ರಿಲೀಸ್ ಆಗಲು ಪರದಾಡುತ್ತಿರುವ ಉಪ್ಪಿಯ ಮೂರು ಸಿನಿಮಾಗಳ ಕಥೆಯೇನು? ಏನಿದೆ ಸದ್ಯ ಪರಿಸ್ಥಿತಿ?
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿದ 'ಯುಐ' ಸಿನಿಮಾ ಕಳೆದ ಡಿಸೆಂಬರ್‌ನಲ್ಲಿ ರಿಲೀಸ್ ಆಗಿದೆ. ಉಪ್ಪಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದರು. ಫೋಕಸ್ ಮಾಡಿ ಸಿನಿಮಾ ನೋಡಿ ಅರ್ಥ ಮಾಡಿಕೊಂಡಿದ್ದರು. ಕೆಲವರು ಅರ್ಥ ಮಾಡಿಕೊಳ್ಳುವುದಕ್ಕೆ ಪರದಾಡಿದ್ದರು. ಇನ್ನು ಕೆಲವರು ತಲೆಗೆ ಹುಳ ಬಿಟ್ಟುಕೊಂಡು ಪ್ರೇಕ್ಷಕರು 'ಯುಐ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
ಉಪ್ಪಿ ನಿರ್ದೇಶಿಸುವ ಸಿನಿಮಾಗಳ ಸ್ಪೆಷಾಲಿಟಿನೇ ಹಾಗೇ. ಪ್ರೇಕ್ಷಕರ ತಲೆಗೆ ಸಿಕ್ಕಾಪಟ್ಟೆ ಕೆಲಸ ಕೊಟ್ಟು ಬಿಡುತ್ತೆ. ಇನ್ನು 'ಯುಐ' ಬಳಿಕ ಉಪೇಂದ್ರ ಕೈಯಲ್ಲಿ '45' ಹಾಗೂ 'ಕೂಲಿ' ಸಿನಿಮಾಗಳಿವೆ. ಇವುಗಳನ್ನು ಬಿಟ್ಟರೆ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಂತಿಲ್ಲ. ಯಾವುದಾದರೂ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಾ? ಉಪೇಂದ್ರ ತಲೆಯಲ್ಲಿ ಬೇರೆ ಏನಾದರೂ ಆಲೋಚನೆ ಇದೆಯಾ? ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಆದರೆ, ಉಪೇಂದ್ರ ಬಹಳ ವರ್ಷಗಳ ಹಿಂದೆನೇ ನಟಿಸಿದ ಮೂರು ಸಿನಿಮಾಗಳಿಗೆ ಇನ್ನೂ ಬಿಡುಗಡೆ ಭಾಗ್ಯನೇ ಸಿಕ್ಕಿಲ್ಲ.
ಹೌದು, ಉಪೇಂದ್ರ ಬಹಳ ವರ್ಷಗಳ ಹಿಂದೆ ನಟಿಸಿದ ಮೂರು ಸಿನಿಮಾಗಳು ರಿಲೀಸ್ ಆಗದೆ ಹಾಗೇ ಉಳಿದಿದೆ. ಅವುಗಳಿಗೆ ಇನ್ನೂ ಬಿಡುಗಡೆ ಭಾಗ್ಯನೇ ಸಿಕ್ಕಿಲ್ಲ. ಬಹಳ ವರ್ಷಗಳ ಹಿಂದೆನೇ ಈ ಸಿನಿಮಾ ಸೆಟ್ಟೇರಿದ್ದು, ಬಿಡುಗಡೆಯಾಗದೇ ಹಾಗೇ ಡಬ್ಬದೇ ಇಲ್ಲೇ ಇರುವ ಉಪ್ಪಿಯ ಆ ಮೂರು ಸಿನಿಮಾಗಳು ಯಾವುವು? ಈ ವರ್ಷನಾದ್ರೂ ಆ ಸಿನಿಮಾಗೆ ಬಿಡುಗಡೆಯ ಭಾಗ್ಯ ಸಿಗಬಹುದೇ? ತಿಳಿಯಲು ಮುಂದೆ ಓದಿ.

