ಅಣ್ಣಾವ್ರ ಅಪಹರಣ.. ತಿರುವಳ್ಳುವರ್ ಪ್ರತಿಮೆಗೆ ವೀರಪ್ಪನ್ ಬೇಡಿಕೆ..ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆಗೆ ಒಪ್ಪಿದ್ದೇಗೆ?
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಘರ್ಷ ನಡೆದಿದ್ದು ಒಂದು ಕಾರಣಕ್ಕೆ ಅಲ್ಲ. ಎರಡು ರಾಜ್ಯಗಳ ನಡುವೆ ಹಲವು ಸಮಸ್ಯೆಗಳು ಇವೆ. ಕೇವಲ ಭಾಷೆ ಒಂದೇ ಆಗಿದ್ದರೆ ಬೇರೆ ಮಾತಿತ್ತು. ಭಾಷೆ, ನೆಲ, ಜಲ ಈ ಮೂರು ವಿಷಯಕ್ಕೆ ತಲ ತಲಾಂತರಗಳಿಂದ ಹೋರಾಟಗಳು ನಡೆದುಕೊಂಡು ಬಂದಿದೆ. ಇತ್ತೀಚೆಗೆ ಕಮಲ್ ಹಾಸನ್ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎನ್ನುವ ಹೇಳಿಕೆ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದನ್ನು ನೋಡಿದ್ದೇವೆ.
ಇನ್ನು ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಬಂದಾಗಲೆಲ್ಲ ಹೋರಾಟ ನಡೆದಿದೆ. ಕರ್ನಾಟಕದಲ್ಲಿ ಕನ್ನಡದ ಪರ ಸಂಘಟನೆಗಳು, ರೈತರು, ಸಾಹಿತಿಗಳು, ಕನ್ನಡ ಚಿತ್ರರಂಗ ಅಖಾಡಕ್ಕೆ ಇಳಿದು ತೀವ್ರ ಹೋರಾಟ ಮಾಡಿದ್ದು ನಮ್ಮ ಕಣ್ಮುಂದೆನೇ ಇದೆ. ಕಾವೇರಿಗಾಗಿ ಮಾಡಿದ ಹೋರಾಟ ಹಿಂಸೆಗೆ ತಿರುಗಿದ್ದು ಇದೆ. ಆ ಮಟ್ಟಿಗೆ ಹೋರಾಟಗಳು ನಡೆದಿವೆ. ಕರ್ನಾಟಕ ಹಾಗೂ ತಮಿಳುನಾಡು ಈ ಎರಡು ರಾಜ್ಯಗಳ ಸಮಸ್ಯ ಉದ್ಭವಿಸಿದಾಗ ಕನ್ನಡ ಚಿತ್ರರಂಗ ಹೋರಾಟಕ್ಕೆ ಧುಮುಕಿದಾಗಲೇ ಅದಕ್ಕೆ ಹೊಸ ಚೈತನ್ಯ ಬರುತ್ತೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಆದರೆ, ವೀರಪ್ಪನ್ ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರನ್ನು ಅಪಹರಣ ಮಾಡಿದಾಗ ಕರ್ನಾಟಕ ಹೊತ್ತಿ ಉರಿದಿತ್ತು. ಕರ್ನಾಟಕದಲ್ಲಿ ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗಲೂ ಕನ್ನಡ ಪರ ಹೋರಾಟಗಳು, ಡಾ.ರಾಜ್‌ಕುಮಾರ್ ಅಭಿಮಾನಿಗಳು, ಇಡೀ ಚಿತ್ರರಂಗ ಬಿಡುಗಡೆಯಾಗುವವರೆಗೂ ಹೋರಾಟ ಮಾಡಿತ್ತು. ಅಣ್ಣಾವ್ರನ್ನು ಬಿಡುಗಡೆ ಮಾಡುವುದಕ್ಕೆ ವೀರಪ್ಪನ್ 10 ಬೇಡಿಕೆಗಳನ್ನು ಇಟ್ಟಿದ್ದ. ಅದರಲ್ಲೊಂದು ಬೆಂಗಳೂರಿನಲ್ಲಿ ತಮಿಳಿನ ಪ್ರಸಿದ್ಧ ಕವಿ ಹಾಗೂ ತತ್ವಜ್ಞಾನಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದ್ದ. ಆದರೆ, ಇದನ್ನು ಈಡೇರಿಸುವುದು ಅಷ್ಟು ಸುಲಭ ಆಗಿರಲಿಲ್ಲ.
