ವಿಷ್ಣುವರ್ಧನ್-ಜೋ ಸೈಮನ್ ಹಿಟ್ ಜೋಡಿ 9 ವರ್ಷ ಒಟ್ಟಿಗೆ ಸಿನಿಮಾ ಮಾಡ್ಲಿಲ್ಲ ಯಾಕೆ?
ಕನ್ನಡ ಚಿತ್ರರಂಗದಲ್ಲಿ ಹೀರೋ ಹಾಗೂ ನಿರ್ದೇಶಕರ ಹಿಟ್ ಜೋಡಿಗಳಿವೆ. ಈ ಕಾಂಬಿನೇಷನ್ ಸಿನಿಮಾ ಮಾಡುತ್ತಿದೆ ಅಂತ ಗೊತ್ತಾದರೆ ಸಾಕು ಅದು ಹಿಟ್ ಅಂತ ಭವಿಷ್ಯ ನುಡಿದು ಬಿಡುತ್ತಿದ್ದರು. ಅಂತಹ ಜೋಡಿಗಳಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ನಿರ್ದೇಶಕ ಜೋ ಸೈಮನ್ ಜೋಡಿ ಕೂಡ ಒಂದು. ಇವರಿಬ್ಬರೂ ಸೇರಿದ ಆ ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರೋದು ಕನ್ಫರ್ಮ್ ಆಗಿತ್ತು.
ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಸಿಂಹದ ಜೋಡಿ', 'ನನ್ನ ರೋಷ ನೂರು ವರುಷ', 'ಮಹಾ ಪ್ರಚಂಡರು', 'ಸಾಹಸ ಸಿಂಹ' ಅಂತಹ ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಜೋಡಿ ಒಂದು ದಿನ ಒಟ್ಟಿಗೆ ಕೆಲಸ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿತ್ತು. ಬರೋಬ್ಬರಿ 9 ವರ್ಷಗಳ ಕಾಲ ಇವರಿಬ್ಬರೂ ಒಟ್ಟಿಗೆ ಸಿನಿಮಾವನ್ನೇ ಮಾಡಲಿಲ್ಲ.

ಹಾಗಂತ ಇವರಿಬ್ಬರ ನಡುವೆ ಜಗಳವೇನು ಆಗಿರಲಿಲ್ಲ. ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಇಬ್ಬರೂ ಸ್ನೇಹಿತರಾಗಿಯೇ ಇದ್ದರು. ಆದರೂ 9 ವರ್ಷ ಸಿನಿಮಾ ಮಾಡುವುದು ಬೇಡ ಎಂದು ನಿರ್ಧರಿಸಿದ್ದರು. ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ ಗೌರೀಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಜೋ ಸೈಮನ್ ವಿಸ್ತಾರವಾಗಿ ಹೇಳಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಹೈಲೈಟ್ಸ್
'ಸಾಹಸ ಸಿಂಹ' ಸಿನಿಮಾದ ರೀಲ್‌ಗೆ ಕಿಡಿಗೇಡಿಗಳಿಂದ ಬೆಂಕಿ
ವಿಷ್ಣು-ಜೋಸೈಮನ್ ಸಿನಿಮಾ ಮಾಡದಿರುವಂತೆ ಪತ್ರ
ಮಹಾಪ್ರಚಂಡರು ರಿಲೀಸ್ ಆಗಿದ್ದ ಥಿಯೇಟರ್‌ಗೆ ಕಲ್ಲೆಸೆತ
9 ವರ್ಷ ವಿಷ್ಣು-ಜೋಸೈಮನ್ ಸಿನಿಮಾ ಮಾಡದಿರಲು ನಿರ್ಧಾರ
ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಕಾಂಬಿನೇಷನ್‌ನಲ್ಲಿ ಬಂದ ಸೂಪರ್ ಹಿಟ್ ಸಿನಿಮಾ 'ಸಾಹಸ ಸಿಂಹ'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಆದರೆ, ಕಾರಣವೇ ಇಲ್ಲದೆ ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಕಿಡಿಗೇಡಿಗಳಿಂದ ಗಲಾಟೆ ಶುರುವಾಗಿತ್ತು. ಈ ಸಿನಿಮಾದ ಕ್ಲೈಮ್ಯಾಕ್ ಸೀನ್ ಅನ್ನೇ ಸುಟ್ಟು ಹಾಕಿದ್ದರು.