'ರಕ್ತ ಕಾಶ್ಮೀರ'
2007ರಲ್ಲಿ ಉಪೇಂದ್ರ ಹಾಗೂ ರಮ್ಯಾ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾವನ್ನು ಎಸ್. ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಇನ್ನೇನು ಸಿನಿಮಾ ಶೂಟಿಂಗ್ ಮುಗಿದು ಬಿಡುಗಡೆಯಾಗಬೇಕು ಅನ್ನುವಾಗಲೇ ಆರ್ಥಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ಈ ಸಿನಿಮಾ 17 ವರ್ಷಗಳ ಕಾಲ ರಿಲೀಸ್ ಆಗಿರಲಿಲ್ಲ. ಆದ್ರೀಗ ಸಿನಿಮಾ ಟೈಟಲ್ ಅನ್ನು ಬದಲಾಯಿಸಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಸದ್ಯ ಈ ಸಿನಿಮಾಗೆ 'ರಕ್ತ ಕಾಶ್ಮೀರ' ಅಂತ ಟೈಟಲ್ ಅನ್ನು ಬದಲಾಯಿಸಲಾಗಿದೆ. ಮತ್ತೇನು ಸಮಸ್ಯೆ ಎದುರಾಗದೇ ಹೋದರೆ, 'ರಕ್ತ ಕಾಶ್ಮೀರ' ಈ ವರ್ಷ ರಿಲೀಸ್ ಆಗಲಿದೆ.

ಬುದ್ಧಿವಂತ 2
ಉಪೇಂದ್ರ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಸಿನಿಮಾ 'ಬುದ್ದಿವಂತ 2'. ಈ ಹಿಂದೆ ಉಪ್ಪಿ ನಟಿಸಿದ 'ಬುದ್ಧಿವಂತ' ಸಿನಿಪ್ರಿಯರ ಮನಗೆದ್ದಿತ್ತು. ಅದೇ ಯಶಸ್ಸಿನ ಹಿನ್ನೆಲೆಯಲ್ಲಿಯೇ 'ಬುದ್ಧಿವಂತ 2' ಸಿನಿಮಾ ಕೈ ಹಾಕಲಾಯಿತ್ತು. 'ಅಯೋಗ್ಯ' ಸಿನಿಮಾದ ನಿರ್ಮಾಪಕ ಟಿಆರ್ ಚಂದ್ರಶೇಖರ್ ಹಣ ಹೂಡಿಕೆ ಮಾಡಿದ್ದರು. ಆದರೆ, ಅದ್ಯಾಕೋ ಈ ಸಿನಿಮಾಗೂ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. 2023ರಲ್ಲಿ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿತ್ತು. ಇನ್ನೇನು 'ಬುದ್ಧಿವಂತ 2' ರಿಲೀಸ್ ಆಗೇ ಬಿಡುತ್ತೆ ಅಂತ ಕಾದು ಕೂತಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿದೆ. ಈ ಸಿನಿಮಾದಲ್ಲಿ ಉಪ್ಪಿ ಜೊತೆ ಸೋನಾಲ್ ಮಾಂತೆರೋ, ಮೇಘನಾರಾಜ್ ನಾಯಕಿಯರಾಗಿ ನಟಿಸಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆ ಬಗ್ಗೆ ಸುದ್ದಿನೇ ಇಲ್ಲ. ಮೂಲಗಳ ಪ್ರಕಾರ 'ಬುದ್ಧಿವಂತ 2' ಶೂಟಿಂಗ್ ಕಂಪ್ಲೀಟ್ ಆಗಿ ಮುಗಿದಿದ್ದು, ಬಿಡುಗಡೆಗೆ ಫೈನಾನ್ಸ್ ಸಮಸ್ಯೆ ಎದುರಿಸುತ್ತಿದೆ.

ತ್ರಿಶೂಲಂ
2021ರಲ್ಲಿ 'ತ್ರಿಶೂಲಂ' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಉಪೇಂದ್ರ ಹಾಗೂ ಕೇಜಿಸ್ಟಾರ್ ರವಿಚಂದ್ರನ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಸೆಟ್ಟೇರಿ ಐದು ವರ್ಷಗಳಾದರೂ 'ತ್ರಿಶೂಲಂ' ಇನ್ನೂ ಬಿಡುಗಡೆಯಾಗಿಲ್ಲ. ಕನ್ನಡ ಜನಪ್ರಿಯ ನಿರ್ಮಾಣ ಸಂಸ್ಥೆ ಆರ್ ಎಸ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿತ್ತು. ಇನ್ನೂ ಈ ಸಿನಿಮಾಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ರವಿಚಂದ್ರನ್ ಭಾಗದ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಮಾಡಲಾಗಿದೆ. ಓಂ ಪ್ರಕಾಶ್ ರಾವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











