ್ತು. ಅವರಿಗೆ ಕಾದಂಬರಿಯನ್ನು ಓದುವುದಕ್ಕೆ ಆಗುತ್ತಿರಲಿಲ್ಲ. ಹೀಗಾಗಿ ನಾಗಾಭರಣ ಆಡಿಯೋ ರೆಕಾರ್ಡ್ ಮಾಡಿ ಕಳಿಸಿದ್ದರು. ಕಾದಂಬರಿಯನ್ನು ಇವರು ಓದಿ ಟೈಪ್‌ರೆಕಾರ್ಡರ್‌ನಲ್ಲಿ ರೆಕಾರ್ಡ್ ಮಾಡಿ ಕೊಟ್ಟರು. ಉದಯಶಂಕರ್ ಅದನ್ನು ಕೇಳಿ ಅವರ ರೀತಿಯಲ್ಲಿ ಸಂಭಾಷಣೆ ಬರೆದರು. ಅದು ಕೇಳುವಾಗ, ಬರೆಯುವಾಗ ಸಮಸ್ಯೆಗಳು ಆಗಿರಬಹುದು. ಮರುದಿನ ಉದಯಶಂಕರ ಡೈಲಾಗ್ ಓದುವಾಗ ಇದು ಯಾಕೋ ಸರಿ ಹೋಗುತ್ತಿಲ್ಲ ಎಂದು ಅಣ್ಣಾವ್ರು ಅಂದುಕೊಂಡರು. ನಾನು ಅಂದುಕೊಂಡ ಕಥೆ ಇಲ್ಲಿ ಬರುತ್ತಿಲ್ಲವಲ್ಲ ಎಂದು ಕೊಂಡರು. ಒಂದು ವ್ಯತ್ಯಾಸ ಆಗಿದೆ ಅನ್ನೋದು ಗೊತ್ತಾಗಿತ್ತು.
"ಅವತ್ತು ಸಂಜೆ ನಾಗಾಭರಣ ಹಾಗೂ ಪಾಲ್ ಸುದರ್ಶನ್ ಕೂತು ಡೈಲಾಗ್ ಅನ್ನು ಅಣ್ಣಾವ್ರಿಗೆ ಬೇಕಾದ ಹಾಗೆ ಬರೆದರು. ಮರುದಿನ ಅಣ್ಣಾವ್ರಿಗೆ ರೀಡಿಂಗ್ ಕೊಟ್ಟಿದ್ದರು. 10 ಸೀನ್ ಆಗುವಾಗಲೇ ಉದಯಶಂಕರ್ ಅವರಿಗೆ ಗೊತ್ತಾಗಿ ಹೋಯ್ತು. ಇದು ನಾನು ಬರೆದಿರುವ ಸಂಭಾಷಣೆ ಅಲ್ಲ. ಇವರು ಬದಲಾಯಿಸಿಕೊಂಡು ಬಂದಿದ್ದರೆ ಎಂದು ಗೊತ್ತಾಗಿತ್ತು. ಉದಯಶಂಕರ್ ಎದ್ದು ಹೋದರು. ಅವತ್ತು ಎದ್ದು ಹೋದವರು ಮತ್ತೆ ಈ ಸಿನಿಮಾಗೆ ಎಂಟ್ರಿ ಆಗಲಿಲ್ಲ. ಇದು ನಿಜವಾಗಿ ನಡೆದ ಘಟನೆ. ನಾಗಾಭರಣ ಅವರಿಗೂ ಉದಯಶಂಕರ್‌ಗೆ ಅವಮಾನ ಮಾಡಬೇಕು ಎಂದಿರಲಿಲ್ಲ. ಹಂಸಲೇಖ ಅವರ ಪಾತ್ರವೇ ಇರಲಿಲ್ಲ." ಎನ್ನುತ್ತಾರೆ ಎನ್ ಎಸ್ ಶ್ರೀಧರಮೂರ್ತಿ.
ಆಕಸ್ಮಿಕ ಸಿನಿಮಾದ ಈ ಘಟನೆಗಳು ನಡೆಯುವಾಗ ಹಂಸಲೇಖ ಅವರ ಎಂಟ್ರಿನೇ ಆಗಿರಲಿಲ್ಲ. ಅಣ್ಣಾವ್ರು ಕೂಡ ಹಾಡು ಉದಯಶಂಕರ್ ಹತ್ತಿರ ಬರೆಸೋಣ. ನೀವು ಸಿನಿಮಾವನ್ನು ಮುಂದುವರೆಸಿ ಎಂದಿದ್ದರು. "ಸುಮಾರು ಜನ ಅಂದುಕೊಂಡ ಹಾಗೆ ಆಕಸ್ಮಿಕದಿಂದ ಹಂಸಲೇಖ ಅಣ್ಣಾವ್ರ ಕ್ಯಾಂಪ್‌ಗೆ ಎಂಟ್ರಿ ಆಗಿದ್ದಲ್ಲ. ಅವರು ರಣರಂಗಕ್ಕೆ ರಾಜ್‌ಕುಮಾರ್ ಕ್ಯಾಂಪ್‌ಗೆ ಬಂದವರು. ಪರಶುರಾಮ ಸಿನಿಮಾಗೂ ಅವರೇ ಸಂಗೀತ ಕೊಟ್ಟಿದ್ದರು. ಹಾಗಾಗಿ ಹಂಸಲೇಖ ಅವರಿಂದಲೇ ಉದಯಶಂಕರ್ ಬಿಟ್ಟು ಹೋದರು ಅನ್ನೋದಲ್ಲ. ಅದಕ್ಕೂ ಅವರಿಗೂ ನೇರವಾಗಿ ಸಂಬಂಧವೇ ಇರಲಿಲ್ಲ." ಎನ್ನುತ್ತಾರೆ.

