'ಕೋಟ್ಯಾಧಿಪತಿ'ಗೆ ಬಂದವ್ರ ಕಷ್ಟಕ್ಕೆ ಸ್ಪಂದಿಸುತ್ತಿದ್ರಾ ಅಪ್ಪು? ಇದಕ್ಕೆ "ಸುಳ್ಳಿಗೆ ಸುಳ್ಳು,ಸತ್ಯಕ್ಕೆ ಸತ್ಯ" ಅಂದಿದ್ದೇಕೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ಕನ್ನಡ ಚಿತ್ರರಂಗ ಉತ್ತಮ ನಟ ಎಂದು ಹೊಗಳಿದವರು ಅದೆಷ್ಟೋ ಮಂದಿ. ಅದೇ ಅವರು ಅಗಲಿದ ಬಳಿಕ ಅವರ ಸಮಾಜಮುಖಿ ಕೆಲಸಗಳನ್ನು ಕಂಡು ಬೆರಗಾದವರಿಗೆ ಲೆಕ್ಕವೇ ಇಲ್ಲ. ಪುನೀತ್ ರಾಜ್‌ಕುಮಾರ್ ಅಂತಹದ್ದೊಂದು ವ್ಯಕ್ತಿತ್ವವನ್ನು ಬಿಟ್ಟು ಹೋಗಿದ್ದಾರೆ. ಇಂದಿಗೂ ಅವರ ಅಭಿಮಾನಿಗಳು ಅವರದ್ದೇ ಹಾದಿಯಲ್ಲಿ ಸಾಗುತ್ತಿದ್ದಾರೆ.
ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಗಲಿ ಮೂರು ವರ್ಷಗಳಾಗುತ್ತಿವೆ. ಅದಕ್ಕೂ ಮುನ್ನ ಇದೇ ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬವಿದೆ. ಈ ಹುಟ್ಟುಹಬ್ಬದಂದು ಅಪ್ಪು ನೆನಪಿಸಿಕೊಳ್ಳಲು ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಪ್ಪು ಅಚ್ಚು ಮೆಚ್ಚಿನ ಸಿನಿಮಾ 'ಜಾಕಿ' ಮರು ಬಿಡುಗಡೆಯಾಗುತ್ತಿದೆ. ಹೀಗೆ ಹಲವು ಕಾರ್ಯಕ್ರಮಗಳಿವೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ಸಾಕಷ್ಟು ಜನೋಪಯೋಗಿ ಕೆಲಸ ಮಾಡಿದ್ದರು. ಕಷ್ಟದಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚಿದ್ದರು. ಇದು ಅವರು ಅಗಲಿದ ಬಳಿಕವಷ್ಟೇ ಬೆಳಕಿಗೆ ಬಂದಿತ್ತು. ಬದುಕಿದ್ದಾಗ ತೆರೆಮರೆಯಲ್ಲಿಯೇ ನೆರವಾಗಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ.
