ಫಿಟ್ಟಿಂಗ್ ಇಟ್ರು ಅಂತ ನಿಧಿ ಸುಬ್ಬಯ್ಯ ಮನೆಯ ಗೇಟ್‌ಗೆ ಪಟಾಕಿ ಕಟ್ಟಿ ಸಿಡಿಸಿದ್ದ ಯಶ್: ಎಸ್ಕೇಪ್ ಆಗಿದ್ದೇಗೆ?
ರಾಕಿಂಗ್‌ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಗ್ಲೋಬಲ್ ಲವೆಲ್‌ನಲ್ಲಿ ಸದ್ದು ಮಾಡುವ ಲಕ್ಷಣಗಳು ಕಾಣುತ್ತಿವೆ. ಈ ಪ್ರಾಜೆಕ್ಟ್‌ಗಾಗಿ ವಿದೇಶಿ ತಂತ್ರಜ್ಞರು ಕೆಲಸ ಮಾಡುತ್ತಿರೋದು ನೋಡಿದರೆ, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ರಿಲೀಸ್ ಆಗುತ್ತೆ ಅನ್ನೋ ಸುಳಿವು ಸಿಕ್ಕಿದೆ. ಯಶ್ ತನ್ನ ಬದುಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಈ ಸಿನಿಮಾ ಮೂಲಕ ಇಡುತ್ತಿದ್ದಾರೆ. ಇದು ಸಿನಿಮಾ ಕಥೆಯಾದರೆ, ಯಶ್ ಬಗ್ಗೆ ಇನ್ನೊಂದು ಇಂಟ್ರೆಸ್ಟಿಂಗ್ ಕಥೆಯಿದೆ.
ಕನ್ನಡ ಚಿತ್ರರಂಗದಲ್ಲಿ ತನ್ನ ವೃತ್ತಿ ಬದುಕಿನ ಬಗ್ಗೆ ಪೋಕಸ್ ಆಗಿ ಕೆಲಸ ಮಾಡುವ ಕೆಲವೇ ನಟರಲ್ಲಿ ಯಶ್ ಕೂಡ ಒಬ್ಬರು. ನಟನಾಗುವುದಕ್ಕೂ ಮುನ್ನ ತಾನು ಹೀರೋ ಆಗಬೇಕು ಅಂತ ಅಂದುಕೊಂಡಿದ್ದರು. ಅದನ್ನು ಈಗ ಸಾಧಿಸಿ ತೋರಿಸಿದ್ದಾರೆ. ಯಶ್ ಸ್ವಭಾವನೇ ಹಾಗೆ. ಮುನ್ನುಗ್ಗಿ ತನಗೆ ಬೇಕಾಗಿದ್ದನ್ನು ಸಾಧಿಸುವ ತನಕ ಬಿಡೋದಿಲ್ಲ. ಅದು ಸಿನಿಮಾಗೆ ಬಂದ್ಮೇಲೆ ಬೆಳೆಸಿಕೊಂಡಿದಲ್ಲ.

ಯಶ್ ಮೊದಲಿನಿಂದಲೂ ಸಿಕ್ಕಾಪಟ್ಟೆ ಆಕ್ಟೀವ್. ಏನೇ ಬಂದರೂ ನುಗ್ಗುತ್ತಿರೋದೇ. ಕಾಲೇಜು ದಿನಗಳಲ್ಲಂತೂ ಯಶ್ ಮಾಡದ ಕಿತಾಪತಿಗಳೇ ಇಲ್ಲ. ಅದಕ್ಕೆ ಅವರೇ ನಟಿಸಿದ 'ಕಿರಾತಕ' ಸಿನಿಮಾ ಹೋಲಿಕೆ ಮಾಡಬಹುದು. ಆ ಮಟ್ಟಿಗೆ ಯಶ್ ಕ್ವಾಟ್ಲೇ ಕೊಡುತ್ತಿದ್ದರು. ಆ ಪಟ್ಟಿಯಲ್ಲಿ ಕನ್ನಡದ ನಟಿ ನಿಧಿ ಸುಬ್ಬಯ್ಯ ಕೂಡ ಇದ್ದಾರೆ. ನಿಧಿ ಮೇಲಿನ ಸಿಟ್ಟಿಗೆ ಮನೆಗೆ ಗೇಟ್‌ಗೆ ಪಟಾಕಿ ಯಶ್ ಹಚ್ಚಿದ್ದರು. ಹಾಗಂತ ಆಗಿನ್ನೂ ಇಬ್ಬರೂ ಚಿತ್ರರಂಗಕ್ಕೆ ಕಾಲಿಟ್ಟಿರಲಿಲ್ಲ. ಈ ಘಟನೆ ಏನು ಅನ್ನೋದನ್ನು ಸ್ವತ: ಯಶ್ ನಟಿ ಪ್ರಿಯಾಮಣಿಯ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.
