'ಗಂಧದ ಗುಡಿ' ಸಿನಿಮಾಗೆ ವಿಷ್ಣುವರ್ಧನ್ ಯಾಕೆ ಹೀರೋ ಆಗಲಿಲ್ಲ? ಎಂಪಿ ಶಂಕರ್ ಅಣ್ಣಾವ್ರನ್ನ ಆಯ್ಕೆ ಮಾಡಿದ್ದೇಕೆ?
ಕನ್ನಡ ಚಿತ್ರರಂಗದಲ್ಲಿ 'ಗಂಧದ ಗುಡಿ' ವಿವಾದ ಇನ್ನೂ ಐವತ್ತು ವರ್ಷಗಳಾದರೂ ಚರ್ಚೆಯಾಗುತ್ತಲೇ ಇರುತ್ತೆ. ಅಣ್ಣಾವ್ರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ನೂರೆಂಟು ಆಯಾಮಗಳನ್ನು ಕೊಟ್ಟು ಹಲವು ಮಂದಿ ಮಾತಾಡಿದ್ದೂ ಇದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಡಾ.ರಾಜ್‌ಕುಮಾರ್ ಅವರ ಮೇಲೆ ಗುಂಡು ಹಾರಿತ್ತು. ಕೂದಲೆಳೆಯ ಅಂತರದಿಂದ ಅಣ್ಣಾವ್ರು ಪಾರಾಗಿದ್ದರು. ಈ ಘಟನೆಯ ಬಳಿಕ ಡಾ.ವಿಷ್ಣುವರ್ಧನ್ ಅವರ ಹೆಸರು ತಳುಕು ಹಾಕಿಕೊಂಡಿತ್ತು.
ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ಬೆಂಗಳೂರಿನಲ್ಲಿ ಜನರು ರೊಚ್ಚಿಗೆದ್ದಿದ್ದರು. ಈ ಘಟನೆಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೇಲೆ ಆರೋಪಗಳ ಮಾಡಲಾಗಿತ್ತು. ಇದರಿಂದ ಹೊರ ಬರುವುದಕ್ಕೆ ವಿಷ್ಣುದಾದಗೆ ಸಾಕಷ್ಟು ಸಮಯ ಹಿಡಿದಿತ್ತು. ಆ ವೇಳೆ ಮಾನಸಿಕ ಹಿಂಸೆಯನ್ನು ಅನುಭವಿಸಿದ್ದರು.

ಕೆಲವರು ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರ ನಡುವೆ ತಂದಿಟ್ಟು ಮಜಾ ನೋಡಿದ್ದರು. ಇದೇ ಸಿನಿಮಾ ಯಶಸ್ಸು ಕಂಡ ವೇಳೆ ಎಂಪಿ ಶಂಕರ್ ಅವರಿಗೆ ಕಥೆ ಗಟ್ಟಿಯಾಗಿದ್ದರೂ ರಾಜ್‌ಕುಮಾರ್ ಅವರನ್ನೇ ಯಾಕೆ ಹೀರೋ ಮಾಡಿದ್ರಿ. ಹೊಸಬರಿಗೆ ಅವಕಾಶ ಕೊಡಬಹುದಲ್ಲವೇ ಎಂದು ಕೆಲವರು ಪ್ರಶ್ನೆ ಮಾಡಿದ್ದರಂತೆ. ಆಗ ಎಂಪಿ ಶಂಕರ್ ಕೊಟ್ಟ ಉತ್ತರವೇನಿತ್ತು? ಕೆಲವರು ವಿಷ್ಣುವರ್ಧನ್ ಅವರನ್ನು ಯಾಕೆ ಹೀರೋ ಮಾಡಲಿಲ್ಲ ಎಂದಿದ್ದರಂತೆ. ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
'ಗಂಧದ ಗುಡಿ' ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಕಂಡಿತ್ತು. ವಿವಾದಗಳೆಲ್ಲ ಮುಗಿದು ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದ ಸಿನಿಮಾವನ್ನು ಸಿನಿಪ್ರಿಯರು ಮುಗಿಬಿದ್ದು ನೋಡಿದ್ದರು. ಇದೇ ಖುಷಿಯಲ್ಲಿ ಚಿತ್ರತಂಡ ಸಂತೋಷ ಕೂಟವನ್ನು ಹಮ್ಮಿಕೊಂಡಿದ್ದರು. ಆ ವೇಳೆ ಪುಟ್ಟಣ್ಣ ಕಣಗಾಲ್ ಅವರನ್ನು ಅತಿಥಿಯಾಗಿ ಆಹ್ವಾನಿಸಿರುತ್ತಾರೆ. ಈ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತೆ. ಅದನ್ನು ಹರಿಹರಪುರ ಮಂಜುನಾಥ್ ವಿವರಿಸಿದ್ದಾರೆ.

