"ರವಿಚಂದ್ರನ್ ಸಾಂಗ್ ಬಂತು ಅಂದ್ರೆ, ನಾನು ಟಿವಿ ರಿಮೋರ್ಟ್ ಬಿಸಾಕಿ ಬಿಡ್ತೀನಿ": ಅಂದಿದ್ದ ಲೆಜೆಂಡರಿ ಡೈರೆಕ್ಟರ್ ಯಾರು?
ಕ್ರೇಜಿಸ್ಟಾರ್ ರವಿಚಂದ್ರನ್ ಹಳೆಯ ಸಿನಿಮಾಗಳ ಬಗ್ಗೆ ಇಂದಿನ ಪೀಳಿಗೂ ಕ್ರೇಜ್. ಅದಕ್ಕೆ ಅವರಿಗೆ ಅಭಿಮಾನಿಗಳು ಕ್ರೇಜಿಸ್ಟಾರ್ ಅಂತಲೇ ಬಿರುದುಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರವಿಚಂದ್ರನ್ ಸಿನಿಮಾದಲ್ಲಿ ಬರುವ ಹಾಡುಗಳನ್ನು ನೋಡುವುದಕ್ಕೆ ಚಂದ. ಹಾಡುಗಳ ಟ್ಯೂನ್, ಮೇಕಿಂಗ್ ಎಲ್ಲವೂ ಕ್ರೇಜಿಯಾಗಿರುತ್ತೆ.
ಕೇಜಿಸ್ಟಾರ್ ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ ಸೇರಿದರೆ ಹಾಗೆ. ಈ ಜೋಡಿ ತೆರೆಮೇಲೆ ಮೋಡಿ ಮಾಡಿ ಬಿಡುತ್ತಿತ್ತು. ಇವರಿಬ್ಬರ ಸಿನಿಮಾಗಳ ಹಾಡುಗಳು ಮೊದಲ ಪ್ರೇಕ್ಷಕರನ್ನು ಸೆಳೆದುಬಿಡುತ್ತಿತ್ತು. ಇಂದಿಗೂ ಈ ಜೋಡಿ ಕೊಟ್ಟಷ್ಟು ಹಿಟ್ ಸಾಂಗ್‌ಗಳನ್ನು ಬೇರೆ ಯಾವುದೇ ಕನ್ನಡದ ಜೋಡಿನೂ ಕೊಟ್ಟಿಲ್ಲ. 'ಪ್ರೇಮಲೋಕ'ದಿಂದ ಶುರುವಾಗಿದ್ದ ಈ ಜೋಡಿಯ ಯಶಸ್ಸಿನ ಪಯಣ ಎರಡು ದಶಕಕ್ಕೂ ಹೆಚ್ಚು ಕಾಲ ನಡೆದಿತ್ತು.

ಕನ್ನಡದ ಹಿರಿಯ ನಿರ್ದೇಶಕ ದಿವಂಗತ ಭಗವಾನ್ ಅವರು ಒಮ್ಮೆ ಹಂಸಲೇಖ ಬಗ್ಗೆ ಸಂದರ್ಶನ ನೀಡಿದ್ದರು. ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಸಲೇಖ ಸಂಗೀತದ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಾಡುಗಳ ಬಗ್ಗೆನೂ ಮಾತಾಡಿದ್ದರು. ಮಾತಾಡುತ್ತಾ ಕ್ರೇಜಿ ಸ್ಟಾರ್ ಹಾಡುಗಳು ಬಂತು ಅಂದರೆ, ಟಿವಿ ರಿಮೋರ್ಟ್ ಅನ್ನೇ ಬಿಸಾಕಿ ಬಿಡುತ್ತೇನೆ ಎಂದಿದ್ದರು. ಅಷ್ಟಕ್ಕೂ ದಿವಂಗತ ಭಗವಾನ್ ಹೀಗಂದಿದ್ಯಾಕೆ? ತಿಳಿಯಲು ಮುಂದೆ ಓದಿ.
ದೊರೈ ಹಾಗೂ ಭಗವಾನ್ ಜೋಡಿ ಎಂತಹ ಕನ್ನಡ ಸಿನಿಮಾಗಳನ್ನು ಕೊಟ್ಟಿಲ್ಲ. ಇವರ ಬತ್ತಳಿಕೆಯಲ್ಲಿ ಬಂದ ಸಿನಿಮಾಗಳ ಪೈಕಿ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಒಂದೊಂದು ಸಿನಿಮಾವೂ ಇಂದಿಗೂ ಚಿರಪರಿಚಿತ. ಅಣ್ಣಾವ್ರಿಗೆ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರೋ ಭಗವಾನ್‌ಗೆ ಅಲ್ಲಿ ಸಕ್ಸಸ್ ರೇಟ್ ಸಿಕ್ಕಿದ್ದೇ ಹೆಚ್ಚು. ಈ ಸಂದರ್ಶನದಲ್ಲಿ ವಿಷ್ಣುವರ್ಧನ್ ನಟಿಸಿದ 'ನೀನು ನಕ್ಕರೆ ಹಾಲು ಸಕ್ಕರೆ' ಬಗ್ಗೆ ಮಾತಾಡುತ್ತಿದ್ದರು.

