ಅಣ್ಣಾವ್ರು ಒಂದೇ ಒಂದು ಸಿನಿಮಾ ನಿರ್ದೇಶನ ಮಾಡಿಲ್ಲ ಯಾಕೆ? ರಾಘಣ್ಣ ಹೇಳಿದ ಗುಟ್ಟೇನು?
ನಟಸಾರ್ವಭೌಮ ಡಾ.ರಾಜ್‌ಕುಮಾರ್ ಒಂದೊಂದು ಸಿನಿಮಾದ ಪಾತ್ರವನ್ನು ಕಣ್ಮುಚ್ಚಿಕೊಂಡು ಹೇಳುವ ಅಭಿಮಾನಿಗಳಿದ್ದಾರೆ. ಅಣ್ಣಾವ್ರ ಒಂದೊಂದು ಸಿನಿಮಾದ ಪಾತ್ರವೂ ಆ ಮಟ್ಟಿಗೆ ಜನರ ಮನದೊಳಗೆ ಕೂತು ಬಿಟ್ಟಿದೆ. ಇಂತಹ ಅತ್ಯದ್ಭುತ ಪಾತ್ರಗಳನ್ನು ಮಾಡಿರುವ ಅಣ್ಣಾವ್ರು ಮನಸ್ಸು ಮಾಡಿದ್ರೆ ಏನು ಬೇಕಾದ್ರು ಮಾಡಬಹುದಿತ್ತು. ಇದು ಅಂದಿನವರಿಗೂ ಗೊತ್ತಿತ್ತು.
ಅದಕ್ಕೆ ಆಡು ಮುಟ್ಟದ ಸೊಪ್ಪಿಲ್ಲ. ಡಾ.ರಾಜ್‌ಕುಮಾರ್ ಮಾಡದ ಪಾತ್ರವಿಲ್ಲ ಅಂತ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಂದಿಗೂ ರಾಜ್‌ಕುಮಾರ್ ಯಾಕೆ ಒಂದೇ ಒಂದು ಸಿನಿಮಾ ನಿರ್ದೇಶನ ಮಾಡಿಲ್ಲ. ರಾಜಕೀಯಕ್ಕೆ ಯಾಕೆ ಬಂದಿಲ್ಲ ಅನ್ನೋ ಪ್ರಶ್ನೆ ಕೆಲವರನ್ನು ಕಾಡುತ್ತಿಲೇ ಇರುತ್ತೆ. ಅದಕ್ಕೆ ಕಾರಣವೇನು ಅನ್ನೋದನ್ನು ರಾಘವೇಂದ್ರ ರಾಜ್‌ಕುಮಾರ್ ರಿವೀಲ್ ಮಾಡಿದ್ದಾರೆ.

ರಾಘಣ್ಣ ಇತ್ತೀಚೆಗೆ 18ನೇ ವರ್ಷದ ಎಸ್.ಪಿ. ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಣ್ಣಾವ್ರು ಯಾಕೆ ಸಿನಿಮಾ ನಿರ್ದೇಶನ ಮಾಡಲಿಲ್ಲ. ರಾಜಕೀಯಕ್ಕೆ ಯಾಕೆ ಹೋಗಲಿಲ್ಲ ಅನ್ನೋ ರಹಸ್ಯವನ್ನು ಬಿಟ್ಟುಕೊಟ್ಟಿದ್ದಾರೆ. ವೇದಿಕೆ ಮೇಲೆ ತಂದೆ ಬಗ್ಗೆ ರಾಘಣ್ಣ ಹೇಳಿದ ಇಂಟ್ರೆಸ್ಟಿಂಗ್ ಕಥೆಯನ್ನು ತಿಳಯಲು ಮುಂದೆ ಓದಿ..
