ಅಣ್ಣಾವ್ರು ಮದುವೆಗೆ ಅಂತ ಮಾಡಿದ್ದ ಸಾಲ ಎಷ್ಟು? ಅದನ್ನು ತೀರಿಸಿದ್ದು ಯಾವಾಗ?
ಡಾ.ರಾಜ್‌ಕುಮಾರ್ ಬಗ್ಗೆ ಅದೆಷ್ಟೇ ಹೇಳಿದರೂ ಮುಗಿಯುವುದಿಲ್ಲ. ಅವರನ್ನು ಭೇಟಿ ಮಾಡಿದ ಒಬ್ಬೊಬ್ಬರ ಬಳಿನೂ ಒಂದೊಂದು ಕತೆಯಿದೆ. ಒಂದೊಂದು ಕಥೆನೂ ಅಷ್ಟೇ ಸ್ವಾರಸ್ಯಕರವಾಗಿದೆ. ಅಣ್ಣಾವ್ರ ಬದುಕನ್ನು ಹಲವು ಹಂತಗಳಲ್ಲಿ ನೋಡುವವ ಅವರ ಅಭಿಮಾನಿಗಳು ಇದ್ದಾರೆ. ಬಹುತೇಕ ಮಂದಿಗೆ ವರನಟನ ಸಿನಿಮಾ ಬದುಕಿನ ಬಗ್ಗೆ ಚೆನ್ನಾಗಿ ಗೊತ್ತು. ಆದರೆ, ವೈಯಕ್ತಿಕ ಬದುಕಿನ ಬಗ್ಗೆ ಗೊತ್ತಿರೋದು ತೀರ ವಿರಳ.
ಸಿನಿಮಾಗೆ ಬರುವುದಕ್ಕಿಂತ ಮುನ್ನ ಅಣ್ಣಾವ್ರ ಬದುಕು ಹೇಗಿತ್ತು? ಪಾರ್ವತಮ್ಮ ಅವರೊಂದಿಗೆ ರಾಜ್‌ಕುಮಾರ್ ಮದುವೆ, ಆನಂತರದ ಬದುಕು ಹೇಗಿತ್ತು? ಅನ್ನೋದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಣ್ಣಾವ್ರು ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಅವರಿಗೆ ವಿವಾಹವಾಗಿತ್ತು. ಮೊದಲ ಸಿನಿಮಾಗೆ ಅವರಿಗೆ ಅವಕಾಶ ಸಿಕ್ಕಿದ್ದು ಕೂಡ ಆಕಸ್ಮಿಕ. ಒಂದೇ ಒಂದು ಅವಕಾಶ ಅವರನ್ನು ಸೂಪರ್‌ಸ್ಟಾರ್ ಪಟ್ಟ ಕೊಡಿಸಿದ್ದು ಇತಿಹಾಸ.

ಸಿನಿಮಾಗೆ ಎಂಟ್ರಿ ಕೊಡುವುದಕ್ಕೂ ಮುನ್ನ ರಾಜ್‌ಕುಮಾರ್ ನಾಟಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಹೆಚ್ಚು ಹಣವೇನು ಸಿಗುತ್ತಿರಲಿಲ್ಲ. ಹೀಗಾಗಿ ಸಾಲ ಮಾಡಿ ಮದುವೆ ಆಗಿದ್ದರು. ಅಣ್ಣಾವ್ರು ಸಿನಿಮಾದಲ್ಲಿ ನಟಿಸುವವರೆಗೂ ಅವರು ಮದುವೆಗೆಂದು ಮಾಡಿದ ಸಾಲ ಮಾತ್ರ ಇನ್ನೂ ಹಾಗೆ ಉಳಿದಿತ್ತು. ಅಷ್ಟಕ್ಕೂ ರಾಜ್‌ಕುಮಾರ್ ಆಗಿನ ಕಾಲಕ್ಕೆ ಮದುವೆಗಂತ ಮಾಡಿದ ಸಾಲ ಎಷ್ಟು ಗೊತ್ತಾ? ಯಾವ ಸಿನಿಮಾ ಬಳಿಕ ಆ ಸಾಲವನ್ನು ತೀರಿಸಿದ್ದರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಪಾರ್ವತಮ್ಮ ಅವರನ್ನು ವಿವಾಹವಾದ ಬಳಿಕ ಅಣ್ಣಾವ್ರಿಗೆ ಅದೃಷ್ಟ ಖುಲಾಯಿಸಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. 'ಬೇಡರ ಕಣ್ಣಪ್ಪ' ಸಿನಿಮಾದಿಂದ ಮತ್ತೆಂದೂ ಹಿಂತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ಆದರೆ, ಮದುವೆಗೆ ಅಂತ ಮಾಡಿದ ಸಾಲವನ್ನು ಸಿನಿಮಾಗೆ ಬಂದ್ಮೇಲೆ ತೀರಿಸಿದ್ದರು. ಈ ವಿಷಯವನ್ನು ಹಿರಿಯ ಪತ್ರಕರ್ತ ಹಾಗೂ ಲೇಖಕ ಮಂಜುನಾಥ್ ಚೌಹಾಣ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

"ಪಾರ್ವತಿ ಕಲ್ಯಾಣ ಆದಾಗ ಮುತ್ತುರಾಜ್ ಅವರ ಲೈಫ್‌ನಲ್ಲಿ ಮಹತ್ವದ ಒಂದು ಬೆಳವಣಿಗೆ ಆಗುತ್ತೆ. ಅವರು ಚಾಮರಾಜನಗರದಿಂದ ಗಾಜನೂರಿಗೆ ಹೋಗುವ ಸಮಯದಲ್ಲಿ ಅವರ ತಂದೆಯ ಮಿತ್ರರಾದ ಎಚ್‌ಎಲ್‌ಎನ್ ಸಿಂಹ ಅವರು ಮುತ್ತುರಾಜ್ ಅವರನ್ನು ನೋಡುತ್ತಾರೆ. ಸದೃಢ ದೇಹ, ಉದ್ದ ಕೂದಲು, ಸ್ಮಾರ್ಟ್ ಆಗಿರುತ್ತಾರೆ. ಅವರನ್ನು ಮಾತಾಡಿಸುತ್ತಾರೆ. ಹೇಗಪ್ಪ ನಿಮ್ಮ ತಂದೆ ಹೋಗಿಬಿಟ್ಟರು ಅಂತ ಕೇಳ್ಪಟ್ಟೆ ಅಂತ ಸಾಂತ್ವಾನ ಹೇಳುತ್ತಾರೆ. ಆಗ ಏನು ಮಾಡುತ್ತಿದ್ದೀಯಾ ಎಂದಾಗ ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದು ಹೇಳುತ್ತಾರೆ"
ಆಗ ಎಚ್‌ಎಲ್‌ಎನ್ ಸಿಂಹ ಅವರು ಬೇಡರ ಕಣ್ಣಪ್ಪ ಸಿನಿಮಾದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಈ ಸಿನಿಮಾ ಬಗ್ಗೆ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಎಲ್ಲರೂ ಒಪ್ಪಿದರೆ ಚೆನ್ನೈಗೆ ಬಂದು ಆಡಿಷನ್ ಕೊಡಬೇಕಾಗಿ ಬರಬಹುದು ಎಂದು ಹೇಳುತ್ತಾರೆ. ನಿರೀಕ್ಷೆ ಮಾಡಿದಂತೆ ಪತ್ರ ಕಳಿಸಿ, ಆಡಿಷನ್‌ಗೆ ಬರುವಂತೆ ಹೇಳುತ್ತಾರೆ. ಅಣ್ಣಾವ್ರು ಹೋಗಿ ಆಡಿಷನ್ ಕೊಟ್ಟು ಬರುತ್ತಾರೆ. ಮತ್ತೆ ಎಂದಿನಂತೆ ಗುಬ್ಬಿ ಕಂಪನಿಯಲ್ಲಿ ಕೆಲಸ ಮುಂದುವರೆಸುತ್ತಾರೆ. ಮತ್ತೆ ಕರೆ ಬರುತ್ತೋ ಇಲ್ಲವೋ ಅನ್ನೋದು ಅವರಿಗೂ ಗೊತ್ತಿರಲಿಲ್ಲ. ಆಗ ಮತ್ತೊಂದು ಪತ್ರ ಬರುತ್ತೆ. ಅದನ್ನು ನೋಡಿ ಅಣ್ಣಾವ್ರು ಅದು ಸಾಲಗಾರರ ಪತ್ರ ಇರಬಹುದು ಎಂದುಕೊಳ್ಳುತ್ತಾರೆ.
"ಆಡಿಷನ್ ಮುಗಿಸಿಕೊಂಡು ಕ್ಯಾಂಪ್‌ಗೆ ಹೋಗುತ್ತಾರೆ. ಆಗ ಒಂದು ಲೆಟರ್ ಬರುತ್ತೆ. ಪಾರ್ವತಮ್ಮ ಅವರು ಮುತ್ತುರಾಜ್‌ಗೆ ತೋರಿಸುತ್ತಾರೆ. ಈ ಮಾತನ್ನು ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಅಮ್ಮ ನನಗೆ ಹೇಳಿದ ಮಾತು. ನೋಡು ಪಾರ್ವತಿ ಯಾವುದೋ ಸಾಲದ ವಸೂಲಿ ಲೆಟರ್ ಇರಬೇಕು. ತೆಗೆದು ಓದು. ನನಗೆ ಓದುವುದಕ್ಕೆ ಇಷ್ಟವಿಲ್ಲ ಎಂದು ಅಣ್ಣಾವ್ರು ಹೇಳುತ್ತಾರೆ. ಮದುವೆಗೆ ಸಾಲ ಮಾಡಿದ್ನಲ್ಲ ಅದರ ವಸೂಲಾತಿ ಲೆಟರ್ ಇರಬೇಕು ಅಂತ ಹೇಳುತ್ತಾರೆ. ಅಮ್ಮ ಓದಿದಾಗ ಇದು ಸ್ಕ್ರೀನ್ ಟೆಸ್ಟ್‌ನಲ್ಲಿ ಪಾಸಾಗಿರುವ ಸುದ್ದಿ ಎಂದು ಹೇಳುತ್ತಾರೆ." ಎಂದು ಪಾರ್ವತಮ್ಮ ರಾಜ್‌ಕುಮಾರ್ ಹೇಳಿದ ವಿಷಯವನ್ನು ಲೇಖಕ ಮಂಜುನಾಥ್ ಚೌಹಾಣ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
'ಬೇಡರ ಕಣ್ಣಪ್ಪ' ಸಿನಿಮಾದಲ್ಲಿ ಅಣ್ಣಾವ್ರು ನಟಿಸುವುದಕ್ಕೆ ಶುರು ಮಾಡುತ್ತಾರೆ. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ 1800 ರೂಪಾಯಿ ಆಗಿನ ಕಾಲಕ್ಕೆ ಚೆಕ್ ಕೊಟ್ಟಿರುತ್ತಾರೆ. ಅಲ್ಲಿವರೆಗೂ ಅಷ್ಟು ದೊಡ್ಡ ಮೊತ್ತದ ಹಣವನ್ನು ಅವರು ನೋಡಿಯೇ ಇರುವುದಿಲ್ಲ. ಅದರಲ್ಲಿ 900 ರೂ. ಮದುವೆಗೆ ಅಂತ ಮಾಡಿದ್ದ ಸಾಲವನ್ನು ತೀರಿಸಿಬಿಟ್ಟರು. ಈ ಸ್ವಾರಸ್ಯಕರ ವಿಷಯವನ್ನು ಹಿರಿಯ ಲೇಖಕ ಮಂಜುನಾಥ್ ಚೌಹಾಣ್ ಅವರ ಬಳಿ ಪಾರ್ವತಮ್ಮ ರಾಜ್‌ಕುಮಾರ್ ಹೇಳಿಕೊಂಡಿದ್ದರು.


Click it and Unblock the Notifications











