ವಿಷ್ಣುದಾದ ಜೊತೆ "ಓ ಮೈನಾ.. ಓ ಮೈನಾ" ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಅರ್ಚನಾ ಈಗ ಎಲ್ಲಿದ್ದಾರೆ ಗೊತ್ತೇ?
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ನಟಿಯರು ಬಹಳ ಮಂದಿ ಇದ್ದಾರೆ. ಇದೇ 15-20 ವರ್ಷಗಳ ಹಿಂದೆ ನಾಯಕಿ ಮೆರೆದಿದ್ದ ಈ ನಟಿಯರು ಈಗ ತೆರೆಮರೆಗೆ ಸರಿದಿದ್ದಾರೆ. ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅನ್ನೋ ಚಿಕ್ಕದೊಂದು ಸುಳಿವು ಕೂಡ ಇಲ್ಲ. ಸಿನಿಮಾರಂಗದಿಂದ ಕಂಪ್ಲೀಟ್ ಆಗಿ ದೂರ ಉಳಿದುಬಿಟ್ಟಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ ದಿನದಿಂದ ಕ್ಯಾಮರಾ ಮುಂದೆ ಬಂದಿದ್ದೇ ಅಪರೂಪ. ಅಂತಹ ನಟಿಯರಲ್ಲಿ ಅರ್ಚನಾ ಕೂಡ ಒಬ್ಬರು.
ಅರ್ಚನಾ ಅಂದಾಕ್ಷಣ ಎಲ್ಲರಿಗೂ ತಟ್ಟನೆ ನೆನಪಾಗದೇ ಹೋಗಬಹುದು. ಆದರೆ, ವಿಷ್ಣುದಾದ ಅಭಿನಯದ 'ಯಜಮಾನ' ಸಿನಿಮಾದ ಅರ್ಚನಾ.. ಉಪೇಂದ್ರ ನಟಿಸಿ, ನಿರ್ದೇಶಿಸಿದ 'ಎ' ಸಿನಿಮಾದ ಅರ್ಚನಾ ಅಂದರೆ ತಟ್ಟನೆ ಅವರ ಫೇಸ್ ಕಣ್ಮುಂದೆ ಬಂದು ಬಿಡುತ್ತೆ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಈ ನಟಿ ದಿಢೀರನೇ ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ. ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಅನ್ನೋದು ಬಹುಶ: ಸಿನಿಮಾ ಮಂದಿಗೂ ಸುಳಿವಿಲ್ಲ.

ಈಗ ನಟ,ನಿರ್ದೇಶಕ ರಘುರಾಮ್ ಈ ನಟಿಯ ಅನ್ವೇಷಣೆಗೆ ಮುಂದಾಗಿದ್ದಾರೆ. ಈ ಸಂಬಂಧ ತಮ್ಮ 'ರಘುರಾಮ್ ಯೂಟ್ಯೂಬ್ ಚಾನೆಲ್'ನಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈಗ ನಟಿ ಅರ್ಚನಾ ಅವರ ಎಲ್ಲಿದ್ದಾರೆ? ಅವರ ಹಿನ್ನೆಲೆಯೇನು? ಚಿತ್ರರಂಗಕ್ಕೆ ಅವರು ಬಂದಿದ್ದು ಹೇಗೆ? ಅನ್ನೋ ಮಾಹಿತಿ ಈ ವಿಡಿಯೋದಲ್ಲಿದೆ. ಆ ವಿಡಿಯೋದ ಹೈಲೈಟ್ ಇಲ್ಲಿದೆ.
