ಶಬರಿಮಲೆ.. ಆಧ್ಯಾತ್ಮ.. ಹಿರಿಯ ನಟಿ ಸಿತಾರಾ ಈಗ ಏನ್ಮಾಡ್ತಿದ್ದಾರೆ? ಸಿನಿಮಾಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ?
ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಮಲಯಾಳಂನ ಸಿತಾರಾ ಕೂಡ ಒಬ್ಬರು. ಒಂದು ಕಾಲದಲ್ಲಿ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಸಿತಾರಾ ನಟಿಸುತ್ತಿದ್ದರು. ಇಂತಹ ನಟಿ ಪೋಷಕ ಪಾತ್ರಗಳಲ್ಲೂ ನಟಿಸುತ್ತಿದ್ದರು. ಆದ್ರೀಗ ದಿಢೀರನೇ ಅವಕಾಶಗಳು ಕಡಿಮೆಯಾಗಿವೆ.
ಕನ್ನಡದಲ್ಲೂ ಸಿತಾರಾ ನಟಿಸಿದ ಬಹುತೇಕ ಸಿನಿಮಾಗಳು ಜನಪ್ರಿಯವಾಗಿದ್ದವು. 1994ರಲ್ಲಿ ತೆರೆಕಂಡಿದ್ದ 'ಹಾಲುಂಡ ತವರು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ಅಮ್ಮ ಐ ಲವ್ ಯು' ಸಿನಿಮಾವರೆಗೂ ನಟಿಸಿದ್ದಾರೆ.

ಕನ್ನಡದಲ್ಲಿಯೇ ಸುಮಾರು 30ಕ್ಕೂ ಅಧಿಕ ಸಿನಿಮಾಗಳಲ್ಲಿ ಸಿತಾರಾ ನಟಿಸಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಕನ್ನಡಿಗರ ಫೆವರೀಟ್ ನಟಿಯಾಗಿದ್ದರು. ಕಾಲ ಕ್ರಮೇಣ ಸಿತಾರಾ ಪೋಷಕ ಪಾತ್ರಗಳಿಗೆ ಶಿಫ್ಟ್ ಆಗಿದ್ದರು. ಆದ್ರೀಗ ಬಹುತೇಕ ಸಿನಿಮಾದಿಂದಲೇ ಕಣ್ಮರೆಯಾಗಿದ್ದಾರೆ. ಅಂದು ಸ್ಟಾರ್ ನಟಿಯಾಗಿ ಮೆರೆದ ನಟಿಗೆ ಈಗ್ಯಾಕೆ ಅವಕಾಶಗಳು ಸಿಗುತ್ತಿಲ್ಲ? ಇದಕ್ಕೆ ತಮಿಳಿನ ವಿವಾದಾತ್ಮಕ ಪತ್ರಕರ್ತ ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ರಜನಿ ತಂಗಿಯಾಗಿ ನಟಿಸಿದ್ದ ಸಿತಾರಾ
ಸಿತಾರಾ ಕೇವಲ ಕನ್ನಡದಲ್ಲಷ್ಟೇ ಅಲ್ಲ. ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯ ಸಾಕಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ಯಾವುದೇ ಮೂಲೆಗೆ ಹೋದರೂ ನಟಿ ಸಿತಾರಾ ಚಿರಪರಿಚಿತ. ಕೌಟುಂಬಿಕ ಸಿನಿಮಾಗಳನ್ನು ಇಷ್ಟ ಪಡುವ ಪ್ರೇಕ್ಷಕರ ಅಚ್ಚು ಮೆಚ್ಚಿನ ನಟಿಯಾಗಿದ್ದರು. 1986ರಲ್ಲಿ ಕಾವೇರಿ ಅನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕ ಎಂಟ್ರಿ ಕೊಟ್ಟಿದ್ದರು. ಆದರೆ, ರಜನಿಕಾಂತ್ ಅಭಿನಯದ 'ಪಡೆಯಪ್ಪ' ಸಿನಿಮಾದಲ್ಲಿ ತಂಗಿಯಾಗಿ ನಟಿಸಿದ್ದರು. ಇಲ್ಲಿಂದ ಸಿತಾರಾಗೆ ದಕ್ಷಿಣ ಭಾರತದಲ್ಲಿ ಅವಕಾಶಗಳು ಹುಡುಕಿಕೊಂಡು ಬಂದಿದ್ದವು.
ಗ್ಲಾಮರ್ ಪಾತ್ರಗಳನ್ನು ನಿರಾಕರಿಸಿದ್ದ ಸಿತಾರಾ
ಒಂದು ಕಾಲದಲ್ಲಿ ಸಿತಾರಾ ಯಶಸ್ಸಿನ ಉತ್ತುಂಗದಲ್ಲಿದ್ದರು. ಒಪ್ಪಿಕೊಂಡ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಈ ವೇಳೆ ಸಿತಾರಾ ಗ್ಲಾಮರ್ ಪಾತ್ರಗಳಲ್ಲಿ ನಟಿಸುವುದನ್ನು ನಿರಾಕರಿಸಿದ್ದರು. ಅಲ್ಲದೆ ತೆರೆಮೇಲೂ ಸಿತಾರಾ ಗ್ಲಾಮರ್ ಡ್ರೆಸ್‌ನಲ್ಲೂ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಸಿತಾರಾ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ಹೆಚ್ಚು ಅವಕಾಶಗಳು ಸಿಕ್ಕಿದ್ದವು.

