ಅಣ್ಣಾವ್ರ ಚಪ್ಪಲಿ ಮನೆಯಲ್ಲಿ.. ಅಮ್ಮನ ಫೋಟೊ ಎದೆಯಲ್ಲಿ ಇಟ್ಟು ಕೊಂಡಿದ್ದ ಅಪ್ಪು: ಏನಿದಿರ ಗುಟ್ಟು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿರುವ ದುರ್ಘಟನೆಯನ್ನು ಯಾರೂ ಒಪ್ಪುವುದಕ್ಕೆ ರೆಡಿನೇ ಇಲ್ಲ. ಅಪ್ಪು ಇನ್ನೂ ನಮ್ಮೊಂದಿಗೆ ಇದ್ದಾರೆ. ಅವರ ಸಿನಿಮಾ ಇವತ್ತೋ ನಾಳೆನೋ ಬರುತ್ತೆ ಅಂತಲೇ ನಂಬಿಕೊಂಡಿರುವವರಿಗೇನು ಕಮ್ಮಿಯಿಲ್ಲ. ಕನ್ನಡ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಅಂದರೆ ಅದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅನ್ನುವುದರಲ್ಲಿ ಡೌಟೇ ಇಲ್ಲ.
ಪುನೀತ್ ರಾಜ್‌ಕುಮಾರ್ ಜೊತೆ ಒಡನಾಟ ಇಟ್ಟುಕೊಂಡವರಿಗೆ ಅದೆಷ್ಟೋ ಬಾರಿ ಅಣ್ಣಾವ್ರು ನೆನಪಾಗಿದ್ದು ಇದೆ. ಅವರದ್ದೇ ಗುಣಗಳು ಅಪ್ಪುಗೂ ಬಂದಿದೆ ಅಂತ ಅದೆಷ್ಟೋ ಸೆಲೆಬ್ರೆಟಿಗಳು ಹೇಳಿಕೊಂಡಿದ್ದಾರೆ. ಇತ್ತ ಪುನೀತ್ ರಾಜ್‌ಕುಮಾರ್‌ಗೂ ಕೂಡ ಅಪ್ಪ ಅಮ್ಮ ಅಂದರೆ ಬಲು ಪ್ರೀತಿ. ಅಣ್ಣಾವ್ರು ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೂ ಅಪ್ಪು ಅಂದರೆ ಅಷ್ಟೇ ಪ್ರೀತಿ.

ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದ 'ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಒಮ್ಮೆ ನವರಸ ನಾಯಕ ಜಗ್ಗೇಶ್ ಅತಿಥಿಯಾಗಿ ಬಂದಿದ್ದರು. ಆ ವೇಳೆ ಜಗ್ಗೇಶ್ ತಂದೆ ತಾಯಿ ನೆನಪಿಗಾಗಿ ಇಟ್ಟುಕೊಂಡಿರುವ ವಸ್ತುಗಳೇನು ಅಂತ ಪ್ರಶ್ನೆ ಮಾಡಿದ್ದರು. ಅದಕ್ಕೆ ಅಪ್ಪು ಹೇಳಿದ್ದನ್ನು ಕೇಳಿ ಜಗ್ಗೇಶ್ ಕಳೆದು ಹೋಗಿದ್ದರು. ವಿಶೇಷ ಅಂದ್ರೆ, ನಾಳೆ (ಮಾರ್ಚ್ 17) ಪುನೀತ್ ರಾಜ್‌ಕುಮಾರ್ ಹಾಗೂ ಜಗ್ಗೇಶ್ ಇಬ್ಬರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ತಂದೆ ತಾಯಿ ಬಗ್ಗೆ ಇಬ್ಬರೂ ಆಡಿದ ಮಾತಿನ ಝಲಕ್ ಇಲ್ಲಿದೆ.
ಅಣ್ಣಾವ್ರ ಚಪ್ಪಲಿ ಇತ್ತು
ಪುನೀತ್ ರಾಜ್‌ಕುಮಾರ್ ತಂದೆ ನೆನಪಿಗಾಗಿ ಅಣ್ಣಾವ್ರು ಬಳಸಿದ ಹಲವು ವಸ್ತುಗಳನ್ನು ಇಟ್ಟುಕೊಂಡಿದ್ದರು. ಅಣ್ಣಾವ್ರು ಧರಿಸಿದ್ದ ಬಟ್ಟೆಗಳನ್ನು ಇಟ್ಟುಕೊಂಡಿದ್ದರು. ಅಲ್ಲದೆ ಕೊನೆಯ ಬಾರಿ ಬಳಸಿದ ಚಪ್ಪಲಿ ಇಟ್ಟಿಕೊಂಡಿದ್ದರು. ಹಾಗೇ ಎದೆಯಲ್ಲಿ ಅಮ್ಮನ ಫೋಟೊ ಇಟ್ಟು ಕೊಂಡಿದ್ದನ್ನು ಜಗ್ಗೇಶ್ ಮುಂದೆ ಹೇಳಿದಾಗ, ಮೂಕ ವಿಸ್ಮಿತರಾಗಿದ್ದರು.
ಯಾವಾಗಲೂ ಎದೆಯಲ್ಲೇ ಇರುತ್ತಾರೆ.
ಜಗ್ಗೇಶ್ ಅವರಿಗೆ ಅಪ್ಪು ಆಡಿದ ಮಾತು ಹೀಗಿತ್ತು. "ನೆನಪುಗಳು ಅಂದರೆ, ಅವರು ಓಡಾಡುತ್ತಿದ್ದ ಜಾಗ ಅಷ್ಟೂ ನೆನಪಿನಲ್ಲೇ ಇರುತ್ತೆ. ವಸ್ತು ಅಂತ ಅವರು ಉಪಯೋಗಿಸಿದ ಬಟ್ಟೆಗಳು ಇವೆ. ಕಡೆಯದಾಗಿ ನಮ್ಮ ತಂದೆಯವರು ಬಳಸಿದ ಚಪ್ಪಲಿ ಇದೆ. ನಮ್ಮ ತಾಯಿ ನಮಸ್ಕಾರ ಮಾಡುತ್ತಿರುವ ಫೋಟೊವನ್ನು ಇಟ್ಟುಕೊಂಡಿದ್ದೇವೆ. ಯಾವಾಗಲೂ ನನ್ನ ಎದೆಯಲ್ಲೇ ಇರುತ್ತಾರೆ. ಅವರ ಚೈನ್ ಇದೆ." ಎಂದು ಅಪ್ಪು ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಜಗ್ಗೇಶ್‌ಗೆ ತೋರಿಸಿದ್ದರು.