"ಶಾಂತಲಾ ಥಿಯೇಟರ್‌ನಲ್ಲಿ ಮಾರ್ನಿಂಗ್ ಶೋಗೆ ನಾನು ಹೋಗಿದ್ದೆ. ಆಗೆಲ್ಲ ರೀಲ್ಸ್ ಅನ್ನು ಥಿಯೇಟರ್‌ನಿಂದ ಥಿಯೇಟರ್‌ಗೆ ಶಿಫ್ಟ್ ಮಾಡುತ್ತಿದ್ದರು. ಹೀಗೆ ಶಿಫ್ಟ್ ಮಾಡುವಾಗ ಆ ರೀಲ್ ಅನ್ನು ಕಿತ್ತುಕೊಂಡು ಅಲ್ಲಿ ಮುಂದೆ ಸ್ಮಿಂಗ್ ಪೂಲ್ ತರ ಇತ್ತು. ಅಲ್ಲಿಗೆ ರೀಲ್ಸ್ ಹಾಕಿ ಬೆಂಕಿ ಹಾಕಿಬಿಟ್ಟರು. ನನ್ನ ಕಣ್ಣೆದುರಿಗೆ ಸುಟ್ಟು ಹಾಕಿದ್ದರು. ಆಗ ಜನರಿಗೆ ನನ್ನ ಹೆಸರು ಗೊತ್ತಿತ್ತು. ನನ್ನನ್ನು ನೋಡಿರಲಿಲ್ಲ. ಕ್ಲೈಮ್ಯಾಕ್ಸ್ ರೀಲ್ ಅದು. ಆಮೇಲೆ ನಾನು ತಕ್ಷಣ ಓಡಿ ಹೋಗಿ ಥಿಯೇಟರ್‌ನವರಿಗೆ ಹೇಳಿದೆ. ಇಂತಹದ್ದೊಂದು ಘಟನೆ ನಡೀತು. ಯಾಕಾಯ್ತು? ಏನಕ್ಕೆ ಆಯ್ತು ಅನ್ನೋದು ಗೊತ್ತಾಗಲಿಲ್ಲ. ಆದರೆ, ಸಾಹಸ ಸಿಂಹ ಮಾತ್ರ ಸೂಪರ್ ಹಿಟ್ ಆಯ್ತು." ಎಂದಿದ್ದಾರೆ ಜೋ ಸೈಮನ್.
ಇಲ್ಲಿಂದ ಗಲಾಟೆಗಳು ಶುರುವಾಯ್ತು. ಜೋ ಸೈಮನ್ ಮನೆ ಮುಂದೆ ವಿಪರೀತ ಗಲಾಟೆ ಆಯಿತು. 'ಸಾಹಸ ಸಿಂಹ' ಸಿನಿಮಾವನ್ನು ಅಭಿನಯ ಥಿಯೇಟರ್‌ನಲ್ಲಿ ಪ್ರದರ್ಶನ ಮಾಡಲಾಗುತ್ತಿತ್ತು. ಅಲ್ಲಿ ಒಂದು ರಿಸರ್ವ್ ಪೊಲೀಸ್ ಇಟ್ಟು ಸಿನಿಮಾ ಪ್ರದರ್ಶನ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಆ ವೇಳೆ ವಿಷ್ಣುವರ್ಧನ್ ಹಾಗೂ ಜೋ ಸೈಮನ್‌ಗೆ ಯಾಕೆ ಗಲಾಟೆ ಆಗುತ್ತಿದೆ ಎನ್ನುವುದೇ ಅರ್ಥ ಆಗಿರಲಿಲ್ಲ. ಯಾರು ಮಾಡಿಸುತ್ತಿದ್ದಾರೆ? ಯಾಕೆ ಅನ್ನೋದು ಗೊತ್ತಾಗಲೇ ಇಲ್ಲ.
