ರಾಜ್‌ಕುಮಾರ್ ಅಭಿಮಾನಿಗಳು ಪುಟ್ಟಣ್ಣ ಕಣಗಾಲ್‌ಗೆ "ಓಲೆ ಹಾಕೋ, ಸೀರೆ ಉಟ್ಕೋ, ಬಳೆ ತೊಟ್ಕೋ" ಎಂದಿದ್ದೇಕೆ?
ಡಾ.ರಾಜ್‌ಕುಮಾರ್ ಹಾಗೂ ಪುಟ್ಟಣ್ಣ ಕಣಗಾಲ್ ಇಬ್ಬರೂ ಕನ್ನಡ ಚಿತ್ರರಂಗದ ಎರಡು ಮುಖಗಳಿದ್ದಂತೆ. ಒಬ್ಬರು ನಟನಾ ಕ್ಷೇತ್ರದಲ್ಲಿ ಸೂಪರ್‌ಸ್ಟಾರ್. ಇನ್ನೊಬ್ಬರು ನಿರ್ದೇಶನದಲ್ಲಿ ಸೂಪರ್‌ಸ್ಟಾರ್. ಈ ಕಾರಣಕ್ಕೆ ಇಬ್ಬರಿಗೂ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಇಂದಿಗೂ ಅಣ್ಣಾವ್ರ ಸಿನಿಮಾಗೆ ಶಿಳ್ಳೆ ಹಾಕುವವರಿದ್ದಾರೆ. ಪುಟ್ಟಣ್ಣ ಕಣಗಾಲ್ ಸಿನಿಮಾಗಳು ಮಾಸ್ಟರ್ ಪೀಸ್ ಅಂತ ಕೊಂಡಾಡುವವರು ಇದ್ದಾರೆ.
ಆದರೆ, ಅದ್ಯಾಕೋ ಇವರಿಬ್ಬರು ಒಟ್ಟಿಗೆ ಸೇರಿ ಸಿನಿಮಾ ಮಾಡಿದ್ದು ಕೇವಲ ಮೂರೇ ಮೂರು. ವಿಚಿತ್ರ ಅಂದರೆ, ಇಬ್ಬರು ದಿಗ್ಗಜರು ಒಟ್ಟಿಗೆ ಸೇರಿದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲೇ ಇಲ್ಲ. ಅದಕ್ಕೆ ಪುಟ್ಟಣ್ಣ ಬೇರೆ ಹಾದಿ ಹಿಡಿದು ಹೊರಟರು. ಇತ್ತ ಅಣ್ಣಾವ್ರ ಹಾದಿ ಬೇರೆನೇ ಆಗಿಬಿಟ್ಟಿತ್ತು. ಆದರೆ, ಅಣ್ಣಾವ್ರ ಅಭಿಮಾನಿಗಳಿಗೆ ಮಾತ್ರ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಬೇಕಿತ್ತು. ಈ ಕಾರಣಕ್ಕೆ ಒಮ್ಮೆ ಪುಟ್ಟಣ್ಣ ಕಣಗಾಲ್‌ರನ್ನು ಮುತ್ತಿಗೆ ಹಾಕಿ, "ಓಲೆ ಹಾಕೋ, ಸೀರೆ ಉಟ್ಕೋ, ಬಳೆ ತೊಟ್ಕೋ" ಎಂದಿದ್ದರು. ಆ ಸಂದರ್ಭ ಯಾವುದು? ಯಾಕೆ ಬಂತು ಅನ್ನೋದನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಅದರ ಝಲಕ್ ಇಲ್ಲಿದೆ.

