ಹಾಸ್ಯ ಚಕ್ರವರ್ತಿ ನರಸಿಂಹರಾಜು ನಿಧನರಾದಾಗ ರಾಜ್‌ಕುಮಾರ್ ಯಾಕೆ ಬಂದಿಲ್ಲ? ಇಬ್ಬರ ನಡುವೆ ಮುನಿಸಿತ್ತೇ?
ಕನ್ನಡ ಚಿತ್ರರಂಗ ಕಟ್ಟಿದವರಲ್ಲಿ ಹಾಸ್ಯ ಚಕ್ರವರ್ತಿ ಹಾಗೂ ಡಾ.ರಾಜ್‌ಕುಮಾರ್ ಕೂಡ ಪ್ರಮುಖರು. ಕನ್ನಡ ಸಿನಿಮಾಗಳ ಕಥೆ ಇಲ್ಲಿಗೆ ಮುಗಿದೇ ಹೋಯ್ತು ಅನ್ನುವಾಗ ರಾಜ್ಯದ ಉದ್ದಗಲಕ್ಕೂ ನಾಟಕಗಳನ್ನು ಮಾಡಿ, ಹಣ ಸಂಗ್ರಹಿಸಿ ಸಿನಿಮಾ ಮಾಡಿದ್ದರು. ಅಲ್ಲಿಂದಲೇ ಕನ್ನಡ ಚಿತ್ರರಂಗ ಚಿಗುರುವುದಕ್ಕೆ ಆರಂಭ ಆಗಿತ್ತು.
ಹಾಸ್ಯ ಚಕ್ರವರ್ತಿ ನರಸಿಂಹರಾಜು ಹಾಗೂ ಅಣ್ಣಾವ್ರು ಜೋಡಿಯಾಗಿಯೇ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಅವರ ಸಿನಿಮಾ ಇವರು.. ಇವರ ಸಿನಿಮಾ ಸಿನಿಮಾದಲ್ಲಿ ಅವರ ಇರಲೇಬೇಕಿತ್ತು. ಇಲ್ಲದೆ ಹೋದರೆ, ಸಿನಿಮಾ ಸಂಪೂರ್ಣ ಅಂತ ಅನಿಸುತ್ತಲೇ ಇರಲಿಲ್ಲ. ಇಬ್ಬರಲ್ಲೂ ಆ ಮಟ್ಟಿಗೆ ಅನ್ಯೋನ್ಯತ್ತೆ ಇತ್ತು.

ಹೀಗಿದ್ದ ಜೋಡಿ ನಂತರದ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದರು. ಇಬ್ಬರ ನಡುವೆ ವೈಮನಸ್ಸು ಇತ್ತು. ಅದಕ್ಕೆ ಇಬ್ಬರೂ ಬೇರೆಯಾದರು. ಅದೇ ಕಾರಣಕ್ಕೆ ನರಸಿಂಹರಾಜು ನಿಧನರಾದಾಗಲೂ ಅಣ್ಣಾವರು ಬಂದಿಲ್ಲ ಅನ್ನೋ ಮಾತು ಕೇಳಿ ಬಂದಿತ್ತು. ಅದಕ್ಕೆಲ್ಲಾ ಸ್ವತ: ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಇಬ್ಬರ ಸ್ನೇಹ, ವೈಮನಸ್ಸು ಹಾಗೂ ಇತರ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದ್ದರು.
ನರಸಿಂಹರಾಜು-ರಾಜ್‌ಕುಮಾರ್ ಸಂಬಂಧ ಹೇಗಿತ್ತು?
