Year ender 2023: ಪಠಾಣ್ ಅಲ್ಲ.. ಜವಾನ್ ಅಲ್ಲ.. ಈ ವರ್ಷ ಅತೀ ಹೆಚ್ಚು ಲಾಭ ಮಾಡಿದ ಬಾಲಿವುಡ್ ಸಿನಿಮಾ ಇದೇನೆ!
ಕೋವಿಡ್ 19 ಬಳಿಕ ಬಾಲಿವುಡ್ ಸೊರಗಿ ಹೋಗಿತ್ತು. ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗವನ್ನು ಓವರ್ ಟೇಕ್ ಮಾಡಿದ್ದವು. ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿ ಸೋಲೊಪ್ಪಿಕೊಂಡಿದ್ದವು. ಇದರಿಂದ ಬಾಲಿವುಡ್ ಮಂದಿ ಅವಮಾನ ಎದುರಿಸುವಂತಾಗಿತ್ತು.
ಆದರೆ, 2023ನಲ್ಲಿ ಬಾಲಿವುಡ್ ಮತ್ತೆ ಎದ್ದು ನಿಂತಿದೆ. ದೊಡ್ಡ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾಗಳು ಈ ವರ್ಷ ಬಾಲಿವುಡ್ ಫಿಲ್ಮ್ ಮೇಕರ್‌ಗಳಿಗೆ ಸಿಕ್ಕಿದೆ. ಕಳೆದ ವಾರವಷ್ಟೇ ತೆರೆಕಂಡಿದ್ದ ಶಾರುಖ್ ಖಾನ್ ಅಭಿನಯದ ಸಿನಿಮಾ 'ಡಂಕಿ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
2023ರಲ್ಲಿ ಶಾರುಖ್ ಖಾನ್ ನಟಿಸಿದ 'ಪಠಾಣ್', 'ಜವಾನ್' ಅಂತಹ ಸಿನಿಮಾಗಳು ಸಾವಿರ ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನೇ ಬರೆದಿತ್ತು. ಆದರೆ, ಚಿತ್ರರಂಗದವರ ಪ್ರಕಾರ, 'ಪಠಾಣ್', 'ಜವಾನ್' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಳಿಸಿದ್ದರೂ, ಅತೀ ಹೆಚ್ಚು ಲಾಭ ಗಳಿಸಿದ ಸಿನಿಮಾ ಇವೆರಡೂ ಅಲ್ಲ ಅಂತ ಹೇಳುತ್ತಿದ್ದಾರೆ. ಹಾಗಿದ್ದರೆ, ಅತೀ ಹೆಚ್ಚು ಲಾಭ ಪಡೆದ ಟಾಪ್ 5 ಸಿನಿಮಾ ಯಾವುವು? ಇಲ್ಲಿದೆ ಲಿಸ್ಟ್

'ದಿ ಕೇರಳ ಸ್ಟೋರಿ'
ಈ ವರ್ಷ ರಿಲೀಸ್ ಆಗಿದ್ದ ಸಿನಿಮಾ 'ದಿ ಕೇರಳ ಸ್ಟೋರಿ' ಸಾಕಷ್ಟು ವಿವಾದಗಳಿಗೆ ಸಿಲುಕಿತ್ತು. ದೇಶಾದ್ಯಂತ ಕೆಲವರು ಈ ಸಿನಿಮಾ ಬಿಡುಗಡೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೂ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆಯನ್ನೇ ಮಾಡಿತ್ತು. ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ 238.27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಸುಮಾರು ಶೇ.694ರಷ್ಟು ಲಾಭ ಪಡೆದುಕೊಂಡಿದೆ.