ಕೆಲವು ವರ್ಷಗಳ ಹಿಂದೆ ಪ್ರಿಯಾಮಣಿ ರಾಕಿಂಗ್ ಸ್ಟಾರ್ ಯಶ್‌ರನ್ನು ಫಿಲ್ಮ್ ಫೇರ್ ಕನ್ನಡಕ್ಕೆ ಸಂದರ್ಶನ ಮಾಡಿದ್ದರು. ಈ ವೇಳೆ ಯಶ್ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದ್ದರು. ಈ ವೇಳೆ ಕಾಲೇಜಿನಲ್ಲಿ ಓದುವಾಗ ತಾನು ಮಾಡಿದ ಕಿತಾಪತಿಗಳನ್ನು ರಿವೀಲ್ ಮಾಡಿದ್ದರು. "ಕ್ಲಾಸ್ ರೂಮ್‌ನಲ್ಲಿ ಪಟಾಕಿ ಹಚ್ಚಿದ್ದು ಹೇಳ್ಲಾ? ಪೋಸ್ಟ್ ಬಾಕ್ಸ್‌ಗೆ ಬೆಂಕಿ ಇಟ್ಟಿದ್ದು ಹೇಳ್ಲಾ? ತುಂಬಾನೇ ಇದೆ. ಒಬ್ಬ ಹುಡುಗಿ ಮನೆಯ ಗೇಟ್‌ಗೆ ಪಟಾಕಿ ಹಚ್ಚಿದ್ದೆ." ಎಂದು ಹೇಳಿದ್ದರು.

ಹುಡುಗಿ ಮನೆಯೆ ಗೇಟ್ ಪಟಾಕಿ ಹಚ್ಚಿದ್ದೆ ಅಂತ ಹೇಳಿದಾಗ ನಿಧಿ ಸುಬ್ಬಯ್ಯ ಹೆಸರು ಬಂದಿತ್ತು. "ನಿಧಿ ಸುಬ್ಬಯ್ಯ ಅವರು ನಮ್ಮ ಕಾಲೇಜ್‌ನಲ್ಲಿ ಓದುತ್ತಿದ್ದರು. ನನ್ನ ಫ್ರೆಂಡ್ ಒಂದು ಹುಡುಗಿಗೆ ಲೈನ್ ಹೊಡೆಯುತ್ತಿದ್ದ. ಅವನಿಗೆ ನಾವೆಲ್ಲ ಸಹಾಯ ಮಾಡುತ್ತಿದ್ವಿ. ಇವರು ಏನೋ ಫಿಟ್ಟಿಂಗ್ ಇಟ್ಟಿದ್ದರಂತೆ. ಹುಡುಗ ಸರಿ ಅಲ್ಲ ಅಂತ. ಅದಕ್ಕೆ ರಾತ್ರಿ ಅವರ ಮನೆಗೆ ಹೋಗಿ ಗೇಟ್‌ಗೆ ಪಟಾಕಿ ಕಟ್ಟಿ ಹಚ್ಚಿಬಿಟ್ಟಿದ್ದೆ. ವಾಪಾಸ್ ಹೋಗೋಣ ಅಂತ ನೋಡಿದರೆ. ಆಮೇಲೆ ಗೊತ್ತಾಯ್ತು. ಅವರ ಮನೆ ಡೆಡ್ ಎಂಡ್‌ನಲ್ಲಿ ಇದೆ ಅಂತ. ವಾಪಸ್ ಬರೋ ಅಷ್ಟೊತ್ತಿಗೆ ಲೈಟ್ ಆನ್ ಆಗಿತ್ತು. ಅಂದು ಜಸ್ಟ್ ಎಸ್ಕೇಪ್ ಆಗಿದ್ವಿ." ಎಂದು ಯಶ್ ಹೇಳಿಕೊಂಡಿದ್ದರು.