ಬೆಂಗಳೂರಿನ ಮೀನಾಕ್ಷಿ ನಗರದಲ್ಲಿ ಅರ್ಚನಾ ಅವರ ಮನೆಯಿತ್ತು. ಅರ್ಚನಾ ಅವರಿಗೆ ಒಬ್ಬರು ತಂಗಿ ಕೂಡ ಇದ್ದರು. ಇವರದ್ದು ತುಂಬಾನೇ ದೊಡ್ಡ ಬಳಗ. ಅಪ್ಪ-ಅಮ್ಮನ ಮುದ್ದಿನ ಮಗಳಾಗಿದ್ದರು. ಬಾಲ್ಯದಿಂದಲೂ ಅರ್ಚನಾ ಅವರು ತುಂಬಾನೇ ನಾಟಿಯಾಗಿದ್ದರು. ಯಾವುದೇ ಸ್ಪರ್ಧಿಯಲ್ಲಾದರೂ ನಾನೇ ಮೊದಲು ಬರಬೇಕು ಅನ್ನೋ ಮನೋಭಾವ ಅವರಲ್ಲಿ ಇತ್ತು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದೆ ಇರುವ ಹೆಣ್ಣು ಮಗಳು.
ಅರ್ಚನಾ ಅವರ ತಂದೆಗೆ ಸಾಕಷ್ಟು ಸಿನಿಮಾ ನಿರ್ಮಾಪಕರು ಸ್ನೇಹಿತರು ಇರುತ್ತಾರೆ. ಕನ್ನಡದ ದಿಗ್ಗಜರ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಸ್ನೇಹ ಇರುವುದರಿಂದ ಒಮ್ಮೆ ನಿರ್ಮಾಪಕರೊಬ್ಬರು ಅರ್ಚನಾ ಅವರ ಮನೆಗೆ ಬಂದಿದ್ದರು. ಆಗ ಅರ್ಚನಾ ಅವರನ್ನು ನೋಡಿದಾಗ ಸಿನಿಮಾದಲ್ಲಿ ಆಕ್ಟ್ ಮಾಡುತ್ತೀಯಾ ಅಂತ ಕೇಳುತ್ತಾರೆ. ಆ ವೇಳೆ ಅರ್ಚನಾ 8ನೇ ತರಗತಿ ಓದುತ್ತಿದ್ದರಷ್ಟೇ. ಇಲ್ಲ ಸಿನಿಮಾದಲ್ಲಿ ಆಸಕ್ತಿಯಿಲ್ಲವೆಂದು ಹೊರಟು ಹೋಗಿದ್ದರು.
ಆದರೂ ಬಿಡದ ನಿರ್ಮಾಪಕರು ಸಿನಿಮಾದಲ್ಲಿ ನಟಿಸುವುದಕ್ಕೆ ಆಫರ್ ಕೊಟ್ಟರು. ಅದುವೇ ಶಿವರಾಜ್‌ಕುಮಾರ್ ನಟನೆಯ 'ಆದಿತ್ಯ' ಸಿನಿಮಾ. ಇದರಲ್ಲಿ ಅರ್ಚನಾ ಅವರು ಶಿವಣ್ಣನ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ಮೊದಲ ಸಿನಿಮಾ ಆಗಿದ್ದರಿಂದ ಹೆದರಿದ್ದರು. ಆ ವೇಳೆ ಶಿವಣ್ಣ ಕಂಫರ್ಟಬಲ್ ಆಗಿ ನಟಿಸುವುದಕ್ಕೆ ಸಹಕರಿಸಿದ್ದರು. ಹೀಗಾಗಿ ಸಿನಿಮಾ ಶೂಟಿಂಗ್ ಸರಾಗವಾಗಿ ಸಾಗಿತ್ತು. ಆನಂತರ ನಟಿಸಿದ ಸಿನಿಮಾ ಕುಮಾರ್ ಗೋವಿಂದ್ ನಟನೆಯ 'ಈ ಹೃದಯ ನಿನಗಾಗಿ' ಸಿನಿಮಾ. ಈ ಸಿನಿಮಾ ಕೂಡ ಮೆಚ್ಚುಗೆ ಗಳಿಸಿತ್ತು.