ಹಾಗಂತ ಇದು ಕೇವಲ ಸಾಹಸ ಸಿಂಹ ಸಿನಿಮಾಗೆ ಮುಗಿದಿರಲಿಲ್ಲ. ವಿಷ್ಣುವರ್ಧನ್, ಜೋ ಸೈಮನ್ ಸಿನಿಮಾ ಆರಂಭ ಆದರೆ ಸಾಕು ಗಲಾಟೆ ಶುರುವಾಗುತ್ತಿತ್ತು. ಎಂ.ಪಿ ಶಂಕರ್ ನಿರ್ಮಿಸುತ್ತಿದ್ದ ಸಿನಿಮಾದಿಂದಲೂ ಜೋ ಸೈಮನ್ ಅವರನ್ನು ಕೈ ಬಿಡಲಾಗಿತ್ತು. "ಎಂಪಿ ಶಂಕರ್ ನನಗೊಂದು ಸಿನಿಮಾ ಕೊಟ್ಟರು. ಅದಕ್ಕೆ ರೈಟರ್ ಆಗಿ ಕುಣಿಗಲ್ ನಾಗಭೂಷಣ್ ಇದ್ದರು. ಮೈಸೂರು ಮೃಗಾಲಯದ ಬಳಿ ಹೋಟೆಲ್ ಬಳಿ ಒಂದು ರೂಮ್ ಹಾಕಿಕೊಟ್ಟರು. ಅವರು ಇನ್ಸ್‌ಪಿರೇಷನ್‌ಗೆಂದು ಒಂದು ಸಿನಿಮಾ ಹೇಳಿದರು. ಅದ್ಯಾವುದು ಅಂದರೆ, ಮ್ಯಾಡ್ ಮ್ಯಾಕ್ಸ್. ವಿಷ್ಣುವರ್ಧನ್ ಇಟ್ಕೊಂಡು ಕನ್ನಡದಲ್ಲಿ ಇಂತಹದ್ದೊಂದು ಸಿನಿಮಾ ಮಾಡಬೇಕು ಅಂತ ಹೇಳಿದ್ದರು. ಸ್ಕ್ರಿಪ್ಟ್ ಎಲ್ಲಾ ಮುಗೀತು. ಇನ್ನೇನು ನಾಳೆ ಹೊರಡಬೇಕು ಅನ್ನುವಷ್ಟರಲ್ಲಿ ಎಂ.ಪಿ ಶಂಕರ್ ಬಂದರು. ಕೈಯಲ್ಲಿ ಒಂದಿಷ್ಟು ದುಡ್ಡು ಕೊಟ್ಟು, ಕ್ಷಮಿಸಿ ಜೋ ಸೈಮನ್ ಅವರೇ ಈ ಸಿನಿಮಾ ನೀವು ಮಾಡುತ್ತಿಲ್ಲ ಅಂದರು. ಯಾಕೆ ಅಂತ ಹೇಳಿದಾಗ ಅವರು ಒಂದಿಷ್ಟು ಲೆಟರ್ ತೋರಿಸಿದರು. ಇದರಲ್ಲಿ ನೀವು ವಿಷ್ಣು ಅವರು ಸಿನಿಮಾ ಮಾಡಬಾರದು ಅಂತಿದೆ. ಅದರಲ್ಲಿ ಒಬ್ಬರು ರಕ್ತದಲ್ಲಿ ಇವರಿಬ್ಬರನ್ನು ಒಟ್ಟಿಗೆ ಸೇರಿಸಬೇಡಿ ಅಂತ ಬರೆದಿದ್ದರು. ಅದರಲ್ಲಿ ಕೊಟ್ಟಿದ್ದ ಒಂದೇ ಒಂದು ಆಪ್ಶನ್ ಅಂದರೆ, ಒಂದು ಜೋ ಸೈಮನ್ ಇಟ್ಟುಕೊಳ್ಳಿ. ಇಲ್ಲಾ ವಿಷ್ಣುವರ್ಧನ್ ಅವರನ್ನು ಇಟ್ಟುಕೊಳ್ಳಿ. ಇಬ್ಬರನ್ನೂ ಸೇರಿಸಿ ಸಿನಿಮಾ ಮಾಡಿದರೆ ಖಂಡಿತ ಗಲಾಟೆ ಆಗುತ್ತೆ. ನಾವು ಸಿನಿಮಾ ಮಾಡುವುದಕ್ಕೆ ಬಿಡಲ್ಲ ಎಂದು ಬರೆದಿತ್ತು." ಎಂದು ಆ ಘಟನೆಯನ್ನು ಜೋ ಸೈಮನ್ ನೆನಪಿಸಿಕೊಂಡಿದ್ದಾರೆ.