ಈ ವಿಷಯ ಎಷ್ಟೋ ದಿನಗಳವರೆಗೆ ನಿಧಿ ಸುಬ್ಬಯ್ಯಗೂ ಗೊತ್ತಿರಲಿಲ್ಲ. ಇಬ್ಬರೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಮೇಲೆ ಒಮ್ಮೆ ಸ್ವತ: ಯಶ್ ಅವರೇ ಪಟಾಕಿ ಹಚ್ಚಿದ ಘಟನೆಯನ್ನು ನೆನೆಪಿಸಿದ್ದರಂತೆ. "ಸುಮಾರು ವರ್ಷ ಆದ್ಮೇಲೆ ನಿಧಿ ಸಿಕ್ಕಿ ನನ್ನ ಹತ್ತಿರ ಮಾತಾಡಿದ್ರು. ನೀನು ನನ್ನ ಕಾಲೇಜ್ ಅಂತ ಕೇಳಿದ್ರು. ಹೌದು, ನಿಮಗೆ ಈ ಘಟನೆ ನೆನಪಿದೆಯಾ ಅಂತ ಕೇಳಿದೆ. ಅದು ನೀನಾ ಅಂದ್ರು. ಅದು ನಾನೇ ಅಂತ ಹೇಳಿದ ಮೇಲೆ ಶಾಕ್ ಆಗಿದ್ರು. ಈತರ ತುಂಬಾ ತರಲೆ ಮಾಡಿದ್ದೇನೆ." ಎಂದು ನಿಧಿ ಸುಬ್ಬಯ್ಯ ಮನೆಗೆ ಗೇಟ್‌ಗೆ ಪಟಾಕಿ ಹಚ್ಚಿದ ಸಂಗತಿಯನ್ನು ರಿವೀಲ್ ಮಾಡಿದ್ದರು.
ಇದೇ ಸಂದರ್ಶನದಲ್ಲಿ ಇನ್ನೂ ಬೇರೆ ಸಂಗತಿಗಳ ಬಗ್ಗೆನೂ ಮಾತಾಡಿದ್ದಾರೆ. ಅದರಲ್ಲೂ ಪ್ರಿಯಾಮಣಿ ಮೋಹಕತಾರೆ ರಮ್ಯಾ ಹಾಗೂ ಯಶ್ ನಡುವಿನ ಕಿತ್ತಾಟದ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಯಶ್ ಉತ್ತರ ಹೀಗಿತ್ತು. "ರಮ್ಯಾ ಜೊತೆ ಮಾತಾಡೋದಿಲ್ಲ ಅಂತೇನು ಇಲ್ಲ. ಇಬ್ಬರು ಸ್ಟ್ರಾಂಗ್ ಕ್ಯಾರೆಕ್ಟರ್‌ಗಳು ಒಂದೇ ಕಡೆ ಇದ್ದಾಗ ಕಷ್ಟ ಆಗುತ್ತೆ. ಇಡೀ ಸಿನಿಮಾ ಶೂಟಿಂಗ್ ಮಾಡುವಾಗ ಜಗಳನೇ ಆಗಿಲ್ಲ. ಪ್ರಮೋಷನ್ ಸಮಯದಲ್ಲಿ ಸ್ವಲ್ಪ ಜಗಳ ಆಗಿತ್ತು. ಈಗ ನಾವು ಪ್ರಬುದ್ಧರಾಗಿದ್ದೇವೆ. ಆಗ ಜಗಳ ಆಡಿದ್ದೇವೆ ಅಂತ ಈಗೇನು ಇಲ್ಲ." ಎಂದಿದ್ದರು.