'ಗದರ್ 2'
ಬಾಲಿವುಡ್‌ನ ಸೂಪರ್‌ಹಿಟ್ ಸಿನಿಮಾ 'ಗದರ್' ಸೀಕ್ವೆಲ್ ಇದೇ ವರ್ಷ ಬಿಡುಗಡೆಯಾಗಿದೆ. ತಾರಾ ಸಿಂಗ್ ಪಾತ್ರದಲ್ಲಿ ಸನ್ನಿ ಡಿಯೋಲ್ ಮತ್ತೆ ಗ್ರ್ಯಾಂಡ್ ಕಮ್‌ಬ್ಯಾಕ್ ಮಾಡಿದ್ದರು. ಸಿನಿಮಾಗೆ ನೆಗೆಟಿವ್ ವಿಮರ್ಶೆಗಳು ಬಂದಿದ್ದರೂ, ಜನರು ಈ ಸಿನಿಮಾವನ್ನು ಎಂಜಾಯ್ ಮಾಡಿದ್ದರು. ಇದು ಬಾಕ್ಸಾಫೀಸ್‌ನಲ್ಲಿ 525.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ 75 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿತ್ತು. 'ಗದರ್ 2' ಸಿನಿಮಾ ಸಿಕ್ಕ ಲಾಭ 600 ಕೋಟಿ ರೂಪಾಯಿ.

'ಎನಿಮಲ್'
ದಕ್ಷಿಣ ಭಾರತದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಕ್ಷನ್ ಕಟ್ ಹೇಳಿದ್ದ ಸಿನಿಮಾ 'ಎನಿಮಲ್'. ರಣ್‌ಬೀರ್ ಕಪೂರ್ ಪಕ್ಕಾ ಮಾಸ್ ಹೀರೊ ಆಗಿ ತೆರೆಮೇಲೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ಬಿಡುಗಡೆ ಬಳಿಕ ವಿವಾದಗಳಲ್ಲಿ ಸಿಕ್ಕಿಕೊಂಡಿತ್ತು. ಇದು ಭಾರತದಾದ್ಯಂತ ಸುಮಾರು 537 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಶೇ.168ರಷ್ಟು ಲಾಭ ಗಿಟ್ಟಿಸಿಕೊಂಡಿದೆ.

'12th ಫೈಲ್'
ಅಚ್ಚರಿ ಎಂಬಂತೆ ಅತೀ ಹೆಚ್ಚು ಲಾಭ ಪಡೆದ ಸಿನಿಮಾಗಳ ಪೈಕಿ ಕೇವಲ 20 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ '12th ಫೈಲ್' ಕೂಡ ಇದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 51.93 ಕೋಟಿ ರೂಪಾಯಿ ಕಲೆ ಹಾಕಿತ್ತು. ಈ ಮೂಲಕ ಶೇ.159ರಷ್ಟು ಲಾಭ ಪಡೆದುಕೊಂಡಿದೆ.

'ಓಎಂಜಿ 2'
ಅಕ್ಷಯ್ ಕುಮಾರ್ ಹಾಗೂ ಪಂಕಜ್ ತ್ರಿಪಾಠಿ ನಟನೆಯ 'ಓಎಂಜಿ 2' ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ 'ಗದರ್ 2' ಜೊತೆ ರಿಲೀಸ್ ಆಗಿತ್ತು. ಈ ಸಿನಿಮಾ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 65 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಸಿನಿಮಾ ಶೇ.130ರಷ್ಟು ಲಾಭ ಗಳಿಸಿತ್ತು.

'ಪಠಾಣ್', 'ಜವಾನ್' ಎಷ್ಟು?
ಶಾರುಖ್ ಖಾನ್ ಸಿನಿಮಾ 'ಪಠಾಣ್' ಸಾವಿರ ಕೋಟಿ ಗಳಿಸಿದ್ದರೂ ಭಾರತದಲ್ಲಿ 543 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಈ ಸಿನಿಮಾ ಬಜೆಟ್ ಕೂಡ ಅಷ್ಟೇ ದೊಡ್ಡದಿತ್ತು. ಶೇ.117ರಷ್ಟು ಲಾಭ ಪಡೆಯಲಷ್ಟೇ ಸಾಧ್ಯವಾಗಿತ್ತು. ಹಾಗೇ 'ಜವಾನ್' ಕೂಡ 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿತ್ತು. ಭಾರತದಲ್ಲಿ 640 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಶೇ.113ರಷ್ಟು ಲಾಭ ಪಡೆದುಕೊಂಡಿದೆ ಎನ್ನಲಾಗಿದೆ.


Click it and Unblock the Notifications