ಮುಂದೆ ಓದಿ
ಹಲಸೂರು ಕೆರೆ ಹತ್ತಿರ ತಿರುವಳ್ಳುವರ್ ಪ್ರತಿಮೆಗೆ ಕನ್ನಡ ಸಂಘಟನೆ ವಿರೋಧ
ರಾಜ್‌ಕುಮಾರ್ ಬಿಡುಗಡೆಗೆ ವೀರಪ್ಪನ್ ಬೋಗಸ್ ಬೇಡಿಕೆಗಳನ್ನು ಇಟ್ಟಿದ್ದ
ವೀರಪ್ಪನ್‌ಗೆ ಕಾವೇರಿ, ತಿರುವಳ್ಳುವರ್ ಪ್ರತಿಮೆ ಮಾತಾಡುವಷ್ಟು ಜ್ಞಾನವಿತ್ತೇ?
ವೀರಪ್ಪನ್ ಹೀರೋ ಮಾಡುವ ಪ್ರಯತ್ನ ಅಣ್ಣಾವ್ರ ಕಿಡ್ನಾಪ್ ಆದಾಗ ನಡೆದಿತ್ತಾ?
ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡುವುದಕ್ಕೂ ಮುನ್ನವೇ ಬೆಂಗಳೂರಿನ ಹಲಸೂರು ಕೆರೆ ಬಳಿ ವಾಸವಿದ್ದ ತಮಿಳರು ಪಟ್ಟು ಹಿಡಿದಿದ್ದರು. ಅದಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡದಂತೆ ಬಟ್ಟೆಯನ್ನು ಸುತ್ತಿ ಗಲಾಟೆಯನ್ನು ಮಾಡಿದ್ದರು. ಹೀಗಾಗಿ ಕರ್ನಾಟಕ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಕೊಂಡಿತ್ತು. ಈ ಘಟನೆಯನ್ನು ರಾಜ್‌ಕುಮಾರ್ ಬಿಡುಗಡೆ ಮಾಡಿಸುವುದಕ್ಕೆ ಪ್ರಯತ್ನ ಪಟ್ಟಿದ್ದ ನಿರ್ದೇಶಕ ಎ.ಎಂ.ಆರ್ ರಮೇಶ್ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

"ತಿರುವಳ್ಳುವರ್ ಪ್ರತಿಮೆಯನ್ನು ಹಲಸೂರು ಕೆರೆ ಹತ್ತಿರ ಇಟ್ಟಿದ್ದರು. ಅದನ್ನು ಅದನ್ನು ನಾವು ಗಲಾಟೆ ಮಾಡಿ ಸುತ್ತಿಸಿದ್ವಿ. ಓಪನ್ ಮಾಡದೆ ಇರೋ ತರ ಮಾಡಿದ್ವಿ. ನಮ್ಮದು ಏನು ಅಂದರೆ, ಸರ್ವಜ್ಞನ ಪ್ರತಿಮೆಯನ್ನು ಅಲ್ಲಿ ಮಾಡಿಸಿ, ಆಮೇಲೆ ಬೇಕಿದ್ದರೆ, ತಿರುವಳ್ಳುವರ್ ಪ್ರತಿಮೆಯನ್ನು ಇಲ್ಲಿ ಮಾಡುವುದಕ್ಕೆ ಬಿಡುತ್ತೇವೆ ಎಂದು ಹೇಳಿದ್ವಿ. ಸರ್ವಜ್ಞನ ಪ್ರತಿಮೆ ಮಾಡುವುದಕ್ಕೆ ತಮಿಳುನಾಡಿಗೆ ಐಡಿಯಾನೂ ಇರಲಿಲ್ಲ. ಅದಕ್ಕೆ ಅವರು ಗಮನನೂ ಕೊಟ್ಟಿರಲಿಲ್ಲ. ಇಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದರು." ಎನ್ನುತ್ತಾರೆ ನಿರ್ದೇಶಕ ಎಎಂಆರ್ ರಮೇಶ್.