"ಒಂದು ಹಾಡು ಈ ಸಿನಿಮಾದಲ್ಲಿ ಕೊನೆಯವರೆಗೂ ಸಮಸ್ಯೆಯಾಗಿ ಉಳಿದುಕೊಂಡಿತ್ತು. ಕಸ್ತೂರಿ ನಿವಾಸದಿಂದ ರಾಜ್‌ಕುಮಾರ್ ಸಿನಿಮಾದಲ್ಲಿ ಉದಯಶಂಕರ್ ಹಾಡುಗಳು ಇಲ್ಲದ ಸಿನಿಮಾವಿಲ್ಲ. ಒಂದು ಹಾಡು ಉದಯಶಂಕರ್‌ಗೆ ಮೀಸಲಿಟ್ಟಿದ್ದರು. ಮೂರು ಸಲ ಚಾಮುಂಡೇಶ್ವರಿ ಸ್ಟುಡಿಯೋಗೆ ಹೋಗೋದು ಉದಯಶಂಕರ್ ಇಲ್ಲದೆ ವಾಪಾಸ್ ಬರೋದು ಆಗುತ್ತಿತ್ತು. ಮೂರನೇ ಸಲ ವಾಪಾಸ್ ಬಂದಾಗ ವರದಪ್ಪ ಈ ಸಿನಿಮಾವನ್ನು ಇನ್ನೆಷ್ಟು ದಿನ ಮುಂದಕ್ಕೆ ಎಳೆದುಕೊಂಡು ಹೋಗೋದು, ಇದನ್ನು ಮುಗಿಸಿಬಿಡೋಣ ಎಂದು ಹೇಳಿದರು. ಆಗ ದೂರದರ್ಶನದಲ್ಲಿ ಮಿಲೇ ಸುರ್ ಮೇರಾ ತುಮಾರಾ ಆಗ ದೂರದರ್ಶನದಲ್ಲಿ ರಾಷ್ಟ್ರೀಯ ಭಾವಕ್ಯತೆಯನ್ನು ಸಾರುವ ಜನಪ್ರಿಯ ಹಾಡಾಗಿತ್ತು. ಅಣ್ಣಾವ್ರು ಆ ರಾಗವನ್ನು ಇಟ್ಕೊ. ಕನ್ನಡದಲ್ಲಿ ಹಾಡು ಮಾಡು ನೀನು. ಹಂಸಲೇಖ ಟ್ಯೂನ್ ಮಾಡಿದರು. ಏನು ಬರೀಬೇಕು ಅಂತ ಕೇಳಿದಾಗ, ರಾಜ್‌ಕುಮಾರ್ ಸಿನಿಮಾದಲ್ಲಿ ಕನ್ನಡದ ಬಗ್ಗೆ ಒಂದು ಹಾಡು ಇರುತ್ತೆ. ಒಂದು ಹಾಡು ಮಾಡು ಎಂದರು. ಆಗ ವರದಪ್ಪ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಮಾಡು ಎಂದರು." ಎಂಬ ಸ್ವಾರಸ್ಯಕರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
"ಈ ಹಾಡು ಬರೆದಿದ್ದಕ್ಕೆ ಉದಯಶಂಕರ್ ಸತ್ತು ಹೋದರು ಎನ್ನುವವರು ಇದ್ದಾರೆ. ಅದ್ಯಾವುದೂ ನಿಜವಲ್ಲ. ಅದಕ್ಕೂ ಇದಕ್ಕೂ ಯಾವುದೇ ರೀತಿಯ ಸಮಸ್ಯೆಯಿರಲಿಲ್ಲ. ಅಣ್ಣಾವ್ರಿಗೂ ಅವರಿಗೂ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಈ ಸಿನಿಮಾದಲ್ಲಿ ನಾನು ಮಾಡುವುದಿಲ್ಲ ಅಂತಷ್ಟೇ ಹೇಳಿದರು. ಮುಂದಿನ ಸಿನಿಮಾ ಒಡಹುಟ್ಟಿದವರುಗೆ ಸಂಭಾಷಣೆ, ಗೀತರಚನೆಯನ್ನು ಉದಯಶಂಕರ್ ಅವರೇ ಮಾಡಿದ್ದಾರೆ. ಹಾಗಾಗಿ ಅಣ್ಣಾವ್ರಿಗೂ ಉದಯಶಂಕರ್ ಅವರಿಗೂ ಸಮಸ್ಯೆ ಕೊನೆಯ ದಿನಗಳಲ್ಲಿ ಇರಲಿಲ್ಲ." ಎನ್ನುತ್ತಾರೆ ಹಿರಿಯ ಪತ್ರಕರ್ತ ಎನ್‌ಎಸ್ ಶ್ರೀಧರ ಮೂರ್ತಿ.


Click it and Unblock the Notifications