"ಗಂಧದಗುಡಿ ಶತದಿನೋತ್ಸವ ಆಚರಿಸಿದ ಸಂತೋಷ ಕೂಟದಲ್ಲಿ ಒಂದು ಘಟನೆ ನಡೀತು. ಬೆಂಗಳೂರಿನ ಒಂದು ಪ್ರತಿಷ್ಠಿತ ವುಡ್ಸ್‌ಲ್ಯಾಂಡ್ ಹೋಟೆಲ್‌ನಲ್ಲಿ ಈ ಶತದಿನೋತ್ಸವ ಸಂಭ್ರಮವನ್ನು ಆಚರಿಸಲಾಗಿರುತ್ತೆ. ಇಡೀ ಚಿತ್ರೋದ್ಯಮ ಗಂಧದ ಗುಡಿಯನ್ನು ನೋಡಿ ಹುಚ್ಚೆದ್ದು ಕುಣಿದಿರುತ್ತೆ. 250 ನೆನಪಿನ ಫಲಕಗಳನ್ನು ಮಾಡಿಸಿರುತ್ತಾರೆ. ಅದನ್ನು ಕೊಡುವುದಕ್ಕೆ ಪುಟ್ಟಣ್ಣ ಕಣಗಾಲ್ ಅವರನ್ನು ಕರೆಸಿರುತ್ತಾರೆ. ಇಲ್ಲಿಗೆ ಪುಟ್ಟಣ್ಣ ಕಣಗಾಲ್ ಯಾಕೆ ಬರುತ್ತಾರೆ ಅಂದರೆ, ಈ ಟೈಟಲ್ ಅವರ ಕೈನಲ್ಲಿ ಇತ್ತು. ಇದು ಎಂ.ಪಿ ಶಂಕರ್ ಅವರಿಗೆ ಗೊತ್ತಾದಾಗ, ತಮ್ಮ ಪ್ರೀತಿ ಪಾತ್ರರಾಗಿದ್ದರಿಂದ ಬೆನ್ನು ತಟ್ಟಿ ಆ ಶೀರ್ಷಿಕೆಯನ್ನು ಕೊಡುತ್ತಾರೆ. ಹೀಗಾಗಿ ಅವರನ್ನು ನೆನೆದ ಹಾಗೂ ಆಯ್ತು. ಅವರಿಗೆ ಸನ್ಮಾನ ಮಾಡಿದ ಹಾಗಿಯೂ ಆಯ್ತು ಎಂದು ಕೊಂಡಿದ್ದರು. ರಾಜ್‌ಕುಮಾರ್,ವಿಷ್ಣುವರ್ಧನ್ ಎಲ್ಲರೂ ಸಮಾರಂಭಕ್ಕೆ ಬಂದಿದ್ದರು. ಎಲ್ಲರಿಗೂ ಫಲಕಗಳನ್ನು ವಿತರಣೆ ಮಾಡಲಾಯಿತು." ಎಂದು ಆ ದಿನ ಕಾರ್ಯಕ್ರಮವನ್ನು ನೆನಪಿಸಿಕೊಂಡಿದ್ದಾರೆ.