ವೀರಪ್ಪನ್ ಜೊತೆ ಕಿಡ್ನಾಪ್ ಆಗಿದ್ದ ನಾಗಪ್ಪ ಮಾರಡಗಿ ಕೂಡ ಸಂದರ್ಶನವೊಂದನ್ನು ಈ ಸಂಗತಿಯನ್ನೇ ರಿವೀಲ್ ಮಾಡಿದ್ದಾರೆ. ವೀರಪ್ಪನ್ ಒಬ್ಬ ಕಾಡುಗಳ್ಳ. ಆತ ಇಂತಹ ಬೇಡಿಕೆಗಳನ್ನು ಇಡಲು ಹೇಗೆ ಸಾಧ್ಯವೆಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. "ಕಿಡ್ನಾಪ್ ಮಾಡಿ ಮೂರು ದಿನ ಆಗಿತ್ತು. ನಡೆಯುತ್ತಲೇ ಇದ್ವಿ. ಮೂರು ದಿನ ಆದ್ಮೇಲೆ ನಮ್ಮನ್ನು ಯಾಕೆ ಕಿಡ್ನಾಪ್ ಮಾಡಿದ್ದು ಅಂತ ಗೊತ್ತಾ ನಿಮಗೆ ಅಂತ ಕೇಳಿದ. ಅಪ್ಪಾಜಿ ಬಳಿ ಮಾತಾಡುವುದಕ್ಕೆ ಶುರು ಮಾಡಿದೆ. ಇಲ್ಲ ನಮ್ಮದೊಂದಿಷ್ಟು ಬೇಡಿಕೆಯಿದೆ. ನೀವು ನಮ್ಮೊಂದಿಗೆ ಸ್ವಲ್ಪ ದಿನ ಇರಬೇಕು ಅಂತ ಹೇಳಿದ. ಸುಮ್‌ಸುಮ್ನೆ ಬೋಗಸ್ ಬೇಡಿಕೆಗಳನ್ನು ಹೇಳುತ್ತಿದ್ದ. ತಮಿಳುನಾಡಿಗೆ ನೀರು ಬಿಡಬೇಕು. ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಬೇಕು, ಟೀ ಎಸ್ಟೇಟ್ ಅವರ ಕೂಲಿ ಜಾಸ್ತಿ ಮಾಡಬೇಕು. ಇವನಿಗೆ ಸಂಬಂಧವೇ ಇಲ್ಲ. ಇವನೇ ದೊಡ್ಡ ಕಳ್ಳ. ಇಂತಹ ಬೇಡಿಕೆ ಇಷ್ಟ." ರಾಜ್‌ಕುಮಾರ ಕಿಡ್ನಾಪ್ ಆದಾಗ ವೀರಪ್ಪನ್‌ಗೆ ಹೊಡೆದು ತಪ್ಪಿಸಿಕೊಂಡು ಬಂದಿದ್ದ ನಾಗಪ್ಪ ಮಾರಡಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಕಾಡಿನೊಳಗೆ ಪ್ರಾಣಿಗಳನ್ನು, ಪೊಲೀಸ್ ಅಧಿಕಾರಿಗಳನ್ನು ಕೊಂದು, ಅಪಹರಣ ಮಾಡಿಕೊಂಡು, ಸ್ಮಗ್ಲಿಂಗ್ ಮಾಡುತ್ತಿದ್ದ ವೀರಪ್ಪನ್‌ಗೆ ಕಾವೇರಿ ನದಿ ವಿಚಾರ ಯಾಕೆ? ತಿರುವಳ್ಳುವರ್ ಬಗ್ಗೆ ಆತನಿಗೆ ಏನು ಗೊತ್ತಿತ್ತು? ಟೀ ಎಸ್ಟೇಟ್ ಕಾರ್ಮಿಕರ ಕೂಲಿ ಬಗ್ಗೆ ಈತನಿಗೆ ಯಾಕಷ್ಟು ಕಾಳಜಿ? ಇದ್ಯಾವುದಕ್ಕೂ ಉತ್ತರ ಸಿಗಲಿಲ್ಲ. ಆದರೆ, ಅಣ್ಣಾವ್ರನ್ನು ಅಪಹರಿಸಿದ ಬಳಿಕ ತಮಿಳರು ವೀರಪ್ಪನ್ ಅನ್ನು ಹೀರೊ ಮಾಡಿಬಿಟ್ಟರು ಅನ್ನೋದು ನಿರ್ದೇಶಕ ಎ.ಎಂ.ಆರ್ ರಮೇಶ್ ಅಭಿಪ್ರಾಯ.