ಯಶ್ ನಟಿಸಿದ ಕೆಲವು ಸಿನಿಮಾಗಳಲ್ಲಿ ಕೌಂಟರ್ ಡೈಲಾಗ್‌ಗಳು ಇದ್ದವು. ಅದನ್ನು ಉದ್ದೇಶ ಪೂರ್ವಕವಾಗಿಯೇ ಬರೆಸಿದ್ದರು ಅನ್ನೋ ಮಾತುಗಳು ಕೇಳಿ ಬಂದಿದ್ದವು. ತಮ್ಮ ಸಿನಿಮಾದಲ್ಲಿನ ಕೌಂಟರ್ ಡೈಲಾಗ್‌ಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದರು. "ಕೌಂಟರ್ ಡೈಲಾಗ್ ಓಕೆ.. ನನಗೆ ಡೈಲಾಗ್ ಅನ್ನು ಹೇಳಿ ಅಭ್ಯಾಸ. ಅದಕ್ಕೆ ಕೌಂಟರ್ ಕೊಡುವುದಕ್ಕೆ ಎಲ್ಲರೂ ಬ್ಯುಸಿಯಾಗಿರುತ್ತಾರೆ ಅಂದರೆ ನನಗೆ ಖುಷಿನೇ. ನಾನು ಇನ್ನೊಬ್ಬರಿಗೆ ಕೌಂಟರ್ ಕೊಟ್ಕೊಂಡು ಕೂರುವುದಿಲ್ಲ. ನಾನು ಕೊಡುವ ಡೈಲಾಗ್‌ಗೆ ಎಲ್ಲರೂ ಕೌಂಟರ್ ಬರೆಯುತ್ತಿದ್ದರೆ, ಅವರು ಡೈಲಾಗ್ ಬರೆಯಬೇಕು ಅನ್ನೋದು ನನಗೆ ಆಸೆ. ಕೌಂಟರ್ ಡೈಲಾಗ್ ಬರೆಯುತ್ತಾರೆ ಅಂದರೆ ಪರ್ವಾಗಿಲ್ಲ. ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬಾರದು ಅಷ್ಟೇ." ಎಂದಿದ್ದಾರೆ.
ಚಿತ್ರರಂಗ ಅಂದ್ಮೇಲೆ ಕೋಲ್ಡ್ ವಾರ್‌ಗಳು ಇರುತ್ತವೆ. ಸ್ಯಾಂಡಲ್‌ವುಡ್‌ನಲ್ಲೂ ಇದೆ. ಈ ಕೋಲ್ಡ್ ವಾರ್ ಬಗ್ಗೆನೂ ಯಶ್ ಪ್ರತಿಕ್ರಿಯೆ ನೀಡಿದ್ದರು. "ಕೋಲ್ಡ್ ವಾರ್ ಅನ್ನೋದು ತುಂಬಾನೇ ಸ್ಟ್ರಾಂಗ್ ಪದ. ಕೋಲ್ಡ್ ವಾರ್ ಇದೆಯಾ ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಕಾಂಪಿಟೇಷನ್ ಅನ್ನೋದಂತೂ ಇದೆ. ನಮ್ಮ ಜೊತೆನೇ ನಾವು ಸ್ಪರ್ಧೆ ಮಾಡುತ್ತೇವೆ ಅನ್ನೋದು ಸತ್ಯ. ಇದೊಂದು ಸ್ಪರ್ಧಾತ್ಮಕ ಲೋಕ. ಬ್ರದರ್ ನೀನು ಉತ್ತಮ ಆದರೆ, ನಾನು ಅತ್ಯುತ್ತಮ ಅಂತ ಹೇಳುತ್ತೇನೆ." ಎಂದು ಶೀತಲ ಸಮರದ ಬಗ್ಗೆ ಹೇಳಿಕೊಂಡಿದ್ದಾರೆ.