ಅಣ್ಣಾವ್ರ ಟೀ ಕಥೆ
ಅಣ್ಣಾವ್ರ ಆಗಿನ್ನು ಸಿನಿಮಾಗೆ ಕಾಲಿಟ್ಟಿರಲಿಲ್ಲ. ಡ್ರಾಮ ಕಂಪನಿಯಲ್ಲಿ ನಟನೆ ಮಾಡುತ್ತಿದ್ದರು. ಈ ವೇಳೆ ಟೀ ಕುಡಿಯಲು ಹೋದ ಮಜವಾದ ಪ್ರಸಂಗವನ್ನು ರಿವೀಲ್ ಮಾಡಿದ್ದಾರೆ. "ಒಂದ್ಕಡೆ ಡ್ರಾಮ ನಡೆಯುವಾಗ ಅಪ್ಪಾಜಿ ಸಮಕಾಲೀನ ಫ್ರೆಂಡ್ಸ್ ಎಲ್ಲರೂ ಇದ್ದರು. ಅವರೆಲ್ಲ ಬೆಳಗ್ಗೆ ಬಂದು ಟೀ ಕುಡಿಯುವುದಕ್ಕೆ ಹೋಗ್ತಿದ್ರಂತೆ. ಡ್ರಾಮ ಕಂಪನಿಯಲ್ಲಿ ಕಾಫಿ ಕೊಟ್ಟರೂ, ಅದಕ್ಕಿಂತ ಮುಂಚೆ ಎದ್ದು ಟೀ ಕುಡಿಯುವುದಕ್ಕೆ ಹೋಗಿದ್ರಂತೆ. ನಮ್ಮ ತಂದೆಯನ್ನು ಕರೆದಿದ್ರಂತೆ, ಆ ಟೀ ಮಾರೋನು ಎಷ್ಟು ಚೆಂದ ಮಾತಾಡುತ್ತಾನೆ ಗೊತ್ತಾ? ಯುದ್ಧದ ಬಗ್ಗೆ ಹೇಳ್ತಾನೆ. ಟೀ ಬಗ್ಗೆ ಹೇಳ್ತಾನೆ ಅಂತ. ನಮ್ಮ ತಾತ ತುಂಬಾ ಹೊಡೆಯೋರಂತೆ. ಅದಕ್ಕೆ ಹೋಗುತ್ತಿರಲಿಲ್ಲ. ಒಂದು ದಿನ ಮಳೆ ಹೆಚ್ವಿದ್ದರಿಂದ ಚಳಿಗೆ ಹೋದ್ರಂತೆ. ನಮ್ಮ ತಾತ ಬಂದಿದ್ದಾರೆ. ಅಪ್ಪಾಜಿ ಸಿಕ್ಕಿಲ್ಲ. ಅದಕ್ಕೆ ಬಂದ್ಮೇಲೆ ನಮ್ಮ ಅಪ್ಪಾಜಿ ಭಯ ಆಗಿತ್ತು." ಎಂದು ಹೇಳಿದ್ದರು.

ಟೀ ಮಾರುವವನ ಮಾತಿಗೆ ಮರುಳಾಗಿದ್ದ ಅಣ್ಣಾವ್ರು
ಹೊರಗಡೆ ಹೋಗಿ ಟೀ ಕುಡಿದು ಬಂದಿದ್ದ ಅಣ್ಣಾವ್ರ ಭಯ ಪಟ್ಟುಕೊಂಡಿದ್ದರು. ಮುಂದೇನಾಯ್ತು ಅನ್ನೋದನ್ನು ರಾಘಣ್ಣ ವಿವರಿಸಿದ್ದಾರೆ. "ತಪ್ಪಿಕೊಂಡು ಓಡಾಡುತ್ತಿದ್ದ ಅಪ್ಪಾಜಿಯನ್ನು ನಮ್ಮ ತಾತ ಕರೆದ್ರಂತೆ. ನಾನು ಹೊಡೆಯೋದಿಲ್ಲ ಅಂದ್ರಂತೆ. ಸರಿ ಅಲ್ಲಿ ಹೋಗಿ ಏನು ಮಾಡಿದೆ ಹೇಳು ಅಂದ್ರಂತೆ. ಅವನು ಟೀ ಕೊಡ್ತಾನಲ್ಲ ಅವನು ಏನು ಮಾತಾಡುತ್ತಾನೆ. ಯುದ್ಧದ ಬಗ್ಗೆ ಹೇಳಿದ. ಸಿನಿಮಾ ಬಗ್ಗೆ ಹೇಳಿದ. ಮೈಸೂರು ಮಹಾರಾಜರ ಬಗ್ಗೆ ಹೇಳಿದ. ನನಗೆ ಇವೆಲ್ಲ ಏನೂ ಗೊತ್ತೇ ಇಲ್ಲ. ಸರಿ ಟೀ ಹೇಗಿತ್ತು ಹೇಳು ಅಂತ ತಾತ ಕೇಳಿದ್ರಂತೆ. ಟೀ ಏನೋ ಅಷ್ಟು ಚೆನ್ನಾಗಿರಲಿಲ್ಲ ಅಂತ ಅಪ್ಪಾಜಿ ಅಂದ್ರಂತೆ." ಎಂದು ಹೇಳಿದ್ದಾರೆ.