ಜಗ್ಗೇಶ್ ಪ್ರತಿಕ್ರಿಯೆ ಏನಾಗಿತ್ತು?
ಅಪ್ಪು ಆಡಿದ ಮಾತುಗಳನ್ನು ಕೇಳಿದಾಗ, ನವರಸ ನಾಯಕ ಜಗ್ಗೇಶ್ ತಂದೆ ತಾಯಿ ಬಗ್ಗೆ ದೇವರನ್ನು ಉದಾಹರಣೆಗಿಟ್ಟುಕೊಂಡು ವಿವರಿಸಿದ್ದರು. "ಎಲ್ಲರೂ ಕಾಣದ ದೇವರ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. ನೋಡಪ್ಪ ಇವನು ಶಿವ, ಇವನು ಪಾರ್ವತಿ, ಇವನು ಗಣೇಶ, ಇವನು ಷಣ್ಮುಗ, ಆ ದೇವರಿಗೆ ಕೈ ಮುಗಿದರೆ ಇದಾಗುತ್ತೆ. ಈ ದೇವರಿಗೆ ಕೈ ಮುಗಿದರೆ ಇದಾಗುತ್ತೆ. ಯಾರು ತಂದೆ ತಾಯಿಗಳಿಗೆ ಕಾಯವಾಚ ಮನಸಾ ಹೃದಯದಿಂದ ಪ್ರೀತಿ ಮಾಡಿ, ಅವರ ಮಾತನ್ನು ಕೇಳಿ ತಲೆಬಾಗಿ, ಅವರ ಆಶೀರ್ವಾದ ತೆಗೆದುಕೊಂಡಿರುತ್ತಾರೆ. ಎಲ್ಲಾ ದೇವರೂ ಅವರ ಮುಂದೆ ಶರಣಾಗುತ್ತಾರೆ. ತಂದೆ ತಾಯಿನೇ ನಿಜವಾದ ದೇವರು." ಎಂದಿದ್ದರು.
ಅಣ್ಣಾವ್ರು ಅಂದರೆ ಅಪ್ಪುಗೆ ಭಯ
ಚಿಕ್ಕವರಿರುವಾಗ ಪುನೀತ್ ರಾಜ್‌ಕುಮಾರ್‌ಗೆ ಅಣ್ಣಾವ್ರು ಅಂದರೆ ಭಯವಿತ್ತು. ಹಾಗಂತ ಅಣ್ಣಾವ್ರೇನು ಬೈಯ್ಯುತ್ತಿರಲಿಲ್ಲ. ಆದರೂ ಪುನೀತ್‌ಗೆ ಭಯವಿತ್ತು. "ಬಾಲ್ಯದಲ್ಲಿ ನಮ್ಮ ತಂದೆಯವರು ಅಂದರೆ ತುಂಬಾನೇ ಭಯ. ಯಾಕೆ ಅಂತ ಗೊತ್ತಿಲ್ಲ. ಅವರು ಯಾವತ್ತೂ ನಮಗೆ ಬೈದಿಲ್ಲ. ಬಹುಶ: ಅವರು ಯಾವತ್ತೂ ಬೈದಿಲ್ಲದೆ ಇದ್ದಿದ್ದರಿಂದ ಯಾವತ್ತು ಬೈದು ಬಿಡುತ್ತಾರೋ ಅನ್ನೋ ಭಯವಿತ್ತು. ಈಗ ನನ್ನ ಸಣ್ಣ ಮಗಳು ಕಂಡರೆ ಭಯ. ಅದು ಬಿಟ್ಟರೆ, ಬೇರೆ ಯಾರೇ ಕಂಡರೂ ಭಯವಿಲ್ಲ. " ಎಂದು ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹೇಳಿದ್ದರು.


Click it and Unblock the Notifications