1972ನೇ ಇಸವಿ, ನವೆಂಬರ್ 17ನೇ ತಾರೀಕು ಬೆಂಗಳೂರಿನ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ 'ಭಲೇ ಹುಚ್ಚ' ಸಿನಿಮಾದ ಶತ ದಿನೋತ್ಸವ ಸಮಾರಂಭ ನಡೆಯುತ್ತೆ. ಅಲ್ಲಿ ವಾಟಾಳ್ ನಾಗರಾಜ್ ಅವರು ಇರುತ್ತಾರೆ. ಆ ವೇಳೆ ಒಟ್ಟಿಗೆ ಸೇರಿದ್ದ ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್, ಕಲ್ಪನಾರನ್ನು ಉದ್ದೇಶಿಸಿ ಇವರ ನಡುವೆ ಕಂದಕವಿದೆ. ಒಂದಿಷ್ಟು ವಿವಾದಗಳು ಕೂಡ ಇದೆ. ಬಹುಶ: ಅದ್ಯಾವುದೂ ಇಲ್ಲಾ ಎಂದು ತೋರಿಸುವುದಕ್ಕಾಗಿ ಇವರೆಲ್ಲರನ್ನೂ ಒಟ್ಟಿಗೆ ಸೇರಿಸಿದ್ದಾರೆಂದು ವಾಟಾಳ್ ನಾಗರಾಜ್ ಹೇಳಿದ್ದರು. ಆ ಬಳಿಕ ಪುಟ್ಟಣ್ಣ ಮಾತಾಡುವ ಸಂದರ್ಭ ಬರುತ್ತೆ. ಆಗ ಅಣ್ಣಾವ್ರ ಅಭಿಮಾನಿಗಳ ಬಗ್ಗೆ ಹೇಳಿದ್ದರು.
"ಹೃದಯ ಸಂಗಮ ಸಿನಿಮಾ ನೋಡಿವುದಕ್ಕೆ ಚಿತ್ರಮಂದಿರಕ್ಕೆ ಹೋಗಿದ್ದೆ. ಅಲ್ಲಿ ರಾಜ್ ಅಭಿಮಾನಿಗಳು ಅಂತ ಹೇಳಿಕೊಳ್ಳುವಂತಹ ಜನ. ನನ್ನನ್ನು ಮುತ್ತಿಗೆ ಹಾಕುತ್ತಾರೆ. ನಮ್ಮ ಗುರುವನ್ನು ಹಾಕಿಕೊಂಡು ಯಾಕೆ ಸಿನಿಮಾ ಮಾಡುವುದಿಲ್ಲ ಅಂತ ಕೇಳುತ್ತಾರೆ. ಓಲೆ ಹಾಕೋ, ಸೀರೆ ಉಟ್ಕೋ, ಬಳೆ ತೊಟ್ಕೋ. ಹೀಗೆಲ್ಲಾ ಮಾತಾಡುತ್ತಾರೆ. ನಾನು ರಾಜ್‌ಕುಮಾರ್ ಅವರನ್ನೇ ಹಾಕೊಂಡು ಸಿನಿಮಾ ಮಾಡುತ್ತೇನೆ ಅಂದರೆ, ನನ್ನ ಹೊಟ್ಟೆ ತುಂಬುವುದು ಹೇಗೆ ಸ್ವಾಮಿ." ಎಂದು ಪುಟ್ಟಣ್ಣ ಕಣಗಾಲ್ ಹೇಳಿದ್ದರು ಎಂದು ಹರಿಹರಪುರ ಮಂಜುನಾಥ್ ಹೇಳಿದ್ದಾರೆ.
ಇತ್ತ ಅಣ್ಣಾವ್ರು ಕೂಡ "ಎಲ್ಲರೂ ನನ್ನ ಸಿನಿಮಾದಲ್ಲಿ ಏಕತಾನತೆ ಇರುತ್ತೆ ಅಂತಾರೆ. ಆದರೆ, ನನ್ನ ಸಿನಿಮಾ ಒಂದರ ಹಿಂದೊಂದು ಸಿನಿಮಾಗಳು ಗೆಲ್ಲುತ್ತಲೇ ಇವೆ. ಹಾಗಂತ ನನ್ನ ಅಭಿನಯದಿಂದ ಗೆದ್ದಿವೆ ಅಂತಲ್ಲ. ನನ್ನ ನಟನೆ ನಿಮ್ಮ ರಾಜ್‌ಕುಮಾರ್‌ಗೆ ತೃಪ್ತಿಕೊಟ್ಟಿಲ್ಲ. ಅದಕ್ಕೆ ನೂರಾರು ರಾಜ್‌ಕುಮಾರ್ ಬರಬೇಕು. ಪುಟ್ಟಣ್ಣ ಅವರಿಗೆ ಕೋಪವನ್ನು ಒಳಗೆ ಇಟ್ಟುಕೊಳ್ಳುವುದಕ್ಕೆ ಬರುವುದಿಲ್ಲ. ಅವರು ಹೊರಗೆ ಹಾಕುತ್ತಾರೆ. ಆದರೆ, ನಾನು ಕೋಪವನ್ನು ಒಳಗೆ ಇಟ್ಟುಕೊಂಡಿದ್ದೇನೆ" ಎಂದು ಅದೇ ವೇದಿಕೆ ಮೇಲೆ ಪ್ರತಿಕ್ರಿಯೆ ನೀಡುತ್ತಾರೆ.

ದೇಶದಲ್ಲಿ ಮಹಾನ್ ವ್ಯಕ್ತಿಗಳು ಹುಟ್ಟೋದು ಆಗೊಮ್ಮೆ ಈಗೊಮ್ಮೆ ಮಾತ್ರ. ಇಂದಿರಾ ಗಾಂಧಿಯವರು ಮಹಾನ್ ವ್ಯಕ್ತಿ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್ ಕೂಡ ಒಬ್ಬ ಮಹಾನ್ ವ್ಯಕ್ತಿ. ಈ ಮಾತನ್ನು ಪುಟ್ಟಣ್ಣನವರು ಅದೇ ವೇದಿಕೆ ಮೇಲೆ ಹೇಳುತ್ತಾರೆ ಎಂದು ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
"ಪುಟ್ಟಣ್ಣನವರಿಗೆ ರಾಜ್‌ಕುಮಾರ್ ಅವರನ್ನು ನಿರ್ದೇಶಿಸುವ ಅವಕಾಶ ಬರುತ್ತೆ. ಮೂರು ಅವಕಾಶಗಳು ಸಿಗುತ್ತೆ. ಅವರು ಶಕ್ತಿ ಮೀರಿ ಯತ್ನಿಸುತ್ತಾರೆ. ಆದರೆ, ಚಿತ್ರ ಅಷ್ಟಾಗಿ ಯಶಸ್ಸು ಕಾಣದೇ ಇದ್ದಿದ್ದರಿಂದ ಆ ಜೋಡಿ ಮುರಿದು ಬೀಳುತ್ತೆ. ಮುಂದೆ ಪುಟ್ಟಣ್ಣನವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ, ರಾಜ್‌ಕುಮಾರ್ ಅವರು ಪದೇ ಪದೆ ಹೋಗಿ ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಬರುತ್ತಾರೆ. ಅವರನ್ನು ಹುರಿದುಂಬಿಸುತ್ತಾರೆ. ಮತ್ತೆ ಒಟ್ಟಿಗೆ ಕೆಲಸ ಮಾಡೋಣ ಅಂತ ಹೇಳುತ್ತಾರೆ. ಅಲ್ಲಿಗೆ ಪುಟ್ಟಣ್ಣ ಅವರಿಗೆ ಮನಸ್ಸಿನಲ್ಲಿದ್ದ ಕಹಿಯೆಲ್ಲ ಹೊರಟು ಹೋಗುತ್ತೆ. ರಾಜ್‌ಕುಮಾರ್ ಅವರ ಮೇಲೆ ಒಳ್ಳೆಯ ಭಾವವನ್ನು ಒಟ್ಟುಕೊಂಡು ಈ ಲೋಕದಿಂದ ನಿರ್ಗಮಿಸುತ್ತಾರೆ" ಎಂದು ಪುಟ್ಟಣ್ಣ ಹಾಗೂ ರಾಜ್‌ಕುಮಾರ್ ಅವರ ಬಾಂಧವ್ಯದ ಬಗ್ಗೆ ಹೇಳಿದ್ದಾರೆ.


Click it and Unblock the Notifications