ಇವೆಲ್ಲದರ ಜೊತೆನೇ ಪುನೀತ್ ರಾಜ್‌ಕುಮಾರ್ ವ್ಯಕ್ತಿತ್ವವನ್ನು ಸಂಭ್ರಮಿಸಲೇ ಬೇಕು. ಅವರು ಬದುಕಿದ್ದಾಗ ಕಷ್ಟ ಅಂತ ಬಂದವರಿಗೆ ಸಹಾಯ ಮಾಡದೇ ಕಳಿಸುತ್ತಲೇ ಇರಲಿಲ್ಲ. ಇಂತಹ ಅದೆಷ್ಟು ಸಹಾಯವನ್ನು ಅವರು ಅಗಲಿದ ಬಳಿಕ ಜನರು ನೆನಪಿಸಿಕೊಳ್ಳುತ್ತಿದ್ದಾರೆ. 'ಕೋಟ್ಯಾಧಿಪತಿ' ರಿಯಾಲಿಟಿ ಶೋ ನಡೆಸಿಕೊಳ್ಳುವ ವೇಳೆನೂ ಇಂತಹದ್ದೆಷ್ಟೋ ಘಟನೆಗಳು ನಡೆದಿವೆ. ಅದನ್ನು ನಿರ್ದೇಶಕ ಗುರು ಪ್ರಸಾದ್ ತಮ್ಮ ಸಂದರ್ಶನದಲ್ಲಿ ನೆನೆಪಿಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ನಗುಮುಖದ ಸರದಾರ. ಸದಾ ನಗುತ್ತಲೇ ಇರುತ್ತಿದ್ದ ಅಪ್ಪು ಕಷ್ಟ ಅಂದವರಿಗೆ ಮಿಡಿಯುತ್ತಿದ್ದರು. ಕನ್ನಡ 'ಕೋಟ್ಯಾಧಿಪತಿ' ನಡೆಯುವ ವೇಳೆ ಅಪ್ಪುಗೆ ಮೆಂಟರ್ ಆಗಿದ್ದ ನಿರ್ದೇಶಕ ಗುರುಪ್ರಸಾದ್ ಮುಂದೆ ನಡೆದ ಘಟನೆಯೊಂದನ್ನು ಕೀರ್ತಿ ಇಎನ್‌ಟಿ ಕ್ಲಿನಿಕ್ ಯೂಟ್ಯೂಬ್ ಚಾನೆಲ್ ಜೊತೆ ಹಂಚಿಕೊಂಡಿದ್ದಾರೆ. ಅಪ್ಪು ಸಹಾಯ ಮನೋಭಾವವನ್ನು ಕಣ್ಣಾರೆ ಕಂಡಿರೋ ಗುರುಪ್ರಸಾದ್ ಒಂದು ಘಟನೆಯನ್ನು ಹೀಗೆ ವಿವರಿಸಿದ್ದಾರೆ.
"ತುಂಬಾ ಒಳ್ಳೆಯ ಮನಸ್ಸು ಒಮ್ಮೆ ಏನಾಯ್ತು ಕೋಟ್ಯಾಧಿಪತಿಯಲ್ಲಿ ಯಾರೋ ಬರುತ್ತಾರೆ. ಅವರ ತಾಯಿಗೆ ಕಿಡ್ನಿಯದ್ದೇನೋ ಸಮಸ್ಯೆ ಆಗಿರುತ್ತೆ. ಎಲ್ಲಾ ಖರ್ಚು ಮೂರು ಲಕ್ಷ ರೂಪಾಯಿ ಬರುತ್ತೆ. ಅದನ್ನು ಗೆಲ್ಲಬೇಕು ಅಂತ ಬಂದಿರೋದು. ಆಕೆ ಅಪ್ಪುನ ನೋಡಿ ಗಾಬರಿಯಾಗಿಬಿಡುತ್ತಾಳೆ. ಹಾಟ್ ಸೀಟ್ ಅಂತ ಬರುತ್ತಲ್ಲ. ಅಪ್ಪು ನೋಡಿ ಗಾಬರಿಯಾಗಿಬಿಟ್ಟಳು. ಕೊನೆಗೆ ಉತ್ತರ ಕೊಡುವುದಕ್ಕೂ ಆಗಲಿಲ್ಲ. ಕೊನೆಗೆ 10 ಸಾವಿರನೂ ಗೆಲ್ಲಲಿಲ್ಲ." ಎಂದು ಆ ಘಟನೆಯ ಬಗ್ಗೆ ಮುಂದೇನಾಯ್ತು ಎಂದು ಹೇಳಿದ್ದಾರೆ.