ಹಾಸ್ಯ ಚಕ್ರವರ್ತಿ ಹಾಗೂ ಅಣ್ಣಾವ್ರ ನಡುವಿನ ಸ್ನೇಹದ ಬಗ್ಗೆ ನೂರೆಂಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಸುಧಾ ನರಸಿಂಹರಾಜು ಟೋಟಲ್ ಕನ್ನಡ ಅನ್ನೋ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಅಸಲಿ ಸತ್ಯವನ್ನು ರಿವೀಲ್ ಮಾಡಿದ್ದಾರೆ. "ಒಮ್ಮೆ ರಾಜ್‌ಕುಮಾರ್ ಅಪ್ಪಾಜಿಯವರು ನಮ್ಮ ಫಿಯೆಟ್ ಕಾರನ್ನು ತೆಗೆದುಕೊಂಡು ಹೋಗಿ ಅಪಘಾತ ಮಾಡಿಬಿಟ್ಟಿದ್ದರಂತೆ. ಆಗ ಪೊಲೀಸ್‌ವರಿಗೂ ಆರ್ಟಿಸ್ಟ್ ಅನ್ನೋದು ಗೊತ್ತಿರಲಿಲ್ಲ. ಹಿಡಿದು ಜೋರಾಗಿ ಜಗಳ ಮಾಡುತ್ತಿದ್ದರಂತೆ. ಆಗ ಮೊಬೈಲ್ ಏನೂ ಇರಲಿಲ್ವಲ್ಲ. ಅದಕ್ಕೆ ಮನೆಗೆ ಫೋನ್ ಮಾಡಿಸಿದ್ದರಂತೆ. ಆಗ ನಮ್ಮ ತಂದೆ ಓಡಿ ಹೋಗಿ, ಅವರಲ್ಲ ಡ್ರೈವ್ ಮಾಡಿದ್ದು, ನಾನು ಎಂದು ಹೇಳಿದ್ದರಂತೆ. ಆಮೇಲೆ ಅಣ್ಣಾವ್ರನ್ನು ಮನೆಗೆ ಕಳುಹಿಸಿ, ಇವರು ಹೋಗಿ ಸಹಿ ಮಾಡಿ ಬಂದಿದ್ದರಂತೆ." ಎಂದು ಸ್ನೇಹದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.
"ಅಣ್ಣಾವ್ರೂ ನಮ್ಮ ಶ್ರೀಕಾಂತ ಅನ್ನೋರು"
"ನನ್ನ ದೊಡ್ಡಣ್ಣ ಹೆಚ್ಚಾಗಿ ರಾಜ್‌ಕುಮಾರ್ ಅಪ್ಪಾಜಿ ಮನೆಯಲ್ಲೇ ಬೆಳೆದಿದ್ದು. ಅವರನ್ನು ಅಪ್ಪಾಜಿ ಅಪ್ಪಾಜಿ ಅಂತಲೇ ನಾವೆಲ್ಲರೂ ಕರೆಯುತ್ತಿದ್ದೆವು. ನಮ್ಮನೆಗಿಂತ ಹೆಚ್ಚಾಗಿ ಅಲ್ಲೇ ಬೆಳೆದಿದ್ದನಂತೆ. ನಮ್ಮ ತಂದೆ ಎಷ್ಟು ಕುಗ್ಗಿ ಹೋಗಿದ್ದರೋ ಅಷ್ಟೇ ರಾಜ್‌ಕುಮಾರ್ ಅಪ್ಪಾಜಿಗೂ ಅಷ್ಟೇ ಎಫೆಕ್ಟ್ ಆಗಿತ್ತು ಅದು. ಯಾವಾಗಲೂ ಅವರು ನಮ್ಮ ಶ್ರೀಕಾಂತ ನಮ್ಮ ಶ್ರೀಕಾಂತ ಅನ್ನೋರು." ಎಂದು ಸುಧಾ ನರಸಿಂಹರಾಜು ಅವರು ಹೇಳಿದ್ದಾರೆ.

ಮಗ ತೀರಿಕೊಂಡಾಗ ಸಮಾಧಾನ ಮಾಡಿದ್ದು ಅಣ್ಣಾವ್ರೇ!
"ನಮ್ಮ ಅಣ್ಣ ಹೋದಾಗಲೂ ಅಷ್ಟೇನೆ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದು ರಾಜ್‌ಕುಮಾರ್ ಅಪ್ಪಾಜಿಯವರೇ. ಅವರಿಬ್ಬರು ಭೇಟಿಯಾದರೆ, ಎಂತಹ ಸಂದರ್ಭವಿದ್ದರೂ ಅವರನ್ನು ತಬ್ಬಿಕೊಂಡು ನಮ್ಮ ತಂದೆ ಅಳಲೇಬೇಕು. ಅವರು ತಬ್ಬಿಕೊಂಡು ಅಳಲೇಬೇಕು. ಸಿನಿಮಾಗಳೂ ಅಷ್ಟೇ ಇಬ್ಬರಿಗೂ ಹೇಳಿ ಮಾಡಿಸಿದಂತಹ ಪಾತ್ರಗಳು ಸಿಕ್ಕಿದ್ದವು." ಎಂದು ಸುಧಾ ನರಸಿಂಹರಾಜು ಇಬ್ಬರ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾರೆ.
