"ಏನಯ್ಯ ಗಂಡಸೇನಯ್ಯ.. ಸಿನಿಮಾ ಬಿಡಿಸಿಕೋ.. ಇಲ್ಲಾ ಹಾಗೇ ರಿಲೀಸ್ ಮಾಡು"; ರವಿ ಶ್ರೀವತ್ಸಗೆ ಪಾರ್ವತಮ್ಮ ಹೀಗಂದಿದ್ಯಾಕೆ?
ಸಿನಿಮಾರಂಗಕ್ಕೂ ಸೆನ್ಸಾರ್ ಬೋರ್ಡ್‌ಗೂ ಬಿಡಲಾರದ ನಂಟು. ಅದು ಎಂತದಹದ್ದೇ ಸಿನಿಮಾ ಮಾಡಿದರೂ, ಸೆನ್ಸಾರ್ ಬೋರ್ಡ್ ಮುಂದೆ ಬರಲೇಬೇಕು. ಅವರ ಸಿನಿಮಾ ನೋಡಲೇಬೇಕು. ಒಂದಿಷ್ಟು ತಿದ್ದು ಪಡಿಗಳನ್ನು ಮಾಡಲೇಬೇಕು. ಆ ಮೇಲೆ ಸಿನಿಮಾ ರಿಲೀಸ್‌ಗೆ ಅನುಮತಿ ಸಿಗುತ್ತೆ. ಆದರೆ, ಕೆಲವೊಮ್ಮೆ ಸೆನ್ಸಾರ್ ಬೋರ್ಡ್‌ನ ಅಧಿಕಾರಿಗಳು ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪುವುದಿಲ್ಲ. ಇಂತಹ ಸಾಕಷ್ಟು ಉದಾಹರಣೆಗಳು ಬೇರೆ ಬೇರೆ ಚಿತ್ರರಂಗದಲ್ಲಿ ಸಿಗುತ್ತವೆ.
ಸಿನಿಮಾದ ಕಂಟೆಂಟ್ ವಿವಾದಾತ್ಮಕವಾಗಿದ್ದರೆ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತೆ ಅಂತ ಅನಿಸಿದರೆ, ಹೀಗೆ ಬೇರೆ ಬೇರೆ ವಿಷಯಗಳಿಗೆ ಸರಾಸಟಾಗಿ ಸಿನಿಮಾ ಬಿಡುಗಡೆಯನ್ನು ತಿರಸ್ಕರಿಸಿಬಿಡುತ್ತಾರೆ. ಹೀಗೆ ಸೆನ್ಸಾರ್ ಕೈಗೆ ಸಿಕ್ಕಿಕೊಂಡಿದ್ದ ಒಂದು ಕನ್ನಡ ಸಿನಿಮಾ 'ಮಾದೇಶ'. ಈ ಸಿನಿಮಾ ರಿಲೀಸ್‌ಗೆ ಸೆನ್ಸಾರ್ ಅಧಿಕಾರಿಗಳು ಒಪ್ಪಿರಲಿಲ್ಲ. ಸಿನಿಮಾವನ್ನೇ ಬ್ಯಾನ್ ಮಾಡಿದ್ದರು. ಆ ವೇಳೆ ಶಿವರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದಾರೆ.

ರವಿ ಶ್ರೀವತ್ಸ 'ಗ್ಯಾಂಗ್ಸ್ ಆಫ್ ಯುಕೆ' ಅನ್ನೋ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಸಂಬಂಧ ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಮಯದಲ್ಲಿ 'ಮಾದೇಶ' ಸಿನಿಮಾಗೆ ಸೆನ್ಸಾರ್ ಕೊಡದೇ ಇದ್ದಾಗ ಪಾರ್ವತಮ್ಮ ರಾಜ್‌ಕುಮಾರ್ ಅವರ ಖಡಕ್ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ಸ್ವಾರಸ್ಯಕರವಾಗಿ ಹೇಳಿದ್ದಾರೆ. ಅದರ ಝಲಕ್ ಇಲ್ಲಿದೆ.
2008ರಲ್ಲಿ 'ಮಾದೇಶ' ಸಿನಿಮಾ ರಿಲೀಸ್ ಆಗಿತ್ತು. ಶಿವರಾಜ್‌ಕುಮಾರ್, ರವಿ ಬೆಳಗರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಅಂಡವರ್ಲ್ಡ್‌ಗೆ ಸಂಬಂಧಿಸಿದ ಕಥೆಯಾಗಿದ್ದರಿಂದ ಹಿಂಸಾತ್ಮಕ ಸನ್ನಿವೇಶಗಳು ಇದ್ದವು. ಅಲ್ಲದೆ ಕೆಲವು ದೃಶ್ಯಗಳು ರಾಜಕೀಯ ಕ್ಷೇತ್ರದಕ್ಕೆ ಸಂಬಂಧಿಸಿತ್ತು. ಹೀಗಾಗಿ ಸೆನ್ಸಾರ್ ಅಧಿಕಾರಿಗಳು ಸಿನಿಮಾ ಮಾಡುವುದಕ್ಕೆ ಒಪ್ಪಲಿಲ್ಲ. ಆ ಸನ್ನಿವೇಶವನ್ನು ರವಿ ಶ್ರೀವತ್ಸ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.