'ನೀನು ನಕ್ಕರೆ ಹಾಲು ಸಕ್ಕರೆ' ಸಿನಿಮಾವನ್ನು ದೊರೈ ಭಗವಾನ್ ಅವರೇ ನಿರ್ದೇಶನ ಮಾಡಿದ್ದರು. ವಿಷ್ಣುವರ್ಧನ್ ಸಿನಿಮಾಗೆ ಸಂಗೀತ ಹಾಗೂ ಸಾಹಿತ್ಯ ಕೊಟ್ಟಿದ್ದು ಹಂಸಲೇಖ. ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹಂಸಲೇಖ ಅವರು ಜೀನಿಯಸ್ ಎಂದು ಹೊಗಳಿದ್ದರು. ಇದೇ ವೇಳೆ ರವಿಚಂದ್ರನ್ ಅವರ ಹಾಡುಗಳ ಬಗ್ಗೆನೂ ಮಾತಾಡಿದ್ದರು.
"ನನಗೆ ಸಂಕಟ ಆಗಿದ್ದೇನು ಅಂದರೆ, ರವಿಚಂದ್ರನ್ ಹಾಗೇ ಸಾಂಗ್ಸ್ ತೆಗೆಯುವ ಡೈರೆಕ್ಟರ್ ಅನ್ನೇ ನಾನು ನೋಡಿಲ್ಲ. ನಾವುಗಳು ಕೂಡ ಆತರ ತೆಗೆಯುವುದಕ್ಕೆ ಆಗುವುದಿಲ್ಲ. ಅದೇನು ಕಲ್ಪನೆ? ಅದೇನು ಟೇಕಿಂಗ್ಸ್? ಇವತ್ತಿಗೂ ಅಷ್ಟೇ. ಟಿವಿನಲ್ಲಿ ರವಿಚಂದ್ರನ್ ಸಾಂಗ್ ಬಂತು ಅಂದ್ರೆ, ನಾನು ಟಿವಿ ರಿಮೋರ್ಟ್ ಬಿಸಾಕಿ ಬಿಡುತ್ತೇನೆ." ಎಂದು ಹೇಳಿದ್ದರು.
ಹಾಗಂತ ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ಹಿರಿಯ ನಿರ್ದೇಶಕ ಭಗವಾನ್ ನೆಗೆಟಿವ್ ಆಗಿ ಏನೂ ಮಾತಾಡಿರಲಿಲ್ಲ. ಹಂಸಲೇಖ ಹಾಗೂ ರವಿಚಂದ್ರನ್ ಕಾಂಬಿನೇಷನ್ ಬಗ್ಗೆ ಮಾತಾಡುವಾಗ ಅವರ ಸಿನಿಮಾದ ಸಾಂಗ್ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೊಂದು ಕ್ರಿಯೇಟಿವ್ ಆಗಿ ಹಾಡುಗಳನ್ನು ಶೂಟ್ ಮಾಡುವುದನ್ನೇ ನೋಡಿಯೇ ಇಲ್ಲ ಎಂದಿದ್ದರು.
"ರವಿಚಂದ್ರನ್ ಸಾಂಗ್ ಬಂತು ಅಂದರೆ, ನಾನು ಅವರು ಹಾಡುಗಳನ್ನು ಹೇಗೆ ತೆಗೆದಿದ್ದಾರೆ ಅಂತ ನೋಡುವುದಕ್ಕೆ ಇಷ್ಟ ಪಡುತ್ತೇನೆ. ಅಬ್ಬ ಏನು ಪಿಕ್ಚರ್? ಏನು ಹಾಡು? ಆ ಹಾಡುಗಳಿಗೆ ತಕ್ಕ ಶಾಟ್‌ಗಳು, ಅದಕ್ಕೆ ತಕ್ಕ ಹಂಸಲೇಖ ಅವರ ಲಿರಿಕ್ಸ್ ಬೇರೆ. ಹೀಗೆ ಪ್ರತಿಭಾವಂತರ ಲಿಸ್ಟ್ ಅನ್ನು ತೆಗೆದುಕೊಂಡರೆ, ಬಾಲ ಹಾಗೆ ಬೆಳೆಯುತ್ತಾ ಹೋಗುತ್ತೆ. ನನ್ನ ಜೊತೆಯಲ್ಲಿ ಕೆಲಸ ಮಾಡಿದವರ ಬಗ್ಗೆ ಹೇಳುತ್ತಿದ್ದೇನೆ ಅಷ್ಟೆ." ಎಂದು ದಿವಂಗತ ಹಿರಿಯ ನಿರ್ದೇಶಕ ಭಗವಾನ್ ಹೇಳಿದ್ದರು.


Click it and Unblock the Notifications