"ಅಪ್ಪುಗೆ ಅಯ್ಯಯ್ಯೋ ಆ ಹುಡುಗಿಯನ್ನು ಕೇಳಿ ಏನು ತೊಂದರೆನೋ ಏನೋ ಅಂತ ಕೊನೆಗೆ ಕ್ಯಾರಾವ್ಯಾನ್‌ಗೆ ಕರೆಸಿಕೊಂಡರು. ಕ್ಯಾರಾವ್ಯಾನ್‌ನಲ್ಲಿ ಕೂತು ತಾಯಿಯನ್ನು ಕರೆಸಿ ಅಂದರು. ತಾಯಿ, ತಂದೆ, ಮಗಳು ಮೂರು ಜನ ಬಂದರು. ಈಗೊಂದು ಕೆಲಸ ಮಾಡಿ, ಮೂರು ಲಕ್ಷ ನಾನು ಕೊಡುವುದಿಲ್ಲ. ನಾನು ಒಬ್ಬ ಕಿಡ್ನಿ ಎಕ್ಸ್‌ಪರ್ಟ್ ಜೊತೆ ಮಾತಾಡಿಸುತ್ತೇನೆ. ಅಷ್ಟೂ ಖರ್ಚು ವೆಚ್ಚ ನಾನು ನೋಡಿಕೊಳ್ಳುತ್ತೇನೆ ಎಂದಿದ್ದರು. ಇವತ್ತು ಅವರು ಇಲ್ಲ. ಅದಕ್ಕೆ ನಾನು ಹೇಳುತ್ತಿದ್ದೇನೆ. ಯಾಕಂದ್ರೆ, ಯಾರಿಗೂ ಹೇಳಬೇಡಿ ಅಂತ ಕಂಡಿಷನ್ ಹಾಕಿದ್ದರು. " ಎಂದು ಗುರುಪ್ರಸಾದ್ ಸಹಾಯ ಮನೋಭಾವನೆಯನ್ನು ನೆನಪಿಸಿಕೊಂಡಿದ್ದಾರೆ.
'ಕೋಟ್ಯಾಧಿಪತಿ' ಕಾರ್ಯಕ್ರಮ ಬಗ್ಗೆ ಸ್ಟಾರ್ ಸುವರ್ಣದ ವೇದಿಕೆ ಮೇಲೇ ಇದೇ ಗುರುಪ್ರಸಾದ್ ಸಮಾಜಮುಖಿ ಕೆಲಸದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದರು. "ಕೋಟ್ಯಾಧಿಪತಿ ಕಾರ್ಯಕ್ರಮ ಬಹಳಷ್ಟು ಜನ ಬಂದು ಕೂರುತ್ತಾರೆ. ಹಾಟ್ ಸೀಟ್‌ನಲ್ಲಿ ಇರುತ್ತಾರೆ. ಕೂತ ನಂತರ ಒಂದೊಂದು ಕಥೆ ಇರುತ್ತೆ. ಕೆಲವರು ಹಾಟ್ ಸೀಟ್‌ಗೆ ಬಂದು ಬೇಗ ಹೋಗುತ್ತಾರೆ. ಮತ್ತೆ ಕೆಲವರು ಹಾಟ್ ಸೀಟ್‌ಗೆ ಬರೋಕೆ ಆಗೋದಿಲ್ಲ. ಅವರದ್ದೇ ಆದ ಸಣ್ಣ ಸಣ್ಣ ಸಮಸ್ಯೆಗಳು ಇರುತ್ತೆ. ಅವರಿಗೆ ಬೇರೆಯದ್ದೇ ರೀತಿಯಲ್ಲಿ ತಮ್ಮ ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡುತ್ತಿದ್ದಾರೆ. ಅಂತಹದ್ದೊಂದು ಸುದ್ದಿ ಬಂದಿದೆ. ಇದು ಸತ್ಯನಾ? ಸುಳ್ಳಾ? " ಎಂದು ಅಪ್ಪು ಪ್ರಶ್ನೆ ಮಾಡಿದ್ದರು.
ಅನಿರೀಕ್ಷಿತವಾಗಿ ಗುರುಪ್ರಸಾದ್ ಅವರಿಂದ ಬಂದ ಪ್ರಶ್ನೆಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದೇ "ಸುಳ್ಳಿಗೆ ಸುಳ್ಳು.. ಸತ್ಯಕ್ಕೆ ಸತ್ಯ.. " ಎಂದು ಉತ್ತರ ಕೊಟ್ಟಿದ್ದರು. ಇದು ಅವರು ಅಗಲಿದ ಬಳಿಕ ಕನ್ನಡಿಗರಿಗೆ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೆ ತಿಳಿಯುವಂತಾಯ್ತು.


Click it and Unblock the Notifications