ಇನ್ನು ಅರ್ಚನಾ ಅವರ ಮೂರನೇ ಸಿನಿಮಾ 'ಎ'. ರಘುರಾಮ್ ಹೇಳುವಂತೆ ಈ ಸಿನಿಮಾದಲ್ಲಿ ಚಾಂದಿನಿ ಪಾತ್ರಕ್ಕೆ ಅರ್ಚನಾ ಅವರೇ ಆಯ್ಕೆ ಆಗಿದ್ದರು. ಆದರೆ, 'ಈ ಹೃದಯ ನಿನಗಾಗಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದರಿಂದ ಚಾಂದನಿ ಪಾತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೂ, ಉಪೇಂದ್ರ ಅವರ ಒತ್ತಾಯಕ್ಕೆ 'ಎ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಮೂರು ಸಿನಿಮಾಗಳ ಬಳಿಕ ಹಿಂದಿ ಸಿನಿಮಾ 'ಫೂಲ್ ಔರ್ ಆಗ್' ಎನ್ನುವ ಸಿನಿಮಾದಲ್ಲಿ ನಟಿಸಿದ್ದರು.
ಹಿಂದಿಯಲ್ಲಿ 'ಖೈದಿ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ, ಬಾಲಿವುಡ್‌ನ ಅತಿಯಾದ ಗ್ಲಾಮರ್ ಇಷ್ಟ ಆಗಲಿಲ್ಲ. ಹೀಗಾಗಿ ಮತ್ತೆ ಕನ್ನಡಕ್ಕೆ ಬಂದು ವಿಷ್ಣುದಾದ ನಟಿಸಿದ 'ಯಜಮಾನ' ಸಿನಿಮಾದಲ್ಲಿ ನಟಿಸಿದರು. ವಿಷ್ಣುದಾದ ಜೊತೆ "ಓ ಮೈನಾ.. ಓ ಮೈನಾ.." ಹಾಡಿಗೆ ಹೆಜ್ಜೆ ಹಾಕಿದ್ದರು. ನಂತರ 'ನೀಲಾಂಬರಿ', 'ಹಾಲು ಸಕ್ಕರೆ', 'ಯಜಮಾನ' ಸಿನಿಮಾದಲ್ಲಿ ನಟಿಸಿದ್ದರು. 'ಇಂದು' ಅನ್ನೋ ಸಿನಿಮಾ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ್ದರು. ಅಲ್ಲಿ ಒಂದು ಆರೇಳು ಸಿನಿಮಾ ಮಾಡಿದ್ದಾರೆ ಎನ್ನಲಾಗಿದೆ.
ಅವರಿಗೆ ಐಎಎಸ್ ಆಫೀಸರ್ ಆಗಬೇಕು ಅನ್ನೋ ಆಸೆಯಿತ್ತು. ಆದರೆ, ಅವರನ್ನು ಬಣ್ಣದ ಬದುಕು ಇಲ್ಲಿಗೆ ಎಳೆದುಕೊಂಡು ಬಂದಿದ್ದರಿಂದ ಸಿನಿಮಾ ನಟಿಯಾದರು. ಆಧ್ಯಾತ್ಮ, ಕುಟುಂಬ, ಕಾರು ಡ್ರೈವಿಂಗ್ ಅಂದರೆ ತುಂಬಾನೇ ಇಷ್ಟ. ಅರ್ಚನಾ ಅವರು ಹೈದರಾಬಾದ್‌ನಲ್ಲಿ ಇದ್ದಾರೆ ಅನ್ನೋ ಮಾಹಿತಿ ರಘುರಾಮ್ ಅವರಿಗೆ ಸಿಕ್ಕಿದೆ. ಒಂದು ವೇಳೆ ಅವರು ಸಂದರ್ಶನಕ್ಕೆ ಸಿಕ್ಕರೆ, ಖಂಡಿತಾ ಮಾಡುವುದಾಗಿ ಹೇಳಿದ್ದಾರೆ.


Click it and Unblock the Notifications