ಟೀ ಮಾರುವವನಿಗೆ ಟೀ ಮಾಡೋದು ಗೊತ್ತಿಲ್ಲ
"ನೋಡು ಕಂದ ಅವನಿಗೆ ಎಲ್ಲಾ ಗೊತ್ತು. ಆದರೆ, ಟೀ ಮಾಡುವುದಕ್ಕೆ ಗೊತ್ತಿಲ್ಲ ಅಂತ ಹೇಳಿದ್ರಂತೆ. ಅವನಿಗೆ ಏನು ಬೇಕು ಅಂದು ಗೊತ್ತು. ನಿನಗೆ ಏನೂ ಗೊತ್ತಿಲ್ಲ. ಪಾತ್ರ ಮಾಡೋದು ಗೊತ್ತು. ಹಂಗೆ ಹೋಗು. ನಿಮ್ಮ ದಾರಿ ಬಣ್ಣ ಹಚ್ಚುವುದು ಅಷ್ಟೇ. ಇದನ್ನು ಫಾಲೋ ಮಾಡು. ನೀನು ಇರುವವರೆಗೂ ಯಾರೂ ಏನೂ ಮಾಡುವುದಕ್ಕೆ ಆಗೋದಿಲ್ಲ ಅಂದ್ರಂತೆ." ಎಂದು ಅಣ್ಣಾವ್ರು ಹೇಳಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ನಿರ್ದೇಶನ ಯಾಕೆ ಮಾಡಿಲ್ಲ?
ಇದೇ ವೇದಿಕೆ ಮೇಲೆ ಅಣ್ಣಾವ್ರು ಯಾಕೆ ನಿರ್ದೇಶನದ ಕಡೆಗೆ ಮುಖ ಮಾಡಿಲ್ಲ ಅನ್ನೋದನ್ನು ರಾಘಣ್ಣ ರಿವೀಲ್ ಮಾಡಿದ್ದಾರೆ. "ಅಪ್ಪಾಜಿ ಇದನ್ನು ಕೊನೆಯವರೆಗೂ ಇಟ್ಕೊಂಡ್ರಂತೆ. ಬಣ್ಣ ಹಚ್ಚುವುದನ್ನು ಬಿಟ್ಟು, ಡೈರೆಕ್ಟ್ ಮಾಡುವುದಕ್ಕೆ ಹೋಗಲಿಲ್ಲ. ಅವರು ಏನು ಆಗುವುದಕ್ಕೂ ಹೋಗಲಿಲ್ಲ. ತುಂಬಾ ಜನ ಹೇಳಿದ್ರು. ಒಂದು ಸಿನಿಮಾ ಡೈರೆಕ್ಟ್ ಮಾಡಿ ಅಂತ. ಅದು ನನ್ನ ಕಸುಬು ಅಲ್ಲ. ಕೊನೆಗೆ ರಾಜಕೀಯಕ್ಕೆ ಕರೆದರು. ಕೊನೆಗೂ ಅಲ್ಲೂ ಹೋಗಲಿಲ್ಲ. ಅದಕ್ಕೆ ನಿಜವಾದ ಯುನಿವರ್ಸಿಟಿಗಳು ಅಂದರೆ, ತಂದೆ ತಾಯಿಗಳು ಅಂತ ಹೇಳುತ್ತಾರೆ." ಎಂದು ರಾಘಣ್ಣ ವೇದಿಕೆ ಮೇಲೆ ಹೇಳಿದ್ದಾರೆ.


Click it and Unblock the Notifications











