ಅಣ್ಣಾವ್ರ ಜೊತೆ ಜೂಲಿ ಲಕ್ಷ್ಮಿ ಯಾಕೆ ಹೆಚ್ಚು ಸಿನಿಮಾ ಮಾಡಲಿಲ್ಲ? ವರನಟ ಕೊಟ್ಟಿದ್ದ ಕಾರಣವೇನು?
ಅಣ್ಣಾವ್ರ ಜೊತೆ ಸಿನಿಮಾ ಮಾಡಬೇಕು ಅನ್ನೋದು ಅಂದಿನ ಕಾಲದ ನಾಯಕಿಯರ ಮಹದಾಸೆ ಆಗಿತ್ತು. ಆದರೆ ಎಲ್ಲರಿಗೂ ಆ ಅವಕಾಶ ಸಿಗುತ್ತಿರಲಿಲ್ಲ. ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಿದ್ದ ರಾಜ್‌ಕುಮಾರ್ ಸಿನಿಮಾಗಳಲ್ಲಿ ಹೆಚ್ಚಾಗಿ ನಾಯಕಿಯರು ರಿಪೀಟ್ ಆಗುತ್ತಿದ್ದರು. ಆ ಜೋಡಿ ಜನರಿಗೆ ಇಷ್ಟ ಆಗುತ್ತಿದ್ದರು. ಇಂತಹ ಜೋಡಿಗಳಲ್ಲಿ ಒಬ್ಬರು ರಾಜ್‌ಕುಮಾರ್ ಹಾಗೂ ಲಕ್ಷ್ಮಿ ಕೂಡ ಸಿಗುತ್ತಾರೆ.
ಅಣ್ಣಾವ್ರು ಹಾಗೂ ಲಕ್ಷ್ಮಿ ಇಬ್ಬರ ತೆರೆಮೇಲೆ ಶಿಳ್ಳೆಗಳೇನು ಕಮ್ಮಿ ಬೀಳುತ್ತಿರಲಿಲ್ಲ. ಇಬ್ಬರನ್ನು ತೆರೆಮೇಲೆ ಅಭಿಮಾನಿಗಳು ನೋಡಿ ಮೆಚ್ಚಿದ್ದರು. ಸ್ಕ್ರೀನ್ ಮೇಲೆ ರಾಜ್‌ಕುಮಾರ್ ಹಾಗೂ ಲಕ್ಷ್ಮಿಯ ರೊಮ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇಷ್ಟ ಆಗುತ್ತಿತ್ತು. ಪದೇ ಪದೆ ಇಬ್ಬರನ್ನೂ ಒಟ್ಟಿಗೆ ನೋಡುವುದಕ್ಕೆ ಇಷ್ಟ ಪಡುತ್ತಿದ್ದರು. ಆದರೆ, ಹಾಗಾಗಲಿಲ್ಲ. ಈ ಜೋಡಿ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಒಂದು ವೇಳೆ ನಟಿಸಿದ್ದರೆ, ಇನ್ನೊಂದು ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಬಹುದಿತ್ತೇನೋ.

ಇಬ್ಬರು ಸುಂದರವಾದ ನಟರು ನಟಿಸಿದ್ದು ಬೆರಳೆಣಿಕೆಯಷ್ಟು. ಸೂಪರ್ ಹಿಟ್ ಜೋಡಿ ಯಾಕೆ ಹೆಚ್ಚು ಸಿನಿಮಾಗಳನ್ನು ಮಾಡಲಿಲ್ಲ? ಇಂತಹದ್ದೊಂದು ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಸ್ವತ: ಅಣ್ಣಾವ್ರೇ ಉತ್ತರ ಕೊಟ್ಟಿದ್ದರು. ಹಿರಿಯ ಪತ್ರಕರ್ತ ಶ್ರೀಧರ ಮೂರ್ತಿ ಈ ಪ್ರಶ್ನೆಯನ್ನು ಇಟ್ಟಿದ್ದರು. ಅದಕ್ಕೆ ವರನಟ ಕೊಟ್ಟ ಉತ್ತರವೇನು? ಅನ್ನೋದನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
ರಾಜ್‌ಕುಮಾರ್ ಹಾಗೂ ಲಕ್ಷ್ಮಿ ಇಬ್ಬರೂ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ 'ಗೋವಾದಲ್ಲಿ ಸಿಐಟಿ 999'. ಈ ಸಿನಿಮಾದ ಮೂಲಕ ಗ್ಲಾಮರ್ಸ್ ಪಾತ್ರದಲ್ಲಿ ನಟಿಸಿದ್ದರು. ಇಲ್ಲಿಂದ ಈ ಜೋಡಿ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಶುರು ಮಾಡಿದ್ದರು. ಅದಕ್ಕೆ ಅದು ಕೆಲವೇ ಸಿನಿಮಾಗಳಿಗೆ ಸೀಮಿತ ಆಗೋಯ್ತು. "ಲಕ್ಷ್ಮಿ ಮತ್ತು ರಾಜ್‌ಕುಮಾರ್ ಇಬ್ಬರು ಸುರಸುಂದರಾಂಗ ಕಲಾವಿದರು. ಹಾಗೇ ಬಹಳ ಪ್ರಬುದ್ಧ ಕಲಾವಿದರು. ಆದರೆ, ಹೆಚ್ಚು ಸಿನಿಮಾಗಳನ್ನು ಇಬ್ಬರೂ ಒಟ್ಟಿಗೆ ಮಾಡಲಿಲ್ಲ. ಅದು ನಮ್ಮ ದುರಾದೃಷ್ಟ ಅಂತ ಹೇಳಿಕೊಳ್ಳಬೇಕು ಅಷ್ಟೇ. ಆದರೆ, ಜೊತೆಯಾಗಿ ವಿಭಿನ್ನ ಸಿನಿಮಾಗಳನ್ನು ಮಾಡಿದರು." ಎನ್ನುತ್ತಾರೆ ಹಿರಿಯ ಪತ್ರಕರ್ತ ಶ್ರೀಧರ ಮೂರ್ತಿ.