ಹಲವು ದಿನಗಳಿಂದ ಚರ್ಚೆಗೆ ಬಂದಿರುವ ವಿಷಯ ಅಂದರೆ, ಅದು 'ಬಾಸ್'. ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಬಾಸ್ ಟೈಟಲ್‌ಗಾಗಿ ಕಿತ್ತಾಡುತ್ತಿದ್ದಾರೆ. ಅದಕ್ಕೆ 'ಬಾಸ್' ಅನ್ನೋದು ತಮ್ಮ ದೃಷ್ಟಿಯಲ್ಲಿ ಏನು? ಅನ್ನೋದನ್ನು ರಿವೀಲ್ ಮಾಡಿದ್ದರು. "ನಿಮ್ಮ ಲೈಫ್‌ನಲ್ಲಿ ನೀವು ಬಾಸ್. ನಿಮ್ಮ ಫ್ಯಾನ್ಸ್‌ಗೆ ನೀವು ಬಾಸ್. ನಿಮ್ಮ ಫ್ಯಾಮಿಲಿಗೆ ನೀವು ಬಾಸ್. ನಿಮ್ಮ ಆಫೀಸ್‌ಗೆ ನೀವು ಬಾಸ್. ಇದರಲ್ಲಿ ತಪ್ಪೇನಿದೆ? ಇಲ್ಲಿ ನಾನೊಬ್ಬನೇ ಬಾಸ್ ಅಂತ ನಾನು ಯಾವತ್ತೂ ಹೇಳುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ಬಾಸ್ ಯಾರು ಅಂತ ಹೇಳುವುದಕ್ಕೆ ಆಗುವುದಿಲ್ಲ. ಪ್ರತಿ ಶುಕ್ರವಾರ ನೀವು ಬಾಸ್ ಹೌದಾ ಅಲ್ವಾ? ಅನ್ನೋದು ಗೊತ್ತಾಗುತ್ತೆ. ನಿಮ್ಮ ಸಿನಿಮಾ ಚೆನ್ನಾಗಿದ್ದರೆ ನೀವೇ ಬಾಸ್. ಇಲ್ಲ ಅಂದರೆ ಪ್ರಡ್ಯೂಸರ್‌ಗೆ ಲಾಸ್." ಎಂದು ಹೇಳಿದ್ದಾರೆ.
ಇನ್ನು ಕೊನೆಯದಾಗಿ ಪ್ರಿಯಾಮಣಿ ಕನ್ನಡದ ಇಬ್ಬರು ಲೆಜೆಂಡ್‌ಗಳಲ್ಲಿ ಯಾರು ಇಷ್ಟ ಅಂತ ಪ್ರಶ್ನೆ ಮಾಡಿದ್ದರು. ಡಾ. ರಾಜ್‌ಕುಮಾರ್ ಹಾಗೂ ಶಂಕರ್‌ನಾಗ್ ಇಬ್ಬರ ಹೆಸರನ್ನು ಮುಂದಿಟ್ಟಿದ್ದರು. ಅಚ್ಚರಿ ಎಂಬಂತೆ ಶಂಕರ್‌ನಾಗ್ ಹೆಸರನ್ನು ರಾಕಿಂಗ್ ಸ್ಟಾರ್ ಯಶ್ ತೆಗೆದುಕೊಂಡಿದ್ದರು. ಪ್ರಿಯಾಮಣಿ ಪ್ರಶ್ನೆಗೆ ಯಶ್ ಖಡಕ್ ಆಗಿ, ಓಪನ್ ಆಗಿ ಪ್ರಶ್ನೆಗಳಿಗೆ ಉತ್ತರಿಸಿದ್ದರು.


Click it and Unblock the Notifications