ಈ ಘಟನೆಯ ಬಳಿಕ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. "ಚಿತ್ರರಂಗದಲ್ಲಿ ನಾನು ವಿಷ್ಣುವರ್ಧನ್ ಸೇರಿ ಸಿನಿಮಾನೇ ಮಾಡಬಾರದು ಅಂತ ಮಾಡಿದ್ದರು. ಇನ್ನೊಂದು ಕಡೆ ಎಂಪಿ ಶಂಕರ್ ಅವರಿಗೆ ಮಾಡಬೇಕಿದ್ದ ಸಿನಿಮಾವನ್ನು ಭಾರ್ಗವ ಮಾಡಿದರು. ಅದು ಒಂದೇ ಗುರಿ. ಆ ವೇಳೆ ನಾನು ವಿಷ್ನುವರ್ಧನ್ ಸೇರಿ ಸಿನಿಮಾ ಮಾಡಬಾರದು ಅನ್ನೋದು ಬೆಳಕಿಗೆ ಬಂತು. ಇದೇ ವೇಳೆ ನಾನು ಊರಿಗೆ ಉಪಕಾರಿಗೆ ಕಮಿಟ್ ಆಗಿದ್ದೆ. ಹೀಗಾಗಿ ಆ ಸಿನಿಮಾವನ್ನು ಮಾಡುತ್ತಿದ್ವಿ. ಆಗ ಕಾವೇರಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಆಗ ಅಲ್ಲಿಗೆ ಬಂದು ಗಲಾಟೆ ಮಾಡಿದರು. ಹೀಗಾಗಿ ಅಜಂತಾ ಮೂವೀಸ್‌ನವರು ಶ್ರೀರಂಗಪಟ್ಟಣದಲ್ಲಿ ರಿಸರ್ವ್ ಪೊಲೀಸ್ ಅನ್ನು ಕರೆಸಿದ್ದರು. ಒಬ್ಬ ಗನ್ ಮ್ಯಾನ್ ವಿಷ್ಣುವರ್ಧನ್‌ಗೆ, ಮತ್ತೊಬ್ಬ ಗನ್ ಮ್ಯಾನ್ ನನಗೆ ಕೊಟ್ಟರು. ಇಡೀ ಸಿನಿಮಾವನ್ನು ರಿಸರ್ವ್ ವ್ಯಾನ್ ಇಟ್ಟುಕೊಂಡು ಸಿನಿಮಾ ಮಾಡಿದ್ವಿ." ಎಂದು ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಹಾಗಂತ ಈ ಗಲಾಟೆ ಇಲ್ಲಿಗೆ ಮುಗಿದಿರಲಿಲ್ಲ. "ಇಷ್ಟೆಲ್ಲ ಆದ್ಮೇಲೆ ನಾನು ಮತ್ತು ವಿಷ್ಣುವರ್ಧನ್ ಮಾತಾಡಿಕೊಂಡು ಸಿನಿಮಾ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದ್ವಿ. ಈ ವೇಳೆ ನನ್ನದೇ ಒಂದು ಸಿನಿಮಾ ಮಹಾಪುರುಷ ನಡೆಯುತ್ತಿತ್ತು. ಗಾಯತ್ರಿ ಎರಡನೇ ಬಾರಿ ಕನ್ನಡ ಚಿತ್ರರಂಗಕ್ಕೆ ಬಂದ ಸಿನಿಮಾವದು. ಗಾಯತ್ರಿಯವರು ಬಾಂಬೆಗೆ ಹೋಗಿದ್ದರು. ಆಗ ಮತ್ತೆ ಅವರನ್ನು ಕರೆದುಕೊಂಡು ಬಂದು ಸಿನಿಮಾ ಮಾಡುತ್ತಿದ್ವಿ. ಪ್ಯಾಲೇಸ್ ಗ್ರೌಂಡ್‌ನಲ್ಲಿ ಬೈಕ್‌ಗಳನ್ನು ಕ್ರೈನ್‌ನಲ್ಲಿ ಎತ್ತಿ ಫೈಟ್ ಸೀನ್ ಮಾಡುತ್ತಿದ್ವಿ. ಅಲ್ಲೊಂದು ಗುಂಪು ಗಲಾಟೆ ಮಾಡುವುದಕ್ಕೆ ಬಂದಿತ್ತು. ಯಾರೋ ಬಂದು ಇಲ್ಲಿ ಇರಬೇಡಿ ಗಲಾಟೆಯಾಗುತ್ತಿದೆ ಎಂದು ಹೇಳಿದರು. ಇದೇ ರೀತಿ ಮಹಾಪ್ರಚಂಡರು ಸಿನಿಮಾ ಮೆಜೆಸ್ಟಿಕ್ ಥ್ರಿಯೇಟರ್‌ನಲ್ಲಿ ರಿಲೀಸ್ ಆಯ್ತು. ಚಿತ್ರಮಂದಿರದ ಗಾಜನ್ನೇ ಒಡೆದು ಹಾಕಿದರು. ಆಗ ನಾವು ಒಟ್ಟಿಗೆ ಸಿನಿಮಾ ಮಾಡುವುದು ಬೇಡ ಅಂತ ನಿರ್ಧಾರ ಮಾಡಿದ್ವಿ." ಎನ್ನುತ್ತಾರೆ.

