ಶಿವಣ್ಣನ ಕೈಗೆ ಲಾಂಗ್ ಕೊಟ್ಟು ಇತಿಹಾಸ ಸೃಷ್ಟಿಸಿದ ನಿರ್ದೇಶಕರು ಯಾರ್‍ಯಾರು? ನಿಮ್ಮ ಲಿಸ್ಟ್‌ನಲ್ಲಿ ಇವರಿದ್ದಾರಾ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದ ಮಾಸ್ ಹೀರೋ. ಶಿವಣ್ಣನ ಮ್ಯಾನರಿಸಂಗೆ ಕಳೆದು ಹೋಗದವರೇ ಇಲ್ಲ. ಅದರಲ್ಲೂ ಲಾಂಗ್ ಹಿಡಿಯುವುದರಲ್ಲಿ ಶಿವಣ್ಣನೇ ಬೆಸ್ಟ್ ಅಂತ ಅಭಿಮಾನಿಗಳೇ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾಗಿದೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ 'ಭೈರತಿ ರಣಗಲ್' ಸಿನಿಮಾವೇ ಇದಕ್ಕೆ ಸಾಕ್ಷಿ. 'ಮಫ್ತಿ' ಬಳಿಕ ಮತ್ತೆ ಶಿವಣ್ಣ ಖಡಕ್ ಪಾತ್ರದಲ್ಲಿ ಮಿಂಚಿದ್ದು ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ.
ತೆರೆಮೇಲೆ ಶಿವಣ್ಣ ನಡೆದು ಬಂದರೆ ಬರೆಯದ್ದೇ ಸಾಕು ಶಿಳ್ಳೆಗಳು ಬೀಳುತ್ತವೆ. ಲಾಂಗ್ ಹಿಡಿದರೆ ಕೇಳಬೇಕಾ? ಹಾಗಂತ ಶಿವಣ್ಣ ತೆರೆಮೇಲೆ ಲಾಂಗ್ ಬೀಸಿದ್ದು ಇದೇ ಮೊದಲೇನು ಅಲ್ಲ. ಹಾಗಂತ ಮಾಸ್ ಮ್ಯಾನರಿಸಂಗೆ ಲಾಂಗ್ ಬೇಕೆ ಬೇಕು ಅಂತಾನೂ ಇಲ್ಲ. ಆದರೆ, ಶಿವಣ್ಣನ ಕೈಗೆ ಹೀಗೆ ಲಾಂಗ್ ಹಿಡಿಸಬೇಕು ಅನ್ನೋದು ಕೆಲವೇ ನಿರ್ದೇಶಕರಿಗೆ ಗೊತ್ತು. ಆ ಪ್ರಯತ್ನದಲ್ಲಿ ಅವರು ಸಕ್ಸಸ್ ಕೂಡ ಆಗಿದ್ದಾರೆ.
ಶಿವಣ್ಣನ ಕೈಗೆ ಲಾಂಗ್ ಕೊಟ್ಟು ದೊಡ್ಡ ಮಟ್ಟಕ್ಕೆ ಗೆದ್ದ ನಿರ್ದೇಶಕರ ಪಟ್ಟಿಯಿದೆ. ಕೆಲವು ಸಿನಿಮಾಗಳು ಕಲ್ಟ್ ಸಿನಿಮಾಗಳಾಗಿವೆ. ಮತ್ತೆ ಕೆಲವು ಸಿನಿಮಾಗಳು ಮೆಗಾ ಬ್ಲಾಕ್‌ಬಸ್ಟರ್ ಆಗಿವೆ. ಅಂತ ನಿರ್ದೇಶಕರು ಹಾಗೂ ಸಿನಿಮಾಗಳ ಪಟ್ಟಿ ಇಲ್ಲಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಲಾಂಗ್ ಕೊಟ್ಟು ಗೆದ್ದ ನಿರ್ದೇಶಕರು ಪಟ್ಟಿ ಇಲ್ಲಿದೆ. ಅದ್ಯಾರು ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.

ಉಪೇಂದ್ರ 'ಓಂ'
ದೊಡ್ಮೆನೆ ಹೀರೋ ಮೊದಲ ಬಾರಿಗೆ ಲಾಂಗ್ ಹಿಡಿದಾಗ ಚಿತ್ರರಂಗದ ಮನ:ಸ್ಥಿತಿ ಬೇರೆನೇ ಇತ್ತು. ಸ್ವಲ್ಪ ಯಾಮಾರಿದ್ದರೂ 'ಓಂ' ಸಿನಿಮಾ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತಿತ್ತು. ಆದರೆ, ಉಪೇಂದ್ರ ಅದೇ ಮೊದಲ ಬಾರಿಗೆ ಶಿವಣ್ಣನಿಗೆ ಲಾಂಗ್ ಕೊಟ್ಟು ಗೆದ್ದಿದ್ದರು. ಅಲ್ಲಿಂದ ಶಿವಣ್ಣನ ಕೈಯಲ್ಲಿ ಲಾಂಗ್ ಹಿಡಿದರೇ ಚೆಂದ ಅಂತ ಫ್ಯಾನ್ಸ್ ನಿರ್ಧರಿಸಿಬಿಟ್ಟಿದ್ದರು. ಅದೇ ಮೊದಲ ಬಾರಿಗೆ ಶಿವಣ್ಣನಲ್ಲಿ ಮಾಸ್ ಮ್ಯಾನರಿಸಂ ಹೊರತಂದು ಗೆದ್ದವರಿಲ್ಲಿ ಉಪೇಂದ್ರನೇ ಫಸ್ಟ್.

ಪ್ರೇಮ್ 'ಜೋಗಿ'
2005ರಲ್ಲಿ ತೆರೆಕಂಡಿದ್ದ 'ಜೋಗಿ' ಕನ್ನಡದ ಚಿತ್ರರಂಗಕ್ಕೆ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿತ್ತು. ಪ್ರೇಕ್ಷಕರು ಸಿನಿಮಾ ಬಿಡುಗಡೆಗೂ ಮುನ್ನವೇ ಹಿಟ್ ಅಂತ ತೀರ್ಪು ಕೊಟ್ಟಿದ್ದ ಸಿನಿಮಾವಿದು. ತಮಿಳು ಸಿನಿಮಾಗಳ ರೇಂಜ್‌ಗೆ ಈ ಸಿನಿಮಾದ ಟಿಕೆಟ್‌ಗಳು ಬ್ಲಾಕ್‌ನಲ್ಲಿ ಸೇಲ್ ಆಗಿದ್ದವು. ಶಿವಣ್ಣ ಮ್ಯಾನರಿಸಂ ಮತ್ತೆ ದಕ್ಷಿಣ ಭಾರತದಲ್ಲಿ ಸೌಂಡು ಮಾಡಿದ್ದು ಇದೇ 'ಜೋಗಿ' ಸಿನಿಮಾ ಮೂಲಕ. ಶಿವಣ್ಣನ ಕೈಯಲ್ಲಿ ಮತ್ತೆ ಲಾಂಗ್ ಕೊಟ್ಟು ಪ್ರೇಮ್ ಗೆದ್ದಿದ್ದರು.

ನರ್ತನ್ 'ಮಫ್ತಿ'
ಬಹಳ ದಿನಗಳ ಬಳಿಕ ಮತ್ತೆ ಶಿವಣ್ಣನ ಮಾಸ್ ಲುಕ್ ಟ್ರೆಂಡ್ ಆಗಿದ್ದು 'ಮಫ್ತಿ' ಸಿನಿಮಾದಿಂದ. ನರ್ತನ್‌ಗೆ ಅದು ಮೊದಲ ಸಿನಿಮಾ ಆಗಿದ್ದರೂ, ಶಿವಣ್ಣನಿಗೆ ಮ್ಯಾನರಿಸಂ ಅನ್ನೇ ಬದಲಿಸಿ ಗೆದ್ದವರು. ಭೈರತಿ ರಣಗಲ್ ಪಾತ್ರದಲ್ಲಿ ಲಾಂಗ್ ಹಿಡಿದರೂ, ಕಣ್ಣಲ್ಲೇ ಮಾಸ್ ಲುಕ್ ಕೊಟ್ಟು ಇಷ್ಟ ಆಗಿದ್ದರು. ಇದರ ಪ್ರೀಕ್ವೆಲ್ 'ಭೈರತಿ ರಣಗಲ್' ಸಿನಿಮಾವನ್ನು ಕೂಡ ಪ್ರೇಕ್ಷಕರು ಅಷ್ಟೇ ಇಷ್ಟ ಪಟ್ಟಿದ್ದಾರೆ.

ದುನಿಯಾ ಸೂರಿ 'ಟಗರು'
'ಮಫ್ತಿ' ಹಿಂದೇನೆ ತೆರೆಕಂಡಿದ್ದ ಸಿನಿಮಾ 'ಟಗರು'. ದುನಿಯಾ ಸೂರಿ ಶೈಲಿಯ ಸ್ಕ್ರೀನ್ ಪ್ಲೇನಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಆದರೂ ಶಿವಣ್ಣನ ಕೈಯಲ್ಲಿ ದುನಿಯಾ ಸೂರಿ ಲಾಂಗ್ ಹಿಡಿಸಿದ್ದರು. ಈ ಸಿನಿಮಾ ಕೂಡ ಶಿವಣ್ಣ ಕರಿಯರ್‌ನ ಬೆಸ್ಟ್ ಸಿನಿಮಾಗಳಲ್ಲೊಂದು.

ನೆಲ್ಸನ್ ದಿಲೀಪ್ ಕುಮಾರ್ 'ಜೈಲರ್'
ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾ ಶಿವಣ್ಣ ಕರಿಯರ್‌ಗೆ ಮತ್ತೊಂದು ಬೆಸ್ಟ್ ಸಿನಿಮಾ ಆಯ್ತು. ಈ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳುವುದೇ ಕೇವಲ 10 ನಿಮಿಷ. ಅಷ್ಟರಲ್ಲೇ ರಜನಿಕಾಂತ್ ಅನ್ನೂ ಮೀರಿಸುವಷ್ಟು ಮೆಚ್ಚುಗೆ ಗಿಟ್ಟಿಸಿಕೊಂಡರು. ಇಲ್ಲೂ ಅಷ್ಟೇ ಶಿವಣ್ಣ ಮಾಸ್ ಮ್ಯಾನರಿಸಂಗೆ ಕೇವಲ ಕನ್ನಡಿಗರಷ್ಟೇ ಅಲ್ಲ ತಮಿಳು ಮಂದಿ ಕೂಡ ತಲೆ ಕೆಡಿಸಿಕೊಂಡಿದ್ದರು. ಈ ಬಾರಿ ಶಿವಣ್ಣ ಮ್ಯಾನರಿಸಂ ಬಳಸಿಕೊಂಡು ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಗೆದ್ದಿದ್ದರು.


Click it and Unblock the Notifications