'ಗೋವಾದಲ್ಲಿ ಸಿಐಡಿ 999' ಸಿನಿಮಾ ಬಳಿಕ ಲಕ್ಷ್ಮಿ ಕನ್ನಡ ಚಿತ್ರರಂಗದ ದೂರ ಉಳಿದಿದ್ದರು. ಸರಿ ಸುಮಾರು ಎಂಟು ವರ್ಷ ಕನ್ನಡ ಸಿನಿಮಾವನ್ನೇ ಮಾಡಿರಲಿಲ್ಲ. ಮತ್ತೆ ಅಣ್ಣಾವ್ರು ನಟಿಸಿದ 'ನಾ ನಿನ್ನ ಮರೆಯಲಾರೆ' ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಿನಿಮಾವನ್ನೇ ನಿರ್ಮಾಣ ಮಾಡಿತ್ತು. ಬೈಕ್ ರೇಸ್ ಅಂತಹ ಮೈಜುಂ ಎನ್ನುವಂತಹ ದೃಶ್ಯಗಳನ್ನು ಸೃಷ್ಟಿ ಮಾಡಿದಂತಹ ಸಿನಿಮಾ 'ನಾ ನಿನ್ನ ಮರೆಯಲಾರೆ'.
"ನಾ ನಿನ್ನ ಮರೆಯಲಾರ ಸಿನಿಮಾದ ಬಗ್ಗೆ ಬಹಳ ಕುತೂಹಲಕಾರಿಯಾದ ಸಂಗತಿಗಳನ್ನು ಹೇಳಬೇಕು. ಈ ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ಲಕ್ಷ್ಮಿ ನೆನಪಿಸಿಕೊಳ್ಳುತ್ತಿದ್ದರು. ಈ ಸಿನಿಮಾದ ಅನೇಕ ದೃಶ್ಯಗಳನ್ನು ರಾಜ್‌ಕುಮಾರ್ ಡ್ಯೂಪ್ ಇಲ್ಲದೆ ನಟಿಸಿದ್ದಾರೆ. ಬೈಕ್ ರೇಸ್‌ನಲ್ಲಿ ಲಕ್ಷ್ಮಿಯನ್ನು ಕೂರಿಸಿಕೊಂಡು ಹೋಗುವ ದೃಶ್ಯ ಬರುತ್ತೆ. ಅಣ್ಣಾವ್ರು ಅಷ್ಟು ವೇಗವಾಗಿ ಬೈಕ್ ಓಡಿಸುವುದನ್ನು ನೋಡಿ ನನಗೆ ಭಯ ಆಗೋದು ಅನ್ನೋ ಮಾತನ್ನು ಹೇಳೋರು." ಎಂದು ಹಿರಿಯ ನಟಿ ಲಕ್ಷ್ಮಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.
ಅಣ್ಣಾವ್ರ ಜೊತೆ ಲಕ್ಷ್ಮಿ ನಟಿಸಿದ್ದು ಕೇವಲ ಐದು ಸಿನಿಮಾಗಳು ಅಷ್ಟೇ. ಮತ್ತೆಂದು ಈ ಜೋಡಿ ಒಟ್ಟಿಗೆ ನಟಿಸಲೇ ಇಲ್ಲ. ಅದಕ್ಕೆ ಕಾರಣವನ್ನು ರಾಜ್‌ಕುಮಾರ್ ಹಿರಿಯ ಪತ್ರಕರ್ತಿ ಶ್ರೀಧರ ಮೂರ್ತಿ ಬಳಿ ಹೇಳಿಕೊಂಡಿದ್ದರು. "ಈ ಜೋಡಿಯ ಕೊನೆಯ ಸಿನಿಮಾ ಬಂದಿದ್ದು ರವಿಚಂದ್ರ. ಈ ಸಿನಿಮಾದಲ್ಲಿ ಅಣ್ಣಾವ್ರು ರವಿ ಮತ್ತು ಚಂದ್ರ ಅನ್ನುವ ಎರಡು ತರಹದ ಪಾತ್ರ ಮಾಡಿದ್ದರು. ಇದರಲ್ಲಿ ರವಿ ಜೊತೆಗಿನ ಪಾತ್ರದಲ್ಲಿ ಲಕ್ಷ್ಮಿ ನಡಿಸಿದ್ದರು. ನಾನು ಇಬ್ಬರನ್ನೂ ಯಾಕೆ ಇನ್ನಷ್ಟು ಸಿನಿಮಾ ಮಾಡಿಲ್ಲ ಅಂತ ಕೇಳಿದ್ದೆ. ಅದಕ್ಕೆ ಅವರು ನಮಗೆ ಇನ್ನಷ್ಟು ಸಿನಿಮಾ ಮಾಡಬೇಕು ಅಂತ ಇತ್ತು. ಆದರೆ, ಅವರು ಬ್ಯುಸಿಯಾಗಿದ್ದ ಕಲಾವಿದೆಯಾಗಿದ್ದರಿಂದ ಆಗಲಿಲ್ಲ ಅಂದರು." ಎಂದಿದ್ದಾರೆ.


Click it and Unblock the Notifications