ಇಬ್ಬರೂ ಸಿನಿಮಾ ಮಾಡೋದು ಕಡಿಮೆ ಮಾಡಿದ್ದೇಕೆ?
"ಆತರ ಏನೂ ಇರಲಿಲ್ಲ. ಎಲ್ಲರ ಜೊತೆನೂ ಸಿನಿಮಾ ಮಾಡುವುದಕ್ಕೆ ಶುರು ಮಾಡಿದ್ದರು. ಹಾಗಾಗಿ ಕಡಿಮೆ ಆಗಿರಬಹುದು. ಅಲ್ಲದೆ, ಡೇಟ್ ಕ್ಲ್ಯಾಶ್ ಆಗಿರಬಹುದು. ಬೇರೆ ಏನಾದರೂ ಆಗಿರಬಹುದು. ಇದೆಲ್ಲ ನಮ್ಮ ಬಳಿಗೆ ಬಂದಿರಲಿಲ್ಲ. ಯಾಕೆಂದರೆ, ನಾವೆಲ್ಲ ಚಿಕ್ಕವರು. ನಮ್ಮ ತಂದೆನೂ ಚರ್ಚೆ ಮಾಡಿಲ್ಲ. ನಮ್ಮ ಅಮ್ಮನೂ ಹೇಳಿಲ್ಲ. ಅವರು ಇರೋವರೆಗೂ ಒಳ್ಳೆಯ ಸ್ನೇಹಿತರಾಗಿಯೇ ಇದ್ದರು." ಎಂದಿದ್ದಾರೆ ಸುಧಾ ನರಸಿಂಹರಾಜು.
ನರಸಿಂಹರಾಜು ನಿಧನರಾದಾಗ ಅಣ್ಣಾವ್ರು ಯಾಕೆ ಬಂದಿಲ್ಲ?
"ಇನ್ನೊಂದು ಕ್ಲಾರಿಟಿ ಕೊಡುತ್ತೇನೆ. ನಮ್ಮ ತಂದೆ ತೀರಿಕೊಂಡಾಗ ರಾಜ್‌ಕುಮಾರ್ ಅಪ್ಪಾಜಿ ಬೆಂಗಳೂರಿನಲ್ಲಿ ಇರಲೇ ಇಲ್ಲ. ಅದನ್ನೇ ಜನ ಬೇರೆ ತರನೇ ಅರ್ಥೈಸಿದ್ದರು. ಅವರು ಅಮೆರಿಕಾಗೆ ಹೋಗಿದ್ದರು. ಅವರು ಇರಲಿಲ್ಲ. ಆ ಕಾಲಕ್ಕೆ ನೆನಪಿಸಿಕೊಂಡ ತಕ್ಷಣ ಅಮೆರಿಕಾದಿಂದ ಬೆಂಗಳೂರಿಗೆ ಬರಲು ಸಾಧ್ಯವೇ ಇರಲಿಲ್ಲ. ಅಮೆರಿಕದಿಂದ ಬಂದ ಕೂಡಲೇ ಅಣ್ಣಾವ್ರು ನಮ್ಮ ಮನೆಗೆ ಬಂದರು. ಸಂಸಾರ ಸಮೇತ ಮಕ್ಕಳನ್ನೂ ಕರೆದುಕೊಂಡು ಬಂದರು. ನಮ್ಮ ಜೊತೆ ಸುಮಾರು ಹೊತ್ತು ಕಾಲ ಕಳೆದು ಸಾಂತ್ವಾನ ಹೇಳಿ ಹೋಗಿದ್ದರು." ಎಂದು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಸುಧಾ ನರಸಿಂಹರಾಜು ಹೇಳಿದ್ದಾರೆ.


Click it and Unblock the Notifications