"ತಿರುವಳ್ಳುವರ್ ಪ್ರತಿಮೆ ಮಾಡಿಬೇಕು ಅನ್ನೋದು ಮುಂಚೆಯಿಂದಾನೂ ಇತ್ತು. ಆದರೆ, ಅಣ್ಣಾವ್ರ ಕಿಡ್ನಾಪ್ ಆದಾಗ ವೀರಪ್ಪನ್ ಇಟ್ಟ 10 ಬೇಡಿಕೆಗಳಲ್ಲಿ ಅದೂ ಒಂದು ಆಗಿತ್ತು. ಅಲ್ಲಿವರೆಗೂ ವೀರಪ್ಪನ್ ಕೇವಲ ಕಾಡುಗಳ್ಳನಾಗಿದ್ದ. ರಾಜ್‌ಕುಮಾರ್ ಕಿಡ್ನಾಪ್ ಟೈಮ್‌ನಲ್ಲಿ ವೀರಪ್ಪನ್ ಅನ್ನು ತಮಿಳು ಹೀರೋ ತರ ಮಾಡಿಬಿಡುತ್ತಾರೆ. ಕಾವೇರಿ ನೀರು, ತಿರುವಳ್ಳುವರ್ ಪ್ರತಿಮೆ ಇಂತಹ ವಿಷಯವನ್ನೆಲ್ಲ ಹೇಳಿಬಿಡುತ್ತಾರೆ. ಅಲ್ಲಿವರೆಗೂ ಅವನಿಗೆ ಅವೆಲ್ಲ ಗೊತ್ತೇ ಇರುವುದಿಲ್ಲ. ಅಲ್ಲಿವರೆಗೂ ಅವನದ್ದು ಹೊಡೆಯೋದು, ಪೊಲೀಸರನ್ನು ಹತ್ಯೆ ಮಾಡೋದು, ಕಾಡನ್ನು ಲೂಟಿ ಮಾಡುವುದು ಇಷ್ಟೇ ಇತ್ತು. ಅಣ್ಣಾವ್ರು ಕಿಡ್ನಾಪ್ ಆದಾಗ ಒಂದು ಇಪ್ಪತ್ತು ಮಂದಿ ತಮಿಳು ಹುಡುಗರು ಕಾಡಿನ ಒಳಗೆ ಹೋಗಿದ್ದರು. ಆಗ ಅವರು ವೀರಪ್ಪನ್ ಅನ್ನು ಕನ್ವರ್ಟ್ ಮಾಡಿದ್ದರು. ವೀರಪ್ಪನ್ ಇಟ್ಟ 10 ಬೇಡಿಕೆಗಳಲ್ಲಿ 205 ಟಿಎಂಸಿ ನೀರು ಕೊಡುವುದು, ಟಾಡಾ ಕೈದಿಗಳನ್ನು ಬಿಡುಗಡೆ ಮಾಡುವುದು, ಎರಡೂ ರಾಜ್ಯಗಳು ದುಡ್ಡು ಕೊಟ್ಟು ಅವರನ್ನು ಕ್ಷಮಾಪಣೆ ಮಾಡುವುದು, ಹೀಗೆ 10 ಡಿಮ್ಯಾಂಡ್ ಕಳಿಸಿದ್ದ." ಎನ್ನುತ್ತಾರೆ ರಮೇಶ್.