9 ವರ್ಷ ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಸಿನಿಮಾ ಮಾಡದೇ ಇರುವುದನ್ನು ನೆನಸಿಕೊಂಡು ಈ ಸಂದರ್ಶನದಲ್ಲಿ ಬೇಸರಪಟ್ಟುಕೊಂಡಿದ್ದರು. "ಒಂಬತ್ತು ವರ್ಷ ಸಿನಿಮಾ ಮಾಡಲಿಲ್ಲ. ನಾನು ಒಂದು ಜನರೇಷನ್ ಅನ್ನು ಕಳೆದುಕೊಂಡೆ. ವಿಷ್ಣುವರ್ಧನ್ ಜೊತೆ 9 ವರ್ಷ ಸಿನಿಮಾ ಮಾಡಿದ್ದರೆ, ಇನ್ನೆಷ್ಟು ಸಿನಿಮಾ ಮಾಡುತ್ತಿದ್ದೆ. ನಾನ್ ಸ್ಟಾಪ್ ವರ್ಷಕ್ಕೆ ಒಂದು ಇಲ್ಲ ಎರಡು ಸಿನಿಮಾ ಮಾಡುತ್ತಲೇ ಇರುತ್ತಿದ್ದೆ. ವಿಷ್ಣು ಜೊತೆ ಒಂದು 20 ಸಿನಿಮಾ ಮಾಡುತ್ತಿದ್ದೆ. ಈಗ ಯಾರನ್ನು ಇಟ್ಕೊಂಡು ಸಿನಿಮಾ ಮಾಡಬೇಕು? ನನ್ನ ಹತ್ತಿರ ಇದ್ದಿದ್ದು ಪ್ರಭಾಕರ್ ಒಬ್ಬರೇ. ಆಮೇಲೆ ಶಂಕರ್‌ನಾಗ್ ಇಟ್ಕೊಂಡು, ಶಶಿಕುಮಾರ್ ಇಟ್ಕೊಂಡು, ಅನಂತ್‌ನಾಗ್ ಇಟ್ಕೊಂಡು ಬದುಕನ್ನ ನಡೆಸಬೇಕಾಯ್ತು." ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
9 ವರ್ಷಗಳು ದೂರಾದ ಬಳಿಕ ಇಬ್ಬರೂ 'ರವಿವರ್ಮಾ' ಸಿನಿಮಾ ಮೂಲಕ ಒಂದಾಗಿದ್ದರು. "ರಮೇಶ್ ಅವರು ಆಗ ಮಿನಿಸ್ಟರ್ ಆಗಿದ್ದರು. ಅವರು ಕರೆದು ಸಿನಿಮಾ ಮಾಡಬೇಕು ಅಂತ ಹೇಳಿದರು. ನಾವು ಮಾತಾಡಿಕೊಂಡು ಸಿನಿಮಾ ಮಾಡುವುದಿಲ್ಲ ಅಂದುಕೊಂಡಿದ್ದೇವೆ ಅಂತ ಹೇಳಿದೆ. ಆಗ ಎಲ್ಲಾ ಕೇಳಿದ್ದೇನೆ. ನಾನೊಬ್ಬ ಮಿಸ್ಟರ್, ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು. ಅವರೇ ವಿಷ್ಣುವರ್ಧನ್ ಅವರ ಜೊತೆ ಮಾತಾಡಿ ಸಿನಿಮಾ ಒಪ್ಪಿಸಿದರು. ವಿಷ್ಣು ತಪ್ಪಿಸಿಕೊಳ್ಳುವುದಕ್ಕೆ ಸಂಭಾವನೆ ಜಾಸ್ತಿ ಕೇಳಿದ್ದರು. ಅದಕ್ಕೂ ಒಪ್ಪಿದರು. ಹಾಗೇ ಮತ್ತೆ ಒಟ್ಟಿಗೆ ಸೇರಿ ಸಿನಿಮಾ ಮಾಡಿದ್ವಿ. ಆಗ ಏನೂ ಗಲಾಟೆಗಳಾಗಲಿಲ್ಲ." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