ಅದೇ ಕಾರ್ಯಕ್ರಮದಂದು ಪತ್ರಕರ್ತರಿಗೆ ಸಂತೋಷ ಕೂಟವನ್ನು ಏರ್ಪಡಿಸಿದ್ದರು. ಆ ಸಂತೋಷ ಕೂಡದಲ್ಲಿ ಸ್ವಲ್ಪ ಹೊತ್ತು ಇದ್ದು ವೀರಾಸ್ವಾಮಿಯವರು ಹೊರಟು ಹೋಗುತ್ತಾರೆ. ಎಲ್ಲಿ ಎಂಪಿ ಶಂಕರ್ ಅವರು ಒಬ್ಬರೇ ಉಳಿದುಕೊಳ್ಳುತ್ತಾರೆ. ಅಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್ ಯಾರೂ ಇರುವುದಿಲ್ಲ. ಅವರು ಸಮಾರಂಭವನ್ನು ಮುಗಿಸಿಕೊಂಡು ಹೊರಟು ಹೋಗಿರುತ್ತಾರೆ. ನಿಧಾನವಾಗಿ ಗೋಷ್ಟಿಯಲ್ಲಿ ಮಾತುಕತೆ ಆರಂಭ ಆಗುತ್ತೆ. ಆಗ ಎಂ ಪಿ ಶಂಕರ್ ಅವರ ಕಡೆ ಬಾಣಗಳು ತೂರಿ ಬರುವುದಕ್ಕೆ ಶುರುವಾಗುತ್ತೆ.

"ಚಿತ್ರ ಯಶಸ್ವಿಯಾಗಿದೆ. ಕನ್ನಡ ನಾಡು ಮೆಚ್ಚುಕೊಂಡಿದೆ. ಅದು ಶತದಿನೋತ್ಸವವನ್ನು ಕೂಡ ಆಚರಿಸಿದೆ. ಅದರ ಸಂಭ್ರಮದಲ್ಲಿರುವಾಗ, ಅದರ ಬಗ್ಗೆ ಮಾತಾಡುವುದನ್ನು ಬಿಟ್ಟು ಕೆಲ ಪತ್ರಕರ್ತರು ಕೆಲವು ಅಡ್ಡ ಪ್ರಶ್ನೆಗಳನ್ನು ಮಾಡುವುದಕ್ಕೆ ಆರಂಭ ಮಾಡುತ್ತಾರೆ. ಗಂಧದ ಗುಡಿ ಒಳ್ಳೆಯ ಸಿನಿಮಾ ಆಗುತ್ತೆ ಅಂತ ಗೊತ್ತಿದ್ದರೂ ಯಾಕೆ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಿದ್ರಿ ಎಂಬ ಪ್ರಶ್ನೆ ಬರುತ್ತೆ. ಎಂಪಿ ಶಂಕರ್ ಅವರು ಕೂಡ ಇದು ತಮಾಷೆಗೆ ಕೇಳಿರಬೇಕು ಎಂದು ಹಾಗೇ ಉತ್ತರ ಕೊಡುತ್ತಾರೆ. ಕೆಲವು ಸಮಯದ ನಂತ್ರ ಎಂ.ಪಿ ಶಂಕರ್‌ಗೆ ನನ್ನನ್ನು ಯಾರೋ ಟಾರ್ಗೆಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ ಅಂತ ಅನಿಸುವುದಕ್ಕೆ ಶುರುವಾಗುತ್ತೆ." ಎನ್ನುತ್ತಾರೆ ಹರಿಹರಪುರ ಮಂಜನಾಥ್.