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಮಾಡುವ ವಿಚಾರಕ್ಕೆ ವೀರಪ್ಪನ್ ಚೆಕ್‌ಮೇಟ್ ಇಟ್ಟಿದ್ದ. ಇತ್ತ ಕರ್ನಾಟಕ ಸರ್ಕಾರ ವಿರೋಧಿಸುವ ಹಾಗಿರಲಿಲ್ಲ. ಅತ್ತ ಅನಾವರಣ ಮಾಡುವಂತೆಯೂ ಇರಲಿಲ್ಲ. ಈ ಚೆಕ್ ಮೇಟ್‌ನಿಂದ ತಪ್ಪಿಸಿಕೊಳ್ಳುವುದಕ್ಕೆ ಕರ್ನಾಟಕ ಜಾಣ ನಡೆಯನ್ನು ಇಟ್ಟಿತ್ತು. ಅದುವೇ ತಮಿಳುನಾಡಿನಲ್ಲಿ ಕನ್ನಡ ತತ್ವಜ್ಞಾನಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎನ್ನುವ ಬೇಡಿಕೆ ಇಟ್ಟಿತ್ತು. ಈಗ ತಮಿಳುನಾಡಿಗೆ ಇದನ್ನು ಒಪ್ಪದೆ ಬೇರೆ ವಿಧಿಯಿರಲಿಲ್ಲ.

ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಕಾವೇರಿಯ ವಿಷಯಕ್ಕೆ ಗಲಾಟೆಯಾಗುತ್ತಲೇ ಇತ್ತು. ಹೀಗಾಗಿ ಈ ಎರಡೂ ರಾಜ್ಯಗಳ ಬಾಂಧವ್ಯ ಉತ್ತಮಗೊಳ್ಳುವುದಕ್ಕೆ ಕನ್ನಡದ ಕವಿ ತತ್ಞಜ್ಞಾನಿ ಸರ್ವಜ್ಞನ ಪ್ರತಿಮೆಯನ್ನು ತಮಿಳುನಾಡಿನಲ್ಲಿ, ತಮಿಳರ ತತ್ವಜ್ಞಾನಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಎರಡು ರಾಜ್ಯದ ಸಿಎಂ ಒಪ್ಪಿದ್ದರು. ಆದರೆ, ಇನ್ನೇನು ಅನಾವರಣ ಆಗಬೇಕು ಎನ್ನುವ ವೇಳೆ ಪ್ರತಿಭಟನೆಗಳು ಶುರುವಾಗಿದ್ದವು. ಕೊನೆಗೆ ರಾಜ್‌ಕುಮಾರ್ ಬಿಡುಗಡೆಯಾದ 9 ವರ್ಷಗಳ ಬಳಿಕ ಎರಡೂ ರಾಜ್ಯಗಳಲ್ಲಿ ಪ್ರತಿಮೆಗಳನ್ನು ಅನಾವರಣ ಮಾಡಲಾಯಿತು.
ಅಂದಿನ ತಮಿಳುನಾಡಿನ ಸಿಎಂ ಎಂ. ಕರುಣಾನಿಧಿ ಹಾಗೂ ಕರ್ನಾಟಕದ ಸಿಎಂ ಬಿ.ಎಸ್ ಯಡಿಯೂರಪ್ಪ ಎರಡೂ ಪ್ರತಿಮೆಗಳನ್ನು ಅನಾವರಣ ಮಾಡಿದ್ದರು. ಬೆಂಗಳೂರಿನ ಹಲಸೂರು ಕೆರೆಯ ಉದ್ಯಾನವನದಲ್ಲಿ ತಿರುವಳ್ಳುವರ್, ಹಾಗೂ ಚೆನ್ನೈನ ಅಯನಾವರಂ ಉದ್ಯಾನವನದಲ್ಲಿ ಸರ್ವಜ್ಞ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.


Click it and Unblock the Notifications