ಸಿತಾರಾ ಸೈಲೆಂಟ್ ಆಗಿರಲು ಏನು ಕಾರಣ?
ಸಿತಾರಾ ಕನ್ನಡ ಸಿನಿಮಾದಲ್ಲಿ ನಟಿಸದೇ ನಾಲ್ಕು ವರ್ಷಗಳಾಗಿವೆ. ಅದೇ ಮಲಯಾಳಂನಲ್ಲಿ 8 ವರ್ಷಗಳಾಗಿವೆ. ತೆಲುಗಿನಲ್ಲೂ ನಾಲ್ಕು ವರ್ಷಗಳ ಅಂತರದಲ್ಲಿ ನಟಿಸಿದ್ದು ಒಂದೇ ಸಿನಿಮಾ. ಹಾಗೇ ತಮಿಳಿನಲ್ಲೂ 2018ರಲ್ಲಿ ನಟಿಸಿದ್ದೇ ಕೊನೆ. "ಆರಂಭದ ದಿನಗಳಲ್ಲಿ ಸಿತಾರಾ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಕ್ಕೆ ನಿರಾಕರಿಸಿದ್ದರು. ಹೀಗಾಗಿ ಕೆಲವು ವರ್ಷಗಳ ಬಳಿಕ ಅವರಿಗೆ ನಾಯಕಿಯಾಗಿ ನಟಿಸುವುದಕ್ಕೆ ಹೆಚ್ಚು ಅವಕಾಶಗಳು ಸಿಗಲಿಲ್ಲ" ಎಂದು ಬೈಲ್ವಾನ್ ರಂಗನಾಥ್ ಹೇಳಿಕೆ ಕೊಟ್ಟಿದ್ದಾರೆ.
ಆಧ್ಯಾತ್ಮದ ಕಡೆಗೆ ವಾಲಿದ್ರಾ ಸಿತಾರಾ?
ಇತ್ತೀಚೆಗೆ ಬಹುಭಾಷಾ ನಟಿ ಶರಿಮಲೆಗೆ ಭೇಟಿ ಕೊಟ್ಟಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ತಂದೆ ನಿಧನದ ಬಳಿಕ ಸಿತಾರಾ ಮದುವೆ ಆಗದೇ ಉಳಿಯಲು ನಿರ್ಧರಿಸಿದ್ದರು. ಈ ಬೆನ್ನಲ್ಲೇ ಈಗ ಒಂಟಿಯಾಗಿರೋ ನಟಿ ಆಧ್ಯಾತ್ಮದ ಕಡೆ ವಾಲಿರಬಹುದು ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಸದ್ಯ ಸಿತಾರಾ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.


Click it and Unblock the Notifications