ಈ ಸಿನಿಮಾದ ಕಥೆಯನ್ನು ಮಾಡುವಾಗಲೇ ಅಣ್ಣಾವ್ರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ವಿ ಎಂದು ಎಂಪಿ ಶಂಕರ್ ಹೇಳುತ್ತಾರೆ. ಅವರಷ್ಟು ಪ್ರಬುದ್ಧರಾದಂತಹ ಕಲಾವಿದರು, ಅವರ ನಿಲುವು, ಅವರ ಕಂಠ, ಆ ಪಾತ್ರಕ್ಕೆ ಹೊಂದಿಕೆಯಾಗುವಂತಹ ಬೇರೆ ಯಾವ ಕಲಾವಿದರು ಇದ್ದರು ಹೇಳಿ ಎಂದಾಗ, ಆಗ ಪತ್ರಕರ್ತರು ಒಂದೊಳ್ಳೆ ಕಥೆ ಇದ್ದಾಗ, ಬೇರೊಬ್ಬ ಕಲಾವಿದರಿಗೆ ಬ್ರೇಕ್ ಕೊಡಬಹುದಿತ್ತಲ್ಲ ಎಂದು ಹೇಳುತ್ತಾರೆ. ಕೆಲವರು ವಿಷ್ಣುವರ್ಧನ್ ಅವರಿಗೆ ಬ್ರೇಕ್ ಕೊಡಬಹುದಿತ್ತಲ್ಲ ಎಂದು ಪ್ರಶ್ನೆ ಕೇಳುತ್ತಾರೆ.
ಆಗ ಎಂ.ಪಿ ಶಂಕರ್ ಶಂಕರ್ ಅವರು ಸಮಾಧಾನದಿಂದ ಉತ್ತರ ಕೊಡುತ್ತಾರೆ. ಈ ಸಿನಿಮಾ ಆರಂಭ ಮಾಡಿದಾಗ ವಿವಾದಗಳು ಎದ್ದಿದ್ದವು. ಈಶ್ ಅವರು ಈ ಕಥೆ ನನ್ನದು ಎಂದು ರಾಜ್‌ಕುಮಾರ್ ಮನೆಯ ಮೆಟ್ಟಿಲೇರಿದ್ದರು. ಈ ವಿವಾದಗಳು ಪತ್ರಕರ್ತರಿಗೂ ಗೊತ್ತಿದೆ. ನೀವು ಅವತ್ತೇ ಹೇಳಬಹುದಿತ್ತಲ್ಲ. ಆಗ ನಾನು ಯೋಚನೆ ಮಾಡುತ್ತಿದ್ದೆ. ಈಗ ಹೇಳಿದರೆ ಹೇಗೆ? ಎಂದು ಎಂ.ಪಿ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ನೊಂದುಕೊಳ್ಳುತ್ತಾರೆ.
"ಗಂಧದಗುಡಿ ಮಾಡುವಾಗ ವಿಷ್ಣುವರ್ಧನ್ ಹುಡುಕಾಟದ ಯುವಕ. ಈ ಸಿನಿಮಾದ ಚಿತ್ರೀಕರಣ ಮಾಡುವಾಗ ಸದಾ ಕಾಲ ವಾರ ಕೈಯಲ್ಲಿ ಒಂದು ಗನ್ ಇರುತ್ತಿತ್ತು. ಆಗ ತಮಾಷೆ ಶೂಟಿಂಗ್‌ನಲ್ಲಿ ಇದ್ದವರನ್ನು ಶೂಟ್ ಮಾಡುತ್ತೇನೆ ಹ್ಯಾಂಡ್ಸ್ ಅಪ್ ಎನ್ನುತ್ತಿದ್ದರಂತೆ. ಇದನ್ನು ನೋಡಿ, ಚಿತ್ರೀಕರಣದ ಸ್ಥಳದಲ್ಲಿ ಇದ್ದಂತಹ ಯಾರೋ ಕಿಡಿಗೇಡಿಗಳು ಈ ರೀತಿ ಸುದ್ದಿಯನ್ನು ಹಬ್ಬಿಸಿರಬೇಕು. ವಿಷ್ಣುವರ್ಧನ್ ಅವರಿಗೆ ಸಂಬಂಧವೇ ಇಲ್ಲದಂತಹ ಶೂಟ್‌ಔಟ್ ಪ್ರಕರಣದಲ್ಲಿ ಯಾರೋ ಬೇಕು ಅಂತ ಅವರ ಹೆಸರು ತೋರಿಸಿದರು. ಅದು ಇಡೀ ಕನ್ನಡ ನಾಡಿನಲ್ಲಿ ಸಂಚಲನವನ್ನು ಎಬ್ಬಿಸಿತು. ಅದಕ್ಕೆ ಬಲಿಯಾಗಿದ್ದು, ವಿಷ್ಣುವರ್ಧನ್, ಎಂ ಪಿ ಶಂಕರ್ ಹಾಗೂ ರಾಜ್‌ಕುಮಾರ್" ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
ಇನ್ನೊಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಈ ಪ್ರಕರಣ ಬಿಸಿ ಹತ್ತಿ,ಬೆಂಗಳೂರಿನಲ್ಲಿ ದೊಡ್ಡ ಗಲಾಟೆ ನಡೆಯುತ್ತಿದ್ದಾಗ ಎಂಪಿ ಶಂಕರ್ ಅವರು ಬೇರೆ ಯಾವುದೋ ಸ್ಥಳದಲ್ಲಿಇರುತ್ತಾರೆ. ಆಗ ವೀರಾಸ್ವಾಮಿಯವರು ಫೋನ್ ಮಾಡಿ ಎಲ್ಲಿದ್ದೀಯ ನೀನು ಬೆಂಗಳೂರು ಹೊತ್ತಿ ಉರಿಯುತ್ತಿದೆ. ಬಾ ಇಲ್ಲಿಗೆ ಎಂದು ಹೇಳುತ್ತಾರೆ. ಏನಾಗಿದೆ ಎಂದು ಕೇಳಿ ಎಂಪಿ ಶಂಕರ್ ಎದ್ದು ಬಿದ್ದು ಬೆಂಗಳೂರಿಗೆ ಬರುತ್ತಾರೆ. ಆಗ ಇಡೀ ಘಟನೆಯನ್ನು ಪತ್ರಕರ್ತರೊಂದಿಗೆ ವಿವರಿಸುತ್ತಾರೆ. ಯಾಕೆ ಅವತ್ತು ಈ ವಿಷಯ ಪ್ರಕಟ ಆಗಲಿಲ್ಲ. ಅವತ್ತು ರಾಜ್‌ಕುಮಾರ್ ಅವರನ್ನೂ ತುಳಿಯುವ ಪ್ರಯತ್ನ ಆಗಿತ್ತು." ಎಂದು ಹರಿಹರಪುರ ಮಂಜುನಾಥ್ ಹೇಳಿಕೊಂಡಿದ್ದಾರೆ.
ಗಂಧದ ಗುಡಿ ಸುತ್ತಮುತ್ತ ಕಾಣದ ಕೈಗಳು ಹೇಗೆಲ್ಲ ಕೆಲಸ ಮಾಡಿದವು ಅನ್ನೋದನ್ನು ಕಾಡಿನ ರಾಜ ಎಂಪಿ ಶಂಕರ್ ಎನ್ನುವ ಅವರ ಜೀವನ ಚರಿತ್ರೆಯ ಪುಸ್ತಕದಲ್ಲಿ ತಿಳಿಸಲಾಗಿದೆ. ಇದನ್ನು ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಹರಿಹರಪುರ ಮಂಜುನಾಥ್ ಕೆಲವು ಇಂಟ್ರೆಸ್ಟಿಂಗ್ ಕಥೆಗಳನ್ನು ರಿವೀಲ್ ಮಾಡಿದ್ದಾರೆ.


Click it and Unblock the Notifications