"ಮಾದೇಶ ಸಿನಿಮಾ ನೋಡಿ ಮೇಲೆ ನಾವು ಸೆನ್ಸಾರ್ ಸರ್ಟಿಫಿಕೇಟ್ ಕೊಡಲಾಗುವುದಿಲ್ಲ ಎಂದು ಹೇಳಿದರು. ಇದನ್ನು ಕೇಳಿ ಕೇಳಿ ಸಾಕಾಗಿತ್ತು. ಇಲ್ಲ ರೀ ಸೆನ್ಸಾರ್ ಸರ್ಟಿಫಿಕೇಟ್ ಕೊಡಲಾಗುವುದಿಲ್ಲ ಎಂದು ಹೇಳಿದರು. ಅದು ಆಗೋಯ್ತು. ಆಗ ಶಿವಣ್ಣನಿಗೆ ಹೇಳಿದೆ. ಏನಮ್ಮ ಅಂದರು.. ಬ್ಯಾನ್ ಆಯ್ತು ಅಣ್ಣ ಅಂದೆ. ಏನಮ್ಮ ಹೇಳ್ತಿದ್ದೀಯಾ? ಅಂದರು. ಯಾವನಮ್ಮ ಸೆನ್ಸಾರ್ ಆಫೀಸರ್? ಓಂ ಕೂಡ ಬ್ಯಾನ್ ಆಗಿತ್ತಮ್ಮ. ಈಗೇನು ಮಾಡೋದು ಅಂದರು. ಬಿಡೋದು ಬೇಡ ಫೈಟ್ ಮಾಡೋಣ ಅಂದೆ. ಸರಿನಮ್ಮ ಅಂತ ಫೋನ್ ಇಟ್ಟರು." ಎಂದು ರವಿ ಶ್ರೀವತ್ಸ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ಸೆನ್ಸಾರ್ ಅಧಿಕಾರಿಗೆ ಶಿವರಾಜ್‌ಕುಮಾರ್ ಕ್ಲಾಸ್ ತೆಗೆದುಕೊಂಡಿದ್ದರು. ಇದರಿಂದ ಕೋಪಗೊಂಡ ಸೆನ್ಸಾರ್ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು."ಬೆಳಗ್ಗೆ ಆಗುವುದರೊಳಗೆ ಸೆನ್ಸಾರ್ ಆಫೀಸರ್ ಫೋನ್ ಮಾಡಿದ್ದರು. ಅದಕ್ಕೆ ಹೇಳೋದು ಒಬ್ಬ ಹೀರೋ ತನ್ನ ಸಿನಿಮಾವನ್ನು ಪ್ರೀತಿಸಬೇಕು ಅಂತ. ಶಿವಣ್ಣ ಸೆನ್ಸಾರ್ ಆಫೀಸರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಹುಡುಗರನ್ನು ಕಳಿಸುತ್ತೇನೆ. ನಾನು ಹಂಗೆ ಮಾಡುತ್ತೇನೆ. ಹಿಂಗೆ ಮಾಡುತ್ತೇನೆ ಅಂದಿದ್ದಾರೆ. ಆ ಮಹಾನುಭಾವ ಪ್ರೆಸ್‌ಗೆ ಹೇಳಿ ಬಿಡೋದಾ? ಅವಾಚ್ಯ ಶಬ್ಧಗಳಿಂದ ನಿಂಧಿಸಿದ ರಾಜ್ ಕುಮಾರ್ ಪುತ್ರ ಅಂತ ನ್ಯೂಸ್ ಪೇಪರ್‌ನಲ್ಲಿ ಬಂದಿತ್ತು. ಇಲ್ಲ ಅಮ್ಮ ಅದು ಹೇಗೆ ಬಿಡೋಕೆ ಆಗುತ್ತೆ. ಅಮ್ಮನ ಹತ್ತಿರ ಹೋಗಮ್ಮ ಅಂದರು" ಎಂದು ಶಿವಣ್ಣನ ಪ್ರತಿಕ್ರಿಯೆಯನ್ನು ನೆನೆದಿದ್ದಾರೆ.
ಇತ್ತ ರವಿಶ್ರೀವತ್ಸ ಸೀದಾ ಪಾರ್ವತಮ್ಮ ರಾಜ್‌ಕುಮಾರ್ ಬಳಿ ಹೋಗಿದ್ದರು. ಅವರ ಮಾತನ್ನು ಹೇಳಿ ನಿರ್ದೇಶಕರೇ ಶಾಕ್ ಆಗಿದ್ದರು. "ಏನಯ್ಯ ಗಂಡಸೇನಯ್ಯ.. ಬ್ಯಾನ್ ಬಿಡಿಸು. ಇಲ್ಲ ಹಾಗೇ ರಿಲೀಸ್ ಮಾಡು ಅಂತಾರೆ ಅವರು. ಅವರು ಶಿವಣ್ಣನಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ನಮಗೆ ಪ್ರೇರಣೆನೇ ಈ ಸಾಲುಗಳು. ನಾವು ಹೆದರುತ್ತಿದ್ವೇನೋ.. ನಾವು ನಮ್ಮ ಡೆತ್ ಸರ್ಟಿಫಿಕೇಟ್‌ಗೆ ಸಹಿ ಹಾಕುವ ಬದಲು ಅವರು ಕೊಟ್ಟಂತ ಕಟ್‌ಗಳಿಗೆ ಸಹಿ ಹಾಕುತ್ತಿದ್ವೇನೋ.. ಸತ್ಯ ಮಾಡಿ ಹೇಳುತ್ತೇನೆ. ಪಾರ್ವತಮ್ಮ ಅವರು ಇಲ್ಲಿ ಕೂತಿದ್ದರು. ಅದೇ ಹೇಳುತ್ತೇನೆ ಪಾರ್ವತಮ್ಮ ಅವರು ತುಂಬಾ ವಿಷಯದಲ್ಲಿ ಪ್ರೇರಣೆಯಾಗಿದ್ದಾರೆ. ಆ ತಾಯಿ ಹಂಗೆ ತಾಯಿ ಆಗಿಯೇ ಇದ್ದರೆ ಸಾಕು." ಎಂದು ರವಿ ಶ್ರೀವತ್ಸ ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications















