ರಾಜ್‌ಕುಮಾರ್ ಮೊದಲ ಬಾರಿಗೆ ವಿಧಾನ ಸೌಧದ ಮೆಟ್ಟಿಲು ಹತ್ತಿದ್ಯಾವಾಗ ಗೊತ್ತೇ? ಆ ಕಾರಣ ಇಲ್ಲಿದೆ!
ಕನ್ನಡ ಚಿತ್ರರಂಗ ಅಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರರಂಗವೇ ಡಾ.ರಾಜ್‌ಕುಮಾರ್ ಅಂತಹ ಇನ್ನೊಬ್ಬ ನಟನನ್ನು ಕಂಡಿಲ್ಲ. ಅಣ್ಣಾವ್ರು ಕೊಡುಗೆ ಈ ಚಿತ್ರರಂಗಕ್ಕೆ ಅಪಾರ. ಅವರ ಪ್ರತಿಯೊಂದು ಸಿನಿಮಾವನ್ನು ಜನರು ಹುಚ್ಚರಂತೆ ನೋಡಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ರಾಜ್‌ಕುಮಾರ್ ನಟಿಸಿ ಅಭಿಮಾನಿಗಳಿಂದ ವರನಟ ಅಂತ ಕರೆಸಿಕೊಂಡ ಮೇರು ನಟ.
ಸಿನಿಮಾಗಳಲ್ಲಿ ಡಾ.ರಾಜ್‌ಕುಮಾರ್ ಎಂತಹ ಅದ್ಭುತ ಪಾತ್ರಗಳನ್ನು ಮಾಡಿದ್ದರೆ. ಪ್ರತಿಯೊಂದು ಪಾತ್ರವನ್ನೂ ಕನ್ನಡಿಗರು ಕಣ್ತುಂಬಿಕೊಂಡು ಆನಂದಿಸಿದ್ದಾರೆ. ಇದೆಲ್ಲವೂ ತೆರೆಮೇಲಷ್ಟೇ. ಆದರೆ, ತೆರೆಯ ಹಿಂದೆ ಡಾ.ರಾಜ್‌ಕುಮಾರ್ ತುಂಬಾನೇ ಮುಗ್ಧರು. ಬಹಳ ಸರಳ ಜೀವಿ. ಚಿತ್ರರಂಗದ ಮೇರು ನಟನಾಗಿದ್ದರೂ ಅಣ್ಣಾವ್ರು ತಾವಾಯ್ತು. ತಮ್ಮ ಕೆಲಸ ಆಯ್ತು ಅಂತ ಇದ್ದವರು.

ಅಣ್ಣಾವ್ರು ಬೀದಿಗೆ ಇಳಿದರೆ, ಅವರ ಹಿಂದೆ ಲಕ್ಷಾಂತರ ಅಭಿಮಾನಿಗಳು ಇರುತ್ತಿದ್ದರು. ಇಷ್ಟೊಂದು ಹೆಸರು ಗಳಿಸಿದ ವರನಟ ಮಾತ್ರ ವಿಧಾನ ಸೌಧದ ಮೆಟ್ಟಿಲನ್ನೇ ಏರಿರಲಿಲ್ಲ. ರಾಜಕೀಯ ಹಾಗೂ ರಾಜಕಾರಣಿಗಳಿಂದ ಸಾಕಷ್ಟು ಅಂತರವನ್ನು ಕಾಪಾಡಿಕೊಂಡಿದ್ದರು. ಹೀಗಿದ್ದ ಡಾ.ರಾಜ್‌ಕುಮಾರ್ ಮೊಟ್ಟ ಮೊದಲ ಬಾರಿಗೆ ವಿಧಾನ ಸೌಧದ ಮೆಟ್ಟಿಲು ಏರಿದ್ದರು. ಆ ಕ್ಷಣ ಯಾವುದು? ಆ ಕಾರಣವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಡಾ.ರಾಜ್‌ಕುಮಾರ್ ಮೊಟ್ಟ ಮೊದಲ ಬಾರಿಗೆ ವಿಧಾನ ಸೌಧದ ಮೆಟ್ಟಿ ಏರಿದ್ದರ ಬಗ್ಗೆ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಇಂಟ್ರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಫಿಲ್ಮಿ ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಅಣ್ಣಾವ್ರ ವಿಧಾನ ಸೌಧಕ್ಕೆ ಮೊದಲ ಬಾರಿಗೆ ಹೆಜ್ಜೆ ಇಟ್ಟ ಸಂಗತಿ ಬಗ್ಗೆ ರಾಜೇಂದ್ರ ಸಿಂಗ್ ಬಾಬು ವಿವರವಾಗಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಚಿತ್ರರಂಗದ ಸಮಸ್ಯೆಗಳು ಬಂದಾಗ ಅಲ್ಲಿ ಎಸ್.ವಿ. ರಾಜೇಂದ್ರ ಸಿಂಗ್ ಮುಂದಿರುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಣ್ಣಾವ್ರಿಗೆ ವಿಷಯವನ್ನು ಅರ್ಥ ಮಾಡಿಸುತ್ತಿದ್ದಿದ್ದೇ ಇವರು. ಅಣ್ಣಾವ್ರ ಮನೆಗೆ ಹೋಗಿ ಸಮಸ್ಯೆಗಳನ್ನು ಅರ್ಥ ಮಾಡಿಸುತ್ತಿದ್ದರು. ಹೀಗೊಮ್ಮೆ 100 ಪರ್ಸೆಂಟ್ ಟ್ಯಾಕ್ಸ್ ಕೊಡಬೇಕು ಅಂತ ಕನ್ನಡ ಚಿತ್ರರಂಗ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಆ ಸಂದರ್ಭದಲ್ಲಿ ಅಣ್ಣಾವ್ರು ಮೊದಲ ಬಾರಿಗೆ ವಿಧಾನ ಸೌಧ ಮೆಟ್ಟಿಲೇರಿದ್ದರು.
"ಬಂಗಾರಪ್ಪನವರದ್ದು ಒಮ್ಮೆ ಮೀಟಿಂಗ್ ಇತ್ತು. ವಿಧಾನ ಸಭೆಯಲ್ಲಿ ಮೀಟಿಂಗ್ ಇತ್ತು. ಅಲ್ಲಿವರೆಗೂ ವಿಧಾನ ಸೌಧಗೆ ರಾಜ್‌ಕುಮಾರ್ ಅವರು ಬಂದೇ ಇರಲಿಲ್ಲ. ನಾನು, ರಾಜ್‌ಕುಮಾರ್ ಅವರು ರವಿ ಎಲ್ಲರೂ ಹೋಗಿದ್ವಿ. ಬಂಗಾರಪ್ಪನವರ ಎದುರು ಕೂತಿದ್ದಾಗ ರಾಜ್‌ಕುಮಾರ್ ಅವರು ನನಗೆ ಬಾಬು ನೀವು ಟ್ಯಾಕ್ಸ್ ಬಗ್ಗೆ ವಿವರಣೆ ಕೊಡಿ ಎಂದು ಹೇಳಿದ್ದರು. ಯಾರೂ ಮಾತಾಡಬೇಡಿ. ಇಬ್ಬರು ಮಾತಾಡಲಿ. ನಾನು ಮೇಷ್ಟ್ರು ತರ ಪಾಠ ಮಾಡುತ್ತೇನೆ ಎಂದು ಅಷ್ಟು ನಂಬಿಕೆಯಿತ್ತು." ಎಂದು ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ವಿವರಿಸಿದ್ದಾರೆ.

ಹಾಗೇ ಅಣ್ಣಾವ್ರು ಕರ್ನಾಟಕಕ್ಕೆ ಎಷ್ಟು ದೊಡ್ಡ ಶಕ್ತಿಯಾಗಿದ್ದರೂ ಅನ್ನೋದನ್ನೂ ವಿವರಿಸಿದ್ದಾರೆ. "ನಾನು ಚಿಕ್ಕಂದಿನಿಂದ ರಾಜ್‌ಕುಮಾರ್ ಅವರೊಂದಿಗೆ ಬೆಳೆದಿದ್ದರಿಂದ ಅವರ ಮನೆಗೆ ಯಾವಾಗ ಬೇಕಿದ್ದರೂ ಹೋಗುತ್ತಿದ್ದೆ. ಹೀಗಾಗಿ ಇಂಡಸ್ಟ್ರಿಯಲ್ಲಿ ಸಮಸ್ಯೆ ಬಂದಾಗ ನಮಗೆ ದೊಡ್ಡ ಶಕ್ತಿಯಾಗಿ ಇದ್ದಿದ್ದು ರಾಜ್‌ಕುಮಾರ್. ಇವರು ನಾಳೆ ಬೀದಿಗೆ ಇಳಿತಾರೆ ಅಂದರೆ, ಸರ್ಕಾರಗಳೇ ನಡುಗುತ್ತಿದ್ದರು. ಮುಖ್ಯಮಂತ್ರಿಗಳ ಕಾರುಗಳೆಲ್ಲ ನಮ್ಮ ಮನೆಗೆ ಬರುತ್ತಿದ್ದವು. ನಿಮಗೆ ಏನು ಬೇಕಾದರೂ ಮಾಡಿಕೊಳ್ಳುತ್ತೇವೆ. ರಾಜ್‌ಕುಮಾರ್ ಅವರನ್ನು ಮಾತ್ರ ನಾಳೆ ಬರೋದು ಬೇಡ ಅಂತ ಹೇಳಿ. ಮುಖ್ಯಮಂತ್ರಿಗಳ ಮನೆಗಳಲ್ಲಿ ಕ್ಯಾಬಿನೆಟ್ ಮೀಟಿಂಗ್ ತರ ನಡೆಯೋದು. ಅಂತಹದ್ದೊಂದು ಪವರ್ ಅವರು." ಎಂದಿದ್ದಾರೆ.
ಇನ್ನು ಅಣ್ಣಾವ್ರ ಕನ್ನಡ ಚಿತ್ರರಂಗಕ್ಕಾಗಿ ಸಹಾಯ ಮಾಡಿ ಅಂತ ಕೇಳಿದಾಗಲೆಲ್ಲ ಮುಂದೆ ನಿಂತಿದ್ದಾರೆಂದು ಹೇಳಿದ್ದಾರೆ."ರಾಜ್‌ಕುಮಾರ್ ಅವರಿಗೆ ಏನೂ ಬೇಕಿರಲಿಲ್ಲ. ಅವರ ಸಿನಿಮಾಗಳು 100 ದಿನ ಓಡುತ್ತಿದ್ದವು. ಜನರು ಅವರ ಸಿನಿಮಾಗಳಿಗಾಗಿ ಹುಚ್ಚರಾಗಿದ್ದಾರೆ. ಅವರಿಗೆ ಏನು ಬೇಕೋ ಅದೆಲ್ಲವೂ ಇದೆ. ಆದರೆ, ಅವರಿಗೆ ಇಂಡಸ್ಟ್ರಿ ಉದ್ದಾರ ಆಗಬೇಕು. ಚಿತ್ರರಂಗಕ್ಕೆ ಒಳ್ಳೆಯದಾಗಬೇಕು ಅಂತ ಜೊತೆಗೆ ನಿಂತಿದ್ದರು. 100 ಪರ್ಸೆಂಟ್ ಟ್ಯಾಕ್ಸ್ ಈ ಎಲ್ಲಾ ಹೋರಾಟಕ್ಕೆ ನಿಂತಿರೋರು. ಆಮೇಲೆ ಏಳು ವಾರಕ್ಕೆ ಪರಭಾಷೆ ಸಿನಿಮಾ ಬರಬೇಕು ಅಂತ ಸರ್ಕಾರಕ್ಕೆ ಒತ್ತಡ ಹಾಕಿದ್ವಿ." ಎಂದು ಎಸ್.ವಿ ರಾಜೇಂದ್ರ ಸಿಂಗ್ ಬಾಬು ರಿಕಾಲ್ ಮಾಡಿಕೊಂಡಿದ್ದಾರೆ.


Click it and Unblock the Notifications











